ಟೀಂ ಇಂಡಿಯಾ ಆಕ್ರಮಣ ದಾಳಿಗೆ ತರಗೆಲೆಗಳಂತೆ ಉದುರಿದ್ರು ವಿಂಡೀಸ್ ದಾಂಡಿಗರು, ಭಾರತದ ಪಾಲಾಯ್ತು ಟೆಸ್ಟ್ ಸರಣಿ!

St. Lucia India West Indies Cricket

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿ… ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳ ವೈಫಲ್ಯ… ಇವು ಡ್ರಾ ಫಲಿತಾಂಶದ ನಿರೀಕ್ಷೆಯಲ್ಲಿದ್ದ ತೃತೀಯ ಟೆಸ್ಟ್ ಪಂದ್ಯ ಫಲಿತಾಂಶ ಕಾಣುವಂತೆ ಮಾಡಿದ ಪ್ರಮುಖ ಅಂಶಗಳು. ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ, ಆತಿಥೇಯರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸೋ ಮೂಲಕ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ತು.

ಪಂದ್ಯದ ಅಂತಿಮ ದಿನವಾದ ಶನಿವಾರ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ಚುರುಕಿನ ಬ್ಯಾಟಿಂಗ್ ಪ್ರದರ್ಶಿಸಿತು. ತಂಡ 217 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅದರೊಂದಿಗೆ ವಿಂಡೀಸ್ ಪಡೆಗೆ 346 ರನ್ ಗಳ ಕಠಿಣ ಗುರಿ ನೀಡಿತು. ಪಂದ್ಯದ ಅಂತಿಮ ದಿನದಾಟವನ್ನು ರಕ್ಷಣಾತ್ಮಕ ಆಟದ ಮೂಲಕ ತಳ್ಳಲು ಆತಿಥೇಯ ದಾಂಡಿಗರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 237 ರನ್ ಗಳ ಅಂತರದಲ್ಲಿ ಭಾರತ ಪಂದ್ಯವನ್ನು ಗೆದ್ದುಕೊಂಡಿತು. ಅಷ್ಟೇ ಅಲ್ಲದೆ, ಭಾರತ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ವಶ ಪಡಿಸಿಕೊಂಡಿದೆ.

ಭಾರತದ ಪರ ದಿನದಾಟ ಆರಂಭಿಸಿದ ಅಜಿಂಕ್ಯ ರಹಾನೆ (ಅಜೇಯ 78) ಉತ್ತಮ ಪ್ರದರ್ಶನ ನೀಡಿದರು. ಉಳಿದಂತೆ ರೋಹಿತ್ (41), ಸಾಹ (14), ಜಡೇಜಾ (16) ಮತ್ತು ಅಶ್ವಿನ್ (1) ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಲ್ಕನೇ ದಿನದಾಟದಲ್ಲಿ 157ಕ್ಕೆ 3 ರನ್ ಗಳಿಸಿದ್ದ ಭಾರತ ಅಂತಿಮ ದಿನ ಗಳಿಸಿದ್ದು 60 ರನ್ ಗಳನ್ನು ಮಾತ್ರ. ನಂತರ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ ಎದುರಾಳಿ ಪಡೆಯನ್ನು ಬ್ಯಾಟಿಂಗ್ ಗೆ ಇಳಿಸಿತು. ವಿಂಡೀಸ್ ಬೌಲಿಂಗ್ ಪರ ಕಮಿನ್ಸ್ 6 ವಿಕೆಟ್ ಪಡೆದು ಗಮನ ಸೆಳೆದ್ರು.

ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಸೋಲಿನಿಂದ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದ ವಿಂಡೀಸ್, ಈ ಪಂದ್ಯದಲ್ಲೂ ಹೋರಾಟ ನೀಡಲು ವಿಫಲವಾಗಿ ದಿಢೀರನೆ ಸೋಲನುಭವಿಸಿದೆ. ಆತಿಥೇಯರ ಪರ ಡಾರೆನ್ ಬ್ರಾವೊ (59), ಸ್ಯಾಮುಯೆಲ್ಸ್ (12) ಮತ್ತು ಚೇಸ್ (10) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ ಮನ್ ಎರಡಂಕಿ ರನ್ ಗಳಿಸಲಿಲ್ಲ.

ಭಾರತದ ಪರ ಬೌಲಿಂಗ್ ನಲ್ಲಿ ಶಮಿ 3, ಇಶಾಂತ್ ಮತ್ತು ಜಡೇಜಾ ತಲಾ 2 ಹಾಗೂ ಭುವನೇಶ್ವರ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು. ಭಾರತದ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇನ್ನು ಸರಣಿಯ ಅಂತಿಮ ಪಂದ್ಯ ಆಗಸ್ಟ್ 18ರಿಂದ ಪೋರ್ಟ್ ಆಫ್ ಸ್ಪೇನ್ ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನಿಂಗ್ಸ್ 353

ರಾಹುಲ್ 50, ಧವನ್ 1, ಕೊಹ್ಲಿ 3, ರಹಾನೆ 35, ರೋಹಿತ್ 9, ಅಶ್ವಿನ್ 118, ಸಾಹ ಅಜೇಯ 104, ಜಡೇಜಾ 6, ಭುವನೇಶ್ವರ್ 0, ಶಮಿ ಅಜೇಯ 0, ಇಶಾಂತ್ 0. ಇತರೆ 27. (ಕಮಿನ್ಸ್ 54ಕ್ಕೆ 3, ಜೋಸೆಫ್ 69ಕ್ಕೆ 3, ಚೇಸ್ 70ಕ್ಕೆ 2, ಗೆಬ್ರಿಯಲ್ 84ಕ್ಕೆ 2)

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 225

ಬ್ರಾಥ್ ವೈಟ್ ಅಜೇಯ 53, ಜಾನ್ಸನ್ 23, ಬ್ರಾವೊ 29, ಸ್ಯಾಮುಯೆಲ್ಸ್ 48, ಬ್ಲಾಕ್ ವುಡ್ 20, ಚೇಸ್ 2, ಡೌರಿಚ್ 18, ಹೋಲ್ಡರ್ 2, ಜೋಸೆಫ್ 0, ಕಮಿನ್ಸ್ 0, ಗೆಬ್ರಿಯಲ್ ಅಜೇಯ 0, ಇತರೆ 19. (ಭುವನೇಶ್ವರ್ 33ಕ್ಕೆ 5, ಅಶ್ವಿನ್ 52ಕ್ಕೆ 2, ಇಶಾಂತ್ 40ಕ್ಕೆ 1, ಜಡೇಜಾ 27ಕ್ಕೆ 1)

ಭಾರತ ಎರಡನೇ ಇನಿಂಗ್ಸ್ 157ಕ್ಕೆ 3

ರಾಹುಲ್ 28, ಧವನ್ 26, ಕೊಹ್ಲಿ 4, ರಹಾನೆ ಅಜೇಯ 78, ರೋಹಿತ್ 41, ಸಾಹ 14, ಜಡೇಜಾ 16, ಅಶ್ವಿನ್ 1, ಇತರೆ 9. (ಕಮಿನ್ಸ್ 48ಕ್ಕೆ 6, ಚೇಸ್ 41ಕ್ಕೆ 1)

ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ 108

ಬ್ರಾಥ್ ವೈಟ್ 4, ಜಾನ್ಸನ್ 0, ಬ್ರಾವೊ 59, ಸ್ಯಾಮುಯೆಲ್ಸ್ 12, ಚೇಸ್ 10, ಬ್ಲಾಕ್ ವುಡ್ 1, ಡೌರಿಚ್ 5, ಹೋಲ್ಡರ್ 1, ಜೋಸೆಫ್ 0, ಕಮಿನ್ಸ್ ಅಜೇಯ 2, ಗೆಬ್ರಿಯಲ್ ಅಜೇಯ 11, ಇತರೆ 3. (ಭುವನೇಶ್ವರ್ 13ಕ್ಕೆ 1, ಶಮಿ 15ಕ್ಕೆ 3, ಇಶಾಂತ್ 30ಕ್ಕೆ 2, ಅಶ್ವಿನ್ 28ಕ್ಕೆ 1, ಜಡೇಜಾ 20ಕ್ಕೆ 2).

Leave a Reply