ಕೂಡಂಕುಳಂ ಪರಮಾಣು ಸ್ಥಾವರ: ಇಪ್ಪತ್ತು ವರ್ಷ ಪ್ರತಿಭಟನೆ, ಈಗ ಲೋಕಾರ್ಪಣೆ, ಮಾಸಿಲ್ಲ ಆತಂಕದ ಪ್ರಶ್ನೆ

author-ananthramuಇದೇ ಆಗಸ್ಟ್ 10ರಂದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೂಡಂಕುಳಂ ಪರಮಾಣು ಸ್ಥಾವರದ ಮೊದಲ ರಿಯಾಕ್ಟರನ್ನು ದೇಶಕ್ಕೆ ಸಮರ್ಪಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಹೇಳಿದ ಮಾತಿದು…

‘ನಾನು ಭಾರತದ ಪರವಾಗಿ ಈ ಸ್ಥಾವರ ಸ್ಥಾಪಿಸಿದ ರಷ್ಯದ ತಂತ್ರಜ್ಞರಿಗೆ ಸೆಲ್ಯೂಟ್ ಮಾಡುತ್ತೇನೆ. ಶೀತಲ ಯುದ್ಧ ಕಾಲದಿಂದಲೂ ಭಾರತ ಮತ್ತು ರಷ್ಯದ ಮೈತ್ರಿ ಬಲವಾಗುತ್ತಲೇ ಹೋಗಿದೆ. ಪರಿಸರ ಹಾಳಾಗದಂತೆ ದೇಶದ ಆರ್ಥಿಕತೆಗೆ ಈ ಸ್ಥಾವರ ಕೊಡುವ ಕೊಡುಗೆ ದೊಡ್ಡದು’ ಎಂದರು. ಅತ್ತ ಮಾಸ್ಕೋದಲ್ಲಿ ರಷ್ಯದ ಅಧ್ಯಕ್ಷ ಪುಟಿನ್ ಅವರು ತಮ್ಮ ದೇಶದ ಹೆಮ್ಮೆಯ ಬಗ್ಗೆ ಮಾತನಾಡುತ್ತ ‘ಜಗತ್ತೇ ಕೊಂಡಾಡುವ ತಂತ್ರಜ್ಞಾನ ನಮ್ಮದು. ಭಾರತದೊಂದಿಗೆ ಕೈಜೋಡಿಸಿರುವುದು ನಮಗೂ ಸಂತಸ ತಂದಿದೆ’ ಎಂದರು. ಇತ್ತ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಚೆನ್ನೈನಲ್ಲಿ ಕೂತು – ‘ನ್ಯೂಕ್ಲಿಯರ್ ಶಕ್ತಿ ಶುದ್ಧ ಶಕ್ತಿ, ಹಸಿರು ಶಕ್ತಿ. ಪರಿಸರ ಮಾಲಿನ್ಯದ ಭಯವಿಲ್ಲ. ನಮ್ಮ ರಾಜ್ಯ ಸದಾ ಪ್ರಗತಿಗೆ ಬದ್ಧವಾಗಿದೆ. ಭಾರತ ಮತ್ತು ರಷ್ಯ ಜಂಟಿಯಾಗಿ ಮಾಡಿದ ಈ ಸಾಧನೆ ಎರಡೂ ದೇಶಗಳ ಸ್ನೇಹದ ದ್ಯೋತಕ` ಎಂದರು.

ನಿಜ, ಭಾರತ ವಿದ್ಯುತ್ ಕೊರತೆಯನ್ನು ದೊಡ್ಡ ಪ್ರಮಾಣದಲ್ಲೇ ಎದುರಿಸುತ್ತಿದೆ. ಜಲವಿದ್ಯುತ್ ಉತ್ಪಾದನೆಯ ಜಾಗವನ್ನು ಉಷ್ಣ ಸ್ಥಾವರಗಳು ಆಕ್ರಮಿಸಿವೆ. ಭೂಉಷ್ಣತೆ ಹೆಚ್ಚಿಸುತ್ತಿದ್ದರೂ ಈಗ ಅವೇ ನಮ್ಮ ಆಪದ್ಬಂಧು ಎನಿಸಿವೆ. ಜನಸಾಮಾನ್ಯರಿಗೆ ಯಾವ ಮೂಲದಿಂದ ವಿದ್ಯುತ್ ಬರುತ್ತಿದೆ ಎಂಬುದು ಮುಖ್ಯವಾಗುವುದಿಲ್ಲ, ಬದಲು ನಿರಂತರವಾಗಿ ಕೊಡಿ ಎನ್ನುವುದೇ ಅವರ ಇರಾದೆ. ಇಂಥ ಸಂದರ್ಭದಲ್ಲಿ ರಾಷ್ಟ್ರನಾಯಕರು, ರಾಜ್ಯನಾಯಕರು ಮೇಲೆ ಹೇಳಿದ ಮಾತುಗಳನ್ನೇ ಹೇಳಬೇಕು. ಆದರೆ ಇದೇ ಮಾತನ್ನು ಕೂಡಂಕುಳಂನಿಂದ ಮೂವತ್ತು ಕಿಲೋ ಮೀಟರು ಪಾಸಲೆಯಲ್ಲಿರುವ ಜನ ಹೇಳುತ್ತಾರೆಯೆ? `ಇಲ್ಲ’ ಎನ್ನುತ್ತಿದೆ ರಾಜಕೀಯ ನಾಯಕರು ಹೇಳಿಕೆ ಕೊಟ್ಟ ಹಿಂದೆಯೇ ಪ್ರತಿಕ್ರಿಯಿಸಿದ ಗ್ರೀನ್‍ಪೀಸ್. ಅದು `ರೆಡ್ ಅಲರ್ಟ್’ ರಿಪೋರ್ಟನ್ನು ಜೂನ್ ತಿಂಗಳಲ್ಲೇ ಬಿಡುಗಡೆಮಾಡಿತ್ತು. ಕೂಡಂಕುಳಂ ಪರಮಾಣು ಸ್ಥಾವರ ಒಂದುವೇಳೆ ಅಪಘಾತಕ್ಕೆ ತುತ್ತಾದರೆ ಅಷ್ಟೂ ಜನರನ್ನು ತ್ವರಿತವಾಗಿ ಸ್ಥಳಾಂತರಿಸಲು ಬೇಕಾದ ವ್ಯವಸ್ಥೆ ಇದೆಯೆ? ವಾಸ್ತವವಾಗಿ ಸರ್ಕಾರದ ಲೆಕ್ಕಾಚಾರ ಹದಿನಾರು ಕಿಲೋ ಮೀಟರು ಪಾಸಲೆಯಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬುದಷ್ಟೇ. 2011ರಲ್ಲಿ ಜಪಾನಿನ ಫುಕುಶಿಮಾ ಪರಮಾಣು ಸ್ಥಾವರ ದುರಂತ ಜಗತ್ತನ್ನೇ ನಡುಗಿಸಿತ್ತು. ಅಲ್ಲಿ ಮೂವತ್ತು ಕಿಲೋ ಮೀಟರು ಪಾಸಲೆಯವರೆಗೂ ಇದ್ದ ಜನರನ್ನು ಹೇಗೆ ಅಪಾಯತಟ್ಟದಂತೆ ಪಾರುಮಾಡಬೇಕು ಎಂಬ ನೀಲನಕ್ಷೆ ಮೊದಲೇ ಮಾಡಿದ್ದರು.

KOODANKULAM CONFERENCE

ನಮ್ಮಲ್ಲೂ `ಪರಮಾಣು ಶಕ್ತಿ ನಿಯಂತ್ರಣ ಮಂಡಳಿ` ಇದೆ. ಕಳೆದ ಇಪ್ಪತ್ತಾರು ವರ್ಷಗಳಿಂದ ತನ್ನ ಮಾರ್ಗದರ್ಶಿಯನ್ನು ಅದು ಪರಿಷ್ಕರಿಸಿಯೇ ಇಲ್ಲ. ರಷ್ಯದ ಉಕ್ರೇನಿನ ಚರ್ನೊಬಿಲ್ ನಲ್ಲಾದ ಪರಮಾಣು ಸ್ಥಾವರದ ಸೋರಿಕೆಯಿಂದ ಆದ ವಿಕಿರಣ ಈಗಲೂ ಕಾಡುತ್ತಿದೆ. ಫುಕುಶಿಮಾ ಸ್ಥಾವರ ದುರಂತದ ಪರಿಣಾಮ ಇನ್ನೂ ಮನಸ್ಸಿನಿಂದ ಮಾಸಿಲ್ಲ. ಈ ವರ್ಷದ ಮೊದಲಲ್ಲೇ ಗುಜರಾತಿನ ಕಕ್ರಾಪಾರದ ಒಂದು ಘಟಕದಲ್ಲಿ ಉದ್ವಿಗ್ನ ತರುವ ಮಟ್ಟಕ್ಕೆ ಅಪಾಯ ಎದುರಾಗಿತ್ತು (ಅಲ್ಲಿ 220 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಪರಮಾಣು ರಿಯಾಕ್ಟರ್ ಗಳಿವೆ). ದೇಶದ ವಿದ್ಯುತ ಕೊರತೆಯ ಬಗ್ಗೆ ನಾವೂ ಒಪ್ಪುತ್ತೇವೆ. ಆದರೆ ಅದು ನ್ಯೂಕ್ಲಿಯರ್ ಸ್ಥಾವರದಿಂದಷ್ಟೇ ಬರಬೇಕಾಗಿಲ್ಲ. ಇದಕ್ಕೆ ಹೂಡಿರುವ ಬಂಡವಾಳವನ್ನು ಸೌರಶಕ್ತಿ, ಗಾಳಿಶಕ್ತಿಗೆ ಬಳಸಿ. ಆಗ ನಾವೂ ಮೆಚ್ಚುತ್ತೇವೆ ಎನ್ನುತ್ತಿದೆ ಗ್ರೀನ್ ಪೀಸ್.

ನ್ಯೂಕ್ಲಿಯರ್ ಸ್ಥಾವರದ ಸ್ಥಾಪನೆಯ ವಿಚಾರ ಬಂದಾಗಲೆಲ್ಲ ಸ್ಥಳೀಯರು ಬೆಚ್ಚುತ್ತಾರೆ. ಪರಿಸರ ಚಿಂತಕರು ದೊಡ್ಡ ದನಿ ತೆಗೆಯುತ್ತಾರೆ. ಸರ್ಕಾರಕ್ಕೂ ಇದು ಗೊತ್ತಿದೆ. ಉತ್ತರಕನ್ನಡ ಜಿಲ್ಲೆಯ ಕೈಗಾ ಪರಮಾಣು ಸ್ಥಾವರ ಬೇಡವೆಂಬ ಆಂದೋಲನಕ್ಕೆ ಶಿವರಾಮ ಕಾರಂತರು ದನಿ ಕೊಟ್ಟಿದ್ದರು. ಆದರೆ ಆದದ್ದೇ ಬೇರೆ. ಈಗ ಅಲ್ಲಿ ತಲಾ 220 ಮೆಗಾವ್ಯಾಟ್ ಉತ್ಪಾದಿಸುವ ನಾಲ್ಕು ಘಟಕಗಳು ಕೆಲಸ ಮಾಡುತ್ತಿವೆ. ಭಾರತದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ, ಪರಮಾಣು ಸ್ಥಾವರದ ನಿರ್ಮಾಣದ ಹೊರೆ ಹೊರುತ್ತದೆ. ಅದಕ್ಕೂ ಈಗ ಪ್ರತಿಭಟನೆ ಎಂದರೆ ಅಭ್ಯಾಸವಾಗಿಬಿಟ್ಟಿದೆ. ತೀರ ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಕಡಲತೀರದ ಹಳ್ಳಿ ಕೊವ್ವಾಡದಲ್ಲಿ ಆರು ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ನಿರ್ಮಾಣ ಮಾಡಲು 2008ರಲ್ಲೇ ರಷ್ಯ ಮತ್ತು ಅಮೆರಿಕ ಒಪ್ಪಂದ ಮಾಡಿಕೊಂಡಿದ್ದವು. ಸ್ಥಳೀಯ ಜನ ಪ್ರಾಸಬದ್ಧವಾಗಿಯೇ ಘೋಷಣೆಗಳನ್ನು ಕೂಗಿದ್ದರು: `ವದ್ದು ನ್ಯೂಕ್ಲಿಯರ್ ಪ್ಲಾಂಟ್ ವದ್ದು – ಕೊವ್ವಾಡ ಮಾಕು ಮುದ್ದು’. ಆದರೆ ಸರ್ಕಾರ ಎರಡು ಸಾವಿರ ಎಕರೆ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳಲು ಈಗಾಗಲೇ ಕಾರ್ಯ ಹಮ್ಮಿಕೊಂಡಿದೆ. 9,900 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಡಲತಡಿಯ ಜೈಟ್‍ಪುರ್ ಎಂಬಲ್ಲಿ ಫ್ರಾನ್ಸ್ ಜೊತೆಗೆ 2010ರಲ್ಲೇ ಒಪ್ಪಂದವಾಗಿತ್ತು. ತಿಂಗಳುಗಟ್ಟಲೆ ಅಲ್ಲಿ ಪ್ರತಿಭಟನೆ ಆಯಿತು. ಆ ವಲಯ ಭೂಕಂಪನ ಚಟುವಟಿಕೆಯ ವಲಯ ಎಂದು ತಜ್ಞರು ಪ್ರತಿಭಟಿಸಿದರೂ ಏನೂ ಆಗಲಿಲ್ಲ. ಆಗ ಪರಿಸರ ಇಲಾಖೆಯ ಮಂತ್ರಿಯಾಗಿದ್ದ ಜೈರಾಂ ರಮೇಶ್ ತಮ್ಮದೇ ಆದ ಶೈಲಿಯಲ್ಲಿ `1.2 ಬಿಲಿಯನ್ ಜನಕ್ಕೆ ಸೌರಶಕ್ತಿ, ಜೈವಿಕ ಇಂಧನ-ಇವೇ ಮೂಲಗಳಿಂದ ವಿದ್ಯುತ್ ಪೂರೈಕೆ ಮಾಡಲು ಆಗುತ್ತದೆಯೆ? ಅದೂ ಸುಸ್ಥಿರ ಪೂರೈಕೆ?’ ಎಂದು ಪ್ರಶ್ನಿಸಿದ್ದರು.

ಹಾಗಾದರೆ ವಸ್ತುಸ್ಥಿತಿ ಏನು? ರಾಜಾಸ್ತಾನದ ರಾವತ್ ಭಾಟ, ಗುಜರಾತಿನ ಕಕ್ರಾಪಾರ, ಮಹಾರಾಷ್ಟ್ರದ ತಾರಾಪುರ, ಕರ್ನಾಟಕದ ಕೈಗಾ, ಉತ್ತರಪ್ರದೇಶದ ನರೋನ, ತಮಿಳುನಾಡಿನ ಕಲ್ಪಕಂ ಮತ್ತು ಈಗಿನ ಕೂಡಂಕುಳಂ ಸೇರಿದಂತೆ ಎಲ್ಲ ಪರಮಾಣು ಸ್ಥಾವರಗಳಿಂದ ಲಭ್ಯವಿರುವ ವಿದ್ಯುತ್ ಪ್ರಮಾಣ 5,780 ಮೆಗಾವ್ಯಾಟ್. ಅಂದರೆ ದೇಶದ ಒಟ್ಟು ಉತ್ಪಾದನೆಯ ಶೇ. ಐದು ಭಾಗವೂ ಇಲ್ಲ. ಇದಕ್ಕಾಗಿ ಸಾವಿರಾರು ಜನರನ್ನು ಗುಳೆ ಹೊರಡಿಸಬೇಕೆ? ಕೊಟ್ಯಂತರ ರೂಪಾಯಿ ಖರ್ಚು ಮಾಡಬೇಕೆ? ಮಾಡಿದರೂ ಸ್ಥಾವರ ಎಷ್ಟು ಸುರಕ್ಷಿತ? ಎಂಬುದು ತಿಳಿಯದೆ ಬದುಕಿನುದ್ದಕ್ಕೂ ಭಯದ ನೆರಳಿನಲ್ಲೇ ಇರಬೇಕೆ? ಎಂಬ ವಾದವೂ ಇದೆ.

ಕೂಡಂಕುಳಂ ಇದಲ್ಲದೆ ಇನ್ನೂ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಒಪ್ಪಂದಕ್ಕೆ ಸಹಿ ಹಾಕಿದ್ದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ರಷ್ಯದ ಅಧ್ಯಕ್ಷ ಮಿಕೇಲ್ ಗುರಬಚೇವ್. ಭಾರತದಲ್ಲಿ ಅನಂತರ ಹತ್ತು ಜನ ಪ್ರಧಾನಿಗಳು ಬಂದುಹೋದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೂಡಂಕುಳಂ ಸ್ಥಾವರವನ್ನು ಪ್ರತಿಭಟಿಸುವವರೆಲ್ಲ ಧಾರ್ಮಿಕ ಸಂಸ್ಥೆಗೆ ಬರಬೇಕಾದ ದುಡ್ಡನ್ನೆಲ್ಲ ಇತ್ತ ತಿರುಗಿಸಿ, ನ್ಯೂಕ್ಲಿಯರ್ ಸ್ಥಾವರ ನಿರ್ಮಾಣವನ್ನು ವಿರೋಧಿಸಲು ಬಳಸುತ್ತಿದ್ದಾರೆಂದು ಹೇಳಿಕೆ ಕೊಟ್ಟು ದೊಡ್ಡ ವಿವಾದ ಎಬ್ಬಿಸಿದರು. 2012ರಲ್ಲಿ ಕೂಡಂಕುಳಂ ನ್ಯೂಕ್ಲಿಯರ್ ಸ್ಥಾವರದ ವಿರುದ್ಧದ ಜನಾಂದೋಲನದಲ್ಲಿ 4,000 ಮಂದಿ ಭಾಗಿಯಾಗಿದ್ದರು.

ಈ ಒಪ್ಪಂದ ಆದ ಮೇಲೆ ಜಾಗತಿಕ ಮಟ್ಟದಲ್ಲಿ ಅವೆಷ್ಟೋ ದುರಂತಗಳಾಗಿವೆ. 2004ರಲ್ಲಿ ಪೂರ್ವ ಕರಾವಳಿಯಲ್ಲಿ ಭಾರಿ ಸುನಾಮಿ ಎದ್ದು ತಮಿಳುನಾಡಿನ ಕಲ್ಪಕಂ ಪರಮಾಣು ಸ್ಥಾವರಕ್ಕೆ ನೀರುನುಗ್ಗಿತ್ತು. ಕ್ಯಾಂಪಸ್ ನಲ್ಲಿ ಹಲವರು ಸತ್ತರು. ಹೇಗೋ ನ್ಯೂಕ್ಲಿಯರ್ ಸ್ಥಾವರ ಬಚಾವಾಯತು. 1986ರ ಉಕ್ರೇನಿನ ಚರ್ನೊಬಿಲ್ ಪರಮಾಣು ಸ್ಥಾವರ ದುರಂತ ಉತ್ತರಧ್ರುವಕ್ಕೂ ಸಾಗಿ ಸಾರಂಗಗಳನ್ನು ಕೊಂದಿತು. ನ್ಯೂಕ್ಲಿಯರ್ ಸ್ಥಾವರಗಳ ಚರಿತ್ರೆಯಲ್ಲಿ ಇದು ಘೋರದುರಂತವೆಂದು ದಾಖಲಾಯಿತು. ಐದು ಲಕ್ಷ ಜನರನ್ನು ತೊಡಗಿಸಿ ಅಪಾಯದ ಪ್ರಮಾಣವನ್ನು ತಗ್ಗಿಸಲು ರಷ್ಯ ಹೆಣಗಬೇಕಾಯಿತು. ಈಗಲೂ ಚರ್ನೊಬಿಲ್ `ಘೋಸ್ಟ್ ಟೌನ್’ ಎಂಬ ಖ್ಯಾತಿ ಹೊತ್ತಿದೆ.

KOODANKULAM 2

`ಕೂಡಂಕುಳಂನಲ್ಲಿ ಪರಮಾಣು ಸ್ಥಾವರ ನಿರ್ಮಿಸುವ ಮೊದಲು ನಾವು ಸುನಾಮಿಯ ಸಾಧ್ಯತೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿದ್ದೇವೆ. ರಿಯಾಕ್ಟರ್ ಗೆ ಎರಡು ಕವಚದ ರಕ್ಷಣೆ ಇದೆ. ವಿಕಿರಣ ಹೊರಹರಿಯದಂತೆ ತಂತ್ರ ರೂಪಿಸಿದ್ದೇವೆ’ ಎನ್ನುತ್ತಿದೆ ನ್ಯೂಕ್ಲಿಯರ್ ಕಾರ್ಪೊರೇಷನ್. ಇಪ್ಪತ್ತು ವರ್ಷಗಳ ಹಿಂದೆ ಇದರ ನಿರ್ಮಾಣಕ್ಕೆ ಆರು ಕೋಟಿ ರೂಪಾಯಿ ಅಂದಾಜು ಮಾಡಲಾಗಿತ್ತು. ಈಗ ಎರಡು ಘಟಕಗಳ ನಿರ್ಮಾಣಕ್ಕೆ 17,270 ಕೋಟಿ ರೂಪಾಯಿ ತಗಲಿದೆ. ಕೂಡಂಕುಳಂನಲ್ಲಿ ಸುತ್ತ ಸಾಗರದಲ್ಲಿ ಮೀನುಗಳ ಲಭ್ಯತೆ ಕಡಿಮೆಯಾಗುತ್ತದೆ ಎಂಬುದು ಮೀನುಗಾರರ ಅಳಲು. ಅಷ್ಟೇ ಅಲ್ಲ, ಈ ಘಟಕಗಳು ಎಂದಿನಂತೆ ಕಾರ್ಯಶೀಲವಾಗಿದ್ದರೂ ಉತ್ಪಾದನೆಯಾಗುವ ಅಯೋಡಿನ್,ಸೀಸಿಯಂ, ಸ್ಟ್ರಾನ್ಷಿಯಂ, ಟೆಲ್ಯೂರಿಯಂ ವಿಕಿರಣ ನೆಲ-ಗಾಳಿ-ನೀರಿಗೆ ಬೀಳುವುದಿಲ್ಲವೆ? ಜನ-ಜಾನುವಾರುಗಳನ್ನು ಬಾಧಿಸುವುದಿಲ್ಲವೆ ಎಂದು ಕೇಳುವಷ್ಟು ಅಲ್ಲಿ ಜನಜಾಗೃತಿ ಉಂಟಾಗಿದೆ.

ಇನ್ನು ಪರಮಾಣು ಸ್ಥಾವರಕ್ಕೆ ಬಳಸುವ ಇಂಧನ ಯುರೇನಿಯಂ ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿಲ್ಲ. ಶೇ.40 ಭಾಗ ಯುರೇನಿಯಂನ್ನು ಆಮದು ಮಾಡಿಕೊಳ್ಳಬೇಕು. ಯಥೇಚ್ಛವಾಗಿ ನಮ್ಮಲ್ಲಿ ಥೋರಿಯಂ ಲಭ್ಯವಿದೆ. ಇದನ್ನೇ ಬಳಸಿಕೊಂಡರೆ ಇನ್ನೂ ನಾಲ್ಕು ಶತಮಾನಗಳ ಕಾಲ ಸತತವಾಗಿ 500 ಗಿಗಾವ್ಯಾಟ್ಸ್ ಶಕ್ತಿ ಉತ್ಪಾದಿಸುವಷ್ಟು ಸಂಪತ್ತಿದೆ ಎನ್ನುತ್ತಿದೆ ಒಂದು ಸಮೀಕ್ಷೆ. ಅದು ಹೆಚ್ಚು ನ್ಯೂಕ್ಲಿಯರ್ ತ್ಯಾಜ್ಯವನ್ನೂ ಸೃಷ್ಟಿಸುವುದಿಲ್ಲ ಎಂದು ಹೇಳಿದೆ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್. ಈ ಕುರಿತು ರಿಯಾಕ್ಟರ್ ಅನ್ನು ವಿನ್ಯಾಸಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. 2025ರ ಹೊತ್ತಿಗೆ 62 ಥೋರಿಯಂ ರಿಯಾಕ್ಟರುಗಳು ನಿರ್ಮಾಣವಾಗುತ್ತವೆ ಎಂದು ಸರ್ಕಾರ ಭರವಸೆ ಇಟ್ಟಿದೆ. `ಸರ್ಕಾರ ಕೊಡುವ ವಿದ್ಯುತ್ತು ಯಾವ ಮೂಲದಿಂದ ಬಂದದ್ದು ಎಂಬ ಬಗ್ಗೆ ಜನಕ್ಕೆ ತಿಳಿಯುವ ಉತ್ಸಾಹ ಕಡಿಮೆ. ಮಾಲಿನ್ಯವಾಗಬಾರದು, ಸ್ಥಾವರಗಳಲ್ಲಿ ಅಪಘಾತವಾಗಬಾರದು, ನಮಗೆ ನಿರಂತರ ವಿದ್ಯುತ್ ಬೇಕು. ಇಷ್ಟನ್ನೂ ಗ್ಯಾರಂಟಿ ಕೊಡುವಿರಾ’ ಎನ್ನುವುದೇ ಜನಮತ.

1 COMMENT

  1. ಈಚಿನ ಕಾಲದಲ್ಲಿ ಐದು ವರ್ಷ ಅಸ್ಥಿರ ಪಕ್ಷಾಡಳಿತವನ್ನೇ ಪ್ರಜಾಡಳಿತ ಎನ್ನುವಂತೆ ಭ್ರಮಿಸುವ ಸ್ಥಿತಿಯಲ್ಲಿ ಸಮಗ್ರ ಅಥವಾ ಸುಸ್ಥಿರ ಅಭಿವೃದ್ಧಿ ಎನ್ನುವ ಶಬ್ದಕ್ಕೆ ಅರ್ಥವೇ ಇಲ್ಲ ಎನ್ನುವುದಕ್ಕೆ ಇಂಥವು ದೊಡ್ಡ ಉದಾಹರಣೆಗಳಾಗಿಯೇ ಕಾಣಿಸುತ್ತವೆ.ರಾಷ್ಟ್ರಮಟ್ಟದಲ್ಲೇ ಹೇಳುವುದಿದ್ದರೆ ಒಂದು ಕೈಯಲ್ಲಿ ವನ್ಯವನ್ನೆಲ್ಲ ಉದ್ಯಮಗಳಿಗೆ ಮುಕ್ತಗೊಳಿಸಿ, ಇನ್ನೊಂದು ಕೈಯಲ್ಲಿ ಗೋರಕ್ಷಣೆ ಮೂಲಕ ಜೀವವೈವಿಧ್ಯವನ್ನು ರಕ್ಷಿಸುವ ಮಾತಾಡುವವರು, ತೀರಾ ಪ್ರಾದೇಶಿಕ ಮಟ್ಟದಲ್ಲಿ ನೋಡುವುದಿದ್ದರೆ ಎಮ್ಮಾರ್ಪೀಯೆಲ್ ವಿಸ್ತರಣೆಗೆ ಅನುಮತಿಸುತ್ತಾ ಜೋಕಟ್ಟೆ ವಲಯದ ನಾಗರಿಕರಿಗೆ ಸಮಗ್ರ ಆರೋಗ್ಯಭಾಗ್ಯವನ್ನು ಆಶ್ವಾಸಿಸುವವರು ಮಾಡುವುದು ಹೀಗೇ 🙁

Leave a Reply