ಗೊತ್ತಿರಲಿ, ಸ್ವಾತಂತ್ರ್ಯದ ಆ ದಿನ ಸಿಹಿ ಮಾತ್ರವೇ ಸಿಗಲಿಲ್ಲ ಹೆಣಗಳುರುಳಿದ್ದವು, ತುಂಡಾಗಿದ್ದು ದೇಶ ಮಾತ್ರವಲ್ಲ ಸ್ತ್ರೀ ಗೌರವವೂ…

 

ಡಿಜಿಟಲ್ ಕನ್ನಡ ಟೀಮ್:

1947 ರ ಆಗಸ್ಟ್ ತಿಂಗಳ ಈ ದಿನ ನಮ್ಮೆಲ್ಲರಲ್ಲಿ ಸ್ವಾತಂತ್ರ್ಯದ ಹರ್ಷ ಚಿಮ್ಮಿಸುತ್ತದೆ. ಸಂಭ್ರಮಿಸಬೇಕಾದದ್ದು ದಿಟವೇ. ಹಾಗಂತ ಚರಿತ್ರೆಯ ಇನ್ನೊಂದು ಮಗ್ಗುಲೂ ಗೊತ್ತಿರಬೇಕು. ದೇಶವಿಭಜನೆಯ ಬೆನ್ನಲ್ಲೇ ಅಮಾನುಷ ಹತ್ಯಾಕಾಂಡ, ಅತ್ಯಾಚಾರ ಹಾಗೂ ರಕ್ತದಿಂದಲೇ ಸೋಕಿಸಿಕೊಂಡ ಇತಿಹಾಸದ ಮಹಾನ್ ವಲಸೆಗೂ ಭಾರತ ಸಾಕ್ಷಿಯಾಗಬೇಕಾಯಿತು.

ಹತ್ತು ಲಕ್ಷ ಜನ ಕಗ್ಗೊಲೆಯಾಗಿ ಹೋದರು. ಲೆಕ್ಕಕ್ಕೆ ಸಿಗದಷ್ಟರಮಟ್ಟಿಗೆ ಮಹಿಳೆಯರ ಮೇಲೆ ಅತ್ಯಾಚಾರಗಳಾದವು. ಮುಸ್ಲಿಮರು ಹಿಂದು/ಸಿಖ್ಖರ ಮೇಲೆ, ಇವರು ಅವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಸಮುದಾಯದ ಮಹಿಳೆಯರನ್ನು ಅತ್ಯಾಚಾರವೆಸಗುವುದೇ ಸಾಧನವಾಗಿಹೋಗಿತ್ತು. ಇದು ಎಷ್ಟರಮಟ್ಟಿಗೆ ಎಂದರೆ ಪಾಕಿಸ್ತಾನದಿಂದ ಭಾರತಕ್ಕೆ ಮರಳುತ್ತಿದ್ದ ಎಷ್ಟೋ ಹಿಂದು- ಸಿಖ್ ಕುಟುಂಬಗಳು ತಮ್ಮ ಹೆಂಡತಿ ಮಕ್ಕಳನ್ನು ತಾವೇ ಕೊಂದುಬಿಟ್ಟರು! ದಂಗೆಕೋರರ ಅತ್ಯಾಚಾರಕ್ಕೆ ಸಿಗುವುದನ್ನು ನೋಡುವುದು ಬೇಡ ಎಂದು… ಮಹಿಳೆಯರು ಸಾಮೂಹಿಕವಾಗಿ ಬಾವಿಗೆ ಹಾರಿದ, ವಿಷ ಸೇವಿಸಿದ ಕರಾಳ ಅನುಭವಗಳನ್ನು ಹೊದ್ದಿದೆ ಈ ಗತದ ಚೂರು.

ಈ ಸಂದರ್ಭದಲ್ಲಿ ವಲಸೆ ಹೋದವರ ಸಂಖ್ಯೆ ಸರಿಸುಮಾರು 1.25 ಕೋಟಿ. ಇದೇ ಕಾರಣಕ್ಕಾಗಿ ದೇಶ ವಿಭಜನೆ ಸಂದರ್ಭದಲ್ಲಿ ಆದ ವಲಸೆಯನ್ನು ಮನುಷ್ಯನ ಇತಿಹಾಸದಲ್ಲಿ ಅತ್ಯಂತ ದೊಡ್ಡ ವಲಸೆ ಎಂದೇ ಪರಿಗಣಿಸಲಾಗುತ್ತಿದೆ. ಮುಖ್ಯವಾಗಿ ಇದರ ಕರಾಳತೆ ತಟ್ಟಿದ್ದು ಪಂಜಾಬಿಗೆ. ದೇಶ ವಿಭಜನೆ ಸಂದರ್ಭದಲ್ಲಿ ಪಂಜಾಬ್ ಸಹ ಎರಡು ಹೋಳಾಗಿತ್ತು. ಅರ್ಧಭಾಗ ಪಾಕಿಸ್ತಾನಕ್ಕೆ, ಇನ್ನರ್ಧ ಭಾಗ ಭಾರತದ ಪಾಲಾಗಿತ್ತು. ಇಲ್ಲಿ ಹಿಂದು, ಮುಸ್ಲಿಂ ಮತ್ತು ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿದ್ದವರು. ಈ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬರುವ ಹಿಂದುಗಳು, ಭಾರತದಿಂದ ಹೊರಹೋಗುತ್ತಿದ್ದ ಮುಸ್ಲಿಮರ ಮೇಲೆ ಹಾಗೂ ಪಂಜಾಬ್ ನಲ್ಲಿನ ಸಿಖ್ ಸಮುದಾಯದವರ ಮೇಲೆ ದಾಳಿಗಳಾದವು. ಈ ದಾಳಿಯಲ್ಲಿ ಸುಮಾರು 10 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಮಹಿಳೆಯರಿನ ಮೇಲಿನ ದೌರ್ಜನ್ಯದ ಕಥೆಗಳಂತೂ ದೇಶ ವಿಭಜನೆ ಸಂದರ್ಭದಲ್ಲಿ ಮಾನವೀಯತೆ ಎಂಬುದು ಸತ್ತು ಸಮಾಧಿಯಾಗಿತ್ತು ಎಂಬುದನ್ನು ಸಾರಿ ಸಾರಿ ಹೇಳುತ್ತದೆ.

PARTITION_MIGRATION

ಮಹಿಳೆಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗುತ್ತಿತ್ತು. ಇಲ್ಲಿ ಯಾವುದೇ ಧರ್ಮ, ಜಾತಿ, ವರ್ಗ ಹಾಗೂ ವಯಸ್ಸಿನ ವ್ಯತ್ಯಾಸವಿಲ್ಲದೇ ಮಹಿಳೆಯರು ಬಲಿಪಶುವಾಗಿದ್ದರು. ಇಲ್ಲಿ ಹಿಂಸಾಚಾರ ಕೇವಲ ಅತ್ಯಾಚಾರಕಷ್ಟೇ ಸೀಮಿತವಾಗಿರಲಿಲ್ಲ. ಕೆಲವು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡುವುದು, ಕೊಂದ ಮಹಿಳೆಯರ ಚರ್ಮದ ಮೇಲೆ ಕೆಲವರು ಹಿಂದು, ಮತ್ತೆ ಕೆಲವರು ಮುಸ್ಲಿಂ ಧರ್ಮದ ಗುರುತುಗಳನ್ನು ಹಾಕುವುದು, ‘ಪಾಕಿಸ್ತಾನ್ ಜಿಂದಾಬಾದ್’ ಹಾಗೂ ‘ಜೈ ಹಿಂದ್’ ಎಂದು ಬರೆಯುವುದು, ಮಹಿಳೆಯರ ಸ್ತನಗಳನ್ನು ಕತ್ತರಿಸುವುದು, ಅವರ ಇತರೆ ಭಾಗಗಳಿಗೆ ಚಿತ್ರಹಿಂಸೆ ನೀಡುವ ಅಮಾನವೀಯ ಘಟನೆಗಳು ನಡೆದವು.

ಮಹಿಳೆಯರ ಮೇಲಿನ ಈ ಮಟ್ಟದ ದೌರ್ಜನ್ಯವನ್ನು ಕಂಡ ಕೆಲವು ಕುಟುಂಬದವರು, ತಮ್ಮ ಮನೆಯ ಮಹಿಳೆಯರ ಮೇಲೂ ಇಂತಹ ಕೃತ್ಯ ನಡೆಯಬಹುದು, ಕುಟುಂಬದ ಮಾನ ಹೋಗುವುದೆಂಬ ಭಯಕ್ಕೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನೇ ಕೊಂದು ಹಾಕಿದ ಪ್ರಕರಣಗಳು ನಡೆದವು. ಗಂಡ, ಸಹೋದರ, ಸೋದರ ಸಂಬಂಧಿ, ಮಗ ಹೀಗೆ ತಮ್ಮವರ ಕೈಯಿಂದಲೇ ಮಹಿಳೆಯರು ಹತರಾದರು. ಈ ಪ್ರಕರಣಗಳ ಪೈಕಿ ಕೆಲವು ಬೆಳಕಿಗೆ ಬಂದರೆ, ಮತ್ತೆ ಕೆಲವು ಈ ಹಿಂಸಾಚಾರದಲ್ಲಿ ಮಣ್ಣಾಗಿ ಹೋದವು. ಇನ್ನು ಕೆಲವು ಮಹಿಳೆಯರು ತಮ್ಮ ಮಾನಕ್ಕೆ ಹೆದರಿ ಸ್ವತಃ ತಾವೇ ತಮ್ಮ ಚಿಕ್ಕ ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ, ನೇಣು ಬಿಗಿದುಕೊಂಡು ಪ್ರಾಣ ಬಿಟ್ಟರು. ಇನ್ನು ಅತ್ಯಾಚಾರಕ್ಕೊಳಗಾಗಿ ಬದುಕುಳಿದ ಮಹಿಳೆಯರ ಪಾಡು ಕೇಳಬಾರದಂತಹ ಸ್ಥಿತಿ ತಲುಪಿತು. ಅತ್ಯಾಚಾರಕ್ಕೊಳಗಾದವರು ನಾಯಿ ಮುಟ್ಟಿದ ಮಡಿಕೆ ಎಂಬಂತೆ ಅಪವಿತ್ರ ಎಂದು ಭಾವಿಸಿ, ತನ್ನವರಿಂದಲೇ ತಿರಸ್ಕರಿಸಲ್ಪಟ್ಟರು. ಕೆಲವು ಮಹಿಳೆಯರನ್ನು ಅತ್ಯಾಚಾರ ಮಾಡಿದ ವ್ಯಕ್ತಿಯೇ ಮದುವೆಯಾಗಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿದ ಘಟನೆಗಳು ನಡೆದವು. ಇಂತಹ ಪ್ರಕರಣಗಳಲ್ಲಿ ಆ ಹೆಣ್ಣು ಮಗಳು ಮತ್ತೆ ತಮ್ಮ ಮೂಲ ಕುಟುಂಬವನ್ನು ನೋಡಲು ಅಥವಾ ಸಂಪರ್ಕಿಸಲು ಸಾಧ್ಯವೇ ಆಗಲಿಲ್ಲ. ದಂಗೆಕೋರರ ಕೈಗೆ ಸಿಕ್ಕಿದ ಹಲವು ಸಂತ್ರಸ್ತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಲಾಯಿತು.

ಈ ಹಿಂಸಾಚಾರದಲ್ಲಿ ಕೆಲವು ಮಹಿಳೆಯರು ತಪ್ಪಿಸಿಕೊಂಡ ಉದಾಹರಣೆಗಳು ಇವೆ. ಆ ಪೈಕಿ ಪ್ರಕಾಶವಂತಿ ಎಂಬ ಮಹಿಳೆಯ ಕಥೆ ಹೀಗಿತ್ತು…

ಪ್ರಕಾಶವಂತಿ ಎಂಬಾಕೆ ಹಿಂದು ಕುಟುಂಬದಲ್ಲಿ ಹುಟ್ಟಿ ಮದುವೆಯಾಗಿ ತಾಯಿಯೂ ಆಗಿದ್ದಳು. 1947 ರ ಆಗಸ್ಟ್ ತಿಂಗಳ ಹೊತ್ತಿಗೆ ಆಕೆಗಿನ್ನು 20 ವರ್ಷ. ಈಗಿನ ಪಾಕಿಸ್ತಾನ ಗಡಿ ಪ್ರದೇಶವೊಂದರಲ್ಲಿ ಈಕೆಯ ಕುಟುಂಬ ನೆಲೆಸಿತ್ತು. ದೇಶ ವಿಭಜನೆ ಸಂದರ್ಭದಲ್ಲಿ ದಂಗೆಕೋರರು ತಮ್ಮ ಮನೆ ಮೇಲೆ ದಾಳಿ ನಡೆಸುವ ಭಯದಲ್ಲಿ ಆಕೆ ಅತ್ಯಾಚಾರಕ್ಕೆ ಒಳಗಾಗಬಹುದು ಎಂಬ ಆತಂಕದಲ್ಲಿ ಆಕೆಯ ಪತಿಯೇ ತನ್ನ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಂಗಲಾಚಿ ಬೇಡಿಕೊಂಡ. ಆಕೆ ನಿರಾಕರಿಸಿದ ನಂತರ ಕೋಪಗೊಂಡು ಹೊಡೆದ. ತಕ್ಷಣವೇ ಆಕೆ ಪ್ರಜ್ಞೆ ತಪ್ಪಿತ್ತು. ಆಕೆ ಸತ್ತಿದ್ದಾಳೆಂದು ಪತಿಯು ಅಲ್ಲಿಂದ ಹೋದ. ನಂತರ ಮನೆಗೆ ನುಗ್ಗಿದ ದಾಳಿಕೋರರೂ ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಹೊರಟು ಹೋದರು. ಆಕೆಗೆ ಮತ್ತೆ ಪ್ರಜ್ಞೆ ಬಂದ ನಂತರ ತನ್ನ ಪತಿ ಮತ್ತು ಮಕ್ಕಳು ಸತ್ತು ಬಿದ್ದಿರುವುದನ್ನು ಕಂಡಳು. ಈ ಘಟನೆಯಿಂದ ಕುಗ್ಗಿಹೋದ ಪ್ರಕಾಶವಂತಿಗೆ ಆಶ್ರಮವೊಂದರಲ್ಲಿ ನೆಲೆ ಸಿಕ್ಕಿತು. ನಂತರ ಆಕೆಯ ಜೀವನ ಪೂರ್ತಿ ಅದೇ ಆಶ್ರಮದಲ್ಲೇ ಕಳೆದುಹೋಯಿತು…

ಇಂದಿನ ಸ್ವಾತಂತ್ರ್ಯ ಸಂಭ್ರಮದ ನಡುವೆಯೇ ಇಂಥ ಹತಭಾಗ್ಯ ದೇಶವಾಸಿಗಳನ್ನು ತುಸು ನೆನೆದು ಮರುಗೋಣ.

Leave a Reply