ಶ್ರೀಕಾಂತ್, ಸಿಂಧು ಕ್ವಾರ್ಟರ್ ಪ್ರವೇಶಿಸಿದ್ದು ಬಿಟ್ಟರೆ ಮಿಕ್ಕವರಿಗೆ ಸೋಲಿನ ನಿರಾಸೆ

ಕೆ. ಶ್ರೀಕಾಂತ

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಭರವಸೆಯ ಶಟ್ಲರ್ ಗಳಾದ ಪಿ.ವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಹೋರಾಟ ಮುಂದುವವರೆದರೆ… ಬಾಕ್ಸಿಂಗ್ ನಲ್ಲಿ ವಿಕಾಸ್, ಸ್ಟೀಪಲ್ ಚೇಸ್ ನಲ್ಲಿ ಲಲಿತಾ ಬಬರ್, ಕುಸ್ತಿಯಲ್ಲಿ ರವೀಂದರ್, ತ್ರಿಪ್ಪಲ್ ಜಂಪ್ ನಲ್ಲಿ ರಂಜಿತ್ ಮಹೇಶ್ವರಿ ಅವರ ಪಯಣ ಅಂತ್ಯವಾಯ್ತು… ಇವು ಕ್ರೀಡಾಕೂಟದ 10ನೇ ದಿನ ಸೋಮವಾರ ನಡೆದ ಸ್ಪರ್ಧೆಗಳ ಪ್ರಮುಖ ಹೈಲೈಟ್ಸ್.

ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ತಮ್ಮ ಪ್ರತಿಸ್ಪರ್ಧಿ ಡೆನ್ಮಾರ್ಕ್ ನ ಜಾನ್ ಒ ಜೊರ್ಗೆನ್ಸನ್ ವಿರುದ್ಧ 2-0 ಗೇಮ್ ಗಳ ಅಂತರದಲ್ಲಿ ಜಯಿಸಿದರು. ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ತಮ್ಮ ಪ್ರತಿಸ್ಪರ್ಧಿ ಚೈನೀಸ್ ತೈಪೇನ ತೈ ಜು ಯಿಂಗ್ ವಿರುದ್ಧ 2-0 ಗೇಮ್ ಗಳ ಅಂತರದಲ್ಲಿ ಜಯಿಸಿದರು.

ಮಿಕ್ಕಂತೆ ಭಾರತಕ್ಕೆ ಸಿಕ್ಕಿದ್ದು ಸೋಲಿನ ನಿರಾಸೆ… ಪುರುಷರ ತ್ರಿಪ್ಪಲ್ ಜಂಪ್ ನಲ್ಲಿ ಭಾರತದ ರಂಜಿತ್ ಮಹೇಶ್ವರಿ 16.13 ಮೀ ಜಿಗಿಯುವ ಮೂಲಕ 30ನೇ ಸ್ಥಾನ ಪಡೆದರೆ, ಮಹಿಳೆಯರ 200 ಮೀ. ಓಟದ ಮೊದಲ ಸುತ್ತಿನಲ್ಲಿ ಭಾರತದ ಓಟಗಾರ್ತಿ ಸ್ರಬಾನಿ ನಂದಾ 23:58 ಸೆಕೆಂಡ್ಗಳಲ್ಲಿ ತಲುಪುವ ಮೂಲಕ 55ನೇ ಸ್ಥಾನ ಪಡೆದರು.

ಪುರುಷರ ಗ್ರೆಕೊ ರೋಮನ್ 85 ಕೆ.ಜಿ ವಿಭಾಗದಲ್ಲಿ ಭಾರತದ ರವೀಂದರ್ ಖತ್ರಿ ಮೊದಲ ಪಂದ್ಯದಲ್ಲೇ ಸೋಲನುಭವಿಸಿ ಹೊರ ನಡೆದಿದ್ದಾರೆ. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಂಗೇರಿಯ ವಿಕ್ಟೋರ್ ಲೊರಿಂಕ್ಸ್ ವಿರುದ್ಧ 4-0 ಅಂತರದ ಹಿನ್ನಡೆ ಅನುಭವಿಸಿದರು ರವೀಂದರ್.

ಇನ್ನು 3000 ಮೀ. ಸ್ಟೀಪಲ್ ಚೇಸ್ ನಲ್ಲಿ ಫೈನಲ್ ಪ್ರವೇಶಿಸಿ ಫೈನಲ್ ಪ್ರವೇಶಿಸಿದ್ದ ಲಲಿತಾ ಬಬರ್, ಅಂತಿಮ ಸುತ್ತಿನಲ್ಲಿ 9:22.74 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ 10ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಇನ್ನು ಮಂಗಳವಾರ ಬೆಳಗಿನ ಜಾವ ನಡೆದ ಪುರುಷರ 75 ಕೆ.ಜಿ ಮಿಡಲ್ ವೇಟ್ ವಿಭಾಗದಲ್ಲಿ ಭಾರತದ ವಿಕಾಸ್ ಕೃಷ್ಣನ್ ತಮ್ಮ ಎದುರಾಳಿ ಉಜ್ಬೇಕಿಸ್ತಾನದ ಬೆಕ್ಟೆಮಿರ್ ಮೆಲಿಕೊಜಿವ್ ವಿರುದ್ಧ 0-3 ಅಂತರದಲ್ಲಿ ಪರಾಭವಗೊಂಡರು.

ಪದಕ ಪಟ್ಟಿಯನ್ನು ನೋಡೋದಾದ್ರೆ, ಅಮೆರಿಕ 74 (26 ಚಿನ್ನ, 23 ಬೆಳ್ಳಿ, 25 ಕಂಚು), ಗ್ರೇಟ್ ಬ್ರಿಟನ್ 41 (16 ಚಿನ್ನ, 17 ಬೆಳ್ಳಿ, 8 ಕಂಚು), ಚೀನಾ 46 (15 ಚಿನ್ನ, 14 ಬೆಳ್ಳಿ, 17 ಕಂಚು) ಕ್ರಮವಾಗಿ ಅಗ್ರ ಮೂರು ಸ್ಥಾನ ಅಲಂಕರಿಸಿವೆ.

ಮಂಗಳವಾರ ನಡೆಯಲಿರುವ ಭಾರತ ಕ್ರೀಡಾಳುಗಳು ಭಾಗವಹಿಸುತ್ತಿರುವ ಸ್ಪರ್ಧೆಗಳು ಹೀಗಿವೆ…

ಕುಸ್ತಿ: ಪುರುಷರ ಗ್ರೆಕೊ ರೋಮನ್ 98 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್ ಪಂದ್ಯದಲ್ಲಿ ಭಾರತದ ಹರ್ದೀಪ್ ಸಿಂಗ್, ಟರ್ಕಿಯ ಸೆಂಕ್ ಲಿಡೆಮ್ ವಿರುದ್ಧ ರಾತ್ರಿ 7.10ಕ್ಕೆ ಸೆಣಸಲಿದ್ದಾರೆ.

ಬ್ಯಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಪಿ.ವಿ ಸಿಂಧು ಚೀನಾದ ವಾಂಗ್ ಯಿಹಾನ್ ವಿರುದ್ಧ ಸೆಣಸಲಿದ್ದು, ಈ ಪಂದ್ಯ ಬುಧವಾರ ಬೆಳಗಿನ ಜಾವ 3.25ಕ್ಕೆ ನಡೆಯಲಿದೆ.

Leave a Reply