ಆಮ್ನೆಸ್ಟಿಯ ದೇಶ ಭಂಜನ ಕಾರ್ಯಕ್ಕೆ ಬೆಂಗಳೂರಲ್ಲಿ ಪ್ರತಿರೋಧ, ಕಾಶ್ಮೀರದ ಆಜಾದಿ ಘೋಷಣೆ- ಸೇನಾ ನಿಂದನೆಗಳ ವಿರುದ್ಧ ಬೀದಿಗಿಳಿದ ಎಬಿವಿಪಿ

 

ಡಿಜಿಟಲ್ ಕನ್ನಡ ಟೀಮ್:

‘ಕಾಶ್ಮೀರದ ಮುರಿದ ಕುಟುಂಬಗಳು’ ಎಂಬ ಹೆಸರಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನೆಯ ಉಪಸ್ಥಿತಿ ವಿರುದ್ಧ ಜನರನ್ನು ಎತ್ತಿಕಟ್ಟುವುದಕ್ಕೆ ಯೋಜಿಸಿದ್ದ ‘ಆಮ್ನೆಸ್ಟಿ ಇಂಡಿಯಾ’ ಮಾನವ ಹಕ್ಕು ಸಂಘಟನೆಗೆ ಬೆಂಗಳೂರಲ್ಲಿ ಬಿದ್ದಿದೆ ತಿರುಗುಬಾಣ.

ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿರುವುದಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ನೀಡಿರುವ ವಿಡಿಯೋ ಸಾಕ್ಷಿಯನ್ನು ಪರಿಗಣಿಸಿ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರ ಬಂಧನವೂ ಆಗದಿರುವುದರಿಂದ ಮಂಗಳವಾರ ಎಬಿವಿಪಿ ರಾಜಭವನಕ್ಕೆ ಮುತ್ತಿಗೆ ಹಾಕಿತು. ಈ ಸಂದರ್ಭದಲ್ಲಿ ತಳ್ಳಾಟ, ಲಘುಲಾಠಿ ಪ್ರಹಾರವೂ ಆಗಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದಿರೆ ಆರೋಪಿಸಿದ್ದಾರಲ್ಲದೇ, ಬುಧವಾರ ಎಬಿವಿಪಿಯು ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

ಎಬಿವಿಪಿ ಮೂರು ಮುಖ್ಯ ಬೇಡಿಕೆಗಳನ್ನಿಟ್ಟಿದೆ.

– ಘೋಷಣೆ ಕೂಗಿದವರಿಗೆ ಶಿಕ್ಷೆ ಆಗಬೇಕು. ಸೇನೆಯನ್ನು ನಿಂದಿಸಿದವರನ್ನು ಸಹಿಸುವ ಪ್ರಶ್ನೆಯೇ ಇಲ್ಲ.

– ಈ ಕಾರ್ಯಕ್ರಮದ ಸ್ವರೂಪ ಗೊತ್ತಿದ್ದೂ ಇಂಥದ್ದಕ್ಕೆ ವೇದಿಕೆ ಕಲ್ಪಿಸಿದ ಥಿಯಾಲಾಜಿಕಲ್ ಕಾಲೇಜಿನ ವಿರುದ್ಧವೂ ಕ್ರಮ ಜರುಗಬೇಕು.

– ಭಾರತದ ಆಂತರಿಕ ವಿಷಯದಲ್ಲಿ ತಲೆಹಾಕುತ್ತಿರುವ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಅನ್ನು ನಿಷೇಧಿಸಬೇಕು. ಇದು ಕೇವಲ ರಾಜ್ಯ ಸರ್ಕಾರದಿಂದ ಆಗುವಂಥದ್ದಲ್ಲ ಎಂಬ ಅರಿವಿದೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೂ ಅಹವಾಲು ಸಲ್ಲಿಸುತ್ತಿದ್ದೇವೆ. ಬಂಧನಗಳಾಗದಿದ್ದರೆ ನಾಳೆ ಪ್ರತಿಭಟನೆ ತೀವ್ರಗೊಳ್ಳಲಿದೆ.

ಇವಿಷ್ಟು ವಿನಯ್ ಬಿದರೆ ಮಾಧ್ಯಮಗಳೆದುರು ಹಂಚಿಕೊಂಡಿರುವ ಮಾಹಿತಿ.

Students of ABVP stage protest and are arrested by Police during

ಪೊಲೀಸರು ಹೇಳುವುದೇನು?

ದೇಶವಿರೋಧಿ ಘೋಷಣೆ ಕೂಗಿರುವ ವಿದ್ಯಾರ್ಥಿಗಳನ್ನು ಎಬಿವಿಪಿ ದೂರುದಾರರು ನೀಡಿರುವ ವಿಡಿಯೋ ಮೂಲಕ ಗುರುತಿಸಿದ್ದೇವೆ, ದೂರೂ ದಾಖಲಾಗಿದೆ. ಸಂಘಟಕರ್ಯಾರೂ ಇದರಲ್ಲಿ ಭಾಗಿಯಾಗಿಲ್ಲ. ಈ ಒಳಾಂಗಣ ಸಭೆಗೆ ಪೊಲೀಸ್ ಅನುಮತಿ ಬೇಕಿರಲಿಲ್ಲ. ಆದರೂ ಸಂಘಟಕರು ಅನುಮತಿ ಕೋರಿದ್ದರಿಂದ ಅದನ್ನು ಒಪ್ಪಿ, ಸಭೆಗೆ ಪೊಲೀಸರನ್ನೂ ಕಳುಹಿಸಿದ್ದೆವು. ಈ ಕಾರ್ಯಕ್ರಮದ ರೂಪುರೇಷೆ ಭಾರತ ವಿರೋಧಿಯಾಗಿರಲಿಲ್ಲ. ಆದರೆ ಕಾರ್ಯಕ್ರಮದ ಮಧ್ಯೆ ಸೇನೆ ವಿರುದ್ಧ ಘೋಷಣೆ ಹಾಗೂ ಕಾಶ್ಮೀರದ ಸ್ವಾತಂತ್ರ್ಯ ಘೋಷಣೆಗಳನ್ನು ಸಭಿಕರಲ್ಲಿ ಕೆಲವರು ಕೂಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ.

ಹೊಣೆಗಾರಿಕೆ ಒಲ್ಲದ ಆಮ್ನೆಸ್ಟಿ

ನಮ್ಮ ಸಂಘಟನೆಯವರಾರೂ ಆಜಾದಿ ಘೋಷಣೆಗಳನ್ನು, ಸೇನೆಯ ವಿರುದ್ಧ ಘೋಷಣೆಗಳನ್ನು ಕೂಗಿಲ್ಲವಾದ್ದರಿಂದ ತಾನು ಇದಕ್ಕೆ ಹೊಣೆಯಾಗಲಾರೆ ಎಂಬುದು ಆಮ್ನೆಸ್ಟಿ ಮಾನವ ಹಕ್ಕು ಸಂಘಟನೆಯ ನಿಲುವು. ಹಾಗಾದರೆ ಕಾಶ್ಮೀರದ ಬಗ್ಗೆ ಆಮ್ನೆಸ್ಟಿ ನಿಲುವೇನು ಎಂಬ ಪ್ರಶ್ನೆಗೆ ‘ಯಾವ ನಿಲುವೂ ಇಲ್ಲ’ ಎಂಬ ಉತ್ತರ! ಕಾಶ್ಮೀರದ ಮುಸ್ಲಿಂ ಕುಟುಂಬಗಳಿಗೆ ಸೇನೆಯ ಕಡೆಯಿಂದಾದ ತೊಂದರೆಗಳನ್ನು ಹೇಳಿಕೊಳ್ಳುವುದಕ್ಕೆ ವೇದಿಕೆ ಒದಗಿಸಲಾಗಿತ್ತು ಅಷ್ಟೆ ಎಂಬುದು ಆಮ್ನೆಸ್ಟಿ ಸಮರ್ಥನೆ.

‘ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಎಬಿವಿಪಿಯ ಗಲಾಟೆಯನ್ನು ನಿಯಂತ್ರಿಸುವಾಗ ಚಿಕ್ಕಪುಟ್ಟ ತಳ್ಳಾಟಗಳಾಗಿರಬಹುದು. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ’ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರರ ನಿಲುವು.

Leave a Reply