ಉತ್ತಮ ಪ್ರದರ್ಶನ ಹೊರತಾಗಿಯೂ ದೀಪಾ ಕೈತಪ್ಪಿತು ಪದಕ, ಮಿಕ್ಕಂತೆ ಸಾನಿಯಾ, ಸೈನಾರಿಂದ ಹಿಡಿದು, ಪುರುಷರ ಹಾಕಿವರೆಗೂ ಭಾರತದ ಹೋರಾಟ ಅಂತ್ಯ

ಡಿಜಿಟಲ್ ಕನ್ನಡ ಟೀಮ್:

ಜಿಮ್ನಾಸ್ಟಿಕ್ಸ್ ನಲ್ಲಿ ದೀಪಾ ಕರ್ಮಾಕರ್… ಟೆನಿಸ್ ನಲ್ಲಿ ಸಾನಿಯಾ-ಬೋಪಣ್ಣ ಜೋಡಿ… ಈ ಎರಡು ವಿಭಾಗದಿಂದ ಪದಕ ಬಂದು ಭಾರತದ ಸ್ವಾತಂತ್ರ್ಯ ಸಂಭ್ರಮ ದುಪ್ಪಟ್ಟಾಗುವ ನಿರೀಕ್ಷೆ ಕ್ರೀಡಾಭಿಮಾನಿಗಳದ್ದಾಗಿತ್ತು. ಆದರೆ, ದೀಪಾ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಪದಕ ಕೈತಪ್ಪಿದರೆ, ಸಾನಿಯಾ ಜೋಡಿ ನೀರಸ ಪ್ರದರ್ಶನ ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿತು.

ದೀಪಾ ಕರ್ಮಾಕರ್ ಪದಕ ಗೆಲ್ಲದಿದ್ದರೂ ನಿರಾಸೆಯಂತೂ ಮಾಡಲಿಲ್ಲ. ಆಕೆಯ ಈ ಸಾಧನೆಯೇ ಒಂದು ಟ್ರೆಂಡ್ ಸೆಟ್ ಮಾಡಿದೆ. ಮೊದಲ ಬಾರಿಗೆ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ನಲ್ಲಿ ಅರ್ಹತೆ ಪಡೆದ ಭಾರತೀಯ ಮಹಿಳಾ ಜಿಮ್ನಾಸ್ಟರ್ ಎಂಬ ಸಾಧನೆಯಿಂದ ಹಿಡಿದು, ಫೈನಲ್ ಪ್ರವೇಶಿಸಿದ ಮೊದಲ ಜಿಮ್ನಾಸ್ಟರ್ ಹಾಗೂ ಈಕೆ ಪಡೆದಿರುವ 4ನೇ ಸ್ಥಾನವೂ ಈ ಕ್ರೀಡೆಯಲ್ಲಿ ಭಾರತ ಮಾಡಿರುವ ಈವರೆಗಿನ ಸಾಧನೆ. ದೀಪಾರ ಬ್ರಹ್ಮಾಸ್ತ್ರವೇ ಆಗಿದ್ದ ಪ್ರೆಡುನೋವಾ ಅನ್ನು ಉತ್ತಮವಾಗಿ ಪೂರೈಸಿದರಾದರೂ, ಲ್ಯಾಂಡಿಗ್ ವೇಳೆ ಆದ ಸ್ವಲ್ಪ ವ್ಯತ್ಯಾಸ, ಸ್ವಲ್ಪ ಮಟ್ಟಿಗೆ ಕಡಿಮೆ ಅಂಕ ತಂದುಕೊಟ್ಟಿತು. ದೀಪಾ ಎರಡು ಪ್ರಯತ್ನಗಳಿಂದ 15.066 ಅಂಕಗಳ ಸರಾಸರಿ ಪಡೆದರು.

ಇನ್ನು 7ನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಒಕ್ಸಾನಾ ಚುಸೊವಿಟಿನಾ ಪ್ರೆಡುನೋವಾ ಪ್ರಯತ್ನಿಸಿದರಾದರೂ ಲ್ಯಾಂಡಿಂಗ್ ನಲ್ಲಿ ಪೂರ್ಣ ವೈಫಲ್ಯ ಅನುಭವಿಸಿದ್ರು. ಇದರೊಂದಿಗೆ ಸುದೀರ್ಘ ಒಲಿಂಪಿಕ್ಸ್ ಪಯಣಕ್ಕೆ ಅಂತ್ಯ. ಉಳಿದಂತೆ ಅಮೆರಿಕದ ಸಿಮೊನ ಬೈಲ್ಸ್ (15.966), ರಷ್ಯಾದ ಮಾರಿಯಾ ಪಸೆಕಾ (15.253), ಸ್ವಿಜರ್ಲೆಂಡ್ ನ ಗಿಯುಲಿಯಾ ಸ್ಟೈನರಬೆರ್ (15.216) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಪಡೆದ್ರು.

ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಸುವರ್ಣ ಅವಕಾಶವನ್ನು ಶನಿವಾರವಷ್ಟೇ ಕೈಚೆಲ್ಲಿದ್ದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ, ಭಾನುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲೂ ನೀರಸ ಪ್ರದರ್ಶನ ನೀಡಿತು. ಪರಿಣಾಮ ಜೆಕ್ ಗಣರಾಜ್ಯದ ಹಾರ್ಡೆಕಾ ಮತ್ತು ಸ್ಪೆಪಾನೆಕ್ ಜೋಡಿ ವಿರುದ್ಧ 2-0 ಅಂತರದಲ್ಲಿ ಸೋಲನುಭವಿಸಿತು.

ಈ ಎರಡು ಸ್ಪರ್ಧೆಗಳಲ್ಲಿ ಪದಕ ಕೈತಪ್ಪಿದ ಜತೆಗೆ ಗುಂಪು ಹಂತದಲ್ಲಿ ಸೈನಾ ನೆಹ್ವಾಲ್, ಪ್ರಿಕ್ವಾರ್ಟರ್ ನಲ್ಲಿ ಬಾಕ್ಸರ್ ಮನೋಜ್ ಕುಮಾರ್, ಕ್ವಾರ್ಟರ್ ನಲ್ಲಿ ಪುರುಷರ ಹಾಕಿ ತಂಡ, ಮ್ಯಾರಥಾನ್ ನಲ್ಲಿ ಒ.ಪಿ ಜೈಶಾ, ಶೂಟಿಂಗ್ ನಲ್ಲಿ ಚೈನ್ ಸಿಂಗ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದಿರೋದು ಭಾರತ ಅಭಿಮಾನಿಗಳಿಗೆ ಮತ್ತಷ್ಟು ಬೇಸರವಾಯ್ತು.

ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬ್ಯಾಡ್ಮಿಂಟನ್ ತಾರೆ ಹಾಗೂ ಈ ಬಾರಿ ಪದಕದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್  ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಭಾನುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಪ್ರತಿಸ್ಪರ್ಧಿ ಉಕ್ರೇನಿನ ಮರಿಜಾ ಉಲಿಟಿನಾ ವಿರುದ್ಧ 18- 21, 19-21 ಸೆಟ್ ಗಳ ಅಂತರದಲ್ಲಿ ಸೋಲನುಭವಿಸಿದರು. ಪಂದ್ಯದಲ್ಲಿ ಒತ್ತಡ ನಿಭಾಯಿಸಲು ಎಡವಿದ್ದು, ಸ್ಥಿರ ಪ್ರದರ್ಶನದ ಕೊರತೆ ಸೈನಾಗೆ ದುಬಾರಿಯಾಗಿ ಪರಿಣಮಿಸಿತು. ವಿಶ್ವ ಬ್ಯಾಡ್ಮಿಂಟನ್ ನಲ್ಲಿ 5ನೇ ಶ್ರೇಯಾಂಕ ಪಡೆದಿರುವ ಸೈನಾ, 61ನೇ ಶ್ರೇಯಾಂಕಿತೆ ಮರಿಜಾ ವಿರುದ್ಧ ಸೋಲನುಭವಿಸಿರೋದು ನಿಜಕ್ಕೂ ಆಘಾತಕಾರಿ ಫಲಿತಾಂಶ.

ಬಾಕ್ಸಿಂಗ್ ಪುರುಷರ 64 ಕೆ.ಜಿ ವಿಭಾಗದಲ್ಲಿ ಭಾರತದ ಮನೋಜ್ ಕುಮಾರ್ ಪ್ರತಿಸ್ಪರ್ಧಿ ಉಜ್ಬೇಕಿಸ್ತಾನದ ಫಜ್ಲಿದ್ದೀನ್ ವಿರುದ್ಧ 0-3 ಅಂತರದಲ್ಲಿ ಸೋತರೆ, ಭಾರತ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಬೆಲ್ಜಿಯಂ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಮಣಿಯಿತು. ಮಹಿಳೆಯರ ಮ್ಯಾರಥಾನ್ ನಲ್ಲಿ ಭಾರತದ ಒಪಿ ಜೈಶಾ 2:47:19 ಗಂಟೆಯಲ್ಲಿ ಗುರಿ ಮುಟ್ಟಿ 89ನೇ ಸ್ಥಾನ ಪಡೆದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಚೈನ್ ಸಿಂಗ್ 1169 ಅಂಕ ಗಳಿಸಿ 23ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಇಷ್ಟೆಲ್ಲಾ ಸೋಲುಗಳ ಮಧ್ಯೆ ಗೆಲುವಿನ ಸಿಹಿ ಕಂಡಿದ್ದು ಮಾತ್ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಕೆ.ಶ್ರೀಕಾಂತ್ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ ಸಿಂಧು. ಕೆನಡಾದ ಮಿಚೆಲ್ಲೆ ಲೀ ವಿರುದ್ಧ 2-1 ಗೇಮ್ ಗಳಿಂದ ಗೆದ್ದರು. ಪುರುಷರ ಸಿಂಗಲ್ಸ್ ವಿಭಾಗದ ಎಚ್ ಗುಂಪಿನ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್, ಸ್ವೀಡನ್ನಿನ ಹೆನ್ರಿ ಹುರ್ಸ್ಕನೈನ್ ವಿರುದ್ಧ 2-0 ಅಂತರದಲ್ಲಿ ಗೆದ್ದರು.

ಇನ್ನು ವಿದೇಶಿಗರ ಪೈಕಿ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಪುರುಷರ 100 ಮೀ. ಸ್ಪರ್ಧೆಯಲ್ಲಿ 9.81 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಪಡೆದರೆ, ಅಮೆರಿಕದ ಜಸ್ಟಿನ್ ಗಾಟ್ಲಿನ್ 9.89 ಸೆ. ಹಾಗೂ ಕೆನಡಾದ ಆಂಡ್ರೆ ಡಿ ಗ್ರಾಸೆ 9.91 ಸೆ. ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.

ಪದಕಗಳ ಪಟ್ಟಿ ನೋಡುವುದಾದರೆ, ಅಮೆರಿಕ 69 ಪದಕ (26 ಚಿನ್ನ, 21 ಬೆಳ್ಳಿ, 22 ಕಂಚು), ಗ್ರೇಟ್ ಬ್ರಿಟನ್ 38 (15 ಚಿನ್ನ, 16 ಬೆಳ್ಳಿ, 7 ಕಂಚು), ಚೀನಾ (15 ಚಿನ್ನ, 13 ಬೆಳ್ಳಿ, 17 ಕಂಚು) ಕ್ರಮವಾಗಿ ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿವೆ.

ಸೋಮವಾರ ಭಾರತೀಯ ಸ್ಪರ್ಧಿಗಳು ಭಾಗವಹಿಸಲಿರೋ ಕ್ರೀಡೆಗಳು ಹೀಗಿವೆ…

ಫೈನಲ್ ನಲ್ಲಿ ಲಲಿತಾ ಬಬರ್: ಮಹಿಳೆ 3000 ಮೀ. ಸ್ಟೀಪಲ್ ಚೇಸ್ ನ ಪ್ರಶಸ್ತಿ ಸುತ್ತಿನ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಭಾರತದ ಸ್ಪರ್ಧಿ ಲಲಿತಾ ಬಬರ್ ಸ್ಪರ್ಧಿಸಲಿದ್ದಾರೆ.

ಅಥ್ಲೆಟಿಕ್ಸ್: ಪುರುಷರ ತ್ರಿಪಲ್ ಜಂಪ್ ನ ಅರ್ಹತಾ ಸುತ್ತು ಸಂಜೆ 6ಕ್ಕೆ ನಡೆಯಲಿದ್ದು ಭಾರತದ ರಂಜಿತ್ ಮಹೇಶ್ವರಿ ಸ್ಪರ್ಧಿಸಲಿದ್ದಾರೆ. ಮಹಿಳೆಯರ 200 ಮೀ. ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭಾರತದ ಸ್ರಬಾನಿ ನಂದಾ ಸ್ಪರ್ದಿಸಲಿದ್ದಾರೆ. ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದ ಅರ್ಹತಾ ಸುತ್ತು ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ನಡೆಯಲಿದ್ದು, ಭಾರತದ ಸೀಮಾ ಪುನಿಯಾ ಸ್ಪರ್ಧಿಸಲಿದ್ದಾರೆ.

ಬಾಕ್ಸಿಂಗ್: ಪುರುಷರ 75 ಕೆ.ಜಿ ಮಿಡಲ್ ವೇಟ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ ಮಂಗಳವಾರ ಬೆಳಗಿನ ಜಾವ 3.15ಕ್ಕೆ ಆರಂಭವಾಗಲಿದ್ದು, ಭಾರತದ ವಿಕಾಸ್ ಕೃಷ್ಣನ್ ಪ್ರತಿಸ್ಪರ್ಧಿ ಉಜ್ಬೇಕಿಸ್ತಾನದ ಬೆಕ್ತೆಮಿರ್ ಮೆಲಿಕುಜೆವ್ ವಿರುದ್ಧ ಆಡಲಿದ್ದಾರೆ.

ಕುಸ್ತಿ: ಪುರುಷರ 85 ಕೆ.ಜಿ ಗ್ರೆಕೊ ರೊಮನ್ ವಿಭಾಗದಲ್ಲಿ ಭಾರತದ ಸ್ಪರ್ಧಿ ರವೀಂದರ್ ಖತ್ರಿ ರಾತ್ರಿ 7.00ಕ್ಕೆ ಆಡಲಿದ್ದಾರೆ.

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪ್ರಿಕ್ವಾರ್ಟರ್ ಫೈನಲ್ ಪಂದ್ಯ ಸಂಜೆ 5.30ಕ್ಕೆ ಆರಂಬವಾಗಲಿದ್ದು, ಭಾರತದ ಕಿಡಂಬಿ ಶ್ರೀಕಾಂತ್ ಪ್ರತಿಸ್ಪರ್ಧಿ ಡೆನ್ಮಾರ್ಕ್ ನ ಜಾನ್ ಒ ಜೊರ್ಗೆನ್ಸನ್ ವಿರುದ್ಧ ಆಡಲಿದ್ದಾರೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ ಸಿಂಧು ಚೈನೀಸ್ ತೈಪೇ ನ ತೈ ಜು ಯಿಂಗ್ ವಿರುದ್ಧ ಮಂಗಳವಾರ ಬೆಳಗಿನಜಾವ 2.00 ಗಂಟೆಗೆ ಸೆಣಸಲಿದ್ದಾರೆ.

Leave a Reply