ರಾಷ್ಟ್ರೀಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ ಲಲಿತಾ… ಉಪಾಂತ್ಯದಲ್ಲಿ ಸೋತ ಸಾನಿಯಾ ಬೋಪಣ್ಣ ಮುಂದೆ ಕಂಚಿನ ಅವಕಾಶ!

(ಲಲಿತಾ ಬಬರ್ ಸಂಗ್ರಹ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ಗಳು ಪದಕ ಖಾತೆ ತೆರೆದಿಲ್ಲ ಎಂಬ ಕೊರಗು ಅಭಿಮಾನಿಗಳನ್ನು ಕಾಡುತ್ತಿರುವ ಸಂದರ್ಭದಲ್ಲಿ ಪದಕದ ಆಸೆ ಮತ್ತೆ ಚಿಗುರೊಡೆದಿದೆ. ಕಾರಣ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿಗೆ ಕಂಚಿನ ಪದಕ ಪಂದ್ಯದ ಅವಕಾಶವಿದ್ದರೆ, 3000 ಮೀ. ಸ್ಟೀಪಲ್ ಚೇಸ್ ವಿಭಾಗದಲ್ಲಿ ಲಲಿತಾ ಬಬರ್ (9:19.76) ರಾಷ್ಟ್ರೀಯ ದಾಖಲೆ ಬರೆಯುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಸಾನಿಯಾ ಮಿರ್ಜಾ ಹಾಗೂ ಬೋಪಣ್ಣ ಜೋಡಿಯು ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ರಾಜೀವ್ ರಾಮ್ ಮತ್ತು ವೀನಸ್ ವಿಲಿಯಮ್ಸ್ ಜೋಡಿ ವಿರುದ್ಧ ಟೈಬ್ರೇಕರ್ ನಲ್ಲಿ ಸೋಲನುಭವಿಸಿತು. ಆರಂಭಿಕ ಎರಡು ಸೆಟ್ ಗಳ ಪೈಕಿ ಭಾರತದ ಜೋಡಿ 6-2 ಅಂತರದ ಭರ್ಜರಿ ಆರಂಭವನ್ನೇ ಪಡೆಯಿತು. ಆದರೆ ನಂತರ ವೀನಸ್ ವಿಲಿಯಮ್ಸ್ ಹೋರಾಟ ಹಾಗೂ ಬೋಪಣ್ಣ ಸ್ವಯಂಕೃತ ಅಪರಾಧ ಪಂದ್ಯಕ್ಕೆ ದುಬಾರಿಯಾಯ್ತು. ಎರಡನೇ ಸೆಟ್ ನಲ್ಲಿ ತಿರುಗಿಬಿದ್ದ ಅಮೆರಿಕ ಜೋಡಿ 6-2 ರೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿತು. ಈ ವೇಳೆ ನಡೆದ ಟೈಬ್ರೇಕರ್ ನಲ್ಲಿ ಒತ್ತಡ ನಿಭಾಯಿಸಲು ವಿಫಲವಾದ ಭಾರತದ ಜೋಡಿ 3-10 ಅಂತರದ ಹಿನ್ನಡೆ ಅನುಭವಿಸಿತು. ಒಂದು ವೇಳೆ ಭಾರತದ ಜೋಡಿ ಫೈನಲ್ ಪ್ರವೇಶಿಸಿದ್ದರೆ ಕನಿಷ್ಠ ಪಕ್ಷ ಬೆಳ್ಳಿ ಪದಕ ಪಕ್ಕ ಆಗಿಬಿಡುತ್ತಿತ್ತು.

ಇದೇ ವಿಭಾಗದ ಎರಡನೇ ಸೆಮಿಫೈನಲ್ಸ್ ನ ಅಮೆರಿಕದ ಜೆ.ಸೊಕ್ಸ್ ಮತ್ತು ಮಾಟೆಕ್ ಸ್ಯಾಂಡ್ಸ್ ಹಾಗೂ ಜೆಕ್ ರಿಪಬ್ಲಿಕ್ ನ ಹಾರ್ಡೆಕಾ ಮತ್ತು ಸ್ಟಿಪಾನೆಕ್ ಜೋಡಿಗಳ ನಡುವಣ ಪಂದ್ಯದಲ್ಲಿ ಸೋತವರ ವಿರುದ್ಧ ಭಾರತದ ಜೋಡಿ ಕಂಚಿನ ಪದಕದ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯ ಭಾನುವಾರ ರಾತ್ರಿ 8.30ಕ್ಕೆ ನಡೆಯಲಿದ್ದು, ಭಾರತ ಜಯಗಳಿಸಿದರೆ ಕಂಚಿನ ಪದಕ ಲಭ್ಯವಾಗಲಿದೆ.

ಇನ್ನು 3000 ಸ್ಟೀಪಲ್ ಚೇಸ್ ವಿಭಾಗದ 2ನೇ ಹೀಟ್ಸ್ ನಲ್ಲಿ ಲಲಿತಾ 4ನೇ ಸ್ಥಾನ ಪಡೆದರು. ಅದರೊಂದಿಗೆ ಒಟ್ಟಾರೆ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದವರ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಆದರೂ ಲಲಿತಾ ಪದಕ ಪಡೆಯುವ ಎಲ್ಲ ಅವಕಾಶವಿದೆ ಅಂತಲೇ ಹೇಳಬಹುದು. ಕಾರಣ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದವರಿಗೂ ಹಾಗೂ 7ನೇ ಸ್ಥಾನ ಪಡೆದಿರುವ ಲಲಿತಾ ಬಬರ್ ಅವರಿಗೂ ಇರುವ ಅಂತರ ಕೇವಲ 2 ಸೆಂಕೆಂಡ್ ಗಳು ಮಾತ್ರ. ಹೀಗಾಗಿ ಲಲಿತಾ ಪ್ರಶಸ್ತಿ ಸುತ್ತಿನಲ್ಲಿ ಪ್ರಬಲ ಪೈಪೋಟಿ ನಡುವೆ ಸ್ವಲ್ಪ ಹೆಚ್ಚಿನ ಪ್ರಯತ್ನ ಹಾಕಿದ್ದೇ ಆದಲ್ಲಿ ಪದಕ ಲಲಿತಾ ಕೊರಳನ್ನು ಅಲಂಕರಿಸುವ ಸಾಧ್ಯತೆ ಇದೆ. ಇನ್ನು ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಧಾ ಸಿಂಗ್ (9:43.29) 30ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದ್ರು.

ಅಥ್ಲೆಟಿಕ್ಸ್ ನ ಇತರೆ ವಿಭಾಗಗಳ ಪೈಕಿ ಮಹಿಳೆಯರ 400 ಮೀ. ಓಟದಲ್ಲಿ ಭಾರತದ ನಿರ್ಮಲಾ ಶೆರಾನ್ 53.03 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ 44ನೇ ಸ್ಥಾನ ಪಡೆದರು. ಪುರುಷರ ಸಿಂಗಲ್ ಸ್ಕಲ್ ನಲ್ಲಿ ಭಾರತದ ದತ್ತು ಬೊಕನಲ್ ಸಿ ಫೈನಲ್ ವಿಭಾಗದಲ್ಲಿ 6:54.96 ನಿಮಿಷದಲ್ಲಿ ಗುರಿ ಮುಟ್ಟಿ ಅಗ್ರ ಸ್ಥಾನ ಪಡೆದರಾದರೂ 6 ಫೈನಲ್ ಗಳ ಒಟ್ಟಾರೆ ಫಲಿತಾಂಶದಲ್ಲಿ 13ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಇನ್ನು ಶೂಟಿಂಗ್ ನ ಎರಡು ಸ್ಪರ್ಧೆಗಳಲ್ಲಿ ಭಾರತಕ್ಕೆ ಸಿಕ್ಕಿದ್ದು ನಿರಾಸೆಯೇ.. 25 ಮೀ. ಪುರುಷರ ರಾಪಿಡ್ ಫೈರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಭಾರತದ ಗುರುಪ್ರೀತ್ ಸಿಂಗ್ 581 ಅಂಕಗಳೊಂದಿಗೆ 7ನೇ ಸ್ಥಾನ ಪಡೆದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾದರು. ಪುರುಷರ ಸ್ಕೀಟ್ ನಲ್ಲಿ ಮೈರಾಜ್ ಅಹ್ಮದ್ ಖಾನ್ 121 ಅಂಕಗಳೊಂದಿಗೆ 9ನೇ ಸ್ಥಾನ ಪಡೆದರು.

ಮಹಿಳೆಯರ ಹಾಕಿ ತಂಡ ಬಿ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 5-0 ಗೋಲುಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಇನ್ನು ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿಯು ಥಾಯ್ಲೆಂಡ್ ನ ಸುಪಜ್ರಿಕಲ್ ಮತ್ತು ತರಟ್ಟನಾಚೈ ಜೋಡಿ ವಿರುದ್ಧ 2-0 ಗೇಮ್ ಗಳ ಅಂತರದಲ್ಲಿ ಸೋಲನುಭವಿಸಿದರು.

ಗಾಲ್ಫ್ ಕ್ರೀಡೆಯಲ್ಲಿ 3ನೇ ಸುತ್ತಿನ ನಂತರ ಭಾರತದ ಶಿವ್ ಚವ್ರಾಸಿಯಾ 142 ಅಂಕಗಳೊಂದಿಗೆ 30ನೇ ಸ್ಥಾನ ಪಡೆದರೆ, ಅನಿರ್ಬಾನ್ ಲಾಹಿರಿ 147 ಅಂಕಗಳೊಂದಿಗೆ 51ನೇ ಸ್ಥಾನ ಪಡೆದಿದ್ದಾರೆ.

ಭಾನುವಾರ ಭಾರತೀಯ ಸ್ಪರ್ಧಿಗಳು ಭಾಗವಹಿಸಲಿರುವ ಕ್ರೀಡೆಗಳು ಹೀಗಿವೆ:

ಜಿಮ್ನಾಸ್ಟಿಕ್ಸ್ ಫೈನಲ್ಸ್: ಭಾರತದ ಏಕೈಕ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ವಾಲ್ಟ್ ವಿಭಾಗದ ಫೈನಲ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಈ ಸ್ಪರ್ಧೆ ರಾತ್ರಿ 11.17ಕ್ಕೆ ಆರಂಭವಾಗಲಿದೆ.

ಪುರುಷರ ಹಾಕಿ: ಭಾರತ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯದಲ್ಲಿ ಪ್ರಬಲ ಬೆಲ್ಜಿಯಂ ವಿರುದ್ಧ ಸೆಣಸಲಿದ್ದು, ಪಂದ್ಯ ರಾತ್ರಿ 9ಕ್ಕೆ ಆರಂಭವಾಗಲಿದೆ.

ಬ್ಯಾಡ್ಮಿಂಟನ್ ಸಿಂಗಲ್ಸ್: ಮಹಿಳಾ ಸಿಂಗಲ್ಸ್ ನ ಜಿ ಗುಂಪಿನ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಉಕ್ರೇನಿನ ಮರಿಜಾ ಉಲಿಟಿನ ವಿರುದ್ಧ ಸಂಜೆ 5.25ಕ್ಕೆ ಆಡಲಿದ್ದು, ಎಂ ಗುಂಪಿನ ಪಂದ್ಯದಲ್ಲಿ ಪಿ.ವಿ ಸಿಂಧು ಕೆನಡಾದ ಮಿಚೆಲ್ಲೆ ಲೀ ವಿರುದ್ಧ ಸಂಜೆ 7.45ಕ್ಕೆ ಸ್ಪರ್ಧಿಸಲಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಎಚ್ ಗುಂಪಿನ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಹೆನ್ರಿ ಹುರ್ಸ್ಕನೈನ್ ವಿರುದ್ಧ ಸಂಜೆ 7.10ಕ್ಕೆ ಆಡಲಿದ್ದಾರೆ.

ಬಾಕ್ಸಿಂಗ್: ಭಾರತದ ಬಾಕ್ಸರ್ ಮನೋಜ್ ಕುಮಾರ್ ಭಾನುವಾರ ನಡೆಯಲಿರುವ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಫಾಜಿದ್ದೀನೇ ಗೈನಜರೊವ್ ವಿರುದ್ಧ ಸೆಣಸಲಿದ್ದಾರೆ. ಪಂದ್ಯ ರಾತ್ರಿ 9.45ಕ್ಕೆ ಆರಂಭ.

ಅಥ್ಲೆಟಿಕ್ಸ್: ಭಾರತದ ಮಹಿಳಾ ಮ್ಯಾರಥಾನ್ ರನ್ನರ್ ಒಪಿ ಜೈಶಾ ಮ್ಯಾರಥಾನ್ ನಲ್ಲಿ ಸ್ಪರ್ಧಿಸಲಿದ್ದು, ಈ ಸ್ಪರ್ಧೆ ಸಂಜೆ 6 ಗಂಟೆಗೆ ಆರಂಭವಾಗಲಿದೆ.

ಶೂಟಿಂಗ್: ಪುರುಷರ 50 ಮೀ. ರೈಫಲ್ 3 ಪೊಸಿಷನ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಚೈನ್ ಸಿಂಗ್ ಮತ್ತು ಗಗನ್ ನಾರಂಗ್ ಸಂಜೆ 5.30ಕ್ಕೆ ಸ್ಪರ್ಧಿಸಲಿದ್ದಾರೆ.

Leave a Reply