ಬಲೊಚ್ ವಿಷಯದಲ್ಲಿ ಪ್ರಧಾನಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ನ ಖುರ್ಶಿದ್, ಬಾಂಗ್ಲಾ ವಿಮೋಚನೆ ನಮಗೇಕೆ ಅಂತ ಇಂದಿರಾರನ್ನು ಕೇಳಿದ್ದರಾ?

ಜಮ್ಮು-ಕಾಶ್ಮೀರ ವಿಚಾರ ಸಮರ

rsz_jk_logo

-ಪ್ರವೇಶ-

author-chaitanyaಸ್ವಾತಂತ್ರ್ಯೋತ್ಸವದ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಪಾಕಿಸ್ತಾನದ ಮಾನವ ಹಕ್ಕು ಉಲ್ಲಂಘನೆಗಳನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಹೀಗೆ ಪ್ರಧಾನಿ ಮತ್ತೆ ಮತ್ತೆ ಇವೆರಡರ ಪ್ರಸ್ತಾಪ ಮಾಡುತ್ತಿರುವುದರಿಂದ ಏನಾಗಿದೆ ಎಂದರೆ ಇಡೀ ರಾಷ್ಟ್ರೀಯ ಚರ್ಚೆ ಕಾಶ್ಮೀರದಿಂದ ಹೊರಳಿ ಪಾಕ್ ಆಕ್ರಮಿತ ಕಾಶ್ಮೀರದ ಕಡೆ ಹೋಗಿದೆ. ಕೇವಲ ಕಾಶ್ಮೀರ ಪ್ರಶ್ನೆಯಾಗುತ್ತಿದ್ದಷ್ಟು ಹೊತ್ತೂ ಭಾರತಕ್ಕೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದರಲ್ಲೇ ಕಾಲ ವ್ಯಯವಾಗಿಬಿಡುತ್ತಿತ್ತು. ಈಗ ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನಗಳು ಪ್ರಧಾನಿ ಹೇಳಿಕೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಉತ್ತರಿಸುವ ಶ್ರಮ ಪಾಕಿಸ್ತಾನಕ್ಕೆ ವರ್ಗಾವಣೆಯಾಗಿದೆ.

ಈಗಲೂ ಭಾರತದ ಬುದ್ಧಿಜೀವಿ ವರ್ಗದಲ್ಲಿ ಆಕ್ಷೇಪದ ಧ್ವನಿಗಳು ಎದ್ದಿವೆ. ಪಾಕ್ ಆಕ್ರಮಿತ ಕಾಶ್ಮೀರದ ಪ್ರಸ್ತಾಪವೇನೋ ಸರಿ, ಆದರೆ ಬಲೊಚಿಸ್ತಾನದ ವಿಷಯ ನಮಗೇಕೆ? ನಮ್ಮಲ್ಲಿರುವ ಕೆಲ ಪ್ರದೇಶಗಳನ್ನೇ ಸಂಭಾಳಿಸಲಾಗುತ್ತಿಲ್ಲ… ಇತ್ಯಾದಿ ಕುಹಕಗಳು ಬರುತ್ತಿವೆ. ‘ಅಮೆರಿಕ, ಯುಕೆ ಸೇರಿದಂತೆ ಎಲ್ಲ ಕಡೆ ಮಾನವ ಹಕ್ಕುಗಳ ದಮನದ ವಿಷಯ ಇದೆ. ಬಲೊಚಿ ವಿಷಯ ಪ್ರಧಾನಿ ಎತ್ತಿದ್ದು ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಕೈಹಾಕಿ ನಮ್ಮ ನೈತಿಕ ನೆಲವನ್ನು ಕುಗ್ಗಿಸಿಕೊಂಡಂತೆ. ನಮ್ಮಲ್ಲೇ ಬೇಕಷ್ಟು ಸಮಸ್ಯೆಗಳಿವೆ’ ಅಂತೆಲ್ಲ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ವರಾತ ತೆಗೆದಿದ್ದಾರೆ.

ಭಾರತದ ಗುರಿ ಇರುವುದು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವನ್ನು ಹಿಂದೆ ಪಡೆಯುವುದು ಎಂಬುದು ಎಲ್ಲರಿಗೂ ಗೊತ್ತು. ಈ ನಿಟ್ಟಿನಲ್ಲಿ ಬಲೊಚಿಸ್ತಾನದ ಪ್ರಸ್ತಾಪ ಪಾಕಿಸ್ತಾನದ ಮೇಲೆ ಒತ್ತಡ ಸೃಷ್ಟಿಸುವುದಕ್ಕಿರುವ ಆಯುಧ. ಅದನ್ನು ಪ್ರಯೋಗಿಸಬಾರದೆಂದರೆ ಹೇಗೆ? ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಬೇಕೆನ್ನುವ ಭಾರತ, ತನ್ನದೇ ಖಂಡದ ಬಲೊಚಿಸ್ತಾನದ ಮಾನವ ಹಕ್ಕು ದಮನದ ಬಗ್ಗೆ ಮಾತಾಡುವ ಧೈರ್ಯ ತೋರದಿದ್ದರೆ ಹೇಗೆ?

ಈ ಬಗೆಯ ಹೋಲಿಕೆಗಳೇ ತಪ್ಪು. ನಮ್ಮಲ್ಲಿರುವ ಬಡತನ ಸಮಸ್ಯೆ ಪೂರ್ತಿ ಪರಿಹಾರವಾಗದ ಹೊರತು ಬಾಹ್ಯಾಕಾಶ ಸಂಶೋಧನೆಗಳಿಗೆ ಹಣವನ್ನೇ ವ್ಯಯಿಸುವುದಿಲ್ಲ ಎಂದು ಸರ್ಕಾರಗಳು ‘ಬುದ್ಧಿಜೀವಿ ಯೋಚನಾ ಮಾದರಿ’ ಅನುಸರಿಸಿದ್ದರೆ ನಾವು ಏನೆಲ್ಲ ಕಳೆದುಕೊಂಡಿರುತ್ತಿದ್ದೆವು ಅಂತ ಯೋಚಿಸಿದರೆ ಸಾಕು. ಈಶಾನ್ಯ ರಾಜ್ಯದಲ್ಲಿ ಸಮಸ್ಯೆಗಳನ್ನು ಹೊಂದಿರುವುದಕ್ಕೆ ಸರ್ಕಾರ ಅದರದ್ದೇ ಅಭಿವೃದ್ಧಿ ಮಾರ್ಗದಲ್ಲಿ ಉತ್ತರಗಳನ್ನು ಕಂಡುಕೊಳ್ಳುತ್ತಿದೆ, ಯಶಸ್ಸೂ ಸಿಗಲಿದೆ. ಹಾಗಂತ ಇಂಥ ಎಲ್ಲ ಸಮಸ್ಯೆಗಳೂ ಮುಗಿಯುವವರೆಗೆ ಪಾಕ್ ಆಕ್ರಮಿತ ಕಾಶ್ಮೀರದ ಕುರಿತೋ, ಬಲೊಚಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆಯೋ ಮಾತಾಡುವುದಿಲ್ಲ ಎಂದರೆ ಅದು ಟಿವಿ ಸ್ಟುಡಿಯೋಗಳ ವಾತಾನುಕೂಲ ವ್ಯವಸ್ಥೆಯಲ್ಲಿ ಕುಳಿತ ಕೆಲವರ ಮೂರ್ಖತನದ ಮಾತಷ್ಟೆ.

ಇದನ್ನು ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ತಮ್ಮ ಉಪನ್ಯಾಸವೊಂದರಲ್ಲಿ ಚೆನ್ನಾಗಿ ಅರ್ಥಮಾಡಿಸುತ್ತಾರೆ. ‘ಕೇವಲ ರಕ್ಷಣಾತ್ಮಕ ಹಂತದಲ್ಲಿದ್ದರೆ ಆದ ದಾಳಿ ತಡೆಯಬಹುದಾಗಲೀ ಮತ್ತೆ ನಡೆಯದಿರುವಂತೆ ಮಾಡಲಾಗುವುದಿಲ್ಲ. ಈ ವ್ಯವಸ್ಥೆಯಲ್ಲಿ ಎಷ್ಟೇ ಎಚ್ಚರದಿಂದಿದ್ದರೂ ಎದುರಿನವ ನೂರು ಕಲ್ಲು ತೂರಿದರೆ ತೊಂಬತ್ತೊಂಬತ್ತನ್ನು ತಡೆಯಬಹುದಷ್ಟೆ. ಅಷ್ಟು ತಡೆಯುವಾಗಲೂ ಸಾಕಷ್ಟು ಗಾಯವಾಗಿರುತ್ತದೆ. ಇದರ ಬದಲು ಸಮಸ್ಯೆ ಎಲ್ಲಿದೆಯೋ ಆ ಮೂಲಕ್ಕೆ ನಾವೇ ದಾಳಿ ಎಸಗುವುದು ಎರಡನೇ ಹಂತದ ಕಾರ್ಯತಂತ್ರ. ವೈರಿಯನ್ನು ಅಂತಾರಾಷ್ಟ್ರೀಯ ಸ್ತರದಲ್ಲಿ ಏಕಾಂಗಿಯಾಗಿಸುವುದು, ಅದರ ಆಂತರಿಕ ದೌರ್ಬಲ್ಯಗಳನ್ನು ಬಳಸಿಕೊಳ್ಳುವುದು ಮುಂತಾಗಿ ಹಲವು ಮಾರ್ಗಗಳು ಇಲ್ಲಿರುತ್ತವೆ. ಇನ್ನೊಂದು ಮುಂಬೈ ದಾಳಿ ನಡೆದಿದ್ದೇ ಆದರೆ ಬಲೊಚಿಸ್ತಾನವನ್ನು ನೀವು ಕಳೆದುಕೊಳ್ಳುತ್ತೀರಿ ಅಂತ ಪಾಕಿಸ್ತಾನಕ್ಕೆ ಮನದಟ್ಟು ಮಾಡಿಕೊಡಬೇಕಿದೆ..’

ಬಹುಶಃ ಇದನ್ನು ಹೇಳಿ ವರ್ಷ ಕಳೆದಿರಬಹುದು… ಮೋದಿ ಸರ್ಕಾರ ಖಚಿತವಾಗಿ ಇದೇ ಹಾದಿಯಲ್ಲಿ ಹೆಜ್ಜೆಗಳನ್ನಿಟ್ಟಿದೆ. ಪಾಕಿಸ್ತಾನವನ್ನು ನಿರ್ಲಕ್ಷಿಸಿದರೂ, ರಮಿಸಿದರೂ ಅದು ನಮ್ಮತ್ತ ಕಲ್ಲು ತೂರುವುದನ್ನೇನೂ ನಿಲ್ಲಿಸುವುದಿಲ್ಲ. ಹೀಗಿರುವಾಗ ನಾವು ತಿರುಗಿ ಒಂದೆರಡು ಏಟು ಹಾಕದಿದ್ದರೆ ಹೇಗೆ? ಹೀಗೆ ಭಾರತ ಪ್ರತ್ಯುತ್ತರಕ್ಕೆ ನಿಂತಾಗಲೂ ‘ಅಯ್ಯೋ, ನಮ್ಮ ದೇಶದಲ್ಲೇ ಗಮನಿಸಬೇಕಾದ ಸಂಗತಿಗಳಿರುವಾಗ ಅವರ ಸುದ್ದಿ ಬೇಡಿತ್ತು ’ ಎನ್ನುವವರತ್ತ ಮರುಕದಿಂದ ನಗೆ ಚೆಲ್ಲಬೇಕಷ್ಟೆ.

ಪಾಕ್ ಆಕ್ರಮಿತ ಕಾಶ್ಮೀರವೂ ಬ್ರಿಟಿಷ್ ಭಾರತದ ಜಮ್ಮು-ಕಾಶ್ಮೀರ ಸಂಸ್ಥಾನಕ್ಕೆ ಸೇರಿತ್ತಾದ್ದರಿಂದ, ಜಮ್ಮು-ಕಾಶ್ಮೀರವು ಭಾರತದೊಂದಿಗಿನ ವಿಲೀನಕ್ಕೆ ಸಹಿ ಹಾಕಿರುವುದರಿಂದ ಕಾನೂನಾತ್ಮಕವಾಗಿ ಅದು ನಮ್ಮದೇ. 1994ರಲ್ಲೇ ಭಾರತದ ಸಂಸತ್ತು, ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ತೆಗೆದುಕೊಂಡಿತ್ತು. ಇಷ್ಟು ವರ್ಷಗಳ ಕಾಲ ಈ ಬಗ್ಗೆ ಧ್ವನಿ ಗಟ್ಟಿಯಾಗದೇ ಇದ್ದಿದ್ದಕ್ಕೆ ಹಲವು ಕಾರಣಗಳಿದ್ದವು. ಪ್ರಾರಂಭದಲ್ಲಿ ‘ನಮ್ಮನ್ನು ಸಂಭಾಳಿಸಿಕೊಳ್ಳುವ ತುರ್ತು’, ನಂತರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಇತ್ಯಾದಿ ಅಂಶಗಳು ನಮ್ಮ ದೃಢತೆಗೆ ಕುಂದಾಗಿದ್ದವು. ಮೋದಿ ಸರ್ಕಾರಕ್ಕೆ ಬಹುಮತದ ಬಲವಿದೆ ಎಂಬುದರ ಜತೆಗೆ ಇವತ್ತಿನ ಜಾಗತಿಕ ಪರಿಸ್ಥಿತಿಗಳು ಸಹ ಬೇರೆಯೇ ಆಗಿವೆ. ಉಗ್ರವಾದಿಗಳಿಂದ ಹಂತ ಹಂತವಾಗಿ ಒದೆಸಿಕೊಂಡ ಮೇಲೆ ಅಮೆರಿಕದ ಪಾಕ್ ಪ್ರೀತಿ ತಗ್ಗಿದೆ. ರಷ್ಯಾದ ಕೈಕುಲುಕಿದರೆ ಅಮೆರಿಕ ದೂರ ಹೋಗುತ್ತೆ ಎಂಬ ಸ್ಥಿತಿಯೂ ಈಗಿಲ್ಲ. ಚೀನಾ ಪ್ರಾಬಲ್ಯ ಎದುರಿಸಬೇಕಾದರೆ ಏಷ್ಯದಲ್ಲಿ ಭಾರತದ ಜತೆಗೇ ಹೆಚ್ಚು ಗುರುತಿಸಿಕೊಳ್ಳಬೇಕಾದದ್ದು ಅನಿವಾರ್ಯ ಎಂಬ ಜಾಗತಿಕ ರಾಜಕೀಯದ ಘಟ್ಟ ಇವತ್ತಿನದು. ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದಾಗಲು ಪ್ರಧಾನಿ ನರೇಂದ್ರ ಮೋದಿ ಈ ಅನಿವಾರ್ಯತೆಯನ್ನು ಮುಲಾಜಿಲ್ಲದೇ ಪ್ರತಿಪಾದಿಸಿದ್ದಾರೆ. ಭಾರತದ ಅರ್ಥವ್ಯವಸ್ಥೆ ಸಹ ಅವಕಾಶಗಳನ್ನು ಹೊದ್ದಿರುವಂಥದ್ದು ಎಂಬುದು ಜಗತ್ತಿಗೆ ಮನದಟ್ಟಾಗಿದೆ. ಹಿಂದೆಲ್ಲ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಜನ ದಿನವೂ ಸಾಯುತ್ತಿದ್ದರೆ, ‘ಅದೇನೋ ನಿಮ್ಮ ಆಂತರಿಕ ಸಮಸ್ಯೆ, ಸಾಯ್ರೀ ಮಕ್ಳಾ..’ ಎಂಬಂತೆ ನೋಡಿಕೊಂಡಿದ್ದ ಪಾಶ್ಚಾತ್ಯ ಜಗತ್ತಿಗೆ ಇಸ್ಲಾಂ ಉಗ್ರವಾದ ಬುಡಕ್ಕೇ ಬಿಸಿ ಇಟ್ಟಿರುವುದು ಅವರೆಲ್ಲರ ಉಡಾಫೆಯನ್ನು ಕರಗಿಸಿದೆ. ಹಾಗೂ ಈ ಉಗ್ರವಾದಕ್ಕೆ ಪಾಕಿಸ್ತಾನದ ನೆಲವೇ ನೀರೆರೆದಿದೆ ಎಂಬುದು ಸಂಶಯಕ್ಕೆಡೆಯಿಲ್ಲದಂತೆ ಸಾಬೀತಾಗುತ್ತಿದೆ. ಒಟ್ಟಾರೆ ಉಗ್ರವಾದದ ಅಧ್ಯಾಯದಲ್ಲಿ ಅಮೆರಿಕದ ಧೂರ್ತ ಕೊಡುಗೆ ಸಾಕಷ್ಟಿದೆಯಾದರೂ ಈಗ ಆ ಚರ್ಚೆ ನಮಗೇನೂ ಉಪಯೋಗವಿಲ್ಲದ್ದು. ಈ ಹಂತದಲ್ಲಿ ಅದಕ್ಕೆ ಭಾರತದ ಸಾಥ್ ಹೆಚ್ಚು ಅರ್ಥಪೂರ್ಣ ಎನಿಸಿದೆ. ಇದನ್ನು ಪರಸ್ಪರ ಲಾಭಕ್ಕೆ ಬಳಸಿಕೊಳ್ಳುವ ಛಾತಿಯನ್ನಷ್ಟೇ ನಾವು ತೋರಬೇಕಿದೆ.

ಹೀಗೆಲ್ಲ ವಾತಾವರಣ ನಮಗೆ ಪೂರಕವಾಗಿರಬೇಕಾದರೆ ಕೈಕಟ್ಟಿ ಕೂರುವುದುಂಟೇ? ಸುಮ್ಮನೇ ದೇಶವಾಸಿಗಳಲ್ಲಿ ಪುಳಕ ಹತ್ತಿಸಬೇಕು ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಈಗ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್- ಬಾಲ್ಟಿಸ್ತಾನ ಹಾಗೂ ಸ್ವತಂತ್ರವಾಗಲು ಹೋರಾಡುತ್ತಿರುವ ಬಲೂಚಿಸ್ತಾನಗಳ ಪ್ರಸ್ತಾಪ ಮಾಡುತ್ತಿದ್ದಾರೆಂದುಕೊಳ್ಳಬೇಡಿ. ಯಾವುದೇ ಸಮರ ಮೊದಲು ಪ್ರಾರಂಭವಾಗುವುದು ಬೌದ್ಧಿಕ ರಣಾಂಗಣದಲ್ಲಿ. ವಿಚಾರಗಳ ಸಮರ ಶುರುವಾದ ನಂತವಷ್ಟೇ, ಒಂದು ಸೈದ್ಧಾಂತಿಕ ಬಲ ರೂಪುಗೊಂಡ ಮೇಲಷ್ಟೇ ನೆಲದ ಮೇಲಿನ ಹೋರಾಟಕ್ಕೆ ಕಾವು ಸಿಗುತ್ತದೆ. ಅಂಥದೊಂದು ಭೂಮಿಕೆಯನ್ನು ಒಂದು ಹಂತಕ್ಕೆ ಹದ ಮಾಡಿಕೊಂಡ ನಂತರವಷ್ಟೆ ಪ್ರಧಾನಿ ಮೋದಿ, ಸರ್ವಪಕ್ಷಗಳ ಸಭೆಯಿಂದಾರಂಭಿಸಿ ಸ್ವಾತಂತ್ರ್ಯೋತ್ಸವದ ಭಾಷಣದವರೆಗೆ ಸತತವಾಗಿ ವಿಷಯ ಪ್ರಸ್ತಾಪ ಮಾಡುತ್ತಿರುವುದು. ಮುಂಬರುವ ದಿನಗಳಲ್ಲೂ ಈ ಪ್ರಸ್ತಾಪಗಳು ಸರ್ಕಾರದ ಕಡೆಯಿಂದ ಸಾರ್ವಜನಿಕವಾಗಿ ತೀವ್ರಗತಿಯಲ್ಲಿ ಆಗಲಿವೆ ಎಂಬುದರಲ್ಲೂ ಸಂಶಯವಿಲ್ಲ.

ಸರ್ಕಾರದಲ್ಲಿರುವವರು ತೀರ್ಮಾನ ಮಾಡಿದ ಕ್ಷಣಕ್ಕೆ ಯಾವುದನ್ನೂ ಸಾಕಾರಗೊಳಿಸುವುದು ಕಷ್ಟಸಾಧ್ಯ. ಎಡಪಂಥೀಯ ವಿಚಾರಧಾರೆ ನಮ್ಮನ್ನು ಜಮ್ಮು-ಕಾಶ್ಮೀರದ ವಿಚಾರದಲ್ಲಿ ರಕ್ಷಣಾತ್ಮಕ ಜಾಗದಲ್ಲಿ ನಿಲ್ಲಿಸಿಬಿಟ್ಟಿತ್ತು. ಆದರೀಗ ಕಣಿವೆಯಲ್ಲಿನ ಉಗ್ರ ಸಮ್ಮಾನ, ಕಾಶ್ಮೀರಿ ಪಂಡಿತರಿಗೆ ಈ ಹಿಂದೆ ಮತೀಯ ನೆಲೆಯಲ್ಲೇ ಆಗಿರುವ ಘೋರ ಅನ್ಯಾಯ ಇವೆಲ್ಲವನ್ನೂ ಸಾಮಾನ್ಯರೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ನವ ಮಾಧ್ಯಮಗಳು ಅಂಥ ವಿಚಾರಗಳಿಗೆ ವೇದಿಕೆ ಒದಗಿಸಿವೆ. ಕಾಶ್ಮೀರದಲ್ಲಿ ಸೇನೆ ಏಕಿದೆ ಅಂತ ಪ್ರಶ್ನಿಸಿದರೆ ಮೊದಲಿನಂತೆ ಗಲಿಬಿಲಿಗೊಳ್ಳದೇ ಸಮರ್ಪಕ ಉತ್ತರ ಹೇಳುವ ಸಾಮರ್ಥ್ಯವೀಗ ಸಾಮಾನ್ಯರಿಗೂ ಒಲಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಆಜಾದಿ ಘೋಷಣೆ ಹಾಕಿಕೊಂಡಿರುವವರು ಕೆಲವರಿದ್ದಾರೆ, ಪ್ರಚಾರವನ್ನೂ ಪಡೆಯುತ್ತಿದ್ದಾರೆ… ಆದರೆ ದೇಶದ ಜನಮಾನಸವು ಭಾವನಾತ್ಮಕವಾಗಿ ಸಿದ್ಧವಾದ ನಂತರ ಇಂಥ ಬೆರಳೆಣಿಕೆ ಭಂಜಕರ ಆಟ ನಡೆಯುವುದಿಲ್ಲ.

ಇದೀಗ ಪಾಕ್ ಆಕ್ರಮಿತ ಕಾಶ್ಮೀರದ ವಿಷಯದಲ್ಲೂ ಹೀಗೊಂದು ಮನೋಭೂಮಿಕೆ ದೇಶವಾಸಿಗಳಲ್ಲಿ ರೂಪುಗೊಳ್ಳಬೇಕಿದೆ. ಅದಕ್ಕೆ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದೆಂಬುದಕ್ಕೆ ಭಾವನಾತ್ಮಕವಾಗಿ ಜೈ ಎಂದು ಪ್ರತಿಕ್ರಿಯಿಸುವುದು ತುಂಬ ಮುಖ್ಯ ಹಂತ. ಈ ಭಾವನಾತ್ಮಕತೆ ಬಗ್ಗೆ ಯಾರೇನೇ ಸಿನಿಕತೆಯ ಮಾತಾಡಿದರೂ ಅದುವೇ ಪ್ರಾರಂಭಿಕ ಶಕ್ತಿ ಎಂಬುದು ವಾಸ್ತವ. ಆದರೆ ಇದೇ ಭಾವನಾತ್ಮಕತೆ ವಲಯದಲ್ಲೇ ಇದ್ದುಬಿಟ್ಟರೆ ಸೈದ್ಧಾಂತಿಕ ಬಲ ರೂಪುಗೊಳ್ಳುವುದಿಲ್ಲ. ಆದ್ದರಿಂದ ಈಗ ನಾವೆಲ್ಲ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಯತ್ನ ಮಾಡಬೇಕು.. ಈ ನಿಟ್ಟಿನಲ್ಲಿ, ಪಾಕ್ ಆಕ್ರಮಿತ ಕಾಶ್ಮೀರ ಯಾವ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ವಶವಾಯಿತು, ಆ ಹಂತದಲ್ಲಿ ಬ್ರಿಟನ್ ಭಾರತಕ್ಕೆ ದ್ರೋಹ ಬಗೆದಿದ್ದರ ಕಾರಣವೇನು?, ಮುಸ್ಲಿಂ ಬಾಹುಳ್ಯದ ಪ್ರದೇಶವೇ ಅದಾಗಿದ್ದರೂ ಪಾಕಿಸ್ತಾನದ ವಿರುದ್ಧವೇಕೆ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ, ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಸ್ವಾತಂತ್ರ್ಯ-ಸ್ವಾಯತ್ತೆಗಾಗಿ ಹೋರಾಡುತ್ತಿರುವವರಾರು, ಅವರು ಭಾರತದೊಂದಿಗೆ ಬೆಸುಗೆ ಹೊಂದಿರುವರೇ?, ಈ ಭಾಗ ಕೈತಪ್ಪಿದ್ದೇ ಆದರೆ ಪಾಕಿಸ್ತಾನ ಹೇಗೆ ಬಾಯಾರಿಕೆಯಿಂದ ಸಾಯಲಿದೆ, ಮುಂದಿನ ಜಾಗತಿಕ ವ್ಯವಸ್ಥೆಯಲ್ಲಿ ಭಾರತ ನಿಜಕ್ಕೂ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕೆಂದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತಿರಂಗಾ ಹಾರಬೇಕಿರುವುದು ಹೇಗೆ ಅನಿವಾರ್ಯ… ಇಂಥ ಹಲವು ವಿಚಾರಗಳನ್ನು ಸಾಧ್ಯವಾದಷ್ಟೂ ತಿಳಿಯೋಣ.

ಹಲವು ವರ್ಷಗಳ ಮೌನದಿಂದ ವಿಸ್ಮೃತಿಯೊಂದು ಕವಿದಿದೆ. ಹೀಗೊಂದು ಮಾರ್ಗ ನಿರ್ದೇಶನದ ಅರಿವಿನ ಶಾಸ್ತ್ರ ರೂಪುಗೊಳ್ಳದಿದ್ದರೆ, ಅದರ ಬಲವಿಲ್ಲದಿದ್ದರೆ, ತುಂಬ ಉತ್ಸಾಹದಲ್ಲಿ ಯುದ್ಧಭೂಮಿಗೆ ಹೋಗಿ ಏಕಾಏಕಿ ಎಲ್ಲವೂ ನಿರರ್ಥಕ ಎಂದೆನಿಸಿಬಿಡುವ ಪಾರ್ಥನ ಸ್ಥಿತಿ ಒದಗಿಬಿಡಬಹುದು.

ಅಂಥ ಸಂದರ್ಭದಲ್ಲಿ… ‘ಜಮ್ಮು-ಕಾಶ್ಮೀರ ಭಾರತ ಗೆಲ್ಲಲೇಬೇಕಿರುವ ಸಮರ’ ಅಂತ ಮನದಟ್ಟಾಗುವುದಕ್ಕಾದರೂ ಒಂದಿಷ್ಟು ಸೂತ್ರಗಳು ಬೇಕಲ್ಲ. ತೆರೆಮರೆಯಲ್ಲಿ ಹಲವು ಬೌದ್ಧಿಕ ಯೋಧರು ಎಲ್ಲ ಗೌಜುಗಳಿಂದ ದೂರ ಉಳಿದು ಮಾಡಿದ ಅಧ್ಯಯನಗಳ ಫಲವಾಗಿ ಸರ್ಕಾರದೆದುರು ಸಮರ ಸೂಚಿ ಸಿದ್ಧವಾಗಿದೆ. ಅದರ ಕೆಲ ಅಂಶಗಳು ಜನರೆದೆಯಲ್ಲೂ ಇಳಿದಾಗಲೇ ಬಲ ಒದಗುವಂಥದ್ದು. ಅಂಥ ಕೆಲ ಸೂತ್ರಗಳನ್ನು ದಕ್ಕಿಸಿಕೊಳ್ಳುವ ಯತ್ನವೇ ಈ ಸರಣಿ.

1 COMMENT

  1. very well written. The essence that for India to get to the permanent UN seat, we raising Human rights concerns of the likes of Baluchistan is to be welcomed!

Leave a Reply