ಪಾಕ್ ‘ಆಡಳಿತದ’ ಕಾಶ್ಮೀರ ಎನ್ನುತ್ತಿದ್ದ ಚೀನಾ ಮಾಧ್ಯಮ ‘ಆಕ್ರಮಿತ’ ಎಂದು ಸ್ವರ ಬದಲಿಸಿದೆ, ಭಾರತದ ಬಿಗು ನಿಲುವು ಚೀನಾಕ್ಕೂ ಚಿಂತೆ ಹೆಚ್ಚಿಸಿದೆ!

ಡಿಜಿಟಲ್ ಕನ್ನಡ ಟೀಮ್:

ಮೋದಿ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರದ ವಿಷಯದಲ್ಲಿ ದೇಶದ ನಿಲುವನ್ನು ಬಿಗಿಗೊಳಿಸುತ್ತಿದ್ದಂತೆ ಯಾರಿಗೆಲ್ಲ ಬಿಸಿ ತಾಗುತ್ತಿದೆ ನೋಡಿ. ಚೀನಾದ ‘ಗ್ಲೋಬಲ್ ಟೈಮ್ಸ್’ ತನ್ನ ಲೇಖನದಲ್ಲಿ ಈ ಕುರಿತು ಪ್ರತಿಕ್ರಿಯಿಸುತ್ತ, ಪಾಕ್ ಆಕ್ರಮಿತ ಕಾಶ್ಮೀರದ ವಿಷಯದಲ್ಲಿ ಚೀನಾವು ಪಾಕಿಸ್ತಾನ ಹಾಗೂ ಭಾರತ ಯಾರ ಪರವೂ ನಿಲ್ಲುವುದಿಲ್ಲ ಎಂದಿದೆ. ಚೀನಾದಲ್ಲಿ ಮಾಧ್ಯಮವು ಸರ್ಕಾರಿ ನಿಯಂತ್ರಣದಲ್ಲಿರುವುದರಿಂದ ಈ ಅಭಿಪ್ರಾಯಕ್ಕೆ ಭಾರಿ ತೂಕವಿದೆ.

ಭಾರತ ಬಿಗುವಾಗಿದೆ ಎಂದಾಕ್ಷಣ ಚೀನಾವೇನೂ ತಗ್ಗುವುದಿಲ್ಲ, ಅದು ಅದರ ಜಾಯಮಾನವೂ ಅಲ್ಲ. ಆದರೆ ಬಲಾಢ್ಯ ಚೀನಾ ತನ್ನ ನಿಲುವಲ್ಲಿ ಸಣ್ಣಮಟ್ಟಿಗೆ ರಾಜಿಗಂತೂ ಸಿದ್ಧವಾಗಿದೆ ಎಂಬುದರ ಸೂಚನೆ ಇದೆ. ಏಕೆಂದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಚೀನಾ ಯಾವತ್ತೂ ಪಾಕ್ ಆಡಳಿತದ ಕಾಶ್ಮೀರ ಎಂದೇ ಸಂಬೋಧಿಸಿಕೊಂಡುಬಂದಿತ್ತು. ಅದನ್ನು ವಿವಾದಿತ ಪ್ರದೇಶ ಅಂತ ಒಪ್ಪಿಕೊಂಡಿತ್ತಾದರೂ ಅಲ್ಲಿ ಪಾಕ್ ಆಡಳಿತಕ್ಕೆ ಮಾನ್ಯತೆ ನೀಡಿತ್ತು. ಆದರೆ, ಇದೇ ಮೊದಲ ಬಾರಿಗೆ ತನ್ನ ಅಭಿಪ್ರಾಯ ಲೇಖನದಲ್ಲಿ ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದೇ ಬಳಸಿರುವುದು ಕುತೂಹಲಕಾರಿಯಾಗಿದೆ. ಇದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಕೆಲಭಾಗಗಳನ್ನು ಅದಾಗಲೇ ಅಕ್ರಮವಾಗಿ ಪಡೆದಿರುವ ಚೀನಾ, ತಾನು ಈ ವಿಷಯದಲ್ಲಿ ಪಾಕಿಸ್ತಾನದ ಪರವೇನೂ ನಿಲ್ಲಲಾರೆ ಎಂಬ ಮಾರ್ಗ ಅನುಸರಿಸುತ್ತಿರುವುದೂ ಕುತೂಹಲಕಾರಿಯೇ.

ಪಾಕಿಸ್ತಾನದೊಂದಿಗೆ ಆರ್ಥಿಕ ಕಾರಿಡಾರ್ ಯೋಜಿಸುವಾಗ, ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲೇ ಹಾದುಹೋಗುತ್ತಿದ್ದರೂ ಭಾರತದ ಅಭಿಪ್ರಾಯವನ್ನೇನೂ ಚೀನಾ ಕೇಳಿರಲಿಲ್ಲ.  ಈಗಲೂ ಸಹ ಈ ಅಭಿಪ್ರಾಯ ಲೇಖನವು, ‘ಭಾರತ ಪ್ರತಿಭಟಿಸುತ್ತಿದೆಯೆಂದು ಚೀನಾವೇನೂ ತನ್ನ ಆರ್ಥಿಕ ಕಾರಿಡಾರ್ ಯೋಜನೆ ಬಿಡುವುದಿಲ್ಲ’ ಎಂದೇ ಹೇಳಿದ್ದರೂ, ಭಾರತದೊಂದಿಗೆ ಸಂಧಾನದ ಧ್ವನಿಯಲ್ಲಿ ಮಾತನಾಡುತ್ತಿದೆ. ‘ಈ ಕಾರಿಡಾರಿನಿಂದ ಕಾಶ್ಮೀರ ಸೇರಿದಂತೆ ಸ್ಥಳೀಯ ಜನಸಂಖ್ಯೆಗೆ ಭಾರಿ ಅನುಕೂಲ ಆಗಲಿದೆ. ಈ ಯೋಜನೆಯೊಳಗೆ ಭಾರತಕ್ಕೂ ಪ್ರವೇಶವಿದೆ. ಅದೂ ಸಹ ಮಧ್ಯ ಏಷ್ಯದಲ್ಲಿ ತನ್ನ ವ್ಯಾಪಾರ ವಿಸ್ತರಿಸಿಕೊಳ್ಳಬಹುದು. ಈ ಕಾರಿಡಾರಿನಿಂದ ಪಾಕಿಸ್ತಾನ, ಚೀನಾ, ಭಾರತ ಹಾಗೂ ಜಗತ್ತಿಗೆಲ್ಲ ಒಳಿತಾಗುತ್ತದೆ’ ಎಂದು ಲೇಖನ ಪ್ರತಿಪಾದಿಸಿದೆ.

ಚೀನಾ ಮೆತ್ತಗಾಗಿದೆ ಎಂದಾಗಲೀ, ಮಣಿಯುತ್ತದೆ ಎಂದಾಗಲೀ ಅರ್ಥೈಸಲಾಗದಾದರೂ, ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಭಾರತ ದೃಢವಾಗಿ ಮಾತಾಡುತ್ತಿರುವುದು ಅದಕ್ಕೂ ಚಿಂತೆ ಹಚ್ಚಿಸಿದೆ ಎಂಬುದಂತೂ ಸತ್ಯ.

Leave a Reply