ಪದಕ ಗೆಲ್ಲಲು ದೀಪಾ ಆಯ್ಕೆ ಮಾಡಿಕೊಂಡಿರೋದು ಪ್ರಾಣಕ್ಕೆ ಕುತ್ತು ತರೋ ‘ಪ್ರೊಡುನೋವಾ’ ಎಂಬ ಬ್ರಹ್ಮಾಸ್ತ್ರ!

ಸೋಮಶೇಖರ ಪಿ. ಭದ್ರಾವತಿ

ಸರಿಯಾಗಿ 69 ವರ್ಷಗಳ ಹಿಂದೆ ಭಾರತೀಯರೆಲ್ಲರು ಆಗಸ್ಟ್ 14ರ ರಾತ್ರಿ ಸ್ವಾತಂತ್ರಕ್ಕಾಗಿ ಎದ್ದು ಕುಳಿತಿದ್ದರು. ಈ ಬಾರಿಯ ಆಗಸ್ಟ್ 14ರ ರಾತ್ರಿ ಭಾರತೀಯ ಕ್ರೀಡಾ ಅಭಿಮಾನಿಗಳು ಎದ್ದು ಕುಳಿತಿರುತ್ತಾರೆ. ಕಾರಣ, ದೀಪಾ ಕರ್ಮಾಕರ್ ಚಿನ್ನದ ಪದಕದ ಬೇಟೆಯಾಡುವುದನ್ನು ನೋಡಲು…

ಪದಕ ನಿರೀಕ್ಷೆಗಳಾಗಿದ್ದ ಜಿತು ರೈ, ಅಭಿನವ್ ಬಿಂದ್ರಾ, ಗಗನ್ ನಾರಂಗ್, ದೀಪಿಕಾ ಕುಮಾರಿ, ಬೊಂಬೈಲಾ ದೇವಿ ವಿಫಲರಾದರೂ ಭಾರತೀಯ ಅಭಿಮಾನಿಗಳ ಮನದಾಳದ ಮೂಲೆಯಲ್ಲಿ ದೀಪಾ ಕರ್ಮಾಕರ್ ಇನ್ನು ಇದ್ದಾಳೆ ಎಂಬುದು ಪ್ರತಿಧ್ವನಿಸುತ್ತಿದೆ. ಈಕೆ ಗೆದ್ದರೆ ಇಡೀ ದೇಶವೇ ಖುಷಿಪಡಲಿದೆ. ಒಂದು ವೇಳೆ ಸೋತರೆ ಯಾರು ಬೇಸರ ಮಾಡಿಕೊಳ್ಳುವಂತಿಲ್ಲ. ಏಕೆ ಅಂದಿರಾ… ಜಿಮ್ನಾಸ್ಟಿಕ್ ನ ಗಂಧ ಗಾಳಿ ತಿಳಿಯದ ರಾಷ್ಟ್ರದಲ್ಲಿ ತ್ರಿಪುರಾದ ಒಂದು ಸಣ್ಣ ಊರಿನಿಂದ ಬಂದು, ಒಲಿಂಪಿಕ್ಸ್ ನಲ್ಲಿ ವಿಶ್ವ ವಿಖ್ಯಾತ ಜಿಮ್ನಾಸ್ಟರ್ ಗಳಿಗೆ ಪ್ರಶಸ್ತಿ ಸುತ್ತಿನಲ್ಲಿ ಸಡ್ಡು ಹೊಡೆಯುವುದು ಸಾಮಾನ್ಯ ಸಾಧನೆಯೇನಲ್ಲ. ಹೀಗಾಗಿ ಈಕೆ ಈಗಾಗಲೇ ನಮ್ಮೆಲ್ಲರ ಪಾಲಿಗೂ ಚಾಂಪಿಯನ್ ಆಗಿ ಬಿಟ್ಟಿದ್ದಾಳೆ.

ಇಲ್ಲಿ ಪ್ರತಿಯೊಬ್ಬರು ಗಮನಿಸಿಬೇಕಿರೋ ಪ್ರಮುಖ ಅಂಶ ಎಂದರೆ, ದೀಪಾ ಕರ್ಮಾಕರ್ ತನ್ನ ಕನಸು ಹಾಗೂ ಕೋಟ್ಯಾಂತರ ಅಭಿಮಾನಿಗಳ ಆಸೆ ಈಡೇರಿಸಲು ಹೊರಟಿರೋ ಹಾದಿ ಆಕೆಯ ಭವಿಷ್ಯವನ್ನೇ ಬದಲಿಸುವ ಅಪಾಯದಿಂದ ಕೂಡಿದೆ. ಅದೆಂದರೆ, ಪ್ರಶಸ್ತಿ ಸುತ್ತಿನಲ್ಲಿ ದೀಪಾ ಕರ್ಮಾಕರ್ ಪಾಲಿಗೆ ಬ್ರಹ್ಮಾಸ್ತ್ರವಾಗಿರೋ ಪ್ರೊಡುನೋವಾ…

ದೀಪಾ ಕರ್ಮಾಕರ್ ಜಿಮ್ನಾಸ್ಟಿಕ್ಸ್ ನ ಐದು ವಿಭಾಗಗಳ ಅರ್ಹತಾ ಸುತ್ತಿನಲ್ಲೂ ಭಾಗವಹಿಸಿದ್ದಳು. ಅನ್ ಇವನ್ ಬಾರ್ ವಿಭಾಗದಲ್ಲಿ 77ನೇ, ಫ್ಲೋರ್ ಎಕ್ಸರ್ಸೈಸ್ ವಿಭಾಗದಲ್ಲಿ 75, ಬೀಮ್ ವಿಭಾಗದಲ್ಲಿ 65, ವೈಯಕ್ತಿಕ ಆಲ್ರೌಂಡ್ ವಿಭಾಗದಲ್ಲಿ 51 ಸ್ಥಾನಗಳನ್ನು ಪಡೆದಿದ್ದ ದೀಪಾ ವಾಲ್ಟ್ ವಿಭಾಗದಲ್ಲಿ ಮಾತ್ರ 8ನೇ ಸ್ಥಾನ ಪಡೆದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಉಳಿದ ನಾಲ್ಕು ವಿಭಾಗಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ದೀಪಾ ವಾಲ್ಟ್ ವಿಭಾಗದಲ್ಲಿ ಮಾತ್ರ ಹೇಗೆ ಪ್ರಶಸ್ತಿ ಸುತ್ತಿಗೆ ಕಾರಣರಾದರು ಎಂಬುದನ್ನು ಗಮನಿಸಬೇಕು. ಅದಕ್ಕೆ ಕಾರಣ ಏನಂದ್ರೆ ವಾಲ್ಟ್ ವಿಭಾಗದಲ್ಲಿ ಪ್ರೊಡುನೋವಾ ಎಂಬ ಬ್ರಹ್ಮಾಸ್ತ್ರವನ್ನೇ ಬಳಸಿದ್ದಳು ದೀಪಾ…

 ಅರೆ, ಏನಿದು ಪ್ರೊಡುನೋವಾ ಅಂದರೆ ಅಂತ ಕೇಳೊರಿಗೆ ಉತ್ತರ ಇಲ್ಲಿದೆ…

ಕ್ರಿಕೆಟ್ ನಲ್ಲಿ ‘ಸ್ವಿಚ್ ಹಿಟ್’ ಹೇಗೆ ಆಕರ್ಷಣಿಯವೊ… ಫುಟ್ಬಾಲ್ ನಲ್ಲಿ ‘ಬೈಸೈಕಲ್ ಕಿಕ್’ ಹಾಗೂ ಬಾಸ್ಕೆಟ್ ಬಾಲ್ ನಲ್ಲಿ ‘ಸ್ಲ್ಯಾಂ ಡಂಕ್’ ಹೇಗೆ ಖ್ಯಾತಿಯೋ… ಅದೇ ರೀತಿ ಮಹಿಳೆಯರ ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಈ ಪ್ರೊಡುನೋವಾ ವಿಭಿನ್ನ ಶೈಲಿ. ಇದು ಕೇವಲ ವಿಭಿನ್ನ ಮತ್ತು ಆಕರ್ಷಣೆಯಲ್ಲ, ಈ ಪ್ರಯತ್ನದಲ್ಲಿ ಸಾವಿವೆಯಷ್ಟು ಆಯ ತಪ್ಪಿದರೂ ಸ್ಪರ್ಧಿಯ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ.

 ಮೊನ್ನೆಯಷ್ಟೇ ಇದೇ ಒಲಿಂಪಿಕ್ಸ್ ನಲ್ಲಿ ಸಮೀರ್ ಎಂಬ ಜಿಮ್ನಾಸ್ಟರ್ ಲ್ಯಾಂಡಿಂಗ್ ವೇಳೆ ಆಯ ತಪ್ಪಿದ್ದಕೆ ಆತನ ಕಾಲೆ ಮುರಿದು ಆತ ನೋವಿನ ಮಡುವಿನಲ್ಲಿ ಬಿದ್ದದ್ದನ್ನು ನಿವೆಲ್ಲರೂ ನೋಡಿದ್ದೀರಲ್ಲಾ… ಅದಕ್ಕಿಂತ ಹೆಚ್ಚಿನ ಅಪಾಯ ತಂದೊಡ್ಡಲಿದೆ ಈ ಪ್ರೊಡುನೋವಾ.

ನಿಮಗೆ ಗೊತ್ತಿರಲಿ, ಈವರೆಗೂ ಈ ಪ್ರೊಡುನೋವಾ ಶೈಲಿಯನ್ನು ಯಶಸ್ವಿಯಾಗಿ ಮಾಡಿರೋ ಜಿಮ್ನಾಸ್ಟರ್ ಗಳ ಸಂಖ್ಯೆ ಬರೀ 5. ಆ ಪೈಕಿ ದೀಪಾ ಕರ್ಮಾಕರ್ ಮೂರನೇಯ ಪಟು. ಉಳಿದವರೆಂದರೆ, ರಷ್ಯಾದ ಯೆಲೆನಾ ಪ್ರೊಡುನೋವಾ, ಡೊಮಿನಿಕಾ ರಿಪಬ್ಲಿಕ್ ನ ಯಮಿಲೆಟ್ ಪೆನಾ, ಈಜಿಪ್ಟ್ ನ ಫಾದ್ವಾ ಮಹಮೌದ್, ಒಕ್ಸಾನಾ ಚುಸೊವಿಟಿನಾ.

ಅಷ್ಟರ ಮಟ್ಟಿಗೆ ಕಠಿಣ ಹಾಗೂ ಅಪಾಯಕಾರಿ ಈ ಪ್ರೊಡುನೋವಾ ಶೈಲಿ. ಅದೆಷ್ಟೋ ಅಂತಾರಾಷ್ಟ್ರೀಯ ಜಿಮ್ನಾಸ್ಟರ್ ಗಳು ಈ ಶೈಲಿಯ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದಾರೆ. ಅಂತಹದರಲ್ಲಿ ದೀಪಾ ಕರ್ಮಾಕರ್ ಇದನ್ನೇ ತನ್ನ ಅಸ್ತ್ರವನ್ನಾಗಿ ಬಳಸುತ್ತಿದ್ದಾಳೆ. ಆ ಮೂಲಕ ದೀಪಾ ಈ ಗುರಿ ಸಾಧನೆಗೆ ಎಷ್ಟರ ಮಟ್ಟಿಗೆ ಅಪಾಯದ ವಿರುದ್ಧ ಸೆಣಸುತ್ತಿದ್ದಾಳೆ ಎಂಬುದನ್ನು ನೀವೇ ಯೋಚಿಸಿ.

 ಪ್ರೊಡುನೋವಾ ನಿಜಕ್ಕೂ ಇಷ್ಟರ ಮಟ್ಟಿಗೆ ಅಪಾಯವೇ…

ಹೀಗಂತಾ ಪ್ರಶ್ನೆ ಮಾಡುವವರು ಈ ಕೆಳಗಿನ ಗ್ರಾಫಿಕ್ ಚಿತ್ರವನ್ನೊಮ್ಮೆ ನೋಡಿ. ಈ ಒಂದು ಪ್ರಕ್ರಿಯೆ ವೇಳೆ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಪ್ರಾಣ ಹೋಗುವ ಅಥವಾ ದೇಹ ಪಾರ್ಶ್ವವಾಯುವಿಗೆ ಸಿಲುಕುವ ಸಾಧ್ಯತೆ ಹೆಚ್ಚು.

 produnova

ಪ್ರೊಡುನೋವಾ ಗ್ರಾಫಿಕ್ ಚಿತ್ರ… (ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್ ವೆಬ್ ಸೈಟ್)

 ಈ ಶೈಲಿಯನ್ನು 1999 ರಲ್ಲಿ ಮೊದಲ ಬಾರಿಗೆ ರಷ್ಯಾದ ಜಿಮ್ನಾಸ್ಟಿಕ್ ಅಥ್ಲೀಟ್ ಪ್ರೊಡುನೋವಾ ಎಂಬಾಕೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಶೈಲಿಗೆ ಆಕೆಯ ಹೆಸರನ್ನೇ ಇಡಲಾಯಿತು. ಈ ಶೈಲಿಯನ್ನು ಪೂರ್ಣ ಗೊಳಿಸಿದರೆ, 7.0 ಡಿ-ಸ್ಕೋರ್ (ಮಹಿಳಾ ಜಿಮ್ನಾಸ್ಟಿಕ್ಸ್ ನಲ್ಲೇ ಗರಿಷ್ಠ ಅಂಕವಿದು) ಪಡೆಯಬಹುದು. ಈ ಶೈಲಿಯ ಲ್ಯಾಂಡಿಂಗ್ ವೇಳೆ ಕುತ್ತಿಗೆ ಕೆಳಕ್ಕೆ ಸಿಕ್ಕಿಕೊಂಡು ಅಪಾಯ ಖಚಿತ. ಒಂದು ಹಂತದಲ್ಲಿ ಈ ಶೈಲಿಯನ್ನು ನಿಷೇಧಿಸಬೇಕು ಅಂತಲೂ ಕೂಗುಗಳು ಕೇಳಿ ಬಂದಿದ್ದವು.

ಇನ್ನು ದೀಪಾ ಕರ್ಮಾಕರ್ ಪ್ರತಿಸ್ಪರ್ಧಿಗಳತ್ತ ಒಮ್ಮೆ ನೋಡಿದರೆ, ಇರೋರೆಲ್ಲಾ ಘಟಾನುಘಟಿಗಳೇ. ಈವರೆಗೂ ಪ್ರೊಡುನೋವಾ ಪೂರ್ಣಗೊಳಿಸಿರುವವರ ಪೈಕಿ ಉಜ್ಬೇಕಿಸ್ತಾನದ ಒಕ್ಸಾನಾ ಚುಸೋವಿಟಿನಾ, ಸಹ ಪ್ರಶಸ್ತಿ ಸುತ್ತಿನಲ್ಲಿದ್ದಾರೆ. ಇನ್ನು ಉಳಿದವರು ಅಂತಾರಾಷ್ಟ್ರೀಯ ಹಾಗೂ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮ ಮಡಿಲಿಗೆ ಬಾಚಿಕೊಂಡವರೆ. ಹೀಗಾಗಿ ದೀಪಾ ಕರ್ಮಾಕರ್ ಇವರೆಲ್ಲರ ನಡುವೆ ಸೆಣಸಿ ದೇಶಕ್ಕೆ ಕೀರ್ತಿ ತರಲೇಬೇಕೆಂದು ಈ ರಿಸ್ಕ್ ತೆಗೆದುಕೊಳ್ಳುತ್ತಿರೋದು.

ಈಕೆ ಪದಕ ಗೆದ್ದರಷ್ಟೇ ಚಾಂಪಿಯನ್ ಅಲ್ಲ. ಈಗಾಗಲೇ ಆಕೆ ನಮ್ಮ ಪಾಲಿಗೆ ಚಾಂಪಿಯನ್ ಆಗಿಬಿಟ್ಟಿದ್ದಾಳೆ. ಕಾರಣ ಇಷ್ಟೇ… ಅಬ್ಬಬ್ಬಾ ಅಂದ್ರೆ ಆರು ತಿಂಗಳ ಹಿಂದೆ ನಿಮಗೆ ದೀಪಾ ಕರ್ಮಾಕರ್ ಯಾರೆಂದು ಕೇಳಿದ್ದರೆ, ನೀವು ತಲೆ ಕೆರೆದುಕೊಳ್ಳುತ್ತಾ ಯೋಚಿಸುತ್ತಿದ್ದಿರಿ. ಈಗ ಅದೇ ಹೆಸರು ನಿಮ್ಮ ಮನಸಿನಲ್ಲಿ ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್ ರಂತ ಕ್ರೀಡಾ ತಾರೆಗಳ ಹೆಸರಿನಂತೆ ಅಚ್ಚಳಿಯದೆ ಉಳಿದುಬಿಟ್ಟಿದೆ. ಇದಕ್ಕಿಂತ ದೊಡ್ಡ ಸಾಧನೆ ಮತ್ತೇನಿದೆ. ಒಟ್ಟಿನಲ್ಲಿ ದೀಪಾ ಕರ್ಮಾಕರ್ ಪದಕ ಪಡೆಯುತ್ತಾಳೊ, ಬಿಡುತ್ತಾಳೊ… ಈವರೆಗಿನ ಆಕೆಯ ಪರಿಶ್ರಮ ಹಾಗೂ ಸಾಧನೆಯ ಹಾದಿ ನಾವೆಲ್ಲರು ಹೆಮ್ಮೆ ಪಡುವಂತಹದ್ದು.

ಅಂದಹಾಗೇ ಕೊನೆ ಮಾತು ಹೇಳೊದೇನಂದ್ರೆ… ‘ಕ್ರೀಡೆಯಲ್ಲಿ ಗೆಲವು ಸೋಲು ಎರಡನ್ನು ಸಮನಾಗಿ ಸ್ವೀಕರಿಸಬೇಕು’ ಎಂಬ ಕ್ರೀಡಾ ಮನೋಭಾವ ಕೇವಲ ಕ್ರೀಡಾಪಟುಗಳಿಗಷ್ಟೇ ಸೀಮಿತವಾಗಬಾರ್ದು. ಆ ಕ್ರೀಡಾಪಟುಗಳನ್ನು ಬೆಂಬಲಿಸೋ ಅಭಿಮಾನಿಗಳಲ್ಲೂ ಇರಬೇಕು. ಯಾಕೆ ಈ ಮಾತು ಅಂದರೆ, ಮೊನ್ನೆ ಭಾರತೀಯ ಕ್ರೀಡಾಪಟುಗಳ ಬಗ್ಗೆ ಲಘುವಾಗಿ ಟ್ವೀಟ್ ಮಾಡಿದ್ದ ಶೋಭಾ ಡೇ ಆಗಲಿ ಅಥವಾ ಅವರಂತೆ ನಾಲ್ಕು ಗೋಡೆ ಮಧ್ಯೆ ಕೂತು ಮೂಗಿ ಮುರಿಯುವವರು ನಾಳೆ ದೀಪಾಳ ಸಾಧನೆಯನ್ನು ಮರೆಯಬಾರದಲ್ವೇ…

Leave a Reply