ರೋಯಿಂಗ್ ಫೈನಲ್ ನಲ್ಲಿ ದತ್ತು, ಸೆಮೀಸ್ ಕಾಲಿಟ್ಟ ಸಾನಿಯಾ-ಬೋಪಣ್ಣ, ಕ್ವಾರ್ಟರ್ ಪ್ರವೇಶಿಸಿದ ಬಾಕ್ಸರ್ ವಿಕಾಸ್

Rio de Janeiro: Sania Mirza and Rohan Bopanna exchange hifi during their match against S. Stosur and J. Peers of Australia during the 2016 Summer Olympics at Rio de Janeiro in Brazil on Thursday . PTI Photo by Atul Yadav(PTI8_12_2016_000019B)

ಡಿಜಿಟಲ್ ಕನ್ನಡ ಟೀಮ್:

ರೋಯಿಂಗ್ ಫೈನಲ್ ಸುತ್ತಿಗೆ ದತ್ತು ಪ್ರವೇಶ, ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಉಪಾಂತ್ಯದಲ್ಲಿ ಸ್ಥಾನ ಖಚಿತ ಪಡಿಸಿಕೊಂಡ ಸಾನಿ-ಬೋಪಣ್ಣ ಜೋಡಿ, ಬಾಕ್ಸರ್ ವಿಕಾಸ್ ಕ್ವಾರ್ಟರ್ ಫೈನಲ್ ಪ್ರವೇಶ… ಇವಿಷ್ಟೂ ರಿಯೋ ಒಲಿಂಪಿಕ್ಸ್ ನಲ್ಲಿ ಶುಕ್ರವಾರ ಭಾರತಕ್ಕೆ ಸಿಕ್ಕ ಉತ್ತಮ ಫಲಿತಾಂಶಗಳು. ಇನ್ನು ಅಥ್ಲೆಟಿಕ್ಸ್ ನಲ್ಲಿ ವಿಕಾಸ್ ಗೌಡ, ಜಾನ್ಸನ್, ಮನ್ಪ್ರೀತ್ ಕೌರ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು ನಿರಾಸೆಯ ಫಲಿತಾಂಶ…

ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಬೋಪಣ್ಣ ಜೋಡಿಯು ಗ್ರೇಟ್ ಬ್ರಿಟನ್ ನ ಆಂಡಿ ಮರ್ರೆ ಮತ್ತು ವಾಟ್ಸನ್ ಜೋಡಿ ವಿರುದ್ಧ 6-4, 6-4 ಸೆಟ್ ಗಳ ಅಂತರದಲ್ಲಿ ಜಯಿಸಿದರು. ಇದರೊಂದಿಗೆ ಅಂತಿಮ ನಾಲ್ಕರ ಸುತ್ತಿನಲ್ಲಿ ಭಾರತದ ಜೋಡಿ ಸ್ಥಾನ ಖಚಿತಪಡಿಸಿಕೊಂಡಿತು. ಈ ಜೋಡಿ ತಮ್ಮ ಮುಂದಿನ ಪಂದ್ಯದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಮತ್ತು ರಾಮ್ ಜೋಡಿಯನ್ನು ಶನಿವಾರ ರಾತ್ರಿ 11.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಎದುರಿಸಲಿದೆ.

ರೋಯಿಂಗ್ ನಲ್ಲಿ ಭಾರತದ ಏಕೈಕ ಸ್ಪರ್ಧಿ ದತ್ತು ಭೊಂಕನಲ್, ಪುರುಷರ ಸಿಂಗಲ್ ಸ್ಕಲ್ ನ ಸೆಮಿಫೈನಲ್ ಸಿ-ಡಿ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 7:19.02 ಗುರಿ ಮುಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪುರುಷರ ಬಾಕ್ಸಿಂಗ್ ನಲ್ಲಿ 75 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್ ಪಂದ್ಯದಲ್ಲಿ ವಿಕಾಸ್ ಕೃಷ್ಣನ್ ಯಾದವ್ ಟರ್ಕಿಯ ಒಂಡರ್ ಸಿಪಲ್ ವಿರುದ್ಧ 3-0 ಸುತ್ತುಗಳ ಅಂತರದಲ್ಲಿ ಜಯಿಸಿದರು. ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಕಾಸ್ ಉಜ್ಬೇಕಿಸ್ತಾನದ ಮೆಲಿಕುಜೀವ್ ವಿರುದ್ಧ ಆಡಲಿದ್ದು, ಈ ಪಂದ್ಯ ಮಂಗಳವಾರ ಬೆಳಗಿನ ಜಾವ 3.30 ಕ್ಕೆ ಆರಂಭವಾಗಲಿದೆ.

ಇನ್ನು ಭಾರತ ಪುರುಷರ ಹಾಕಿ ತಂಡ ಕೆನಡಾ ವಿರುದ್ಧದ ಬಿ ಗುಂಪಿನ ಅಂತಿಮ ಪಂದ್ಯದಲ್ಲಿ 2-2 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿತು. ಭಾರತ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದು, ನಾಳೆ ನಡೆಯಲಿರುವ ಇತರೆ ಪಂದ್ಯಗಳ ಫಲಿತಾಂಶದ ನಂತರ ಭಾರತ ಅಂತಿಮ ಎಂಟರ ಘಟ್ಟದಲ್ಲಿ ಯಾರ ವಿರುದ್ಧ ಸೆಣಸಲಿದೆ ಎಂಬುದು ಗೊತ್ತಾಗಲಿದೆ.

ಇನ್ನು ಶೂಟಿಂಗ್ ವಿಭಾಗಕ್ಕೆ ಬರೋದಾದ್ರೆ, ಭಾರತದ ಗುರುಪ್ರೀತ್ ಸಿಂಗ್ 25 ಮೀ. ಪುರುಷರ ರಾಪಿಡ್ ಫೈರ್ ಪಿಸ್ತೂಲ್ ಶೂಟಿಂಗ್ ನಲ್ಲಿ 289 ಅಂಕಗಳನ್ನು ಸಂಪಾದಿಸಿ 10ನೇ ಸ್ಥಾನ ಪಡೆದರು. ಎರಡನೇ ಸುತ್ತಿನ ಸ್ಪರ್ಧೆ ಶನಿವಾರ ಸಂಜೆ 5.30ಕ್ಕೆ ಆರಂಭವಾಗಲಿದೆ. ಫೈನಲ್ ಸುತ್ತು ರಾತ್ರಿ 9ಕ್ಕೆ ಆರಂಭವಾಗಲಿದೆ. ಪುರುಷರ ಸ್ಕೀಟ್ ನಲ್ಲಿ ಮೈರಾಜ್ ಅಹ್ಮದ್ ಖಾನ್ 72 ಅಂಕಗಳೊಂದಿಗೆ 10ನೇ ಸ್ಥಾನ ಪಡೆದಿದ್ದು, ಅರ್ಹತಾ ಸುತ್ತಿನ ಎರಡನೇ ದಿನದ ಸ್ಪರ್ಧೆ ಶನಿವಾರ ಸಂಜೆ 6ಕ್ಕೆ ಆರಂಭವಾಗಲಿದೆ. ಪುರುಷರ 50 ಮೀ. ರೈಫಲ್ ಪ್ರೊನ್ ಶೂಟಿಂಗ್ ನಲ್ಲಿ ಭಾರತದ ಗಗನ್ ನಾರಂಗ್ 623.1 ಅಂಕಗಳೊಂದಿಗೆ 13ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ರು.

ಕರ್ನಾಟಕದ ಡಿಸ್ಕಸ್ ಥ್ರೋಪಟು ವಿಕಾಸ್ ಗೌಡ ಪ್ರದರ್ಶನ ತೀವ್ರ ನೀರಸವಾಗಿತ್ತು. ಕಳೆದ ವರ್ಷ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ (66.28 ಮೀ.)ಯ ನಿರೀಕ್ಷೆಯೊಂದಿಗೆ ಒಲಿಂಪಿಕ್ಸ್ ಪ್ರವೇಶಿಸಿದ್ದ ವಿಕಾಸ್ ಪಡೆದಿದ್ದು, 28ನೇ ಸ್ಥಾನ. ವಿಕಾಸ್ ಗೌಡ ಅವರ ನಾಲ್ಕು ಒಲಿಂಪಿಕ್ಸ್ ನಲ್ಲೇ ಅತ್ಯಂತ ಕೆಟ್ಟ ಪ್ರದರ್ಶನ ಇದಾಗಿದೆ. ಮಹಿಳೆಯರ ಶಾಟ್ ಪುಟ್ ವಿಭಾಗದಲ್ಲಿ ಮನ್ಪ್ರೀತ್ ಕೌರ್ ಸಹ ನಿರಾಸೆ ಅನುಭವಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 35 ಸ್ಪರ್ಧಿಗಳ ಪೈಕಿ ಕೌರ್ ಗಳಿಸಿದ್ದು 23ನೇ ಸ್ಥಾನ. ಪುರುಷರ 800 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ 3ನೇ ಹೀಟ್ಸ್ ನಲ್ಲಿ 1:47.27 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಐದನೇ ಸ್ಥಾನ ಪಡೆಯುವ ಮೂಲಕ ಮುಂದಿನ ಹಂತಕ್ಕೆ ಆಯ್ಕೆಯಾಗಲು ವಿಫಲರಾದರು.

ಉಳಿದಂತೆ ಮಹಿಳೆಯರ 100 ಮೀ. ಓಟದಲ್ಲಿ ಭಾರತದ ದ್ಯುತಿ ಚಂದ್ 5ನೇ ಹೀಟ್ಸ್ ನಲ್ಲಿ 11.69 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ 50ನೇ ಸ್ಥಾನ ಪಡೆದ್ರೆ, ಪುರುಷರ ಲಾಂಗ್ ಜಂಪ್ ನಲ್ಲಿ ಅಂಕಿತ್ ಶರ್ಮಾ 7,67 ಮೀ. ಜಿಗಿದು 24ನೇ ಸ್ಥಾನ ಪಡೆದರು. ಪುರುಷರ 400 ಮೀ. ಓಟದ ಮೊದಲ ಸುತ್ತಿನಲ್ಲಿ ಮುಹಮದ್ ಅನಾಸ್ ಯಾಹಿಯಾ 45.95 ಸೆಕೆಂಡ್ ಗಳಲ್ಲಿ ಓಡುವ ಮೂಲಕ 24ನೇ ಸ್ಥಾನ ಪಡೆದರು. ಇನ್ನು ಪುರುಷರ 20 ಕಿ.ಮೀ ನಡಿಗೆಯಲ್ಲಿ ಮನೀಷ್ ಸಿಂಗ್ 1:21:21 ನಿಮಿಷಗಳಲ್ಲಿ 13ನೇ ಸ್ಥಾನ ಪಡೆದರು.

ಆರ್ಚರಿಯಲ್ಲಿ ಏಕಾಂಗಿಯಾಗಿ ಭಾರತದ ಪರ ಹೋರಾಟ ನಡೆಸುತ್ತಿದ್ದ ಅತನು ದಾಸ್ ಪ್ರಿಕ್ವಾಟರ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಲೀ ಸೆಂಗ್ ವಿರುದ್ಧ 6-4 ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಆರ್ಚರಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನ ಡಿ ಗುಂಪಿ ಪಂದ್ಯದಲ್ಲಿ ಭಾರತದ ಸುಮಿತ್ ರೆಡ್ಡಿ ಮತ್ತು ಮನು ಅತ್ರಿ ಜೋಡಿ ಚೀನಾದ ಚೈಯ್ ಮತ್ತು ಹಾಂಗ್ ವಿರುದ್ಧ 0-2 ಗೇಮ್ ಗಳಿಂದ ಸೋಲನುಭವಿಸಿದರು. ಮಹಿಳೆಯರ ಡಬಲ್ಸ್ ವಿಭಾಗದ ಎ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಹಾಲೆಂಡ್ ನ ಪೈಕ್ ಮತ್ತು ಮುಸ್ಕೆನ್ಸ್ ಜೋಡಿ ವಿರುದ್ಧ 2-1 ಗೇಮ್ ಗಳ ಅಂತರದಲ್ಲಿ ಪರಾಭವಗೊಂಡರು.

ಗಾಲ್ಫ್ ನ ಎರಡನೇ ಸುತ್ತಿನಲ್ಲಿ ಭಾರತದ ಅನಿರ್ಬಾನ್ ಲಾಹಿರಿ 73 ಅಂಕಗಳೊಂದಿಗೆ 46ನೇ ಸ್ಥಾನ ಪಡೆದರೆ, ಶಿವ್ ಚವ್ರಾಸಿಯಾ 71 ಅಂಕಗಳೊಂದಿಗೆ 31ನೇ ಸ್ಥಾನ ಪಡೆದರು. ಮೂರನೇ ಸುತ್ತು ಇಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ.

ಪದಕದ ಪಟ್ಟಿ ವಿಚಾರಕ್ಕೆ ಬಂದರೆ, ಅಮೆರಿಕ 50 (20 ಚಿನ್ನ, 13 ಬೆಳ್ಳಿ, 17 ಕಂಚು), ಚೀನಾ 37 (13 ಚಿನ್ನ, 10 ಬೆಳ್ಳಿ, 14 ಕಂಚು) ಮತ್ತು ಗ್ರೇಟ್ ಬ್ರಿಟನ್ 22 (7 ಚಿನ್ನ, 9 ಬೆಳ್ಳಿ, 6 ಕಂಚು) ಕ್ರಮವಾಗಿ ಅಗ್ರ ಮೂರುಸ್ಥಾನಗಳನ್ನು ಅಲಂಕರಿಸಿವೆ.

ಇಂದು ನಡೆಯಲಿರುವ ಭಾರತೀಯ ಅಥ್ಲೀಟ್ ಗಳ ಸ್ಪರ್ಧೆಗಳು ಹೀಗಿವೆ….

ಶೂಟಿಂಗ್ ದ್ವಿತೀಯ ಸುತ್ತಿನ ಸ್ಪರ್ಧೆಗಳು: ಭಾರತದ ಗುರುಪ್ರೀತ್ ಸಿಂಗ್ 25 ಮೀ. ಪುರುಷರ ರಾಪಿಡ್ ಫೈರ್ ಪಿಸ್ತೂಲ್ ಶೂಟಿಂಗ್ ನ ಎರಡನೇ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಈ ಸ್ಪರ್ಧೆ ಸಂಜೆ 5.30ಕ್ಕೆ ನಡೆಯಲಿದೆ. ಶನಿವಾರ ಸಂಜೆ 6ಕ್ಕೆ ಆರಂಭವಾಗಲಿರುವ ಪುರುಷರ ಸ್ಕೀಟ್ ನ ಎರಡನೇ ದಿನದ ಅರ್ಹತಾ ಸುತ್ತಿನಲ್ಲಿ ಮೈರಾಜ್ ಅಹ್ಮದ್ ಖಾನ್ ಸ್ಪರ್ಧಿಸಲಿದ್ದಾರೆ.

ರೋಯಿಂಗ್ ಫೈನಲ್ ನಲ್ಲಿ ದತ್ತು: ಭಾರತದ ಏಕೈಕ ರೋಯಿಂಗ್ ಸ್ಪರ್ಧಿ ದತ್ತು ಭೊಂಕನಲ್, ಪುರುಷರ ಸಿಂಗಲ್ ಸ್ಕಲ್ ನ ಸಿ-ಫೈನಲ್ ನಲ್ಲಿ ಸ್ಪರ್ಧಿಸಲಿದ್ದು, ಈ ಸ್ಪರ್ಧೆ ಸಂಜೆ 6.20ಕ್ಕೆ ಆರಂಭವಾಗಲಿದೆ.

ಮಹಿಳಾ ಹಾಕಿಗೆ ಅರ್ಜೆಂಟೀನಾ ಸವಾಲು: ಮಹಿಳೆಯರ ಬಿ ಗುಂಪಿನ ಪಂದ್ಯದಲ್ಲಿ ಭಾರತ ವನಿತೆಯರ ಹಾಕಿ ತಂಡಕ್ಕೆ ಅರ್ಜೆಂಟೀನಾ ಸವಾಲು ನೀಡಲಿದ್ದು, ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದೆ.

ಅಥ್ಲೆಟಿಕ್ಸ್ ಸ್ಪರ್ಧೆಗಳು: ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್ ವಿಭಾಗದಲ್ಲಿ ಭಾರತದ ಲಲತಾ ಬಬರ್ ಮತ್ತು ಸುಧಾ ಸಿಂಗ್ ಸ್ಪರ್ಧಿಸಲಿದ್ದು, ಸಂಜೆ 6.35ಕ್ಕೆ ಆರಂಭವಾಗಲಿದೆ. ಮಹಿಳೆಯರ 400 ಮೀ. ಓಟದಲ್ಲಿ ಭಾರತದ ನಿರ್ಮಲಾ ಶೆರನ್ ಸಂಜೆ 7.30ಕ್ಕೆ ಸ್ಪರ್ಧಿಸಲಿದ್ದಾರೆ.

ಬ್ಯಾಡ್ಮಿಂಟನ್ ಡಬಲ್ಸ್ ಸ್ಪರ್ಧೆಗಳು: ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನ ಡಿ ಗುಂಪಿ ಪಂದ್ಯದಲ್ಲಿ ಭಾರತದ ಸುಮಿತ್ ರೆಡ್ಡಿ ಮತ್ತು ಮನು ಅತ್ರಿ ಜೋಡಿ ಜಪಾನಿನ ಹಯಕವಾ ಮತ್ತು ಎಂಡೊ ಜೋಡಿ ವಿರುದ್ಧ ಭಾನುವಾರ ಬೆಳಗಿನ ಜಾವ 4.30ಕ್ಕೆ ಸೆಣಸಲಿದ್ದು, ಮಹಿಳೆಯರ ಡಬಲ್ಸ್ ವಿಭಾಗದ ಎ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿಯು ಥಾಯ್ಲೆಂಡ್ ನ ಸುಪಜ್ರಿಕಲ್ ಮತ್ತು ತರಟ್ಟನಾಚೈ ಜೋಡಿ ವಿರುದ್ಧ ರಾತ್ರಿ 7.15ಕ್ಕೆ ಸೆಣಸಲಿದೆ.

Leave a Reply