ಖುರ್ಷಿದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್, ಪ್ರಧಾನಿಯ ಬಲೂಚ್-ಪಿಒಕೆ ಹೇಳಿಕೆಗೆ ಬೆಂಬಲ

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಬಲೂಚಿಸ್ತಾನದಲ್ಲಿ ಆಗುತ್ತಿರುವ ಮಾನವ ಉಲ್ಲಂಘನೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಮಟ್ಟದ ಚರ್ಚಾ ವೇದಿಕೆಯಲ್ಲಿ ಇಟ್ಟಿದ್ದಾರೆ. ಮೋದಿ ಅವರ ಈ ಕ್ರಮಕ್ಕೆ ಬಲೂಚಿಸ್ತಾನ ಸೇರಿ ವಿವಿಧೆಡೆಗಳಿಂದ ಪ್ರಶಂಸೆಗಳು ಬಂದಿದ್ದು, ಈಗ ಮೋದಿ ಅವರ ವಾದಕ್ಕೆ ಕಾಂಗ್ರೆಸ್ ಸಹ ತಲೆದೂಗಿದೆ.

ನಿನ್ನೆ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮಾತ್ರ ಮೂಗು ಮುರಿದಿದ್ದರು. ‘ಪಿಒಕೆಯಲ್ಲಿನ ವಿಷಯ ಪರವಾಗಿಲ್ಲ. ಆದ್ರೆ, ಬಲೂಚಿಸ್ತಾನ ವಿಷಯ ನಮಗೇಕೆ ಬೇಕು? ಅದು ಪಾಕಿಸ್ತಾನ ಆಂತರಿಕ ವಿಷಯವಲ್ಲವೇ’ ಎಂದಿದ್ದರು. ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಗೆ ಭಿನ್ನವಾಗಿ ಕಾಂಗ್ರೆಸ್ ಈಗ ಮೋದಿ ಅವರ ವಾದಕ್ಕೆ ಬದ್ಧವಾಗಿದೆ.

ಕಾಂಗ್ರೆಸ್ ಪಕ್ಷ ಸೋಮವಾರ ಸಂಜೆ ಬಿಡುಗಡೆ ಮಾಡಿದ ತಮ್ಮ ಹೇಳಿಕೆಯಲ್ಲಿ ಈ ವಿಷಯದ ಪ್ರಸ್ತಾಪ ಅಗತ್ಯವಿದೆ ಎಂದಿದ್ದೆ. ಈ ಬಗ್ಗೆ ಕಾಂಗ್ರೆಸ್ ಪರವಾಗಿ ರಣ್ದೀಪ್ ಸುರ್ಜೇವಾಲ ಅವರು ಹೇಳಿರೋದಿಷ್ಟು:

‘ಸಲ್ಮಾನ್ ಖುರ್ಷಿದ್ ಅವರ ಮಾತನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರದು ವೈಯಕ್ತಿಕ ಅಭಿಪ್ರಾಯ ಅದನ್ನು ನಾವು ವಿರೋಧಿಸುವುದಿಲ್ಲ. ಬಲೂಚಿಸ್ತಾನದಲ್ಲಿ ತೀವ್ರ ಮಟ್ಟದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗ್ತಿದೆ. ಅಲ್ಲದೆ ಪಾಕಿಸ್ತಾನ ಸೇನೆ ಮತ್ತು ಏಜೆನ್ಸಿಗಳಿಂದ ಪ್ರಜಾಪ್ರಭುತ್ವವನ್ನು ನಾಶ ಮಾಡಲಾಗುತ್ತಿದೆ. ಅದೇ ರೀತಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದ್ದು ಅಲ್ಲಿಯೂ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಇದರ ಬಗ್ಗೆ ಭಾರತ ಚರ್ಚೆ ಮಾಡುತ್ತಿರುವುದು ಸರಿ. ಈ ವಿಷಯಗಳನ್ನು ಉಭಯ ದೇಶಗಳ ಮಾತುಕತೆ ಸಂದರ್ಭದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವ ಅಗತ್ಯವಿದೆ.

ಈ ವಿಚಾರದಲ್ಲಿ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ. ಇದೇ ವೇಳೆ ಈ ವಿಷಯಗಳನ್ನು ಪಾಕಿಸ್ತಾನದೊಂದಿಗೆ ಚರ್ಚಿಸಲು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲು ಯಾವ ಕ್ರಮ ಕೈಗೊಳ್ಳಲಿದೆ? ಎಂಬದನ್ನು ಕೇಳುತ್ತೇವೆ.’

Leave a Reply