ಮಾನವ ಹಕ್ಕುಗಳ ಹೆಸರಲ್ಲಿ ಭಯೋತ್ಪಾದಕರನ್ನು ಬೆಂಬಲಿಸಿಕೊಂಡಿರುವ ಮನೆಹಾಳುತನವನ್ನೇ ಉದ್ಯೋಗವಾಗಿಸಿಕೊಂಡಿದೆ ಆಮ್ನೆಸ್ಟಿ

ಈ ಚಿತ್ರದಲ್ಲಿರುವ  ಕೊಲೆಗಡುಕ ಜಿಹಾದಿ ಜಾನ್ ಎಂದೇ ಕುಖ್ಯಾತ ಮೊಹಮದ್ ಇಮ್ವಾಜಿ ಎಂಬ ಐಸಿಸ್ ಉಗ್ರ. ಆಮ್ನೆಸ್ಟಿಯ ಜತೆಗೂಡಿ ಕೆಲಸ ಮಾಡುತ್ತಿದ್ದ ಕೇಜ್ ಎಂಬ ಮಾನವ ಹಕ್ಕು ಸಂಘಟನೆ ಮಾತ್ರ ‘ಈತ ಜಿಹಾದಿ ಜಾನ್ ಆಗುವುದಕ್ಕೆ ಉಗ್ರವಾದ ಹತ್ತಿಕ್ಕುವ ಪ್ರಕ್ರಿಯೆಯಲ್ಲಿ ಬ್ರಿಟನ್ ಗುಪ್ತಚರರು ಕೊಟ್ಟ ಹಿಂಸೆಯೇ ಕಾರಣ’ ಎಂದು ಪ್ರತಿಪಾದಿಸುತ್ತ, ಈತನನ್ನು ‘ಬ್ಯೂಟಿಫುಲ್ ಯಂಗ್ ಮ್ಯಾನ್’ ಅಂತ ಹಾಡಿಹೊಗಳಿತ್ತು. ಇದೇ ಮಾನವ ಹಕ್ಕು ಸಂತಾನವೇ ಇದೀಗ ಭಾರತದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದ ಮತ್ತು ಹಿಂಸೆಯನ್ನು ಬ್ಯೂಟಿಫುಲ್ ಎಂದು ಸಾರುವ ಹವಣಿಕೆಯಲ್ಲಿದೆ…

ಡಿಜಿಟಲ್ ಕನ್ನಡ ವಿಶೇಷ:

ಬೆಂಗಳೂರಿನಲ್ಲಿ ಕಾಶ್ಮೀರದ ಆಜಾದಿ ಘೋಷಣೆ- ಸೇನೆಯ ನಿಂದನೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಮಾನವ ಹಕ್ಕು ಸಂಘಟನೆ ಆಮ್ನೆಸ್ಟಿ ಇಂಟರ್ ನ್ಯಾಷನಲ್, ಈಗ ಸಂವಿಧಾನಾತ್ಮಕ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಜನರಿಗೇ ಪಾಠ ಮಾಡುತ್ತಿದೆ. ದೇಶ ತುಂಡರಿಸುವ ಮಾತಾಡುವುದು ಅದ್ಯಾವ ಸಂವಿಧಾನಾತ್ಮಕ ಹಕ್ಕೋ ಗೊತ್ತಿಲ್ಲ. ಕಾನೂನು ಅದರ ಕ್ರಮ ಕೈಗೊಳ್ಳಲಿ, ಆದರೆ ಆಮ್ನೆಸ್ಟಿಯ ನಿಜಮುಖ ನಮಗೆ ಗೊತ್ತಿರಲಿ.

  • 1961ರಲ್ಲಿ ಕೈದಿಗಳು, ಜೈಲಿನಲ್ಲಿ ಅವರಿಗಾಗುತ್ತಿರುವ ಹಿಂಸೆ ಇತ್ಯಾದಿಗಳ ಬಗ್ಗೆ ಮಾನವ ಹಕ್ಕಿನ ಅರಿವು ಮೂಡಿಸುವುದಕ್ಕೆ ಇಂಗ್ಲೆಂಡ್ ನಲ್ಲಿ ರೂಪುಗೊಂಡ ಸಂಸ್ಥೆ ಈಗ ತನ್ನ ಮೂಲ ಕೆಲಸದಿಂದ ಬೇರೆಡೆ ವ್ಯಾಪ್ತಿಗಳನ್ನು ಹೆಚ್ಚಿಸಿಕೊಂಡು ಜಗತ್ತಿನ ಸರ್ಕಾರಗಳಿಗೆ ಸಮಾನಾಂತರವಾಗಿ ವ್ಯವಸ್ಥೆಯೊಂದನ್ನು ನಿಲ್ಲಿಸುವ ಯತ್ನದಲ್ಲಿಯೇ ಇದೆ. ಸುಮಾರು 170 ದೇಶಗಳಲ್ಲಿ ಇದರ ಕಾರ್ಯಭಾರವಿದೆ.
  • ಜಿಹಾದಿ ಭಯೋತ್ಪಾದಕರ ಮಾನವ ಹಕ್ಕುಗಳ ಪರವಾಗಿಯೇ ಈ ಸಂಸ್ಥೆ ನಿಂತಿರುವುದು ಹಲವು ಉದಾಹರಣೆಗಳಿಂದ ಸ್ಪಷ್ಟ. ಇದನ್ನು ಹೊರಗಿನವರ್ಯಾರೋ ಹೇಳುತ್ತಿಲ್ಲ, ಹತ್ತು ವರ್ಷಗಳ ಹಿಂದೆ ಆಮ್ನೆಸ್ಟಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದ ಗೀತಾ ಸೆಹಗಲ್ ಅವರಿಂದಲೇ ಬಂದ ಮಾತುಗಳಿವು. ‘ಆಮ್ನೆಸ್ಟಿಯು ಮಾನವ ಹಕ್ಕುಗಳ ಹೆಸರಲ್ಲಿ ಹಿಂಸಾವಾದಿ ಜಿಹಾದಿಗಳನ್ನು ಬೆಂಬಲಿಸುತ್ತಿದೆ. ಮಹಿಳೆಯರ ಮಾನವ ಹಕ್ಕು ಉಲ್ಲಂಘನೆಯಲ್ಲಂತೂ ಈ ಜಿಹಾದಿಗಳೇ ಮುಂದಿದ್ದಾರೆ ಎಂದು ಗೊತ್ತಿದ್ದೂ ಸಂಸ್ಥೆ ಈ ಕೆಲಸ ಮಾಡುತ್ತಿದೆ’ ಇದನ್ನು 2010ರಲ್ಲೇ ಹೇಳಿ ಆಮ್ನೆಸ್ಟಿಯಿಂದ ವಜಾಗೊಂಡಿದ್ದ ಗೀತಾ, ಈಗ ಬೆಂಗಳೂರಿನ ವಿದ್ಯಮಾನದ ಹಿನ್ನೆಲೆಯಲ್ಲಿ ಮತ್ತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ದೇಶದ್ರೋಹದ ಪ್ರಕರಣವನ್ನು ತಾವು ಒಪ್ಪುವುದಿಲ್ಲವಾದರೂ, ಆಮ್ನೆಸ್ಟಿ ಮೊದಲಿನಿಂದಲೂ ಏಕಮುಖ ಪ್ರತಿಪಾದನೆಗಳನ್ನು ಮಾಡುತ್ತ ಬಂದಿರುವುದು ಹೌದು. ಕಾಶ್ಮೀರದ ಜಿಹಾದಿಗೆ ಕಾರಣವಾಗುತ್ತಿರುವ ಗಡಿ ನುಸುಳುವಿಕೆ, ಬ್ರಿಟನ್ನಿಗೆ ಮಾರಕವಾಗುತ್ತಿರುವ ಜಿಹಾದ್ ಇವೆಲ್ಲದರ ಬಗ್ಗೆ ಆಮ್ನೆಸ್ಟಿ ಕುರುಡಾಗಿದೆ ಎಂದು ಮತ್ತೆ ಪ್ರತಿಪಾದಿಸಿದ್ದಾರೆ ಗೀತಾ ಸೆಹಗಲ್.
  • ಇತ್ತೀಚಿನ ಅವಾರ್ಡ್ ವಾಪ್ಸಿ ಗ್ಯಾಂಗಿನ ನಯನತಾರಾ ಸೆಹಗಲ್ ಅವರ ಮಗಳು ಈ ಗೀತಾ ಸೆಹಗಲ್. ನೆಹರು ಸಂಬಂಧಿ. ಇಂಥ ‘ಲಿಬರಲ್’ಗಳಿಗೂ ಆಮ್ನೆಸ್ಟಿ ಅಸಹನೀಯವೆನಿಸಿದೆ ಎಂದರೆ ಯೋಚಿಸಬೇಕಾದದ್ದೆ. ಇಷ್ಟಕ್ಕೂ ಆಮ್ನೆಸ್ಟಿಯಿಂದ ಗೀತಾ ಸೆಹಗಲ್ ಹೊರಬರಬೇಕಾದ ಪ್ರಕರಣವು ನಿಜಕ್ಕೂ ಸಂಸ್ಥೆಯನ್ನು ಬೆತ್ತಲಾಗಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಪಾದನೆಗಳ ಹಕ್ಕು ಎಂದೆಲ್ಲ ಬಡಬಡಾಯಿಸುವ ಆಮ್ನೆಸ್ಟಿ ಕೂಟ ಅದ್ಯಾವ ಅಸಹಿಷ್ಣುತೆಯಿಂದ ಗೀತಾ ಸೆಹಗಲರನ್ನು ಹೊರತಳ್ಳಿತು ಎಂದು ಗಮನಿಸುವುದು ಅತ್ಯಗತ್ಯ. ಬ್ರಿಟನ್ನಿನಲ್ಲಿ ಕೇಜ್ ಎಂಬ ಸಂಸ್ಥೆ ಮೂಲಕ ಕೈದಿಗಳ ಮಾನವ ಹಕ್ಕು ಕೆಲಸದ ಮುಖವಾಡ ತೊಟ್ಟಿರುವ ಮೊಜಂ ಬೆಗ್ ಎಂಬಾತನ ಜತೆ ಆಮ್ನೆಸ್ಟಿ ಕೈಜೋಡಿಸಿತು. ಈತ ಅಮೆರಿಕದ ಜೈಲಲ್ಲಿದ್ದು ಬಂದು, ಅಲ್ಲಿನ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ರೋಚಕ ಕತೆಗಳನ್ನು ಹೇಳಬಲ್ಲವನಾಗಿದ್ದ. ಆಮ್ನೆಸ್ಟಿ ಇವನನ್ನು ತಮ್ಮ ಸಹವರ್ತಿಯಾಗಿ ಸ್ವೀಕರಿಸಿದಾಗ ಗೀತಾ ಸೆಹಗಲ್ ಬಹಿರಂಗವಾಗಿಯೇ ಇದನ್ನು ವಿರೋಧಿಸಿದರು. ಏಕೆಂದರೆ ಈ ಮೊಜಂ ಬೆಗ್ ಎಂಬ ಮುಸ್ಲಿಂ ತನ್ನ ಪ್ರಕಾಶನದ ಮೂಲಕ ಜಿಹಾದಿ ಸಾಹಿತ್ಯವನ್ನೇ ಪ್ರಕಟಿಸಿಕೊಂಡಿದ್ದ. ತಾಲಿಬಾನನ್ನು ಸಮರ್ಥಿಸಿಕೊಂಡಿದ್ದ. ಕೈದಿಗಳ ಮಾನವ ಹಕ್ಕು ಎಂಬುದು ಈತನಿಗೆ ಪಾಶ್ಚಾತ್ಯ ದೇಶಗಳಲ್ಲಿ ಇಸ್ಲಾಮಿಕ್ ಉಗ್ರವಾದಿ ಕಾರ್ಯಗಳ ಸಂಬಂಧ ಬಂಧಿತರಾಗಿರುವವರನ್ನು ಬಿಡಿಸಿಕೊಳ್ಳುವ ಅಸ್ತ್ರವಾಗಿತ್ತು. ಗೀತಾ ಸೆಹಗಲ್ ಹೇಳಿರುವಂತೆ, 90ರ ದಶಕದ ಕಾಶ್ಮೀರ ಜಿಹಾದ್ ಅನ್ನು ಇಸ್ಲಾಮಿಕ್ ಸ್ಟೇಟ್ ಸ್ಥಾಪನೆ ಎಂದು ಸಮರ್ಥಿಸಿಕೊಂಡು ಬರೆದಿದ್ದ ಧಿರೆನ್ ಬಾರಟ್ ಸಾಹಿತ್ಯವನ್ನು ಇದೇ ಮೊಜಂ ಬೆಗ್ ಪ್ರಕಟಿಸಿ ಪ್ರಚುರಪಡಿಸಿದ್ದ. ಆದರೆ, ಇವನ್ನೆಲ್ಲ ಪ್ರಶ್ನಿಸಿದ್ದಕ್ಕೆ ಗೀತಾರನ್ನು ಆಮ್ನೆಸ್ಟಿ ಹೊರಹಾಕಿತೇ ಹೊರತು ಜಿಹಾದಿಗಳ ಸಂಘ ಬಿಡಲಿಲ್ಲ.
  • ಯಾವ ಕೇಜ್ ಸಂಸ್ಥೆಯ ಜತೆ ಆಮ್ನೆಸ್ಟಿ ಸಂಬಂಧವನ್ನು ಹೊಂದಿತ್ತೋ ಆ ಪಾಳೆಯದಿಂದಲೇ ಮೊಹಮದ್ ಇಮ್ವಾಜಿ ಎಂಬಾತ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆ ಜತೆ ಸೇರಿಕೊಂಡು ಜಿಹಾದಿ ಜಾನ್ ಎಂದೇ ಕುಖ್ಯಾತನಾಗಿ ಶಿರಚ್ಛೇದನ ಕ್ರೌರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಇಷ್ಟಕ್ಕೂ ಕೇಜ್ ಎಂಬ ಆಮ್ನೆಸ್ಟಿಯ ಸ್ನೇಹಿತ ಸಂಘಟನೆ ಪ್ರತಿಪಾದಿಸುವುದೇ ಶರಿಯಾ ಕಾಯ್ದೆಯನ್ನು.
  • ಆಮ್ನೆಸ್ಟಿಯಲ್ಲಿ ಕಣ್ಣಿಗೆ ರಾಚುವ ಇನ್ನೊಂದು ಘೋರತೆ ಎಂದರೆ ಅದರ ಇಸ್ರೇಲ್ ದ್ವೇಷ. ಗಾಜಾಪಟ್ಟಿ, ಇಸ್ರೇಲ್-ಪ್ಯಾಲಸ್ಟೀನ್ ಸಂಘರ್ಷಗಳ ಬಗ್ಗೆ ಇದು ಬಹಳಷ್ಟು ‘ಅಧ್ಯಯನ ವರದಿ’ಗಳನ್ನು ಮಂಡಿಸಿದೆ. ಎಲ್ಲ ಕಡೆಯೂ ಇಸ್ರೇಲ್ ಯೋಧರೇ ತಪ್ಪಿತಸ್ಥರು ಎಂಬ ತೀರ್ಪು. ನೀವು ಆಮ್ನೆಸ್ಟಿಯನ್ನು ನಂಬುವುದಾದರೆ ಪ್ಯಾಲಸ್ತೀನಿನ ಹಮಾಸ್ ಉಗ್ರರ ಕಡೆಯಿಂದ ಮಾನವ ಹಕ್ಕು ಉಲ್ಲಂಘನೆಗಳು ಆಗಿಯೇ ಇಲ್ಲ! ಇಂಥ ಆಮ್ನೆಸ್ಟಿ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರು ಹಾಗೂ ಉಗ್ರರ ಪರ ನಿಂತು ಭಾರತೀಯ ಸೇನೆಯನ್ನು ನಿಂದಿಸುತ್ತಿರುವುದರಲ್ಲಿ ಯಾವ ಆಶ್ಚರ್ಯವಿದೆ ಹೇಳಿ?
  • ಜಗತ್ತಿನ ಮಾನವ ಹಕ್ಕುಗಳ ಗುತ್ತಿಗೆ ತಾನೇ ತೆಗೆದುಕೊಂಡಂತೆ ಹಾರಾಡುವ ಆಮ್ನೆಸ್ಟಿ ತಿರಸ್ಕರಿಸಿರುವ ನಿರ್ಣಯವೊಂದು ಅದರ ಉದ್ದೇಶವನ್ನು ಸಾರುತ್ತದೆ. ಯಹೂದಿಗಳ ವಿರುದ್ಧದ ದೌರ್ಜನ್ಯಗಳ ಬಗ್ಗೆ ನಿಲುವಳಿ ಸ್ವೀಕರಿಸುವ ಪ್ರಸ್ತಾಪವೊಂದು ಆಮ್ನೆಸ್ಟಿ ಎದುರು ಬಂದಿದ್ದಾಗ, ಅದನ್ನು ತಿರಸ್ಕರಿಸಲಾಯಿತು. ಅಂದರೆ ಆಮ್ನೆಸ್ಟಿಯ ಮಾನವ ಹಕ್ಕು ಮಿಡಿತದ ಒಳಗೆ ಸೇರಿಕೊಳ್ಳಬೇಕೆಂದರೆ ನೀವು ಉಗ್ರರಾಗಿರಬೇಕು ಇಲ್ಲವೇ ಮುಸ್ಲಿಮರಾಗಿರಬೇಕು.
  • ಬೆಂಗಳೂರಿನ ಪ್ರಕರಣವನ್ನೇ ಗಮನಿಸುವುದಾದರೆ, ಇಲ್ಲೂ ಆಮ್ನೆಸ್ಟಿಯ ಉದ್ದೇಶ ಇದ್ದದ್ದು ಕಾಶ್ಮೀರಿ ಮುಸ್ಲಿಮರಿಗೆ ಮಾತ್ರವೇ ಸಂತಾಪ ವ್ಯಕ್ತಪಡಿಸಿ, ಆಜಾದಿ ಘೋಷಣೆ ಮೊಳಗಿಸುವಂಥದ್ದು. ‘ಹಂಗೇನಿಲ್ಲ, ನಾವು ಕಾಶ್ಮೀರಿ ಪಂಡಿತ ಆರ್. ಕೆ. ಮಟ್ಟೂ ಅವರಿಗೂ ಪ್ಯಾನೆಲ್ ನಲ್ಲಿ ಆಹ್ವಾನಿಸಿ ಅವಕಾಶ ನೀಡಿದ್ದೇವೆ’ ಎಂದು ಆಮ್ನೆಸ್ಟಿ ಹೇಳುತ್ತಿದೆ. ಆದರೆ ಖುದ್ದು ಆರ್. ಕೆ. ಮಟ್ಟೂ ಅವರೇ ಮಾಧ್ಯಮಗಳ ಸಂದರ್ಶನಗಳಲ್ಲಿ ಇದರ ವಾಸ್ತವ ಹೇಳಿದ್ದಾರೆ. ಆಮ್ನೆಸ್ಟಿ ಮೂಲತಃ ಮಟ್ಟೂರನ್ನಾಗಲೀ ಇನ್ಯಾರೇ ಕಾಶ್ಮೀರಿ ಪಂಡಿತರನ್ನಾಗಲೀ ಆಹ್ವಾನಿಸಿರಲಿಲ್ಲ. ಬೆಂಗಳೂರಲ್ಲಿ ಇಂಥದೊಂದು ಕಾರ್ಯಕ್ರಮ ನಡೆಯುತ್ತಿದೆ ಹಾಗೂ ಅದು ಕಾಶ್ಮೀರಿ ಕುಟುಂಬಗಳ ಬಗ್ಗೆ ಎಂದಾದಾಗ ಮಟ್ಟೂ ಅವರೇ ಆಮ್ನೆಸ್ಟಿಯನ್ನು ಸಂಪರ್ಕಿಸಿದ್ದಾರೆ. ಏಕೆಂದರೆ ಮುಸ್ಲಿಮರ ಹಿಂಸಾತ್ಮಕ ಕಾರ್ಯಗಳಿಂದ ಕಾಶ್ಮೀರ ತೊರೆಯಬೇಕಾಗಿ ಬಂದ ಲಕ್ಷಾಂತರ ಜನರ ಪೈಕಿ ಮಟ್ಟೂ ಸಹ ಒಬ್ಬರು. ಆರ್. ಕೆ. ಮಟ್ಟೂ ಅವರೇ ಈ ಕಾರ್ಯಕ್ರಮದ ಹಿಂದು-ಮುಂದುಗಳನ್ನು ವಿಚಾರಿಸಿದಾಗ ಬೇರೆ ದಾರಿಯಿಲ್ಲದೇ ಆಮ್ನೆಸ್ಟಿ ಇವರನ್ನು ಆಹ್ವಾನಿಸಿತು. ‘ಜಗತ್ತಿನಲ್ಲೇ ಅತಿ ಶಿಸ್ತಿನ ಸೇನೆ ನಮ್ಮದು’ ಎಂದು ಆರ್. ಕೆ. ಮಟ್ಟೂ ಅವರು ಆ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಾಗ ಕಾಶ್ಮೀರಿ ಯುವಕರು ರೊಚ್ಚಿಗೆದ್ದಿದ್ದು ನಿರೀಕ್ಷಿತವೇ. ಏಕೆಂದರೆ ಆಮ್ನೆಸ್ಟಿ ಗುಂಪುಗೂಡಿಸಿದ್ದೇ ಇಂಥ ಪ್ರತ್ಯೇಕತಾವಾದಿ ಪುಂಡರನ್ನು. ಎಬಿವಿಪಿ ಸದಸ್ಯರು ಸಹ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡು ಹೋದವರೇ ವಿನಃ ಪ್ರತ್ಯೇಕ ಆಹ್ವಾನ ಅವರಿಗಿರಲಿಲ್ಲ.
  • ಕೊನೆಯದಾಗಿ, ಆಮ್ನೆಸ್ಟಿಯ ಭಾರತ ವಿಭಾಗದ ನಿರ್ದೇಶಕ ಆಕಾರ್ ಪಟೇಲ್ ವೈಶಿಷ್ಟ್ಯವೇನೆಂದರೆ ಈತನ ಕಣ ಕಣದಲ್ಲೂ ಇರುವುದು ಮೋದಿದ್ವೇಷ. ವ್ಯಕ್ತಿ ವಿಮರ್ಶೆ ಖಂಡಿತ ತಪ್ಪಲ್ಲ. ಆದರೆ ಮೋದಿ ಅಣಕವಿಲ್ಲದೇ ಈ ವ್ಯಕ್ತಿಯ ಯಾವ ಬರಹವೂ ಆಕಾರವನ್ನೇ ತಾಳುವುದಿಲ್ಲ ಎಂಬುದು ಕೌತುಕದ ವಿಷಯ.

Leave a Reply