ಹೊಸ ಕ್ಯಾತೆ ತೆಗೀತು ತಮಿಳುನಾಡು, ಮಾನವ ಹಕ್ಕಿಗೆ ಮಿಡಿಯುವವರೇ ಈ ಚಿತ್ರ ನೋಡಿ…, ಈಶ್ವರಪ್ಪ ‘ಹಿಂದ’ ರಾಗಕ್ಕೆ ಯಡಿಯೂರಪ್ಪ ತಡೆ, ಗರ್ಭಿಣಿಯರ ಮೇಲಿನ ಲಾಠಿ ಪ್ರಯೋಗಕ್ಕೆ ಹೈಕೋರ್ಟ್ ತರಾಟೆ, ಸಾರ್ಕ್ ಶೃಂಗ ಸಭೆಗೆ ಜೇಟ್ಲಿ ಗೈರು

‘ಬ್ರೋಕನ್ ಫ್ಯಾಮಿಲಿ’ ಹೆಸರಲ್ಲಿ ದ್ವೇಷ ಹರಡುವವರು ಗಮನಿಸಬೇಕಾದ ಚಿತ್ರವಿದು. ಸ್ವಾತಂತ್ರ್ಯೋತ್ಸವದ ದಿನ ಶ್ರೀನಗರದಲ್ಲಿ ಉಗ್ರರನ್ನು ಎದುರಿಸುತ್ತ ಪ್ರಾಣ ತೆತ್ತವರು ಸಿ ಆರ್ ಪಿ ಎಫ್ ಕಮಾಂಡಂಟ್ ಪ್ರಮೋದ್ ಕುಮಾರ್. ಸಿ ಆರ್ ಪಿಎಫ್ನ 49ನೇ ಬಟಾಲಿಯನ್ ಉಸ್ತುವಾರಿಯಲ್ಲಿದ್ದ ಪ್ರಮೋದರು ಅಂದು ಧ್ವಜಾರೋಹಣ ನೆರವೇರಿಸಿದ ನಂತರ ಉಗ್ರರನ್ನು ತಡೆಯುವ ಕಾರ್ಯಾಚರಣೆಗೆ ತೆರಳಿದರು. ಇಬ್ಬರು ಉಗ್ರರನ್ನು ಸಂಹರಿಸಿ, ಕತ್ತಿಗೆ ಗುಂಡೇಟು ಬಿದ್ದು ಹುತಾತ್ಮರಾದರು. ಅವರ ಅಂತಿಮಕ್ರಿಯೆ ಸಂದರ್ಭದಲ್ಲಿ ಆರು ವರ್ಷದ ಮಗಳು ಅಂತಿಮ ನಮನ ಸಲ್ಲಿಸುತ್ತಿದ್ದಾಳೆ. ಭಾರತ ಮಾತಾಡಬೇಕಿರುವುದು ಇಂಥ ಧೀರ ಕುಟುಂಬಗಳ ಬಗ್ಗೆ…

crpf pramod

ಡಿಜಿಟಲ್ ಕನ್ನಡ ಟೀಮ್:

ತ.ನಾಡು ರೈತರ ನಷ್ಟಕ್ಕೆ ಕರ್ನಾಟಕ ಪರಿಹಾರ ನೀಡ್ಬೇಕಂತೆ

ತಮಿಳುನಾಡಿನ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಉಂಟಾಗಿರುವ ಬೆಳೆ ನಷ್ಟಕ್ಕೆ ಕರ್ನಾಟಕ ಸರ್ಕಾರ ಪರಿಹಾರ ಕಟ್ಟಿಕೊಡಬೇಕೆಂದು ಜಯಲಲಿತಾ ಸರ್ಕಾರ ಸುಪ್ರಿಂ ಕೋರ್ಟ್ ಮೊರೆ ಹೋಗಿದೆ.

ಕರ್ನಾಟಕ 2013 ರಲ್ಲಿ ಕಾವೇರಿ ನೀರು ಬಿಡದಿದ್ದರಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ತಮಿಳುನಾಡು ಸರ್ಕಾರದ ಮನವಿ. ನ್ಯಾಯಮೂರ್ತಿ ಗೋಪಾಲಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.

‘ಕರ್ನಾಟಕವು 2013ರಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯಲು ಬಿಟ್ಟಿಲ್ಲ. ಇದರಿಂದ ಕುರುವೆ ಬೆಳೆ ಸೇರಿದಂತೆ ಇತರ ಫಸಲಿಗೆ ಅಪಾರ ನಷ್ಟವಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ  ನಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಉಂಟಾಗಿರುವ ನಷ್ಟವನ್ನು ಕರ್ನಾಟಕ ಸರ್ಕಾರ ಭರಿಸಬೇಕು’ ಎಂಬುದು ತಮಿಳುನಾಡಿನ ವಾದ.

ಮಳೆ ಅಭಾವದ ಹಿನ್ನೆಲೆಯಲ್ಲಿ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಕಾರಣ ಕರ್ನಾಟಕವು ತಮಿಳುನಾಡಿಗೆ ನೀರು ಬಿಡಲು ನಿರಾಕರಿಸಿತ್ತು. ಈ ಬಗ್ಗೆ ವಿಭಾಗೀಯ ಪೀಠವು ಉಭಯ ರಾಜ್ಯಗಳ ವಾದ-ಪ್ರತಿವಾದಗಳನ್ನು ಆಲಿಸಿದ್ದು ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿದೆ.

ಈಶ್ವರಪ್ಪ ಅವರ ಹಿಂದ ಸಮಾವೇಶಕ್ಕೆ ಒಪ್ಪಿಗೆ ಇಲ್ಲ… ಪದಾಧಿಕಾರಿ ಪಟ್ಟಿ ಬದಲಿಸಲ್ಲ…

ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ರವರ `ಹಿಂದ’ ಸಮಾವೇಶಕ್ಕೆ ಒಪ್ಪಿಗೆ ಇಲ್ಲ… ಈಗ ಸಿದ್ಧವಾಗಿರೋ ಪದಾಧಿಕಾರಿಗಳ ಪಟ್ಟಿ ಬದಲಿಸಲು ಸಾಧ್ಯವಿಲ್ಲ… ತಿರಂಗಾ ಯಾತ್ರೆ ಯಶಸ್ವಿಗೊಳಿಸಲು ಪಣ… ಇವು ಮಂಗಳವಾರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು.

ಬಿಜೆಪಿಯಲ್ಲಿದ್ದ ಅಸಮಾಧಾನ ಈ ಸಭೆಯಲ್ಲಿ ಸ್ಫೋಟಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಆ ರೀತಿಯ ಯಾವುದೇ ಬೆಳವಣಿಗೆಗಳು ನಡೆಯಲಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರೋಧಿ ಬಣ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಯಾವುದೇ ಸಭೆ, ಸಮಾವೇಶ ನಡೆಸುವುದಾದರೆ ಪಕ್ಷದಲ್ಲಿರುವ ವಿವಿಧ ಘಟಕಗಳ ಮೂಲಕವೇ ನಡೆಸಬೇಕು. ವೈಯಕ್ತಿಕವಾಗಿ ಯಾವುದೇ ಸಭೆ, ಸಮಾವೇಶ ನಡೆಸುವಂತಿಲ್ಲ ಎನ್ನುವ ಮೂಲಕ ಈಶ್ವರಪ್ಪನವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಲಾಯ್ತು. ಈಗಾಗಲೇ ಸಿದ್ಧವಾಗಿರುವ ಪದಾಧಿಕಾರಿಗಳ ಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ, ಈ ಪಟ್ಟಿಯಲ್ಲಿ ಸ್ಥಾನ ಸಿಗದವರಿಗೆ ಮುಂದಿನ ದಿನಗಳಲ್ಲಿ ಬೇರೆ ಸ್ಥಾನಮಾನ ನೀಡುವುದಾಗಿ ಯಡಿಯೂರಪ್ಪನವರು ಭರವಸೆ ನೀಡಿದ್ರು. ಇದೇ ವೇಳೆ ಪದಾಧಿಕಾರಿಗಳ ನೇಮಕದ ಬಗ್ಗೆ ತಮಗಿರುವ ಅಸಮಾಧಾನ ಹೊಂದಿದ್ದ ನಾಯಕರು ಮೌನಕ್ಕೆ ಶರಣಾದರು.

ಸಭೆಯಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಆಗಿರುವ ಪ್ರಗತಿಯ ಬಗ್ಗೆ ಯಡಿಯೂರಪ್ಪನವರು ಮಾಹಿತಿ ನೀಡಿದರು. ‘ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ತಿರಂಗಾ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಡೆಸುವ ಬಗ್ಗೆ ಪಕ್ಷದ ಕಾರ್ಯಕಾರಿಣಿಯನ್ನು ಬೆಳಗಾವಿಯಲ್ಲಿ ನಡೆಸುವ ಕುರಿತು ಹಾಗೂ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ತಿಂಗಳ 21 ರಂದು ಮಂಗಳೂರಿಗೆ ಆಗಮಿಸಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯ್ತು. ಪಕ್ಷದ ನೂತನ ಪದಾಧಿಕಾರಿಗಳಿಗೆ ಈ ತಿಂಗಳ 21, 22 ಹಾಗೂ 23 ರಂದು ಪ್ರತಿಕ್ಷಣಾ ಶಿಬಿರವನ್ನು ನಗರದಲ್ಲಿ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು’ ಎಂದರು.

ಸರ್ಕಾರಕ್ಕೆ ಹೈಕೋರ್ಟ್ ಕ್ಲಾಸ್…

ಮಹದಾಯಿ ನದಿ ನೀರಿಗಾಗಿ ನಡೆದ ಹೋರಾಟ ಸಂದರ್ಭದಲ್ಲಿ ಗರ್ಭಿಣಿಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಬಗ್ಗೆ ರಾಜ್ಯ ಹೈಕೋರ್ಟ್ ಕಿಡಿಕಾರಿದೆ. ‘ಗರ್ಭಿಣಿಯರು ನಡುಬೀದಿಗೆ ಬಂದು ಹೋರಾಟ ಮಾಡಲು ಸಾಧ್ಯವೇ? ಅವರ ಮೇಲೆ ಹಲ್ಲೆ ನಡೆಸಲು ಹೇಗಾದರೂ ನಿಮಗೆ ಮನಸ್ಸು ಬಂತು’ ಎಂದು ಹೋಕೋರ್ಟ್ ಸರ್ಕಾರಕ್ಕೆ ಪ್ರಶ್ನಿಸಿತು.

ಮಹದಾಯಿ ನದಿ ನೀರಿಗಾಗಿ ಹೋರಾಟ ನಡೆದ ಸಂದರ್ಭದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಾಲಯ ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ಅರ್ಜಿಯನ್ನು ದಾಖಲಿಸಿಕೊಂಡಿದೆ. ಸರ್ಕಾರದ ಪರವಾಗಿ ವಾದಿಸಿದ ಎಎಜಿ ಶಿವಣ್ಣ ‘ಗಲಭೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಈಗಾಗಲೇ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದೆ. ಹಲವರಿಗೆ ಚಿಕಿತ್ಸೆಯನ್ನೂ ನೀಡಿದೆ’ ಎಂಬ ಸಮರ್ಥನೆಗೆ ಮುಂದಾದರೂ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು. ಗರ್ಭಿಣಿಯರ ಮೇಲೆ ಹಲ್ಲೆ ಮಾಡಿ ನಂತರ ಅವರಿಗೆ ಬಾಯಿ ಮಾತಿನಲ್ಲಿ ಸಾಂತ್ವಾನ ಹೇಳಿದರೆ, ಅವರ ನೋವು ಬಗೆಹರಿಯುತ್ತದೆಯೇ? ಅವರಿಗೆ ಯಾವ ರೀತಿಯ ಪರಿಹಾರ ನೀಡಿದ್ದೀರಿ ಎಂದು ಪ್ರಶ್ನಿಸಿತು ಕೋರ್ಟ್.

ಸಾರ್ಕ್ ಶೃಂಗ ಸಭೆಗೆ ಜೇಟ್ಲಿ ಗೈರು

ಪಾಕಿಸ್ತಾನದಲ್ಲಿ ಮುಂದಿನ ವಾರ ನಡೆಯಲಿರುವ ಸಾರ್ಕ್ ಶೃಂಗ ಸಂಭೆಗೆ ತೆರಳದಿರಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಭೆಗೆ ಹಾಜರಾಗುವ ಬಗ್ಗೆ ಸೂಚನೆ ಬಂದರೆ ಮಾತ್ರ ತೆರಳುವ ಸಾಧ್ಯತೆಗಳಿವೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ ಅರುಣ್ ಜೇಟ್ಲಿ ಬದಲಿಗೆ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಶಕ್ತಿದಾಸ್ ಕಾಂತ್ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇತ್ತೀಚೆಗೆ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಭೆಗೆ ರಾಜನಾಥ್ ಸಿಂಗ್ ಅವರು ತೆರಳಿದ್ದಾಗ ಅಪಮಾನ ಮಾಡಿದ್ದರ ಹಿನ್ನೆಲೆಯಲ್ಲಿ ಜೇಟ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಪಾಕ್ ಪ್ರವಾಸ ಮಾಡುವುದಕ್ಕಿಂದ ಮಾಡದಿರುವುದೇ ಲೇಸು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕರ್ ವಾದಿಸಿದ್ದಾರೆ. ‘ಪಾಕಿಸ್ತಾನಕ್ಕೆ ಹೋಗೋದು ಒಂದೇ, ನರಕಕ್ಕೆ ಹೋಗೋದು ಒಂದೇ’ ಎನ್ನುವ ಮೂಲಕ ಪರಿಕರ್ ಕಿಡಿ ಕಾರಿದ್ದಾರೆ.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ (ನೈಸ್) ಯೋಜನೆಯಲ್ಲಿ ನಡೆದಿರುವ ಅಕ್ರಮದ ಕುರಿತ ಹೋರಾಟವನ್ನು ಕೈಬಿಟ್ಟಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಹೇಳಿರೋದಿಷ್ಟು:
    ‘ಬಗ್ಗೆ ಹೋರಾಟ ನಡೆಸಿದರೆ ಅಭಿವೃದ್ಧಿ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲಾಗುತ್ತದೆ. ನಡೆಸುತ್ತಿದ್ದ ಹೋರಾಟ ಕೈಬಿಟ್ಟಿದ್ದೇನೆ ಎಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಈ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡುವ ಚೆಂಡು ಸರ್ಕಾರದ ಬಳಿ ಇದೆ ಎಂದಿದ್ದಾರೆ. ಯೋಜನೆ ಅಕ್ರಮದ ಬಗ್ಗೆ ಯೋಜನೆಯ ಪರ ವಕೀಲರು ಹಾಗೂ ರಾಜ್ಯ ಸರ್ಕಾರದ ಪರ ವಕೀಲರು ಒಳಗೊಂಡ ಉನ್ನತಮಟ್ಟದ ಸಭೆ ನಡೆಸಿದ್ದು, ಸಭೆಯ ನಡವಳಿಕೆಗಳನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಮಾಹಿತಿ ನೀಡಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಉತ್ತರಿಸಬೇಕು. ಈಗ ಈ ಹೋರಾಟದಲ್ಲಿ ನನ್ನ ಪಾತ್ರ ಮುಗಿಯಿತು. ನಾನೀಗ ಹೋರಾಟದಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದಿನ ಕಾರ್ಯವೇನಿದ್ದರು ಸರ್ಕಾರಕ್ಕೆ ಬಿಟ್ಟದ್ದು’
  • ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಮತ್ತೆ ಭಾರತೀಯ ಭದ್ರತಾ ಪಡೆಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಪರಿಣಾಮ ಪರಿಸ್ಥಿತಿ ಮತ್ತೆ ಹದಗೆಟ್ಟಿದ್ದು, ಹಿಂಸಾಚಾರದಲ್ಲಿ ನಿರತರಾಗಿದ್ದ ನಾಲ್ವರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಘರ್ಷಣೆ ವೇಳೆ 31 ಮಂದಿ ಗಾಯಗೊಂಡಿದ್ದು, ಇದರೊಂದಿಗೆ ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಒಟ್ಟು 62 ಮಂದಿ ಬಲಿಯಾಗಿದ್ದಾರೆ. ಈ ಘಟನೆ ಪರಿಣಾಮ ಕಣಿವೆ ರಾಜ್ಯದಲ್ಲಿ ಕರ್ಫ್ಯೂ ಪರಿಸ್ಥಿತಿ ಮುಂದುವರಿದಿದೆ.
  • ರಿಯೋ ಒಲಿಂಪಿಕ್ಸ್ ನಲ್ಲಿ ಪದಕದ ಹೊರತಾಗಿಯೂ ಗಮನಾರ್ಹ ಪ್ರದರ್ಶನ ನೀಡಿದ ಜಿಮ್ನಾಸ್ಟರ್ ದೀಪಾ ಕರ್ಮಾಕರ್ ಹಾಗೂ ಅಥ್ಲೀಟ್ ಲಲಿತಾ ಬಬರ್ ಅವರನ್ನು ಟೀಂ ಇಂಡಿಯಾ ಮಾಜಿ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಶ್ಲಾಘಿಸಿದ್ದಾರೆ. ಅಲ್ಲದೆ ಇವರಿಗೆ ಸೂಕ್ತ ಗೌರವ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Leave a Reply