‘ಥ್ಯಾಂಕ್ಯೂ ನರೇಂದ್ರ ಮೋದಿ, ಪಾಕಿಸ್ತಾನದ ವಿರುದ್ಧ ನಮ್ಮ ಹೋರಾಟಕ್ಕೆ ಬಲ ತುಂಬಿದಿರಿ’- ಬಲೊಚಿಸ್ತಾನ ಹೋರಾಟಗಾರರ ಹರ್ಷ

ಡಿಜಿಟಲ್ ಕನ್ನಡ ಟೀಮ್:

‘ಬಲೊಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಪಾಕಿಸ್ತಾನವು ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಾವು ಜಗತ್ತಿನೆದುರು ತೆರೆದಿಡಬೇಕು’ ಹೀಗೊಂದು ಹೇಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಂದ ಶುಕ್ರವಾರ ಹೊರಬೀಳುತ್ತಿದ್ದಂತೆಯೇ, ಬಲೊಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರ ಸಂಭ್ರಮ ಮುಗಿಲುಮುಟ್ಟಿದೆ.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇದ್ದುಕೊಂಡು ಬಲೊಚಿಸ್ತಾನದ ಹೋರಾಟಕ್ಕಾಗಿ ಕೆಲಸ ಮಾಡುತ್ತಿರುವವರ ಗುಂಪಿದೆ. ಮಾನವ ಹಕ್ಕು ಹೋರಾಟಗಾರರು, ವಕೀಲರು, ಪ್ರೊಫೆಸರ್ ಗಳು ಎಲ್ಲರೂ ಇಲ್ಲಿದ್ದಾರೆ. ಇವೆರೆಲ್ಲರ ಟ್ವಿಟ್ಟರ್ ಖಾತೆಗಳನ್ನು ಎಡತಾಕಿದರೆ ಅಲ್ಲೆಲ್ಲ ‘ಥ್ಯಾಂಕ್ಯೂ ನರೇಂದ್ರಮೋದಿ’ ಎಂಬ ಭಾವನಾತ್ಮಕ ಮಿಡಿತಗಳೇ ಎದುರಾಗುತ್ತವೆ.

baloch

baloch2

baloch3

‘ನಾವು ಪ್ರಧಾನಿ ಮೋದಿ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ್ಧಿಕೃತವಾಗಿ ಬಲೊಚಿಸ್ತಾನವನ್ನು ಬೆಂಬಲಿಸುವ ಮಾತನಾಡಿದ್ದಾರೆ. ಭಾರತದ ಸಿದ್ಧಾಂತವನ್ನೇ ಬಲೊಚಿಗಳೂ ಹೊಂದಿದ್ದೇವೆ. ಧರ್ಮನಿರಪೇಕ್ಷ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ನಾವು’ ಎಂದು ಬಲೊಚ್ ಹೋರಾಟಗಾರ ಹಮ್ಮಲ್ ಹೈದರ್ ಬಲೊಚ್ ಹೇಳಿದ್ದಾರೆ.

ಪಾಕಿಸ್ತಾನದಿಂದ ತಮ್ಮ ವಿಮೋಚನೆಗಾಗಿ ಜಗತ್ತೇ ಮಾತಾಡಬೇಕು, ಅದರಲ್ಲೂ ಈ ಪ್ರಕ್ರಿಯೆ ಭಾರತದಿಂದ ಶುರುವಾಗಬೇಕು ಎಂಬುದು ಪ್ರೊಫೆಸರ್ ನಯೆಲ ಕ್ವಾದ್ರಿ ಬಲೊಚ್ ಸೇರಿದಂತೆ ಹಲವರ ಬೇಡಿಕೆ ಆಗಿತ್ತು. ಅದರಲ್ಲೂ ದೇಶದ ವಿಶ್ವಾಸವನ್ನು ದೊಡ್ಡಮಟ್ಟದಲ್ಲಿ ಗೆದ್ದಿರುವ ನರೇಂದ್ರ ಮೋದಿಯವರಿಗೆ ಖಂಡಿತ ಈ ತಾಕತ್ತು ಇದೆ ಎಂದೇ ನಯೆಲ ಅವರ ಪ್ರತಿಪಾದನೆ. ಇದೇ ವರ್ಷ ಮೇನಲ್ಲಿ ಭಾರತ ಪ್ರವಾಸ ಮಾಡಿದ್ದ ಅವರು ಇಲ್ಲಿನ ಹಲವು ಮಾಧ್ಯಮಗಳೊಂದಿಗೆ ಮಾತಾಡಿ, ಹಲವು ರಾಜ್ಯಗಳಿಗೆ ಭೇಟಿ ನೀಡಿ, ಬಲೊಚಿಸ್ತಾನದಲ್ಲಿ ಪಾಕಿಸ್ತಾನವು ಕೈಗೊಂಡಿರುವ ನರಹತ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತ ಬೆಂಬಲ ಬೇಡಿದ್ದರು.

ಇನ್ನೊಂದೆಡೆ, ಯುರೋಪ್ ಸಂಸತ್ತಿನ ಸದಸ್ಯ ಅಲ್ಬರ್ಟೊ ಸಿರಿಯೊ ಸಹ ಪತ್ರಿಕೆಯೊಂದಕ್ಕೆ ಲೇಖನವನ್ನು ಬರೆದು, ‘ಬಲೊಚಿಸ್ತಾನದ ಕುರಿತು ಪಾಕಿಸ್ತಾನ ಅನುಸರಿಸುತ್ತಿರುವ ನೀತಿಗೆ ಅದಕ್ಕೆ ಶಿಕ್ಷೆ ಆಗಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಲೊಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಪಾಕಿಸ್ತಾನದ ದೌರ್ಜನ್ಯವನ್ನು ಜಾಗತಿಕವಾಗಿ ಬಿಂಬಿಸಬೇಕೆಂಬ ಒತ್ತಾಸೆ ರಾಜತಾಂತ್ರಿಕ ಪರಿಣತರ ವಲಯದಲ್ಲಿ ಹಲವು ವರ್ಷಗಳಿಂದ ರೂಪುಗೊಳ್ಳುತ್ತಿತ್ತು. ಬಲೊಚಿನ ಪ್ರಮುಖರಂತೂ ಭಾರತದ ಬೆಂಬಲ ಪಡೆಯುವ ಬಗ್ಗೆ ಲಾಗಾಯ್ತಿನಿಂದ ಆಸೆ ಇರಿಸಿಕೊಂಡಿದ್ದಾರೆ. ‘ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಪಾಕಿಸ್ತಾನ ಸರ್ಕಾರದ ಪ್ರತಿನಿಧಿಗಳು ಬಹಿರಂಗವಾಗಿಯೇ ಭೇಟಿ ಮಾಡಿ ಹೋಗುತ್ತಾರೆ. ಹೀಗಿರುವಾಗ ಭಾರತವೇಕೆ ಬಲೊಚಿಸ್ತಾನದ ವಿಷಯದಲ್ಲಿ ಮುಜುಗರ ಇರಿಸಿಕೊಳ್ಳಬೇಕು’ ಎಂಬ ಪ್ರಶ್ನೆ ಅವರದ್ದು. ಇದೀಗ ಪ್ರಧಾನಿ ನರೇಂದ್ರ ಮೋದಿ ಅದಕ್ಕೊಂದು ಹಸಿರು ನಿಶಾನೆ ತೋರಿದಂತಿದೆ.

ಹಾಗೆಂದು ಈ ಹಿಂದೆ ಭಾರತ ಸಂಪೂರ್ಣ ಕುರುಡಾಗಿತ್ತೆಂದೇನೂ ಅಲ್ಲ. ಈ ಕುರಿತ ಸ್ಪಷ್ಟತೆ ನಿಧಾನಕ್ಕೆ ಮೂಡುತ್ತಿದೆ. ಬಲೊಚ್ ವಿಮೋಚನಾ ಸಂಘಟನೆಯ ಬಲೊಚ್ ಪಾರ್ಡಿಲಿ 2009ರಿಂದ ಭಾರತದಲ್ಲೇ ಆಶ್ರಯ ಪಡೆದಿದ್ದಾರೆ. 2015ರಲ್ಲಿ ಇವರ ಸಭೆಗಳನ್ನು ಆಯೋಜಿಸುವುದಕ್ಕೆ, ವಿಶ್ವವಿದ್ಯಾಲಯಗಳಿಗೆ ಹೋಗಿ ಬಲೊಚಿಸ್ತಾನದಲ್ಲಿ ಪಾಕ್ ಹತ್ಯಾಕಾಂಡದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ‘ಭಗತ್ ಸಿಂಗ್ ಕ್ರಾಂತಿ ಸೇನಾ’ ಸಹಾಯ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಅಂತರ್ಜಾಲದಲ್ಲಿ ಪ್ರಸಿದ್ಧವಾಗಿರುವ ನಮೋಪತ್ರಿಕಾ ಡಾಟ್ ಕಾಂ ನಡೆಸುತ್ತಿರುವುದು ಇದೇ ಭಗತ್ ಸಿಂಗ್ ಕ್ರಾಂತಿ ಸೇನೆ.

ಹೀಗಾಗಿ, ಬಿಜೆಪಿಯ ಹಲವರು ಕೆಲವರ್ಷಗಳಿಂದ ಬಲೊಚಿಸ್ತಾನ ಸಂಬಂಧ ಅಧ್ಯಯನ ಮತ್ತು ಸಂವಾದ- ಸಂದರ್ಶನಗಳಲ್ಲಿ ತೊಡಗಿಕೊಂಡಿದ್ದರೆಂಬುದು ಸ್ಪಷ್ಟ.

ಶುಕ್ರವಾರ ಸರ್ವಪಕ್ಷಗಳ ಸಭೆಯಲ್ಲಿ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಎದುರಿಸುವ ಬಗ್ಗೆ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಬಲೊಚಿಸ್ತಾನವನ್ನೂ ಹೆಸರಿಸಿದ್ದಾರೆ ಎಂದರೆ ದಾಖಲೆಗಳ ಬಲದೊಂದಿಗೆ ಸೈದ್ಧಾಂತಿಕ ಸಮರಕ್ಕೆ ಯುದ್ಧಭೂಮಿ ಸಿದ್ಧವಾಗಿದೆ ಎಂದೇ ಅರ್ಥ.

Leave a Reply