ಲೈಂಗಿಕತೆ ಮಡಿವಂತಿಕೆಯಾಗಬೇಕಿಲ್ಲ, ಹಾಗಂತ ಸಿನಿಮಾಗಳ ಉದ್ರೇಕದ ಮಾರಾಟ ವಸ್ತುವೂ ಆಗಬಾರದಲ್ಲ…

author-geetha‘ನನ್ನ ಬಳಿ ಒಂದು ಫಿಲಂ ಕಥೆ ಇದೆ ಮೇಡಂ.’

‘ಸರಿ..’

‘ಕಥೆ, ಸ್ಕ್ರೀನ್ ಪ್ಲೇ ಎಲ್ಲಾ ರೆಡಿ ಮಾಡಿದ್ದೇನೆ. ಮಾತುಗಳು, ಹಾಡುಗಳು ಬರೆಯಬೇಕಷ್ಟೇ ನೀವು ಹೆಲ್ಪ್ ಮಾಡಬೇಕು ಮೇಡಂ.’

‘ಸಾರಿ… ನಾನು ಕಥೆ, ಕಾದಂಬರಿ ಬರಿಯೋಳು. ಡೈಲಾಗ್ ಬರಿತೀನಿ. ಆದರೆ ಹಾಡುಗಳೂ…’

‘ಅಯ್ಯೋ.. ಡೈಲಾಗೂ, ಹಾಡುಗಳು ಎಲ್ಲಾ ನಾನೇ ಬರಿತೀನಿ.. ನೀವು ಹೆಲ್ಪ್ ಮಾಡಬೇಕಷ್ಟೆ…’

‘ಬರೆಯೋದು ಬಿಟ್ಟು ನನಗೇನೂ ಬರೋದಿಲ್ಲ… ನಿಂಗೆ ಹೇಗೆ ಹೆಲ್ಪ್ ಮಾಡಬಲ್ಲೆ? ಆಕ್ಟಿಂಗ್ ಮಾಡೋಕ್ಕೆ ಬರೋಲ್ಲ ನನಗೆ…’

‘ಅಯ್ಯೋ.. ಅಮ್ಮನ ರೋಲ್ಗೆ ಯಾರು ಅಂತ ನಾನು ಫಿಕ್ಸ್ ಮಾಡಿಬಿಟ್ಟಿದ್ದೇನೆ ಮೇಡಂ. ನೀವು ಹೆಲ್ಪ್ ಮಾಡಬೇಕಷ್ಟೇ…’

ಗಾಬರಿಯಾಗತೊಡಗಿತು ನನಗೆ. ಇನ್ನೇನು ಕೇಳುತ್ತಾನೆ ಇವನು? ಯಾವಾಗಲೋ ಭೇಟಿಯಾಗಿದ್ದು, ಸೀರಿಯಲ್ಗೆ ಬರೆಯುತ್ತಿದ್ದ ಟೈಂನಲ್ಲಿ.. ಫೋನ್ ಮಾಡಿ ಹೆಲ್ಪ್ ಕೇಳಿಕೊಂಡು ಬಂದಿದ್ದ. ಆದರೆ ಏನು ಬೇಕು ಅಂತಲೇ ಹೇಳದೆ… ಹೆಲ್ಪ್ ಮಾಡಿ, ಹೆಲ್ಪ್ ಮಾಡಿ.. ಅಂದರೆ, ಕೈಗಡಿಯಾರದತ್ತ ನೋಡಿಕೊಂಡು ಮೇಲೆದ್ದೆ.

‘ಕಾಫಿ ತರ್ತೀನಿ ಇರಪ್ಪ..’ ಎಂದು ಒಳನಡೆದೆ. ಹೊರಬರುವ ಹೊತ್ತಿಗೆ ಟೇಬಲ್ ಭರ್ತಿ ಹಾಳೆಗಳನ್ನು ಹರವಿದ್ದ.

‘ಏನು ಹೇಳದೆ ಹೆಲ್ಪ್ ಕೇಳಿದ್ರೆ ನೀವಾದರೂ ಏನು ಮಾಡ್ತೀರಿ? ಎಲ್ಲಾ ರೆಡಿ ಮೇಡಂ… ಕಥೆ ಹೊಸತಾಗಿ ಇದೆ. ಹಳ್ಳಿನೂ ಇದೆ… ಸಿಟೀನೂ ಇದೆ. ಅಮ್ಮನ ಸೆಂಟಿಮೆಂಟ್ ಇದೆ ಮೇಡಂ… ಹಳ್ಳಿ ಸೀನ್ ಗಳಲ್ಲಿ ಸಕತ್ತಾಗಿ ಬೈಗಳಿರುತ್ವೆ ಮೇಡಂ… ನಾಯಕಿ ಜಿಂಕಚಕಾ ಹುಡಗಿ… ಹಾಗಾಗಿ ಪೂರಾ ಮಾಡ್ರನ್ ಡ್ರೆಸಸ್.. ಎರಡು ಐಟಂ ಸಾಂಗ್ ಮೇಡಂ. ಅದಕ್ಕೆ ಲಿರಿಕ್ಸ್ ರೆಡಿ ಮೇಡಂ… ಫೈಟೂ ಇರುತ್ತೆ ಮೇಡಂ. ಅದಕ್ಕೆ ತೆಲುಗು ಇಂಡಸ್ಟ್ರೀ ಇಂದ ಫೈಟ್ ಮಾಸ್ಟರ್ ಬರ್ತಾರೆ… ಡ್ಯಾನ್ಸ್ ಗೆ ಬಾಲಿವುಡ್ ಇಂಡ ಡ್ಯಾನ್ಸ್ ಮಾಸ್ಟರ್ ಹಾಗೂ ಡ್ಯಾನ್ಸರ್ಸ್ ಬರ್ತಾರೆ ಮೇಡಂ. ಎಕ್ಸ್ ಟ್ರಾಸ್ ಎಲ್ಲಾ ಎಂ.ಜಿ ರೋಡ್ ಟೈಪ್ ಮೇಡಂ..’

‘ಅಲ್ಲಾ.. ನಾನೇನು ಮಾಡಬೇಕು?’ ಗಾಬರಿಯಾಗತೊಡಗಿತು ನನಗೆ.

‘ನಿಮ್ಮ ಫ್ರೆಂಡ್ಸ್ ಪೈಕಿ ಎಷ್ಟೊಂದು ಮಂದಿ ಶ್ರೀಮಂತರು ಇರಬಹುದು . ಮೇಡಂ ನನಗೆ ಪ್ರೊಡ್ಯೂಸರ್ ಹುಡುಕಿ ಕೊಡಿ.’

ತಣ್ಣಗಾದ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದು ಮುಗಿಸಿದೆ.

‘ಸಾರಿ… ನನ್ನ ಪರಿಚಯದ ವಲಯದಲ್ಲಿ….’

‘ಎಂಟು ಮಂದಿ ಬಾಯ್ ಫ್ರೆಂಡ್ಸು ನೇಣು ಹಾಕೊಂಡ್ರು… ಹತ್ತು ಮಂದಿ ಬಾಯ್ ಫ್ರೆಂಡ್ಸು ವಿಷ ಕುಡ್ಕೊಂಡ್ರು… ನೂರು ಮಂದಿ ಬಾಯ್ ಫ್ರೆಂಡ್ಸು ಓಡಿಹೋದರು…’

‘ಏನಿದು?’ ಮೇಲೆದ್ದೆ.

‘ಐಟಂ ಸಾಂಗು ಮೇಡಂ…’

‘ಪ್ಲೀಸ್… ನನಗೆ ಯಾರಾದರು ನೆನಪಿಗೆ ಬಂದ್ರೆ ಫೋನ್ ಮಾಡ್ತೀನಿ. ಈಗ ನಾನು ಎಲ್ಲೊ ಹೋಗಬೇಕಿತ್ತು.’

‘ಕಥೆ ಇಟ್ಟು ಹೋಗ್ಲಾ ಮೇಡಂ?’

‘ಬೇಡ  ಫೋನ್ ಮಾಡ್ತೀನಿ..’

ಅವನು ಹೋದ ಮೇಲೆ ಇನ್ನೊಂದು ಲೋಟ ಕಾಫಿ ಮಾಡಿಕೊಂಡು ಕುಳಿತೆ. ಟಿ.ವಿ ಆನ್ ಮಾಡಿದರೆ, ಸ್ಪೆಷಲ್ ಪ್ರೋಗ್ರಾಂ,, ಯಾವುದೋ ಚಾನೆಲ್ಲು! ‘ಐಟಂ ಸಾಂಗ್ ಗಳ ಗುಚ್ಚ’ ಸ್ಪೆಷಲ್ ಪ್ರೋಗ್ರಾಂ!

‘ಕಚ್ಚು ಬಾ.. ನೆಕ್ಕು ಬಾ.. ಮುಟ್ಟು ಬಾ..’ ಎಂದು ಹಾಡು! ಅಸಹ್ಯ ಕುಣಿತ.

ನನಗೆ ಅಸಹ್ಯ, ಅತಿರೇಕ, vulgur! ಆದರೆ, ಇದನ್ನು ಇಷ್ಟಪಡುವವರು ಇರುವುದರಿಂದಲೇ ಈ ಬಗೆಯ ಹಾಡುಗಳು. ಅಂದರೆ ನಾವೆತ್ತ ಸಾಗಿದೇವೆ?

ಒಂದು ಹುಡುಗಿಗೆ ಈ ಬಗೆಯ ಎದೆ, ನಿಂತಂಬ, ಹೊಕ್ಕಳು ಎಲ್ಲಾ ಕಾಣುವ ಹಾಗೆ ಬಟ್ಟೆ ತೊಡಬೇಕು ಎಂದು ಹೇಗೆ ಹೇಳುತ್ತಾರೆ?ಅವಳು ತೊಟ್ಟು ಬಂದು ನಿಂತರೆ.. ಹೀಗೆ ಕುಣಿ, ಹಾಗೆ ಕುಲುಕು, ಹೀಗೆ ನೋಟ ಬೀರು ಎಂದು ಹೇಗೆ ಹೇಳುತ್ತಾರೆ? ಕ್ಯಾಮೆರಾ ಹಿಡಿದವರ ಮನಃಸ್ಥಿತಿ ಏನು?

ಹಾಗೆ ಕುಣಿಯುವವಳ ಮನಃಸ್ಥಿತಿ ಏನು? ಎತ್ತಿ, ಇಳಿಸಿ, ತಿರುಗಿಸಿ, ಬಗ್ಗಿಸಲು ಮತ್ತೊಬ್ಬ ಡ್ಯಾನ್ಸರ್ ಬೇರೆ ಜೊತೆಯಲ್ಲಿ…

ಯಾರದೋ ಸೆರಗು ಜಾರಿ ಕುಪ್ಪಸ ಕಂಡರೆ, ಸೆರಗು ಸರಿ ಮಾಡಿಕೊಳ್ಳುವ ಕಾಲದಿಂದ ಹೊರಟು ಎಲ್ಲಿಗೆ ಬಂದು ನಿಂತಿದ್ದೇವೆ ನಾವು?

‘You have the figure.. you flaunt it!’ ಎಂದು ನಾಯಕಿಯೊಬ್ಬಳು ಹೇಳಿದ್ದು ಓದಿದ ನೆನಪಿದೆ.

ಮೊನ್ನೆ ಮೊನ್ನೆ ಒಂದು ಚಿತ್ರದ ಟ್ರೈಲರ್ ರಿಲೀಸಾಗಿ… ಅದರ ಭರ್ತಿ ಕಂಡಿದ್ದು ಒದ್ದೆ ಬಟ್ಟೆಯಲ್ಲಿ ಪೂಲಿನಿಂದ ಎದ್ದು ಬರುವ ನಾಯಕಿ.. ತುಟಿ ಉಬ್ಬಿಸಿ, ಕಣ್ಣಲೇ ಕಾಮಕೇಳಿಗೆ ಕರೆಯುವ ಉನ್ಮಾದತೆ. ಅಷ್ಟೊಂದು ಮಂದಿ ಗಂಡಸರನ್ನು ಉದ್ರೇಕಿಸಿದ ಹೆಮ್ಮೆಯಂತೆ ನಟಿಗೆ.

ಇದು ಬೇಡ ಅಂದರೆ… ಯಾರೂ ಒಪ್ಪುವುದಿಲ್ಲ ಮಡಿವಂತಿಕೆ ಬಿಡಿ ಎನ್ನುತ್ತಾರೆ. ಹೆಣ್ಣೊಬ್ಬಳೇ ಯಾಕೆ expose ಮಾಡಬೇಕು?ಗಂಡಸರೂ ಮಾಡಲಿ… ಶರ್ಟ್ ಬಿಚ್ಚಲಿ, ಬೈಸೆಪ್ಸ್, ಸಿಕ್ಸ್ ಪ್ಯಾಕ್ ತೋರಿಸಲಿ.. ಎನ್ನುವ ಕೂಗು ಸಮಾನತೆ ಬೇಕೆನ್ನುವವರದು.

ಗಂಡಿನ ಸಿಕ್ಸ್ ಪ್ಯಾಕ್ ನೋಡಿ ಅವನನ್ನು ರೇಪ್ ಮಾಡಲು ಹೊರಡುವುದಿಲ್ಲ ಹೆಣ್ಣು. ಫಿಸಿಕಲಿ ಅವಳಿಗೆ ಸಾಧ್ಯವೂ ಇಲ್ಲ… ಸೆಡ್ಯೂಸ್ ಮಾಡಬಹುದೇನೋ ನಂತರ ಕೇಸ್ ಹಾಕಿದರೆ ಗಂಡಸಿಗೆ ಕಷ್ಟವೇ…

ಹೆಣ್ಣಿನ ಮೈಮಾಟ, ಉದ್ರೇಕಿಸುವ ನೃತ್ಯ ನೋಡಿದ ಗಂಡಸು.. ರೇಪ್ ಮಾಡಬಲ್ಲ (ನೋಡಿದವರೆಲ್ಲಾ ಮಾಡುತ್ತಾರೆಂದಲ್ಲ)… ಮೈಮಾಟ ತೋರಿದ ಹೆಣ್ಣು (ಯಾವುದೋ ಥಿಯೇಟರ್ರಿನಲ್ಲಿ) ಸಿಗದಿದ್ದರೆ (ಸಿಗುವುದೂ ಇಲ್ಲ… ಅವಳು ಪ್ರೊಟೆಕ್ಷನ್ ಎಂದು ಬಾಡಿಗಾರ್ಡ್ ಇಟ್ಟುಕೊಂಡು ಓಡಾಡುತ್ತಾಳೆ) ಸಿಕ್ಕ ಹೆಣ್ಣಿನ ಮೇಲೆ ಆಕ್ರಮಣ ಮಾಡಬಲ್ಲ. ಮಾಡಬಾರದು ನಿಜ, ಆದರೆ ಮಾಡಬಲ್ಲ.

ಸೆಕ್ಸ್ ಎಜುಕೇಷನ್ ಬೇಕು. ಸೆಕ್ಷುಯಲ್ ಅವೇರ್ನೆಸ್ ಇರಬೇಕು… ಆದರೆ ನಮ್ಮ ಚಲನಚಿತ್ರಗಳ ಮೂಲಕ ಸಿಗುತ್ತಿರುವ ಉದ್ರೇಕ, ಉತ್ತೇಜನ ಬೇಡ. ಹೆಣ್ಣನ್ನು ಒಂದು ಕಮಾಡಿಟಿ (ವಸ್ತು!)ಯಾಗಿ ಪರಿವರ್ತಿಸಿ ಮಾರಾಟ ಮಾಡಿದರೆ ಅವಳು ಬಿಕರಿಗಿಟ್ಟವಳು ಆಗುತ್ತಾಳೆ. ಸೀರಿಯಲ್ ನಟಿಯೊಬ್ಬಳಿಗೆ ಫೇಸ್ ಬುಕ್ ಮೂಲಕ ‘ಎರಡು ದಿನ ನಮ್ಮೊಂದಿಗೆ ಎಂಜಾಯ್ ಮಾಡಲು ಬಾ.. ಗುಡ್ ಡ್ರಿಂಕ್ಸ್ ಅಂಡ್ ಫುಡ್ ವಿತ್ five star comforts’ ಎಂದು ಮೆಸೇಜ್ ಕಳಿಸುವ ಕೀಳುಮಟ್ಟಕ್ಕೆ ಇಳಿಸುತ್ತಿದೆ ಈ ಐಟಂ ಸಾಂಗ್ ಗಳು.

ತೀರಾ ಹಾಳಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ‘ಬಂಗಾರದ ಮನುಷ್ಯ’ ನೋಡಿ ಹಳ್ಳಿಗೆ ಮರಳಿದರಂತೆ ನೂರಾರು ಮಂದಿ. ನಮ್ಮ ದೇಶದಲ್ಲಿಯಂತೂ ಚಲನಚಿತ್ರಗಳ ಪ್ರಭಾವ ಅತೀ ಎಂದೇ ಹೇಳಬಹುದು. ಜವಾಬ್ದಾರಿಯುತವಾಗಿ ನಮ್ಮ ಚಲನಚಿತ್ರಗಳು ಮೂಡಿಬರಲಿ ಎಂಬುದು ಆಶಯ. ನಾಯಕಿ ನಟಿಸಲಿ… ನಾಯಕ ಗೆಲ್ಲಲಿ… ನೋಡುಗರು ಹಾಳಾಗದಿರಲಿ… ನೋಡದೇ ಇರುವವರು ನೆಮ್ಮದಿಯಿಂದ ಇರಲಿ.

1 COMMENT

Leave a Reply