ನಾಡಲ್ಲೂ ಕಾಡಲ್ಲೂ ಸಮನಾಗಿತ್ತು ಸ್ವಾತಂತ್ರ್ಯದ ತುಡಿತ, ಬ್ರಿಟಿಷರ ವಿರುದ್ಧ ಸಿಡಿದೆದ್ದಿತ್ತು ಬುಡಕಟ್ಟು ಭಾರತ

ಚಿತ್ರಕೃಪೆ- ರಾಷ್ಟ್ರಚೇತನ ಡಾಟ್ ಆರ್ಗ್

ಡಿಜಿಟಲ್ ಕನ್ನಡ ವಿಶೇಷ:

ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಭಗತ್ ಸಿಂಗ್… ಹೀಗೆ ಹಲವು ಹೆಸರುಗಳನ್ನು ನೆನಪಿಸಿಕೊಳ್ಳುತ್ತೇವೆ ಸ್ವಾತಂತ್ರ್ಯದ ದಿನದಂದು. ತಪ್ಪೇನಿಲ್ಲ. ಆದರೆ ಭಾರತದ ಸ್ವಾತಂತ್ರಯ ಹೋರಾಟವೆಂಬುದು ದೆಹಲಿಯೋ ಲಾಹೋರೋ ಹೀಗೆ ಕೆಲ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರದೇ ಇಡೀ ಭಾರತ ಬ್ರಿಟಿಷರ ವಿರುದ್ಧ ಸಿಡಿದೆದ್ದಿತ್ತು.

ಬುಡಕಟ್ಟು ಪ್ರದೇಶಗಳಲ್ಲಿ ಸ್ವಾತಂತ್ರಕ್ಕೆ ಪರಿಶ್ರಮ ಪಟ್ಟವರ ಸಂಖ್ಯೆ ಬಹಳಷ್ಟಿದೆ. ಪಠ್ಯ ಪುಸ್ತಕಗಳಲ್ಲಿ ಅಷ್ಟಾಗಿ ಪರಿಚಿತರಿರದ ಅಂಥ ಸ್ವಾತಂತ್ರ್ಯ ದೀವಿಗೆಗಳನ್ನು ಇಂದು ನೆನೆಯೋಣ.

 ರಾಣಿ ಗಯಿದಿಂಲ್ಯೂ

rani gaidinluಬುಡಕಟ್ಟು ಜನರ ಸ್ವಾತಂತ್ರ್ಯ ಹೋರಾಟದಲ್ಲಿ ನಮಗೆ ಸಿಗುವ ಪ್ರಮುಖ ಹೋರಾಟಗಾರರ ಹೆಸರಿನಲ್ಲಿ ರಾಣಿ ಗಯಿದಿಂಲ್ಯೂ ಸಹ ಒಬ್ಬರು. ಬ್ರಿಟಿಷ್ ಮುಕ್ತ ಭಾರತ ಹಾಗೂ ಮತಾಂತರ ಮುಕ್ತ ಈಶಾನ್ಯ ರಾಜ್ಯ ಈ ಎರಡೂ ಕನಸು ಹೊತ್ತಿದ್ದವಳು ಈಕೆ. 1915 ರ ಜನವರಿ 26 ರಂದು ಮಣಿಪುರದ ನುಂಗಕಾವ್ ಪ್ರದೇಶದಲ್ಲಿ ಜನಿಸಿದ ಗಯಿದಿಂಲ್ಯೂ ಧಾರ್ಮಿಕ ಹಾಗೂ ರಾಜಕೀಯ ನಾಯಕಿಯಾಗಿ ಬೆಳೆದವರು.

13ನೇ ವಯಸ್ಸಿನಲ್ಲೇ ಬ್ರಿಟೀಷರ ವಿರುದ್ಧ ಹೋರಾಟ ಆರಂಭಿಸಿದ ಗಟ್ಟಿಗಿತ್ತಿ ಈಕೆ. ಬ್ರಿಟಿಷ್ ಆಳ್ವಿಕೆಯನ್ನು ಬಾಲ್ಯದಿಂದಲೇ ವಿರೋಧಿಸಿದ ಈಕೆ, ತನ್ನ ಸೋದರ ಸಂಬಂಧಿ ಹೈಪೌ ಜದೊನಂಗ್ ಆರಂಭಿಸಿದ್ದ ಧಾರ್ಮಿಕ ಹೋರಾಟಕ್ಕೆ ಕೈಜೋಡಿಸಿದರು. ಈ ಹೋರಾಟದಲ್ಲಿ ನಾಗ ಬುಡಕಟ್ಟು ಸಮುದಾಯದವರು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರವಾಗೋದರ ವಿರುದ್ಧ ಹೋರಾಡಿದಳು. 1931 ರಲ್ಲಿ ಬ್ರಿಟಿಷರು ಜದೊನಂಗ್ ರನ್ನು ಗಲ್ಲಿಗೆ ಏರಿಸಿಬಿಟ್ಟರು. ನಂತರ, ಈ ಹೋರಾಟದ ಉತ್ತರಾಧಿಕಾರಿಯಾಗಿ ಗಯಿದಿಂಲ್ಯೂ ಜವಾಬ್ದಾರಿ ಹೊತ್ತರು. ಬ್ರಿಟಿಷರ ಆಡಳಿತ ವಿರುದ್ಧ ನೇರವಾಗಿ ಸಡ್ಡು ಹೊಡೆದಳು. ಸ್ಥಳೀಯ ಜನರು ಬ್ರಿಟಿಷರಿಗೆ ಯಾವುದೇ ರೀತಿಯ ತೆರಿಗೆ ನೀಡಬಾರದು ಎಂದು ಅಲ್ಲಿನ ಜನರಲ್ಲಿ ಮನವರಿಕೆ ಮಾಡಿದಳು. ಈಕೆಯ ಹೋರಾಟಕ್ಕೆ ನಾಗಾ ಸಮುದಾಯದ ಯುವಕರು ಸ್ವಯಂ ಪ್ರೇರಿತವಾಗಿ ಸೇರ್ಪಡೆಯಾದರು.

ಈಕೆ ದಿನೇ ದಿನೇ ಬ್ರಿಟಿಷರ ವಿರುದ್ಧ ಹೋರಾಟ ತೀವ್ರಗೊಳಿಸಿದ ಪರಿಣಾಮ, ಆಗಿನ ಅಸ್ಸಾಂ ಗವರ್ನರ್ 3ನೇ ಹಾಗೂ 4ನೇ ಬೆಟಾಲಿಯನ್ ಅನ್ನು ಈಕೆಯ ವಿರುದ್ಧದ ಕಾರ್ಯಾಚರಣೆಗೆ ನಿಯೋಜಿಸಿದರು. ಆಕೆಯ ಬಂಧನಕ್ಕೆ ನೆರವಾದ್ರೆ ಬಹುಮಾನವನ್ನು ಘೋಷಿಸಲಾಗಿತ್ತು. ಅಲ್ಲದೆ ಆಕೆಯ ಬಗ್ಗೆ ಮಾಹಿತಿ ಕೊಟ್ಟವರು 10 ವರ್ಷ ತೆರಿಗೆ ಕಟ್ಟುವಂತಿಲ್ಲ ಎಂಬ ಆಮಿಷವನ್ನು ಒಡ್ಡಲಾಯಿತು. 1932 ಫೆ.16 ರಂದು ನಾರ್ಥ್ ಕ್ಯಾಚರ್ ಹಿಲ್ಸ್ ಹಾಗೂ 1932 ಮಾ.18 ರಂದು ಹಂಗ್ರುಮ್ ಪ್ರದೇಶದಲ್ಲಿ ಬಿರ್ಟೀಷರ ವಿರುದ್ಧ ಯುದ್ಧವನ್ನೇ ಸಾರಿದಳು. ಬ್ರಿಟೀಷರ ವಿರುದ್ಧ ಹೋರಾಟ ನಡೆಸಲು ಅನುಕೂಲವಾಗಲಿಕ್ಕೆ ಪುಲೋಮಿ ಎಂಬ ಹಳ್ಳಿಯಲ್ಲಿ ಕಾಡಿನ ನಿರ್ಮಾಣಕ್ಕೆ ಮುಂದಾದರು. ಆದರೆ, ಅಕ್ಟೋಬರ್ ತಿಂಗಳಲ್ಲಿ ಈ ಪ್ರದೇಶದ ಮೇಲೆ ದಾಳಿ ನಡೆಸಿದ ಬ್ರಿಟೀಷರು ಆಕೆಯನ್ನು ಬಂಧಿಸಿದ್ರು. ಬ್ರಿಟೀಷರ ವಿರುದ್ಧ ಇಷ್ಟೆಲ್ಲಾ ಹೋರಾಟ ನಡೆಸಿ ಬಂಧನವಾದಾಗ ಆಕೆಗೆ ಆಗಿದ್ದ ವಯಸ್ಸು ಕೇವಲ 16 ವರ್ಷ.

ಬಂಧನವಾದ ಐದು ವರ್ಷಗಳ ನಂತರ ಅಂದರೆ, 1937 ರಲ್ಲಿ ಜವಹಾರ್ ಲಾಲ್ ನೆಹರು ಅವರು ಜೈಲಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಈಕೆಗೆ ‘ರಾಣಿ’ ಎಂಬ ಹೆಸರನ್ನು ನೀಡಿದರು. ಜತೆಗೆ ಶೀಘ್ರವೇ ಜೈಲಿನಿಂದ ಬಿಡುಗಡೆಗೊಳಿಸಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ ಆಕೆಯನ್ನು ಬಿಡುಗಡೆ ಮಾಡಿದ್ದು 1947 ರಲ್ಲಿ. ತನ್ನ ಬಿಡುಗಡೆ ನಂತರವೂ ಆಕೆ ತನ್ನ ಸಮುದಾಯಕ್ಕೆ ಸೇವೆ ಸಲ್ಲಿಸಿದಳು. ಈಕೆಗೆ ಪದ್ಮ ಭೂಷಣ ಪ್ರಶಸ್ತಿಯೂ ಲಭಿಸಿದ್ದು, 1993 ಫೆ.17 ರಂದು ವಿಧಿವಶರಾದರು.

ಬಿಸ್ರಾ ಮುಂಡ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬುಡಕಟ್ಟು ಹೋರಾಟಗಾರ ಬಿಸ್ರಾ ಮುಂಡ. 19ನೇ ಶತಮಾನದ ಅಂತ್ಯದಲ್ಲಿ ಬ್ರಿಟೀಷ್ ರಾಜ್ ಆಳ್ವಿಕೆಯಲ್ಲಿbirsamunda ಬಿಹಾರ, ಜಾರ್ಖಂಡ್ ಪ್ರದೇಶಗಳ ಬುಡಕಟ್ಟು ಜನರಲ್ಲಿ ಧಾರ್ಮಿಕ ಹಾಗೂ ಸ್ವಾತಂತ್ರ್ಯ ಹೋರಾಟ ರೂವಾರಿ ಈ ಬಿಸ್ರಾ ಮುಂಡ. 1875 ನವೆಂಬರ್ 15 ರಂದು ಖುಂತಿ ಪ್ರದೇಶದ ಹುಲಿಹಟು ಗ್ರಾಮದಲ್ಲಿ ಜನಿಸಿದ ಬಿಸ್ರಾ 1900 ಜೂನ್ 9 ರಂದು ರಾಂಚಿ ಜೈಲಿನಲ್ಲಿ ಮೃತಪಟ್ಟರು. ಇವರು ಬದುಕಿದ್ದು ಕೇವಲ 25 ವರ್ಷವಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಅಪಾರ. ತಮ್ಮ ಜನಪದ ಕಲೆಯ ಮೂಲಕವೇ ಬ್ರಿಟೀಷರ ವಿರುದ್ಧ ಹೋರಾಟ ಆರಂಭಿಸಿದ ಬಿಸ್ರಾ ಮುಂಡ ಬ್ರಿಟೀಷರ ವಿರುದ್ಧ ಹೇಳಿದ ಮಾತು ಹೀಗಿತ್ತು:

‘ರಾಣಿಯ ರಾಜ್ಯಭಾರ ಅಂತ್ಯವಾಗಲಿ, ನಮ್ಮ ರಾಜ್ಯಭಾರ ಆರಂಭವಾಗಲಿ’ ಈ ಮಾತು ಇಂದಿಗೂ ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಬುಟಕಟ್ಟು ಜನರ ನೆನಪಿನಲ್ಲಿ ಉಳಿದಿದೆ. ಬ್ರಿಟೀಷ್ ಆಳ್ವಿಕೆಯಿಂದ ಊಳಿಗಮಾನ್ಯ ಪದ್ಧತಿ ವ್ಯವಸ್ಥೆ ಜೀತ ವ್ಯವಸ್ಥೆಯಾಗಿ ಬದಲಗುತ್ತಿದ್ದದ್ದನ್ನು  ಬಿಸ್ರಾ ಮುಂಡ ತಮ್ಮದೇ ಶೈಲಿಯಲ್ಲಿ ಖಂಡಿಸಿದರು. ಬಿಸ್ರಾ ಅವರು ಮುಂಡಾ ಸಮುದಾಯದ ಇತರ ಸದಸ್ಯರೊಂದಿಗೆ ಬ್ರಿಟೀಷರ ವಿರುದ್ಧ ಬಂಡಾಯ ಬಾವುಟ ಹಾರಿಸಿದರು.

1900 ಮಾ.3 ರಂದು ಚಕ್ರದರ್ಪುರ ಪ್ರದೇಶದಲ್ಲಿ ಗೆರಿಲ್ಲಾ  ಸೇನೆ ಜತೆ ಮಲಗಿದ್ದ ವೇಳೆಯಲ್ಲಿ ದಾಳಿ ನಡೆಸಿದ ಬ್ರಿಟೀಷರು ಸುಮಾರು 400 ಬುಡಕಟ್ಟು ಜನರನ್ನು ಬಂಧಿಸಿದರು. ಆ ಪೈಕಿ ಬಿಸ್ರಾ ಸಹ ಒಬ್ಬರಾಗಿದ್ದರು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ರಾಂಚಿಯ ಜೈಲಿನಲ್ಲಿ ಬಿಸ್ರಾ ಅವರ ಅನುಮಾನಾಸ್ಪದವಾಗಿ ಸತ್ತಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ಇವರ ವಿಭಿನ್ನ ಪಾತ್ರವನ್ನು ಪರಿಗಣಿಸಿ ಭಾರತದ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇವರ ಭಾವ ಚಿತ್ರವನ್ನು ಇರಿಸಲಾಗಿದೆ. ಇದು ಬುಡಕಟ್ಟು ನಾಯಕನಿಗೆ ಸಿಕ್ಕಿರುವ ಅತಿ ದೊಡ್ಡ ಗೌರವ ಎಂದೇ ಪರಿಗಣಿಸಲಾಗಿದೆ.

ಟಿರೋಟ್ ಸಿಂಗ್

tirot singhಇವರು ಸಹ ಭಾರತದ ಸ್ವಾತಂತ್ರ್ಯಕ್ಕೆ ಬ್ರಿಟೀಷರ ವಿರುದ್ಧ ಹೋರಾಡಿದ ವೀರ. ಈತನ ಹೋರಾಟ ನಡೆದದ್ದು, 18ನೇ ಶತಮಾನದಲ್ಲಿ. ಬ್ರಿಟೀಷರ ವಿರುದ್ಧ ಇವರ ಹೋರಾಟವೂ ಸಾಕಷ್ಟು ರೋಚಕ. 1835 ಜುಲೈ 17 ರಂದು ಇವರು ಮೃತಪಟ್ಟಿದ್ದು, ಇಂದಿಗೂ ಈ ದಿನವನ್ನು ‘ಟಿರೋಟ್ ಸಿಂಗ್ ಡೇ’ ಎಂದು ಆಚರಿಸಲಾಗುತ್ತದೆ. ಹಾಗಾದ್ರೆ ಇವರ ಹೋರಾಟ ಹೇಗಿತ್ತು ಎಂಬುದನ್ನು ನೋಡೋಣ ಬನ್ನಿ…

ಟಿರೋಟ್ ಸಿಂಗ್ ಈಗಿನ ಬಾಂಗ್ಲಾದೇಶದ ಢಾಕಾ ಪ್ರದೇಶದ ಸ್ವಾತಂತ್ರ ಹೋರಾಟಗಾರ. ಇಲ್ಲಿನ ಖಾಸಿ ಗುಡ್ಡಗಾಡು ಪ್ರದೇಶವನ್ನು ಬ್ರಿಟೀಷರು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ತಡೆಗೋಡೆಯಾಗಿ ನಿಂತ ಮಹಾನ್ ಯೋಧ ಟಿರೋಟ್ ಸಿಂಗ್. 1926ರ ವೇಳೆಗೆ ಬ್ರಿಟೀಷರು ಬ್ರಹ್ಮಪುತ್ರ ನದಿ ತೀರದ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಶಿಲ್ಹೆಟ್ ನ ತಮ್ಮ ನಿಯಂತ್ರಣ ಸಾಧಿಸುವ ಪ್ರಯತ್ನದಲ್ಲಿದ್ದಾಗ ಅಸ್ಸಾಂ ಕೆಳಭಾಗದ ಮೂಲಕವಾಗಿ ಖಾಸಿ ಗುಡ್ಡಗಾಡು ಪ್ರದೇಶವನ್ನು ಪ್ರವೇಶಿಸಲು ಮುಂದಾದರು. ಅಸ್ಸಾಂ ಅನ್ನು ಬ್ರಿಟೀಷರು ವಶ ಪಡಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಪಡೆದ ಸಿಂಗ್, ಇತ್ತ ಖಾಸಿ ಗುಡ್ಡಗಾಡು ಪ್ರದೇಶದ ಬಳಿ ಇದ್ದ ಇಬ್ಬರು ಬ್ರಿಟೀಷ್ ಅಧಿಕಾರಿಯನ್ನು ಕೊಂದರು. ನಂತರ ಆಂಗ್ಲೋ-ಖಾಸಿ ಯುದ್ಧ ಆರಂಭವಾಯ್ತು. ಖಾಸಿ ಸಮುದಾಯದವರು ಕೇವಲ ಬಿಲ್ಲು, ಬಾಣಗಳ ಪರಿಣಿತರಾಗಿದ್ದರೇ ಹೊರತು, ಬ್ರಿಟೀಷರಂತೆ ಶಸ್ತ್ರಾಸ್ತ್ರಗಳ ಪರಿಣಿತಿ ಹೊಂದಿರಲಿಲ್ಲ. ತಕ್ಷಣವೇ ಬ್ರಿಟೀಶರ ವಿರುದ್ಧ ಯುದ್ಧದಲ್ಲಿ ಸೆಣಸೋದು ಕಷ್ಟ ಎಂಬುದನ್ನು ಅರಿತ ಟಿರೋಟ್ ಸಿಂಗ್ ಹಾಗೂ ಆತನ ಪಡೆ ಗೊರಿಲ್ಲಾ ಯುದ್ಧ ತಂತ್ರಗಾರಿಕೆ ಮೂಲಕ ಬ್ರಿಟೀಷರ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ರು. ಪರಿಣಾಮ ಸತತ 4 ವರ್ಷಗಳ ಕಾಲ ಈ ತಿಕ್ಕಾಟ ನಡೆಯುತ್ತಾ ಸಾಗಿತು. ಸ್ವದೇಶಿ ಅಸ್ತ್ರಗಳೊಂದಿಗೆ ಟಿರೋಟ್ ಸಿಂಗ್ ಬ್ರಿಟೀಷರಿಗೆ ತಲೆನೋವಾದರು. 1933 ಜನವರಿಯಲ್ಲಿ ಬ್ರಿಟೀಷರ ಗುಂಡೇಟು ತಿಂದ ಟಿರೋಟ್ ಸಿಂಗ್ ಗುಹೆಯೊಂದರೊಳಗೆ ಸೇರಿಕೊಂಡರು. ನಂತರ ಅವರನ್ನು ಬ್ರಿಟೀಷರು ಸೆರೆ ಹಿಡಿದರು. 1835 ರಲ್ಲಿ ಅವರು ಮೃತಪಟ್ಟರು.

 ಅಲ್ಲೂರಿ ಸೀತರಾಮ ರಾಜು

ಸೀತರಾಮ ರಾಜು ಅವರು ಸಹ ಬುಡಕಟ್ಟು ಜನರ ಸ್ವಾತಂತ್ರ್ಯ ಹಾಗೂ ಹಿತ ಕಾಪಾಡುವ ನಿಟ್ಟಿನಲ್ಲಿ ಬ್ರಿಟೀಷ್ ರಾಜ್ ವಿರುದ್ಧ ದಂಗೆ ಮಾಡಿದ ಹೋರಾಟಗಾರ. 1922-24 ರ ವೇಳೆಯಲ್ಲಿ ‘ರಾಂಪಾ ರೆಬೆಲಿಯನ್’ ಎಂಬ ಗುಂಪು ಆರಂಭಿಸಿದ ಸೀತರಾಮ ರಾಜು ಅವರು ಬ್ರಿಟೀಷರ ನಿಯಮ ಹಾಗೂ ದಬ್ಬಾಳಿಕೆ ವಿರುದ್ಧ ಸಿಡಿದೆದ್ದರು.alluri

ಬ್ರಿಟೀಷರು 1882ರಲ್ಲಿ ಮದ್ರಾಸ್ ಅರಣ್ಯ ಕಾಯ್ದೆ ಜಾರಿಗೊಳಿಸುವ ಮೂಲಕ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವನ್ನು ವಿರೋಧಿಸಿ ಹೋರಾಟ ನಡೆಸಿದವರು ಸೀತಾರಾಮ ರಾಜು. ಬಂಗಾಳದಲ್ಲಿ ದೇಶಭಕ್ತಿ ಹೋರಾಟಗಳ ಬಗ್ಗೆ ಮಾಹಿತಿ ಪಡೆದು ಸ್ಫೂರ್ತಿಗೊಂಡ ಇವರು, ತಮ್ಮ ನೆಲ ಹಾಗೂ ಜನರ ಹಿತಾಸಕ್ತಿ ರಕ್ಷಿಸಲು ಬ್ರಿಟೀಷರ ಮೇಲೆ ದಾಳಿ ನಡೆಸಲು ಮುಂದಾದರು. ಇದರ ಪ್ರಯತ್ನವಾಗಿ ಚಿಂತಪಲ್ಲೆ, ರಾಂಪಚೊದವರಮ್, ದಮನಪಲ್ಲಿ, ಕೃಷ್ಣದೇವಿಪೆಟಾ, ರಾಜವೊಮಂಗಿ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಲಾಯಿತು. ಈ ದಾಳಿ ಸಂದರ್ಭದಲ್ಲಿ ಹಲವು ಬ್ರಿಟೀಷ್ ಅಧಿಕಾರಿಗಳನ್ನು ಹತ್ಯೆ ಮಾಡಿದಲ್ಲದೇ, ಬಂದೂಕು, ಮದ್ದು ಗುಂಡುಗಳನ್ನು ಕಳವು ಮಾಡಿದರು. ನಂತರ ಆತನನ್ನು ಸೆರೆ ಹಿಡಿದ ಬ್ರಿಟೀಷರು ಮರಕ್ಕೆ ಅವರನ್ನು ಕಟ್ಟಿಹಾಕಿ ಗುಂಡಿನ ಸುರಿಮಳೆಗೈದರು. ಈತನ ಹೋರಾಟಕ್ಕೆ ಸ್ಥಳಿಯರು ಸೀತರಾಮ ಅವರನ್ನು ‘ಮನ್ಯಂ ವೀರುಡು’ (ಕಾಡಿನ ವೀರ) ಎಂದು ಕರೆಯುತ್ತಿದ್ದರು. 1924 ಮೇ.7 ರಂದು ಸೀತರಾಮ ಅವರು ಸತ್ತಾಗ ಅವರಿಗಿನ್ನು ಕೇವಲ 26 ವರ್ಷ. ಇದರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ಬಿಟ್ಟರು.

ಸುರೇಂದ್ರ ಸಾಯಿ

ಒಡಿಶಾ ಮೂಲದ ಸ್ವಾತಂತ್ರ್ಯ ಹೋರಾಟಗಾರರಾದ ಸುರೇಂದ್ರ ಸಾಯಿ ಅವರು ತಮ್ಮ ಹೋರಾಟದ ವೇಳೆ ಜೈಲಿನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಬ್ರಿಟೀಷರ ದಾಳಿಯಿಂದ ಒಡಿಶಾ ಪಶ್ಚಿಮ ಪ್ರಾಂತ್ಯವನ್ನು ಕೆಲ ಕಾಲ ಬ್ರಿಟೀಷರ ಆಳ್ವಿಕೆಯಿಂದ ರಕ್ಷಿಸಿದ ಖ್ಯಾತಿ ಇವರದ್ದಾಗಿದೆ.

surendra sai1827 ರಲ್ಲಿ ಸಂಬಲ್ಪುರದ ರಾಜ ಮಹರಾಜ ಸಾಯಿ ಅವರ ಮರಣದ ನಂತರ ಈ ಜವಾಬ್ದಾರಿಯನ್ನು ಹೊರಬಲ್ಲ ಅಭ್ಯರ್ಥಿಯಾಗಿದ್ದು ಸುರೇಂದ್ರ ಸಾಯಿ ಅವರು. ಆದರೆ ಬ್ರಿಟೀಷರು ಮಹರಾಜ ಸಾಯಿ ಅವರ ಪತ್ನಿ ಮೊಹನ ಕುಮಾರಿ ಅವರು ಈ ಸ್ಥಾನ ಅಲಂಕರಿಸಲು ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಮೋಹನ ಕುಮಾರಿ ರಾಜ್ಯಭಾರ ಆರಂಭಿಸಿದರು. ಈಕೆಯ ಆಳ್ವಿಕೆ ಕಾಲದಲ್ಲಿ ಭೂ ಆದಾಯ ಪದ್ಧತಿ ಅಲ್ಲಿನ ಬುಡಕಟ್ಟು ಜನರಲ್ಲಿ ಅತೃಪ್ತಿ ತಂದಿತು. ಆಗ ಮೋಹನ ಕುಮಾರಿಯವರನ್ನು ಅಧಿಕಾರದಿಂದ ಕಿತ್ತೊಗೆದ ಬ್ರಿಟೀಷರು ನಾರಾಯಣ ಸಿಂಗ್ ಅವರಿಗೆ ಸಿಂಹಾಸನ ಅಲಂಕರಿಸುವ ಅವಕಾಶ ಕೊಟ್ಟರು. ಕೆಳಜಾತಿಯಲ್ಲಿ ಹುಟ್ಟಿದ್ದ ಎಂಬ ಕಾರಣಕ್ಕೆ ಸುರೇಂದ್ರ ಅವರಿಗೆ ರಾಜ್ಯಭಾರದ ಜವಾಬ್ದಾರಿ ನೀಡಲು ಬ್ರಿಟೀಷರು ನಿರಾಕರಿಸಿದ್ರು.

ಇದೇ ವೇಳೆ ಅಲ್ಲಿನ ಬುಡಕಟ್ಟು ಜನರ ಭಾಷೆ ಹಾಗೂ ಸಂಪ್ರದಾಯವನ್ನು ಪ್ರೋತ್ಸಾಹಿಸುತ್ತಿದ್ದ ಸುರೇಂದ್ರ ಸಾಯಿ, ಸಮುದಾಯದ ಪಾಲಿನ ನಾಯಕರಾದರು. ಈ ಹಂತದಲ್ಲಿ ಸಂಬಲ್ಪುರ ಪ್ರದೇಶದಲ್ಲಿ ರಾಜಕೀಯ ಅಧಿಕಾರ ಸ್ಥಾಪಿಸುವ ಬ್ರಿಟೀಷರ ಪ್ರಯತ್ನಕ್ಕೆ ಸುರೇಂದ್ರ ಸಾಯಿ ಪ್ರತಿರೋಧ ವ್ಯಕ್ತಪಡಿಸಿದರು. 1827 ರಲ್ಲಿ ಅಂದರೆ 18ನೇ ವಯಸ್ಸಿನಲ್ಲೇ ಬ್ರಿಟೀಷರ ಆಡಳಿತವನ್ನು ಪ್ರತಿಭಟಿಸಿದ ಸುರೇಂದ್ರ ಸಾಯಿ 1857ರವರೆಗೂ ಪಶ್ಚಿಮ ಒಡಿಶಾದ ಗುಡ್ಡಗಾಡು ಪ್ರದೇಶದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮುಂದುವರಿಸಿದರು. 1862 ರಲ್ಲಿ ಬ್ರಿಟೀಷರಿಗೆ ಶರಣಾದ ನಂತರ ಅವರಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅದರಲ್ಲಿ 19 ವರ್ಷಗಳ ಕಾಲ ಅವರಿಗೆ ಅಸಿರ್ಘರ್ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿತ್ತು. ಅಲ್ಲಿಯೇ ಅವರು 1884 ಮೇ 23 ರಂದು ಮೃತಪಟ್ಟರು.

ವೀರಪಂಡಿಯ ಕಟ್ಟಬೊಮ್ಮನ್

ಇವರು ಸಹ ಬ್ರಿಟೀಷರ ವಿರುದ್ಧ ಹೋರಾಡಿದ್ದು 18ನೇ ಶತಮಾನದಲ್ಲಿ. ಇವರ ಹೋರಾಟದ ವಿಶೇಷ ಏನಂದ್ರೆ, 1857 ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭಕ್ಕೂ 60 ವರ್ಷಗಳ ಮುನ್ನವೇ ಬ್ರಿಟೀಷರ ವಿರುದ್ಧ ಹೋರಾಡಿದ್ದ ಕೆಚ್ಚೆದೆಯ ಹೋರಾಟಗಾರ ವೀರಪಂಡಿಯ ಕಟ್ಟಬೊಮ್ಮನ್. 1760 ಜ.3ರಂದು ತಮಿಳುನಾಡಿನ ಪಂಚಲಂಕುರುಚಿ ಪ್ರದೇಶದಲ್ಲಿ ಜನಿಸಿದ್ದ ಇವರು ನಂತರ ಈ ಪ್ರದೇಶದ ಆಡಳಿತಗಾರನಾದರು. ಕಟ್ಟಬೊಮ್ಮನ್ ಅವರು ತಮ್ಮ ಪ್ರದೇಶ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ನಿಯಂತ್ರಣಕ್ಕೆ ಒಳಗಾಗುವುದನ್ನು ವಿರೋಧಿಸಿ ಬಂಡಾಯ ಎದ್ದಿದ್ದರು. ನಂತರ 1799 ಅಕ್ಟೋಬರ್ 16 ರಂದು ಈತನನ್ನು ಸೆರೆ ಹಿಡಿದ ಬ್ರಿಟೀಷರು ಸಾರ್ವಜನಿಕವಾಗಿ ನೇಣಿಗೇರಿಸಿದರು.

ವೈವಿಧ್ಯವೇ ಗುರುತಾದ ಭಾರತದಲ್ಲಿ ದಾಸ್ಯದ ವಿರುದ್ಧ ಮೂಲೆ ಮೂಲೆಯಲ್ಲೂ ಪ್ರತಿರೋಧ ಎದ್ದಿತ್ತು ಎಂಬುದು ಈ ಹೊತ್ತಿನಲ್ಲಿ ನಾವೆಲ್ಲ ಬೆರಗಿನಿಂದ ನೆನಪಿಸಿಕೊಳ್ಳಬೇಕಾದ ವಿವರ.

Leave a Reply