ನಿಚ್ಚಳವಾಗುತ್ತಿದೆಯೇ ಮೋದಿ ಮಾಸ್ಟರ್ ಸ್ಟ್ರೋಕ್ ಪರಿಣಾಮ? ಪಾಕಿಸ್ತಾನದ ವಿರುದ್ಧ ಎದ್ದೇಳುತ್ತಿದೆ ಗಿಲ್ಗಿಟ್- ಬಾಲ್ಟಿಸ್ತಾನ

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಶ್ನಿಸಬೇಕು ಹಾಗೂ ಅದು ಭಾರತದ ಭಾಗ ಎಂದು ಎಂದು ಪ್ರಧಾನಿ ಮೋದಿ ಹೇಳಿದ ಮರುದಿನದಿಂದಲೇ ಪಾಕಿಸ್ತಾನಕ್ಕೆ ಉಸಿರು ಕಟ್ಟತೊಡಗಿದೆ. ಒಂದೆಡೆ ಬಲೊಚಿಗಳ ಸ್ವಾತಂತ್ರ್ಯದ ಧ್ವನಿಗೆ ಪ್ರಧಾನಿ ಮಾತುಗಳಿಂದ ಉತ್ಸಾಹ ಪುಟಿದೆದ್ದಿದ್ದರೆ, ಇನ್ನೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಸಹ ಪಾಕಿಸ್ತಾನದ ಸೇನೆಯ ವಿರುದ್ಧ ಜನ ಬೀದಿಗಿಳಿದಿದ್ದಾರೆ.

ಗಿಲ್ಗಿಟ್- ಬಾಲ್ಟಿಸ್ತಾನಗಳ ಮಂದಿ ಪಾಕಿಸ್ತಾನದ ವಿರುದ್ಧ ಧ್ವನಿ ಎತ್ತುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಈ ಕುರಿತ ವರದಿಗಳು ಅಷ್ಟಾಗಿ ಆಗುತ್ತಲೇ ಇರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿಯವರ ಮಾತಿನ ನಂತರ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಲೊಚಿಸ್ತಾನಗಳ ಬಗ್ಗೆ ಭಾರತೀಯರೂ ಸೇರಿದಂತೆ ಎಲ್ಲರ ಗಮನ ಹೆಚ್ಚಾಗುವಂತಾಗಿದೆ.

ಗಿಲ್ಗಿಟ್ ನಲ್ಲಿ ಪಾಕಿಸ್ತಾನ ತಮ್ಮ ನೆಲ ಬಿಟ್ಟು ತೊಲಗಲಿ ಎಂದು ಪ್ರತಿಭಟಿಸಿದ 500 ಮಂದಿಯನ್ನು ಬಂಧಿಸಿರುವ ಘಟನೆಯನ್ನು ಶನಿವಾರ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ಪ್ರಾಂತ್ಯದವರು ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಭಾರತದ ಜಮ್ಮು-ಕಾಶ್ಮೀರದಲ್ಲಿ ಜನರನ್ನು ರಕ್ಷಿಸಿದ ಸೇನಾ ಕಾರ್ಯಾಚರಣೆ ನೋಡಿ, ತಾವೂ ಭಾರತದಲ್ಲಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ವರದಿಯಾಗಿತ್ತು. ಏಕೆಂದರೆ ನೈಸರ್ಗಿಕ ಸಂಪನ್ಮೂಲ ಶ್ರೀಮಂತ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನ ಕೇವಲ ಶೋಷಣೆಗೆ ಉಪಯೋಗಿಸಿಕೊಳ್ಳುತ್ತಿದೆಯೇ ಹೊರತು, ಸ್ವಲ್ಪವೂ ಅಭಿವೃದ್ಧಿ ಮಾಡಿಲ್ಲ. ಈಗ ಅಲ್ಲಿನ ಜನಗಳಲ್ಲಿ ಆಕ್ರೋಶ ಹೆಚ್ಚಾಗಿರುವುದಕ್ಕೂ , ಅತ್ತ ಬಲೊಚಿಸ್ತಾನದಲ್ಲಿ ಉದ್ಭವಿಸಿರುವ ಸ್ಥಿತಿಗೂ ಸಾಮ್ಯತೆ ಇದೆ. ಅದೇನೆಂದರೆ ಚೀನಾದ ಹೆಜ್ಜೆಗಳು!

ಪಾಕಿಸ್ತಾನ ಮತ್ತು ಚೀನಾ ಯೋಜಿಸಿರುವ ಆರ್ಥಿಕ ಕಾರಿಡಾರ್ ಬಲೊಚಿಸ್ತಾನದ ಗ್ವಾದಾರ್ ಬಂದರಿನಿಂದ ಶುರುವಾಗಿ ಇದೇ ಗಿಲ್ಗಿಟ್-ಬಾಲ್ಟಿಸ್ತಾನದ ನೆತ್ತಿ ಸೀಳಿಕೊಂಡು ಚೀನಾವನ್ನು ತಲುಪಿಕೊಳ್ಳಲಿದೆ. ಆ ತುದಿಯ ಬಲೊಚಿಸ್ತಾನ ಹಾಗೂ ಈ ತುದಿಯ ಬಾಲ್ಟಿಸ್ತಾನಗಳೆರಡೂ ಖನಿಜ, ನೈಸರ್ಗಿಕ ಅನಿಲ ಸಂಪದ್ಭರಿತ ಪ್ರದೇಶಗಳು. ರಸ್ತೆ ಮಾಡುವುದು ಹಾಗೂ ಅಭಿವೃದ್ಧಿ ಎಲ್ಲ ನೆಪಗಳು, ನಮ್ಮ ಸಂಪನ್ಮೂಲ ದೋಚುವುದೇ ಇದರ ಉದ್ದೇಶ ಅಂತ ಆಕ್ರೋಶಕ್ಕೆ ಬಿದ್ದಿದ್ದಾರೆ ಇವೆರಡೂ ಪ್ರದೇಶದವರು.

ಹೀಗಾಗಿ ಮುಂಬರುವ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಮತ್ತಷ್ಟು ಆಕ್ರೋಶಗಳು ಸ್ಫೋಟಿಸುವ ಎಲ್ಲ ಸಾಧ್ಯತೆಗಳಿವೆ.

ಇನ್ನೊಂದೆಡೆ ಭಾರತೀಯರ ಭಾವನೆಯನ್ನು ಪಾಕ್ ಆಕ್ರಮಿತ ಕಾಶ್ಮೀರದತ್ತ ತಿರುಗಿಸುವ ಅಗತ್ಯ ಕಾರ್ಯವನ್ನೂ ಸರ್ಕಾರ ಮಾಡುತ್ತಿದೆ. ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರ ಹೇಳಿಕೆ ಇದೇ ಉದ್ದೇಶದ್ದು- ‘ಭಾರತದ ಸ್ವಾತಂತ್ರ್ಯ ಹೋರಾಟವಿನ್ನೂ ಕೊನೆಗೊಂಡಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ನಮ್ಮ ಸಹೋದರರ ಸಂಕಷ್ಟ ಕಡೆಗಣಿಸುವಂತಿಲ್ಲ. ಅಲ್ಲಿ ಮುಂದಿನ ವರ್ಷದ ಹೊತ್ತಿಗೆ ತ್ರಿವರ್ಣ ಹಾರಿಸಿದಾಗಲೇ ತಿರಂಗಾ ಯಾತ್ರೆಗೆ ಮುಕ್ತಾಯ’ ಎಂದಿದ್ದಾರವರು.

Leave a Reply