ಅನುದಾನ ಬಳಸದಿರೋದಕ್ಕೆ ಸಿಎಂ ಸಿಟ್ಟು, ವಿದ್ಯುತ್ ಖರೀದಿ- ಕೃಷಿ ಬಳಕೆ ನೀರಿಗೆ ಮಿತಿ, ವಿರೋಚಿತ ಸೋಲುಂಡ ಶ್ರೀಕಾಂತ್, ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಂ.1

Members of ABVP stage protest demanding closing of Theological College and other demands at SBM Circle in Bengaluru on Wednesday.

ದೇಶವಿರೋಧಿ ಹಾಗೂ ಸೇನೆಗೆ ಅಪಮಾನಕ್ಕೆ ವೇದಿಕೆಯಾದ ಕಾರ್ಯಗಾರ ಆಯೋಜಿಸಿದ್ದ ಅಮ್ನೆಸ್ಟಿ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಇದಕ್ಕೆ ಕಾರಣರಾದವರನ್ನು ಬಂಧಿಸಬೇಕೆಂದು ಬುಧವಾರ ಮೈಸೂರು ಬ್ಯಾಂಕ್ ವೃತ್ತ ಹಾಗೂ ಚಾಲುಕ್ಯ ವೃತ್ತದ ಬಳಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಶೀಘ್ರವೇ ತನಿಖೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಬೇಕು ಹಾಗೂ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಜತೆ ಪೊಲೀಸರು ಸಂಯಮದಿಂದ ವರ್ತಿಸಬೇಕು ಎಂದು ಸೂಚಿಸಿದರು.

ಡಿಜಿಟಲ್ ಕನ್ನಡ ಟೀಮ್:

ಅನುದಾನ ಅಸಮರ್ಪಕ ಬಳಕೆಗೆ ಸಿಎಂ ಕಿಡಿ

ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಸ್ಥಳೀಯ ಸಂಸ್ಥೆಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವ್ರು ಕೆಂಡಾಮಂಡಲವಾದರು. ನಿಗದಿತ ಸಮಯದಲ್ಲಿ ಈ ಅನುದಾನ ಬಳಕೆಯಾದಿದ್ರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಿಎಂ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿ, ಹಾಗೂ ತ್ಯಾಜ್ಯ ನಿರ್ಮೂಲನೆಯಂತಹ ಕಾರ್ಯಕ್ಕೆ ಸರ್ಕಾರ 4 ಸಾವಿರ ರುಪಾಯಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದರು, ಈವರೆಗೂ ಬಳಕೆಯಾಗಿರೋದು ಮಾತ್ರ ಕೇವಲ 300 ಕೋಟಿ ಮಾತ್ರ. ಈ ಬಗ್ಗೆ ಪ್ರಶ್ನಿಸಿದ ಮುಖ್ಯಮಂತ್ರಿಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಬಂದ ಉತ್ತರವೆಂದರೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಿಬ್ಬಂದಿಗಳ ಕೊರತೆ ಇದೆ ಎಂದು. ಈ ಉತ್ತರ ಕೇಳಿದ ತಕ್ಷಣವೇ ಮುಖ್ಯಮಂತ್ರಿಗಳು 3620 ಹುದ್ದೆಗಳಿಗೆ ನೇಮಕ ಮಾಡಲು ಸೂಚನೆ ನೀಡಿದರು. ಇದರೊಂದಿಗೆ ವಿವಿಧ ನಗರ ಪಾಲಿಕೆಗಳಲ್ಲಿನ 1199 ಹಾಗೂ ಪೌರಾಡಳಿತ ಇಲಾಖೆಯಲ್ಲಿರುವ 2421 ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಇಲ್ಲವೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸೂಚಿಸಿದ್ದಾರೆ.

ಆಗಸ್ಟ್ 30 ವರೆಗೂ ಮಾತ್ರ ಕೃಷಿಗೆ ಕೆ ಆರ್ ಎಸ್ ನೀರು

ಕಾವೇರಿ ಜಲಾನಯನ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಪರಿಣಾಮ ಜಲಾಶಯದಲ್ಲಿ ವಾಡಿಕೆಯಷ್ಟು ನೀರು ತುಂಬಿಲ್ಲ. ಹೀಗಾಗಿ ಈ ಪ್ರದೇಶದ ಕೃಷಿ ಚಟುವಟಿಕೆಗಳಿಗೆ ಈ ತಿಂಗಳು 30 ರವರೆಗೆ ಮಾತ್ರ ನೀರು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಇಂಧನ ಸಚಿವ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಹೇಳಿದಿಷ್ಟು: ‘ಕೆ ಆರ್ ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಹಾಲಿ ಬೆಳೆ ಉಳಿಸಿಕೊಳ್ಳಲು 40 ಟಿಎಂಸಿ ನೀರು ಬೇಕು. ಕುಡಿಯಲು ಪೂರೈಸುವ ನೀರು ಹೊರತುಪಡಿಸಿ ಜಲಾಶಯದಲ್ಲಿರೋದು ಕೇವಲ 12.5 ಟಿಎಂಸಿ ಮಾತ್ರ ಕೃಷಿಗೆ ಬಳಸಬಹುದು. ಈಗ ಶೇ.50 ರಷ್ಟು ರೈತರು ಬಿತ್ತನೆ ಮಾಡಿದ್ದು, ಅವರಿಗೆ ಮಾತ್ರ ನೀರು ನೀಡಲಾಗುವುದು. ಸೆ.10 ರ ನಂತರ ನೀರಾವರಿ ಸಲಹಾ ಸಮಿತಿ ಜತೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೆ. ಒಂದು ವೇಳೆ ಮಳೆ ಬಾರದೆ ಜಲಾಶಯ ತುಂಬದಿದ್ದರೆ ಕೃಷಿಗೆ ನೀರಿಲ್ಲ. ಇರುವ ನೀರನ್ನು ಕೇವಲ ಕುಡಿಯಲು ಮಾತ್ರ ಪೂರೈಕೆ ಮಾಡಲಾಗುವುದು.’

ಇನ್ನು ಮಳೆ ಕೊರತೆಯಿಂದ ಎದುರಾಗಲಿರುವ ವಿದ್ಯುತ್ ಸಮಸ್ಯೆ ಕುರಿತಂತೆ ಮಾತನಾಡಿದ ಅವರು ಕೊಟ್ಟ ಮಾಹಿತಿ ಹೀಗಿವೆ: ‘ಕಳೆದ ವರ್ಷ ಮಳೆ ಕಡಿಮೆಯಾದ್ದರಿಂದ ವಿದ್ಯುತ್ ಕಂಪನಿಗಳಿಗೆ ₹2500 ಕೋಟಿ ನಷ್ಟವಾಗಿವೆ. ಈ ವರ್ಷವೂ ಮಳೆ ಕಡಿಮೆಯಾಗಿರೋದ್ರಿಂದ ಮತ್ತಷ್ಟು ನಷ್ಟ ಎದುರಾಗುವ ಭೀತಿ ಇದೆ. ರಾಜ್ಯದಲ್ಲಿ ಕೈಗಾರಿಕೆ ಮತ್ತು ಗೃಹ ಬಳಕೆಗೆ ವಿದ್ಯುತ್ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಸರ್ಕಾರ ನಿರ್ಧರಿಸಿದೆ. ಇದರಿಂದ ಬೇಸಿಗೆಯಲ್ಲೂ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ.’

ಹಾಲಿ ಚಾಂಪಿಯನ್ ಗೆ ಸಡ್ಡು ಹೊಡೆದು ಸೋತ ಶ್ರೀಕಾಂತ್

ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ವಿರೋಚಿತ ಸೋಲನುಭವಿಸಿದ್ದಾರೆ. ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ 2 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡಾನ್ ವಿರುದ್ಧ ಸೆಣಸಿದ ಶ್ರೀಕಾಂತ್ 6-21, 21-11, 18-21 ಗೇಮ್ ಗಳ ಅಂತರದಲ್ಲಿ ಪರಾಭವಗೊಂಡರು. ಮಂಗಳವಾರವಷ್ಟೇ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ ಸಿಂಧು ಸೆಮಿಫೈನಲ್ ಪ್ರವೇಶಿಸಿ ಪದಕದ ಆಸೆ ಹೆಚ್ಚಿಸಿದ ನಂತರ, ಎಲ್ಲರ ಗಮನ ಶ್ರೀಕಾಂತ್ ಮೇಲೆ ನೆಟ್ಟಿತ್ತು. ಈ ಪಂದ್ಯದಲ್ಲಿ ಶ್ರೀಕಾಂತ್ ಸೋತರೂ ಆತ ನೀಡಿದ ಪ್ರದರ್ಶನ ಮತ್ತು ಚಾಂಪಿಯನ್ ಆಟಗಾರನಿಗೆ ನೀಡಿದ ಪೈಪೋಟಿ ಗಮನಾರ್ಹವಾಗಿತ್ತು. ಇದರೊಂದಿಗೆ ಶ್ರೀಕಾಂತ್ ಹೋರಾಟ ಅಂತ್ಯಗೊಂಡಿದ್ದು, ಬ್ಯಾಡ್ಮಿಂಟನ್ ಪಾಳಯದಿಂದ ಪಿ.ವಿ ಸಿಂಧು ಭಾರತದ ಪರ ಏಕಾಂಗಿ ಹೋರಾಟ ನಡೆಸಲಿದ್ದಾರೆ.

ನಂ.1 ಆಯ್ತು ಟೀಂ ಇಂಡಿಯಾ

ಒಂದೆಡೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಜಯ… ಮತ್ತೊಂದೆಡೆ ಶ್ರೀಲಂಕಾ ಪ್ರವಾಸದಲ್ಲಿರೋ ಆಸ್ಟ್ರೇಲಿಯಾ3-0 ಅಂತರದ ಸರಣಿ ಸೋಲು… ಈ ಎರಡು ಫಲಿತಾಂಶದ ಪರಿಣಾಮ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆಗ್ರಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯಾ ತಂಡ ಶ್ರೀಲಾಂಕ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ 118 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು, ಈಗ ಸರಣಿ ಸೋತ ಹಿನ್ನೆಲೆಯಲ್ಲಿ 108 ಅಂಕಗಳಿಗೆ ಕುಸಿದಿದ್ದು, ಮೂರನೇ ಸ್ಥಾನದಲ್ಲಿದೆ. ಇದರೊಂದಿಗೆ ಭಾರತ (112) ಅಗ್ರಸ್ಥಾನ ಪಡೆದರೆ, ಪಾಕಿಸ್ತಾನ (111) ದ್ವಿತೀಯ ಸ್ಥಾನದಲ್ಲಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ತಮಿಳುನಾಡು ವಿಧಾನಸಭೆಯಲ್ಲಿ ಗದ್ದಲ ನಡೆಸಿದ ವಿರೋಧ ಪಕ್ಷ ಡಿಎಂಕೆ ಪಕ್ಷದ 80ಕ್ಕೂ ಹೆಚ್ಚು ಶಾಸಕರನ್ನು ಸ್ಪೀಕರ್ ಪಿ.ಧನಪಾಲ್ ಒಂದುವಾರಗಳ ಕಾಲ ಅಮಾನತುಗೊಳಿಸಿದ ಘಟನೆ ಬುಧವಾರ ನಡೆದಿದೆ. ಎಐಡಿಎಂಕೆ ಶಾಸಕರ ಹೇಳಿಕೆ ವಿರೋಧಿಸಿ ಡಿಎಂಕೆ ಶಾಸಕರು ತೀವ್ರ ಗದ್ದಲ ನಡೆಸಿದರು. ಸದನದಲ್ಲಿ ಗೌರವ ಚ್ಯುತಿ ತಂದ ಕಾರಣಕ್ಕೆ ಸ್ಪೀಕರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
  • ಹಲವು ವರ್ಷಗಳ ನಂತರ ಮೊದಲ ಬಾರಿಗೆ ಬರಾಮುಲ್ಲಾ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಬೆಳಗಿನ ಜಾವ 2.30ರಿಂದ 3.00 ಗಂಟೆ ಸುಮಾರಿಗೆ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆದ ಈ ದಾಳಿಯಲ್ಲಿ 2 ಯೋಧರು, 1 ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಇನ್ನು 5 ಯೋಧರು ಗಾಯಗೊಂಡಿದ್ದಾರೆ.
  • ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ವಿವಿಧ ರಾಜ್ಯಗಳಿಗೆ ರಾಜ್ಯಪಾಲರ ನೇಮಕ ಮಾಡಿದರು. ಬಿಜೆಪಿ ನಾಯಕಿ ನಜ್ಮಾ ಹೆಪ್ತುಲ್ಲಾ ಅವರನ್ನು ಮಣಿಪುರಕ್ಕೆ, ಬನ್ವರಿಲಾಲ್ ಪುರೋಹಿತ್ ಅವರನ್ನು ಅಸ್ಸಾಂ, ವಿ.ಪಿ ಸಿಂಗ್ ಬಡ್ನೋರ್ ಅವರನ್ನು ಪಂಜಾಬ್ ಮತ್ತು ಜಗದೀಶ್ ಮುಖಿ ಅವರನ್ನು ಅಂಡಮಾನ್ ಮತ್ತು ನಿಕೋಬಾರಿನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದಾರೆ.

Leave a Reply