ಸ್ವಾತಂತ್ರ್ಯ ಸಂಭ್ರಮದೊಂದಿಗೆ ಅರಿವೂ ವಿಸ್ತರಿಸಿಕೊಳ್ಳುವ ಆಶಯವಿದ್ದರೆ ಓದಬೇಕಾದ ಪುಸ್ತಕ ‘ಧ್ವಜವೆಂದರೆ ಬಟ್ಟೆಯಲ್ಲ’

authors-rangaswamyಬಂದಿದೆ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ… ಬಾವುಟ ಹಾರಿಸಿ, ಜನ ಗಣ ಮನ  ಹೇಳಿ ಶಾಲೆಯಲ್ಲಿ ಹಂಚಿದ ಸಿಹಿ ತಿಂದು ಮನೆಗೆ ಮರಳಿದರೆ ಅಲ್ಲಿಗೆ ‘ ಸ್ವಾತಂತ್ರ್ಯ ದಿನಾಚರಣೆ’  ಮುಗಿಯಿತು ಮಕ್ಕಳ ಪಾಲಿಗೆ. ತಮ್ಮ ಮಕ್ಕಳು ಯಾವುದಾದರೊಂದು ಚಟುವಟಿಕೆಯಲ್ಲಿ ಭಾಗವಹಿಸಿದ್ದರೆ ಅವರನ್ನು ಶಾಲೆಗೆ ಕರೆದು ಕೊಂಡು ಹೋಗುವುದು, ಯಾವುದೊ ಪಂದ್ಯದಲ್ಲಿ ಬಹುಮಾನ ಸಿಕ್ಕಿದ್ದರೆ ಶಾಲೆಯಲ್ಲಿ ವಿತರಿಸುವುದನ್ನು ನೋಡಿ ಚಪ್ಪಾಳೆ ತಟ್ಟಿ ಮಕ್ಕಳ ಹುರುದುಂಬಿಸಿ ಬಂದರೆ ಪೋಷಕರ ಸ್ವಾತಂತ್ರ್ಯ ದಿನಾಚರಣೆ ಮುಕ್ತಾಯ. ಇನ್ನು ಅತ್ತ ಮಕ್ಕಳೂ ಅಲ್ಲದ , ಪೋಷಕರೂ ಅಲ್ಲದ ಹುಡುಗ/ ಹುಡುಗಿಯರಿಗೆ  ಸಿನಿಮಾ ನೋಡಲು  ಸಿಕ್ಕ ದಿನ. ಹೀಗೆ ಪ್ರತಿಯೊಬ್ಬರಿಗೂ ಸ್ವತಂತ್ರ ದಿನಾಚರಣೆ ಎಂದರೆ ಅದರದೇ ಅದ ವ್ಯಾಖ್ಯಾನವಿದೆ. ಇರಲಿ.

ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಏಕೆ ಬಂತು ? ಅಶೋಕ ಚಕ್ರವರ್ತಿಯ ಚಕ್ರ ಅಲ್ಲೇಕೆ ಸ್ಥಾನ ಪಡೆಯಿತು?  ಇಂದಿನ ನಮ್ಮ ಭಾರತದ ಧ್ವಜ ಹೀಗೆ ಇತ್ತೇ? ಇಲ್ಲ ಎಂದಾದರೆ ಹೇಗಿತ್ತು ? ಅದು ಏಕೆ ಬದಲಾಯಿತು? ವೇದ ಕಾಲದಿಂದ ಹಿಡಿದು,  ‘ನಾವು ಭಾರತದ ಬಾವುಟ ಹಾರಿಸುವುದಿಲ್ಲ’ ಎನ್ನುವ ಉದ್ಧಟತನ ತೋರಿ ವಿವಾದ ಮಾಡಿ ಕೊಂಡ ಜೆ ಎನ್ ಯು ವರೆಗಿನ ಬಾವುಟ ನೆಡೆದು ಬಂದ ಹಾದಿಯನ್ನ ಸಂತೋಷ್ ಜಿ.  ಆರ್  ತಮ್ಮ ಪುಸ್ತಕ ‘ಧ್ವಜವೆಂದರೆ ಬಟ್ಟೆಯಲ್ಲ’  ಪುಸ್ತಕದಲ್ಲಿ ಹೇಳುತ್ತಾ ಹೋಗುತ್ತಾರೆ.

ಪುಸ್ತಕದ ಹೆಸರೇ ಸೂಚಿಸುವಂತೆ ಧ್ವಜ ಎನ್ನುವುದು ಬಟ್ಟೆ ಮಾತ್ರ ಅಲ್ಲ ಅದು ಒಂದು ನಾಗರೀಕತೆ, ಒಂದು ಸಾಮ್ರಾಜ್ಯ, ಒಂದು ದೇಶ ಅಥವಾ ವ್ಯಕ್ತಿಯ ಪ್ರತೀಕದ ಸಂಕೇತ. ಜೀವವಿರುವವರೆಗೆ ಬಾವುಟ ನೆಲಕ್ಕೆ ಬೀಳದಂತೆ ಹಿಡಿದು ನಿಲ್ಲುವ ಸೈನಿಕನ ಮನಸ್ಸಿನಲ್ಲಿ ಅದೊಂದು ‘ಬಟ್ಟೆ’ ಎನ್ನುವ  ಭಾವನೆ ಮಾತ್ರ ಇದ್ದಿದರೆ ಆತ ಅದಕ್ಕೆ ಅಷ್ಟು ಗೌರವ ಕೊಡುತ್ತಿದ್ದನೇ?  ಅದು ದೇಶದ ಗರಿಮೆ – ಹಿರಿಮೆಗಳ ಸಾಂಕೇತಿಕ ರೂಪ . ಧ್ವಜ ಬಿದ್ದರೆ ದೇಶದ ಪ್ರತಿಷ್ಠೆಯೂ ನೆಲಕ್ಕೆ ಬಿದ್ದಂತೆ ಎನ್ನುವ ಭಾವನೆ ಮಾತ್ರ ಅಂತಹ ತ್ಯಾಗ ಸೈನಿಕನಿಂದ ಮಾಡಿಸಲು ಸಾಧ್ಯವಾಗಿದ್ದು.

ಯುದ್ಧದಲ್ಲಿ ಜಯದ ಹಂತದಲ್ಲಿದ್ದರೂ ಶತ್ರುಗಳು ಧ್ವಜವನ್ನ ನೆಲಕ್ಕೆ ಬೀಳಿಸಿದರೆ ಅಪಶಕುನ, ಸೋಲು ನಿಶ್ಚಿತ ಎಂದು ನಂಬಿದ್ದ ಉದಾಹರಣೆಗಳನ್ನ ಚರಿತ್ರೆಯಿಂದ ಹೆಕ್ಕಿ ಓದುಗರ ಮುಂದೆ ಇಡುವ ಪ್ರಯತ್ನ ಈ ಪುಸ್ತಕದಲ್ಲಿದೆ. ಅಂತಹ ಒಂದು ಉದಾಹರಣೆ ನೋಡಿ.

ಭಾರತದ ಮೇಲೆ ಅರಬ್ಬರ ಆಕ್ರಮಣ ನೆಡೆದದ್ದು ಸಿಂಧ್ ನ ಮೂಲಕ. ಅರಬ್ ನ ರಾಜ ಹಜಾಜನು  ಸಿಂಧ್ ಮೇಲೆ ಎರಡು ಬಾರಿ ದಾಳಿ ನೆಡೆಸಿ ಸೋತಿರುತ್ತಾನೆ. ಕೊನೆಗೆ ಕ್ರಿಸ್ತಶಕ 712 ರಲ್ಲಿ ಮಹಮದ್ ಬಿನ್ ಕಾಸಿಂ ನೇತೃತ್ವದಲ್ಲಿ ಸೈನ್ಯ ಕಳಿಸುತ್ತಾನೆ. ಆಗ ಸಿಂಧ್ ನ ರಾಜನಾಗಿದ್ದ ದಾಹಿರನಿಗೆ ಮತ್ತು ರಾಜ್ಯದ ಜನರಿಗೆ ಒಂದು ವಿಚಿತ್ರ ನಂಬಿಕೆಯಿತ್ತು ಅದೇನೆಂದರೆ ಸಿಂಧ್ ನ ದೇವಲ ಬಂದರಿನಲ್ಲಿ ಇರುವ ಪುರಾತನ ದೇವಾಲಯದ ಮೇಲಿನ ಧ್ವಜವನ್ನ ಕೆಳಗಿಳಿಸಿದರೆ  ರಾಜನ ಶಕ್ತಿ ಕ್ಷೀಣವಾಗುತ್ತದೆ ಎನ್ನುವುದು. ಉಳಿದದ್ದನ್ನು ಬುದ್ಧಿವಂತ ಓದುಗರು ಊಹಿಸುವುದು ಸುಲಭ. ಈ ರಹಸ್ಯವನ್ನು ದ್ರೋಹಿಗಳು ಮಹಮದ್ ಬಿನ್ ಕಾಸಿಂ ಗೆ ತಿಳಿಸುತ್ತಾರೆ. ಕುಟಿಲತೆಗೆ ಹೆಸರಾದ ಮುಸ್ಲಿಂ ಆಕ್ರಮಣಕಾರರು ಕುತಂತ್ರದಿಂದ ಧ್ವಜವನ್ನ ಕೆಳಗಿಳಿಸುತ್ತಾರೆ. ಹಿಂದೂ ಸೈನ್ಯ ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. ದಾಹಿರ ಬಾಣ ತಗುಲಿ ಸಾಯುತ್ತಾನೆ.  ಇದು ಕೇವಲ ಕತೆಯಲ್ಲ , ಕಲ್ಪನೆಯೂ ಅಲ್ಲ ಇದು ನಮ್ಮ ಪೂರ್ವಿಕರು ಧ್ವಜದ ಮೇಲಿಟ್ಟ ಅಪಾರ ವಿಶ್ವಾಸದ ಸಂಕೇತ . ಧ್ವಜವೆಂಬುದು ಆತ್ಮಸಮ್ಮಾನ, ಧ್ವಜ ಬಿದ್ದರೆ ಆತ್ಮ ಸಮ್ಮಾನವೂ ನಶಿಸಿತು ಎನ್ನುವ ನಂಬಿಕೆಯ ದ್ಯೋತಕ. ಈ ಸೋಲಿನಿಂದ ಮುಸಲ್ಮಾನರ ದಾಳಿಗೆ ಪವಿತ್ರ ಭಾರತಾದ ಹೆಬ್ಬಾಗಿಲು ತೆರೆದಂತಾಯಿತು. ಹೀಗೆ ಭಾರತದಲ್ಲಿ ಮುಸಲ್ಮಾನರ ಹಸಿರು ಧ್ವಜ ಹಾರಿಸಲು ದೇವಾಲಯದ ಧ್ವಜ ಕೆಳಗಿಳಿಸದ್ದು ನಿರ್ಣಾಯಕವಾಯಿತು ಎನ್ನುವುದು ಹಿಂದೂಗಳ ದೌಭಾರ್ಗ್ಯವೇ ಸರಿ .

ಇದು ಕೇವಲ ಒಂದು ಸಣ್ಣ ನಿದರ್ಶನ. ಇಂತಹ ಅನೇಕ ಘಟನೆಗಳ ಚರಿತ್ರೆಯಿಂದ ಹೆಕ್ಕಿ ಲೇಖಕರು ನಮಗೆ ಉಣಬಡಿಸಿದ್ದಾರೆ.

ರಾಮಾಯಣ, ಮಹಾಭಾರತದ ಧ್ವಜಗಳು ಹೇಗಿದ್ದವು ?  ಅರ್ಜುನನ ಧ್ವಜ ಏನನ್ನು ಹೇಳುತ್ತದೆ ? ಭೀಮನ  ಧ್ವಜ ದ ಕತೆಯೇನು, ಉತ್ತರ ಕುಮಾರನ ಧ್ವಜ ಅವನ ನಡವಳಿಕೆಗೆ ತಕ್ಕದಾದುದ್ದೇ?  ಹೀಗೆ ರಾಮಾಯಣ, ಮಹಾಭಾರತದ ಘಟಾನುಘಟಿ ವ್ಯಕ್ತಿತ್ವಗಳ ಧ್ವಜದ ಕತೆ ಅವರು ಅದನ್ನ ಬಳಸುವುದರ ಹಿಂದಿನ ಉದ್ದೇಶ ಎಲ್ಲಾ ಇಲ್ಲಿ ಸವಿವರವಾಗಿ ನೀಡಲಾಗಿದೆ.

ನಂತರ ನಮ್ಮನಾಳಿದ ಕದಂಬರು, ತಲಕಾಡು ಗಂಗರು, ಬಾಣರು, ಚಾಳುಕ್ಯರು, ರಾಷ್ಟ್ರಕೂಟರು  ಹೀಗೆ ಅನೇಕ ರಾಜವಂಶಗಳ ಲಾಂಛನ, ಧ್ವಜಗಳ ಬಗ್ಗೆ, ಅದರ ಹಿಂದಿನ ಕತೆಯನ್ನೂ ಕಟ್ಟಿ ಕೊಡುವ ಪ್ರಯತ್ನವನ್ನ ಲೇಖಕರು ಮಾಡಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮ ಶುರುವಾದಾಗ ನಮ್ಮೆಲ್ಲರ ಐಕ್ಯತೆಯ ಚಿಹ್ನೆಯಾಗಿ ಒಂದು ಬಾವುಟ ಬೇಕು ಎನ್ನುವ ಕೂಗು ಎದ್ದಾಗ ಬಾವುಟದ ಪರಿಕಲ್ಪನೆ ಮಾಡಿದ್ದು ಯಾರು? ಇಂದು ಇಡೀ ಭಾರತದಲ್ಲಿ ಹಾಗೂ ಪ್ರಪಂಚದಲ್ಲಿ ‘ಮಹಾತ್ಮ’ ಎನ್ನುವ ಹೆಸರಿಂದ ಗುರುತಿಸಲ್ಪಡುವ ಗಾಂಧಿ ಅವರ ಧ್ವಜದ ಬಗ್ಗೆ ನಿಲುವೇನಿತ್ತು? ಕೇಸರಿ , ಬಿಳಿ , ಹಸಿರು  ನಮ್ಮ ಬಾವುಟದಲ್ಲಿ ಸ್ಥಾನವೇಕೆ ಪಡೆದವು?  ಮಹಾತ್ಮ ಗಾಂಧಿಯವರ ಬಣ್ಣದ ಬಗ್ಗೆಯ ವ್ಯಾಖ್ಯೆಯಿಂದ  ಹಿಂದೂ ಐಕ್ಯಮತದ  ಸನಾತನ ಭಾಗವತ ಧ್ವಜ ಭಾರತದ ಧ್ವಜ ಆಗದೆ ಇರಲು ಹೇಗೆ ಕೆಲಸ ಮಾಡಿತು? ಕೆಂಪು ಹಿಂದೂ ಧರ್ಮದ ಸೂಚಕವಾಗಿದ್ದೂ  ರಾಷ್ಟ್ರ ಧ್ವಜದಲ್ಲಿ ಸ್ಥಾನಪಡೆಯದೆ ಹೋದದ್ದು ಹೇಗೆ?  ಇವುಗಳಿಗೆಲ್ಲ ಉತ್ತರ ಇಲ್ಲಿದೆ.

ನೇತಾಜಿ ಸುಭಾಸ್ ಚಂದ್ರ ಬೋಸರ ಕಲ್ಪನೆಯ ಧ್ವಜ ಅವರ ನಿಲುವು,  ಆರ್ ಎಸ್ ಎಸ್ ಧ್ವಜವನ್ನೇ ಗುರುವೆಂದು ಕರೆದದ್ದು, ಹಾಗೆ ಕರೆಯಲು ಕಾರಣ ಇಲ್ಲಿ ಓದುಗರ ಮುಂದೆ ಇಡಲಾಗಿದೆ.

ರಾಷ್ಟ್ರೀಯತೆಯ ಅಭಿವ್ಯಕ್ತಿ ರಾಷ್ಟ್ರಧ್ವಜ.  ಪಾಶ್ಚಾತ್ಯ ದೇಶಗಳಲ್ಲಿ ನ್ಯಾಷನಲಿಸಂ ಎಂಬ ಪದವನ್ನ ವಿಶ್ವ ಏಕತೆಗೆ ವಿರೋಧಿ ಎನ್ನುವ ಹಿನ್ನಲೆಯಲ್ಲಿ ನೋಡಲಾಗುತ್ತದೆ. ಇದನ್ನೇ ನಮ್ಮ ವಿಚಾರವಾದಿಗಳು , ಪ್ರಗತಿಪರರು ಯಥಾವತ್ತಾಗಿ ಗ್ರಹಿಸಿ ನ್ಯಾಷನಲಿಸ್ಟ್ ಎಂದರೆ ಮೂಲಭೂತವಾದಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಭಾರತದ ಸಂಸ್ಕೃತಿಯ ಸುದೀರ್ಘ ಹಿನ್ನೆಲೆಯ ರಾಷ್ಟ್ರೀಯತೆ ಪರಿಶೀಲಿಸಿದವರಿಗೆ ಈ ಶಬ್ದ ಅತ್ಯಂತ ಧನಾತ್ಮಕ ಎನ್ನುವ ಅರಿವಾದೀತು.

ಪುಸ್ತಕ ಒಂದೊಂದು ಅಧ್ಯಾಯ ಮುಗಿಯುತ್ತಿದಂತೆ ಮನಸ್ಸಿನಲ್ಲಿ ‘ನಮ್ಮತನ’ ಉಳಿಸಿಕೊಳ್ಳಲಾಗದ ನಮ್ಮ ಒಳ್ಳೆಯತನದ ಬಗ್ಗೆ, ಗಾಂಧಿಯ ಅತಿಯಾದ ಮುಸ್ಲಿಂ ಓಲೈಕೆ ಬಗ್ಗೆ  ಕಿಚ್ಚು, ಹಾಗೆಯೇ ಹೋರಾಟದ ಹಾದಿಯಲ್ಲಿ ಮಡಿದ ನಮ್ಮ ಜನರ ನೆನೆದು ಕಣ್ಣೀರು, ಸುಭಾಷರ, ಸಾವರ್ಕರ್, ಕೇಶವ ಬಲಿರಾಂ ಹಡಗೇವಾರ ಧೀಶಕ್ತಿಯ ಪ್ರೇರಣೆ, ಇಂದಿನ ಎಡಪಂಥೀಯರ ವಿಚಾರಧಾರೆಗಳ ಬಗ್ಗೆ ಕೆಟ್ಟ ಕೋಪ ಎಲ್ಲವೂ ಉಮ್ಮಳಿಸಿ ಬರುತ್ತದೆ.

ಈ ಸ್ವತಂತ್ರ ದಿನಾಚರಣೆ ಸ್ವಲ್ಪ ವಿಶಿಷ್ಟವಾಗಿರಿಸಲು ‘ ಧ್ವಜವೆಂದರೆ ಬಟ್ಟೆಯಲ್ಲ ‘ ಪುಸ್ತಕ ಓದಿ. ನಮ್ಮ ಹಿರಿಯರು ನಮಗಾಗಿ ಮಾಡಿದ ತ್ಯಾಗ ನೆನೆದು ಅವರ ಕ್ಷಣಕಾಲ ನೆನೆದರೂ ಸಾಕು ಬದುಕು ಸಾರ್ಥಕ.

Leave a Reply