ಪಾಕ್ ಆಕ್ರಮಿತ ಕಾಶ್ಮೀರದ ಹಿಂದೊಂದು ಬ್ರಿಟಿಷ್ ದ್ರೋಹದ ಕಥನ, ವಿಶ್ವಶಕ್ತಿಯಾಗಬೇಕಾದರೆ ಭಾರತ ತನ್ನದಾಗಿಸಿಕೊಳ್ಳಲೇಬೇಕಿರುವ ಗಿಲ್ಗಿಟ್- ಬಾಲ್ಟಿಸ್ತಾನ

ಜಮ್ಮು-ಕಾಶ್ಮೀರ ವಿಚಾರ ಸಮರ

rsz_jk_logo

-ಭಾಗ 1-

author-chaitanyaಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳುವಾಗ ಅಲ್ಲಿ ಬೇರೆಲ್ಲ ಸ್ಥಳಗಳಿಗಿಂತ ಹೆಚ್ಚು ವ್ಯಾಪ್ತಿಯಲ್ಲಿರುವುದು ಹಾಗೂ ಚರ್ಚೆಯಲ್ಲಿರುವುದು ಗಿಲ್ಗಿಟ್- ಬಾಲ್ಟಿಸ್ತಾನ ಪ್ರದೇಶಗಳು. ಇದು ಇತಿಹಾಸದುದ್ದಕ್ಕೂ ಜಗತ್ತೇ ಕಣ್ಣಿಟ್ಟಿರುವ ಪ್ರದೇಶ.

ಭೂಪಟ ಎದುರಿಗಿರಿಸಿಕೊಂಡರೆ ಇದರ ಮಹತ್ವ ಗೊತ್ತಾಗಿಬಿಡುತ್ತದೆ. ಅಫಘಾನಿಸ್ತಾನ, ಚೀನಾಗಳೊಂದಿಗೆ ಸಂಪರ್ಕ ಬೆಸೆಯುವ ಇದು ಮಧ್ಯ ಏಷ್ಯದ ಕೀಲಿಕೈ. ವ್ಯಾಪಾರ-ವಹಿವಾಟಿಗೆ ಇದರ ಮೇಲಿನ ನಿಯಂತ್ರಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಸ್ವತಃ ಗಿಲ್ಗಿಟ್- ಬಾಲ್ಟಿಸ್ತಾನ ಪ್ರದೇಶವೇ ನೈಸರ್ಗಿಕ ಸಂಪನ್ಮೂಲಗಳ ಗಣಿ. ಇನ್ನೂ ಇದರ ನಿಕ್ಷೇಪಗಳನ್ನು ಸಂಪೂರ್ಣ ಉಪಯೋಗಕ್ಕೆ ತೆರೆದಿರಿಸಿಲ್ಲ. ಆದಾಗ್ಯೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಈ ಪ್ರದೇಶ ಒಡಲಲ್ಲಿ ಸಿರಿವಂತಿಕೆಯ ಭಂಡಾರವನ್ನೇ ಬಚ್ಚಿಟ್ಟುಕೊಂಡಿದೆ. ಅತಿ ದೊಡ್ಡ ನೀರ್ಗಲ್ಲುಗಳನ್ನು ಹೊಂದಿರುವ ಖ್ಯಾತಿ ಗಿಲ್ಗಿಟ್ ಬಾಲ್ಟಿಸ್ತಾನದ್ದು. ಪಾಕಿಸ್ತಾನದ ನೀರಿನ ಬೇಡಿಕೆಯ ಬಹುಪಾಲನ್ನು ಪೂರೈಸುವ ಮೂಲ ಇದೇ. ಸೀಸ, ತಾಮ್ರ, ನಿಕೆಲ್, ಕೈಗಾರಿಕೆಗೆ ಬೇಕಾಗುವ ಖನಿಜಾಂಶಗಳನ್ನೆಲ್ಲ ಹೊದ್ದಿರುವ ಪ್ರದೇಶದಲ್ಲಿ ಬಂಗಾರ ಮತ್ತು ತೈಲದ ಕುರುಹುಗಳೂ ಇವೆ ಅಂತಲೂ ಕೆಲವು ಅಧ್ಯಯನಗಳು ಹೇಳುತ್ತವೆ.

ಇಲ್ಲಿ ಚೀನಾ ಆರ್ಥಿಕ ಕಾರಿಡಾರ್ ಮಾಡಲು ಹೊರಟಿರುವುದು ಸುಮ್ಮನೇ ಅಲ್ಲ! ಆರ್ಥಿಕ ಕಾರಿಡಾರಿನಲ್ಲಿ ಗಿಲ್ಗಿಟ್- ಬಾಲ್ಟಿಸ್ತಾನಕ್ಕೆ ನಿರ್ದಿಷ್ಟ ಮಾಲಿಕತ್ವದ ಪಾಲನ್ನು ನೀಡದಿದ್ದರೆ ಮಾಡಲು ಬಿಡುವುದಿಲ್ಲ ಅಂತ ಅಲ್ಲೊಂದು ಜನಾಂದೋಲನ ರೂಪುಗೊಂಡಿದೆ. ಪಾಕಿಸ್ತಾನ ಮತ್ತು ಚೀನಾಗಳು ನಮ್ಮನ್ನು ಶೋಷಿಸುವುದಕ್ಕೆ ಈ ಯೋಜನೆ ತಂದಿವೆ ಅಂತ ಅಲ್ಲಿ ಆಕ್ಷೇಪಗಳು ಎದುರಾಗಿವೆ.

ಹೀಗೆಲ್ಲ ಜಾಗತಿಕ ಮಹತ್ವವನ್ನು ಪಡೆದಿರುವ ಗಿಲ್ಗಿಟ್- ಬಾಲ್ಟಿಸ್ತಾನವನ್ನು ಅವತ್ತಿನ ಬ್ರಿಟಿಷರು ಸಹ ತುಂಬ ಆಸ್ಥೆಯಿಂದ ತಮ್ಮ ನಿಯಂತ್ರಣದಲ್ಲೇ ಇರಿಸಿಕೊಂಡಿದ್ದರು ಹಾಗೂ ಅದು ಇವತ್ತಿಗೆ ಪಾಕಿಸ್ತಾನದ ಕೈಯಲ್ಲಿರುವುದಕ್ಕೂ, ಅವತ್ತಿನ ಜಾಗತಿಕ ರಾಜಕಾರಣದಲ್ಲಿ ದೊಡ್ಡಣ್ಣ ಸ್ಥಾನದಲ್ಲಿದ್ದ ಬ್ರಿಟಿಷರು ಮಾಡಿದ ಮಸಲತ್ತೇ ಕಾರಣ! ಈಗ ಅಮೆರಿಕ ವರ್ಸಸ್ ಚೀನಾ ಎಂಬಂತಹ ವಾತಾವರಣವೊಂದು ಹೇಗಿದೆಯೋ, ಅಂದಿಗೆ ಪಾಶ್ಚಾತ್ಯರು ವರ್ಸಸ್ ಸೋವಿಯತ್ ಯೂನಿಯನ್ ಅರ್ಥಾತ್ ಈಗಿನ ರಷ್ಯ ಎಂಬ ಸ್ಥಿತಿ ಇದ್ದಿದ್ದು ಇತಿಹಾಸ ಓದಿದವರಿಗೆಲ್ಲ ಗೊತ್ತು. ಈಗ ತಜಕಿಸ್ತಾನವಾಗಿ ಪಾಕ್- ಆಕ್ರಮಿತ ಕಾಶ್ಮೀರದ ಹತ್ತಿರದಲ್ಲಿರುವ ಪ್ರದೇಶವು ಸೋವಿಯತ್ ಯೂನಿಯನ್ ಭಾಗವೇ ಆಗಿತ್ತು. ಇದನ್ನು ಭಾರತೀಯರಿಗೆ ಬಿಟ್ಟುಕೊಟ್ಟಿದ್ದೇ ಆದರೆ ಸೋವಿಯತ್ ಯೂನಿಯನ್ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳಿಗೆ ಒಂದು ಕಾರಸ್ಥಾನ/ಲಾಂಚಿಂಗ್ ಪ್ಯಾಡ್ ತಪ್ಪಿಹೋಗುತ್ತದೆ ಎಂಬುದನ್ನು ಬ್ರಿಟಿಷರು ಸೇರಿದಂತೆ ಪಾಶ್ಚಾತ್ಯ ಬಲಗಳೆಲ್ಲ ಗ್ರಹಿಸಿದ್ದವು.

ಹಾಗೆಂದೇ ಗಿಲ್ಗಿಟ್- ಬಾಲ್ಟಿಸ್ತಾನವು ಪಾಕಿಸ್ತಾನಕ್ಕೆ ಸೇರುವಲ್ಲಿ ಬ್ರಿಟಿಷರ ಆಸ್ಥೆ ಇದೆ. ಜಮ್ಮು-ಕಾಶ್ಮೀರದ ಉಳಿದ ಭಾಗಗಳನ್ನು ಪಾಕ್ ಆಕ್ರಮಿಸಿಕೊಳ್ಳುವುದಕ್ಕೂ ಬ್ರಿಟಿಷರ ಪರೋಕ್ಷ ಸಹಾಯ ಇತ್ತು. ಸದ್ಯಕ್ಕೆ, ಕಾರ್ಯತಂತ್ರದ ದೃಷ್ಟಿಯಿಂದ ಯಾವತ್ತೂ ಪ್ರಾಮುಖ್ಯ ಪಡೆದಿದ್ದ ಗಿಲ್ಗಿಟ್- ಬಾಲ್ಟಿಸ್ತಾನ ಪಾಕಿಸ್ತಾನಕ್ಕೆ ದಕ್ಕಿದ್ದು ಹೇಗೆ ಎಂಬ ಕತೆ ಗಮನಿಸೋಣ.

ಗಿಲ್ಗಿಟ್- ಬಾಲ್ಟಿಸ್ತಾನಗಳು ಜಮ್ಮು-ಕಾಶ್ಮೀರದ ಭಾಗವೇ ಆಗಿದ್ದರೂ ರಷ್ಯಾಕ್ಕೆ ಹೆದರಿದ್ದ ಬ್ರಿಟಿಷರು ಅಲ್ಲಿ ಮಹಾರಾಜನ ವ್ಯಾಪ್ತಿ ಮೊಟಕುಗೊಳಿಸಿ, ಗಿಲ್ಗಿಟ್ ಸ್ಕೌಟ್ಸ್ ಹೆಸರಲ್ಲಿ ಪಡೆಯೊಂದನ್ನು ಸ್ಥಾಪಿಸಿದ್ದರು. 1935ರ ಮಾರ್ಚ್ 26ರಿಂದ 60 ವರ್ಷಗಳ ಅವಧಿಗೆ ಈ ಪ್ರದೇಶವನ್ನು ಬ್ರಿಟಿಷರಿಗೆ ಭೋಗ್ಯಕ್ಕೆ ಕೊಡುವ ಒಪ್ಪಂದಕ್ಕೆ ಮಹಾರಾಜ ಸಹಿ ಹಾಕಲೇಬೇಕಾಯಿತು. 1947ರಲ್ಲಿ ಯಾವಾಗ ಜಮ್ಮು-ಕಾಶ್ಮೀರದ ಮಹಾರಾಜ ಭಾರತದೊಂದಿಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದನೋ ಆಗ ಕಾಯ್ದೆಬದ್ಧವಾಗಿ ಬ್ರಿಟಿಷರು ಗಿಲ್ಗಿಟ್ ಏಜೆನ್ಸಿಯನ್ನು ಮಹಾರಾಜನಿಗೆ ಹಿಂತಿರುಗಿಸಬೇಕಾಯಿತು. ಅಲ್ಲಿ ಬ್ರಿಟಿಷರ ಪರವಾಗಿ ಗಿಲ್ಗಿಟ್ ಏಜೆನ್ಸಿ ಪಡೆಯನ್ನು ನಿರ್ವಹಿಸುತ್ತಿದ್ದದ್ದು ಮೇಜರ್ ಬ್ರೌನ್. ಆತನ ಜತೆಗಿದ್ದದ್ದು ಮೇಜರ್ ಬಾಬರ್ ಖಾನ್. 1947ರ ಜುಲೈನಲ್ಲಿ ಮಹಾರಾಜನ ಪರವಾಗಿ ಈ ಪ್ರದೇಶಗಳ ಆಡಳಿತ ವಹಿಸಿಕೊಳ್ಳುವುದಕ್ಕೆ ಬ್ರಿಗೆಡಿಯರ್ ಘನ್ಸಾರಾ ಸಿಂಗ್ ಅಲ್ಲಿಗೆ ತೆರಳಿದಾಗ ಇವರೆಲ್ಲ ಹೇಳಿದ್ದು- ತಮ್ಮ ಸೇವೆಯ ಸಂಬಂಧ ಕೆಲವು ಬೇಡಿಕೆಗಳಿವೆ. ಅದನ್ನು ಹೊಸ ಆಡಳಿತ ಈಡೇರಿಸಿದೊಡನೆ ನಾವೆಲ್ಲ ರಾಜ್ಯವನ್ನು ಮಹಾರಾಜನ ಆಣತಿಯಂತೆ ಕಾಪಾಡಲು ಸಿದ್ಧ. ಆದರೆ ಆಗಸ್ಟ್ 1ರಿಂದ ಘನ್ಸಾರಾ ಸಿಂಗ್ ಅಲ್ಲಿನ ಆಡಳಿತ ವಹಿಸಿಕೊಳ್ಳುವುದಕ್ಕೆ ಹೋದಾಗ ಎಲ್ಲವೂ ಅಸ್ತವ್ಯಸ್ತವಾಗಿತ್ತು. ಪಹರೆ ಪಡೆಯ ಬ್ರಿಟಿಷ್ ಅಧಿಕಾರಿಗಳೆಲ್ಲ ಪಾಕಿಸ್ತಾನದ ಪರ ಹೋಗಿದ್ದರು. ಅಲ್ಲಿನ ಸ್ಥಳೀಯಾಡಳಿತ ಸಹ ಸಂಬಳದ ಕ್ಯಾತೆ ತೆಗೆದು ಕೆಲಸ ಮಾಡುವುದಿಲ್ಲ ಅಂತ ಕುಳಿತಿತ್ತು. ಆ ಪ್ರದೇಶಕ್ಕೆ ಹೊರಗಿನಿಂದ ಬರಬೇಕಿದ್ದ ದಾಸ್ತಾನುಗಳೆಲ್ಲ ಖಾಲಿಯಾಗಿದ್ದವು. ಮಹಾರಾಜನಿಗೆ ಇವೆಲ್ಲವನ್ನು ಸಂಬಾಳಿಸುವ ಛಾತಿ ಇದ್ದಿರಲಿಲ್ಲ. ಇತ್ತ ಭಾರತ ಸರ್ಕಾರ ಸಹ ವಿಭಜನೆ, ದಂಗೆಗಳು ಇತ್ಯಾದಿ ವಿಚಾರಗಳಲ್ಲಿ ವ್ಯಸ್ತವಾಗಿತ್ತು.

ಅವತ್ತಿಗೆ ಗಿಲ್ಗಿಟ್ ಗೆ 34 ಮೈಲಿ ದೂರದಲ್ಲಿ ಕ್ಯಾಪ್ಟನ್ ದುರ್ಗಾ ಸಿಂಗ್ ನೇತೃತ್ವದಲ್ಲಿ 5ನೇ ಕಾಶ್ಮೀರ್ ಲೈಟ್ ಇನ್ಫೆಂಟ್ರಿ ಕಾರ್ಯನಿರ್ವಹಿಸುತ್ತಿತ್ತು. ಇದನ್ನು 6ನೇ ಕಾಶ್ಮೀರ್ ಲೈಟ್ ಇನ್ಫೆಂಟ್ರಿ (6ನೇ ಕೆ ಎಲ್ ಐ) ಮೂಲಕ ಬದಲಿಸಲಾಯ್ತು. ಮುಸ್ಲಿಮರು ಮತ್ತು ಸಿಖ್ಖರ ಮಿಶ್ರಣ ಹೊಂದಿದ್ದ ಈ ಪಡೆಯ ನಾಯಕ ಲೆಫ್ಟಿನೆಂಟ್ ಕರ್ನಲ್ ಅಬ್ದುಲ್ ಮಜಿದ್ ಖಾನ್. ಅತ್ತ ಮಹಾರಾಜನ ಪರವಾಗಿ ರಾಜ್ಯ ಕಾಪಾಡುವುದಕ್ಕೆ ಒಪ್ಪಿದ್ದ ಮೇಜರ್ ಬ್ರೌನ್ 500 ಬಲದ ಗಿಲ್ಗಿಟ್ ಸ್ಕೌಟ್ಸ್ ಪಡೆ ಹೊಂದಿದ್ದ. ಮಹಾರಾಜನ ಪಡೆಯಿಂದಲೂ ಎರಡು ಮುಸ್ಲಿಂ ಅಧಿಕಾರಿಗಳನ್ನೇ ಈ ಬ್ರೌನ್ಗೆ ಸಾಥ್ ನೀಡಲು ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ 6ನೇ ಕೆ ಎಲ್ ಐನ ಕೆಲ ಮುಸ್ಲಿಂ ಅಧಿಕಾರಿಗಳು ಗಿಲ್ಗಿಟ್ ಸ್ಕೌಟ್ಸ್ ನ ಕೆಳಹಂತದ ಯೋಧರನ್ನು ಸಂಪರ್ಕಿಸಿ ಗಿಲ್ಗಿಟ್ ನಲ್ಲಿ ಪಾಕಿಸ್ತಾನದ ಆಡಳಿತ ತರುವ ಸಂಚು ರೂಪಿಸಿದರು. ಈ ವೇಳೆಗೆ ಜಮ್ಮು-ಕಾಶ್ಮೀರದ ಮೇಲೆ ಪಾಕಿಸ್ತಾನಿ ದಾಳಿಕೋರರು ಮುಗಿಬಿದ್ದಿದ್ದರು. ಇವರು ಶ್ರೀನಗರವನ್ನು ವಶಪಡಿಸಿಕೊಂಡುಬಿಟ್ಟದ್ದಾರೆ ಎಂದು ಗಿಲ್ಗಿಟ್ ನಲ್ಲಿ ವದಂತಿ ಹರಡಿತು. ಇದರಿಂದ ಉತ್ತೇಜಿತರಾದ ಗಿಲ್ಗಿಟ್ ಸ್ಕೌಟ್ಸ್ ಮತ್ತು 6ನೇ ಕೆ ಎಲ್ ಐನ ಮುಸ್ಲಿಂ ಸಿಪಾಯಿಗಳೆಲ್ಲ 1947ರ ನವೆಂಬರ್ 1ರಂದು ಗವರ್ನರ್ ಘನ್ಸಾರಾ ಸಿಂಗ್ ರನ್ನು ಸುತ್ತುವರೆದವು. ಗವರ್ನರ್ ಶರಣಾಗುತ್ತಲೇ ಪಡೆಗಳಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರರ ಚಕಮಕಿಗಳು ಪ್ರಾರಂಭವಾಗಿ, ಪಡೆಯಲ್ಲಿದ್ದ ಸಿಖ್ಖರಲ್ಲಿ ಹೆಚ್ಚಿನವರು ಹತ್ಯೆಯಾದರು ಹಾಗೂ ಉಳಿದವರು ಪಲಾಯನ ಮಾಡಿದರು. ಮೇಜರ್ ಬ್ರೌನ್ ನೇತೃತ್ವದಲ್ಲಿ ಇನ್ನೂ ನಾಲ್ವರು ಮುಸ್ಲಿಂ ಅಧಿಕಾರಿಗಳು ಸೇರಿಕೊಂಡು ನವೆಂಬರ್ 4ರಂದು ಪಾಕಿಸ್ತಾನದ ಧ್ವಜ ಹಾರಿಸಿದರು. ನಂತರದಲ್ಲಿ ಗಿಲ್ಗಿಟ್ ಏಜೆನ್ಸಿಯ ಸುತ್ತಮುತ್ತಲಿನ ಹುಂಜಾ ಮತ್ತು ನಾಗರ್ ಗಳ ಆಡಳಿತಗಾರರೆಲ್ಲ ಪಾಕಿಸ್ತಾನಕ್ಕೆ ವಿಲೀನವಾದರು, ಬೇರೆ ದಾರಿಯೂ ಇರಲಿಲ್ಲ ಎನ್ನಿ.. ಬ್ರಿಟಿಷಿಗ ಮೇಜರ್ ಬ್ರೌನ್ ಗೆ ಕೊನೆಗೊಮ್ಮೆ ಮರಣೋತ್ತರವಾಗಿ ‘ಸ್ಟಾರ್ ಆಫ್ ಪಾಕಿಸ್ತಾನ್’ ಸನ್ಮಾನ ಸಂದಾಯವಾಯಿತು.

ದೇಶ ವಿಭಜನೆ ಸಂದರ್ಭದಲ್ಲಿ ಬ್ರಿಟಿಷರು ಉಭಯ ದೇಶಗಳ ನಡುವಿನ ಸೇನಾ ವಿಂಗಡನೆಯ ಉಸ್ತುವಾರಿಯನ್ನೂ ಹೊತ್ತಿದ್ದರು. ಭಾರತ ಮತ್ತು ಪಾಕಿಸ್ತಾನಗಳೆರಡರಲ್ಲಿ ಕಮಾಂಡರ್ ಇನ್ ಚೀಫ್ ಆಗಿ ಉಸ್ತುವಾರಿ ನೋಡಿಕೊಳ್ಳುತ್ತಿದವರು ಬ್ರಿಟಿಷ್ ಅಧಿಕಾರಿಗಳೇ. ಹೀಗಿರುವಾಗ ಜಮ್ಮು-ಕಾಶ್ಮೀರವು ಭಾರತದೊಂದಿಗೆ ವಿಲೀನವಾಗುತ್ತಿರುವ ಕಾನೂನುಬದ್ಧ ಪ್ರಕ್ರಿಯೆ ವಿರುದ್ಧ ಪ್ರಾರಂಭದಲ್ಲಿ ಪಾಕಿಸ್ತಾನವು ಬುಡಕಟ್ಟು ಜನರನ್ನು ಹಾಗೂ ನಂತರದಲ್ಲಿ ಸೇನೆಯನ್ನೂ ಉಪಯೋಗಿಸುವ ಕಾರ್ಯತಂತ್ರಗಳನ್ನೆಲ್ಲ ಬ್ರಿಟಿಷರಿಗೆ ಗೊತ್ತಿಲ್ಲದಂತೆ ಮಾಡಿತ್ತು ಎಂದು ನಂಬುವುದಂತೂ ಬಲು ಕಷ್ಟ.

ನಂತರದಲ್ಲಿ ಭಾರತವು ರಷ್ಯಾ ಗೆಳೆಯನಾಗಿ ಹಾಗೂ ಪಾಕಿಸ್ತಾನವು ಪಾಶ್ಚಾತ್ಯರ ಸ್ನೇಹಿತನಾಗಿ ರೂಪುಗೊಂಡಿದ್ದನ್ನು ಗಮನಿಸಿದರೆ ಜಮ್ಮು-ಕಾಶ್ಮೀರವನ್ನು ಆಕ್ರಮಣದ ಮೂಲಕ ಅಸ್ತವ್ಯಸ್ತಗೊಳಿಸುವಲ್ಲಿ ಯಾರೆಲ್ಲರ ಆಸ್ಥೆ ಇತ್ತು ಅಂತ ಗೊತ್ತಾಗುತ್ತದೆ.

ಈಗ ಚರಿತ್ರೆ ನೆನೆದು ಆಕ್ರೋಶಪಡುವುದಕ್ಕೆ ಈ ಘಟನೆಗಳನ್ನು ನೆನಪಿಸಿಕೊಳ್ಳಬೇಕಿಲ್ಲ. ಆದರೆ ಸಾರಾಂಶವಿಷ್ಟೆ. ಅವತ್ತು ಇಂಗ್ಲೆಂಡಿಗೆ ಹಾಗೊಂದು ರಾಜಕೀಯದ ಆಟವಾಡುವ ಸಾಮರ್ಥ್ಯವಿತ್ತು ಹಾಗೂ ಅದನ್ನು ಬಳಸಿಕೊಂಡಿತು. ಈ ಎಪ್ಪತ್ತು ವರ್ಷದ ಸ್ವಾತಂತ್ರ್ಯೋತ್ತರ ಯಾನದಲ್ಲಿ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಂತದಲ್ಲಿ ಭಾರತವೂ ಇದೆ. ಆಟವಾಡುವ ಅವಕಾಶಗಳು ನಮ್ಮ ಮುಂದೂ ಇವೆ. ಹಾಗಂತ ಅಪಾಯ ಸಾಧ್ಯತೆಗಳಿಲ್ಲ ಅಂತಲ್ಲ. ಅವತ್ತಿಗೂ ಇವತ್ತಿಗೂ ಜಾಗತಿಕ ರಾಜಕೀಯದ ಕೆಲವು ಅಂಶಗಳು ಬದಲಾಗಿವೆ. ಪಾಕಿಸ್ತಾನವೀಗ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ತೀರಾ ಖಾಸಗಿ ಮಿತ್ರನಾಗಿ ಉಳಿದಿಲ್ಲ. ಒಂದೊಮ್ಮೆ ಸೋವಿಯತ್ ಒಕ್ಕೂಟದ ಬಗ್ಗೆ ತಲೆಕೆಡಿಸಿಕೊಂಡಿದ್ದವರಿಗೆ ಈಗ ಜಾಗತಿಕ ರಾಜಕೀಯ ಬಲಾಬಲದಲ್ಲಿ ಚೀನಾ ಸವಾಲು ಎದುರಾಗಿದೆ ಹಾಗೂ ಪಾಕಿಸ್ತಾನವು ಚೀನಾದ ಜತೆ ನಿಂತಿದೆ ಎಂಬುದು ಗಮನಾರ್ಹ. ಕಳೆದ ಕೆಲವು ವರ್ಷಗಳಲ್ಲಿ ಅಫಘಾನಿಸ್ತಾನದ ಮರು ನಿರ್ಮಾಣದಲ್ಲಿ ಭಾರತ ತೀವ್ರವಾಗಿ ತೊಡಗಿಸಿಕೊಂಡು ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಈ ಅಫ್ಘಾನ್ ಮುಸ್ಲಿಂ ರಾಷ್ಟ್ರವೇ ಆಗಿದ್ದರೂ ಪಾಕಿಸ್ತಾನದ ಜತೆ ಡುರಾಂಡ್ ಗಡಿರೇಖೆ ಸೇರಿದಂತೆ ಹಲವು ವಿಷಯಗಳಲ್ಲಿ ತಕರಾರುಗಳಿವೆ ಹಾಗೂ ಪಾಕಿಗೆ ಹೋಲಿಸಿದರೆ ಭಾರತದೊಂದಿಗಿನ ಅದರ ಸ್ನೇಹವೇ ಗಟ್ಟಿಯಾಗಿದೆ. ಪಾಕಿಸ್ತಾನದೊಳಗಿನ ಬಲೊಚಿಸ್ತಾನವೂ ಸ್ವಾತಂತ್ರ್ಯಕ್ಕೆ ಆಗ್ರಹಿಸುತ್ತ ಭಾರತದ ಸಹಾಯ ಎದುರು ನೋಡುತ್ತಿದೆ. ಆದರೆ ಈ ಬಲೊಚಿಸ್ತಾನವು ಕೇವಲ ಪಾಕಿಸ್ತಾನದೊಂದಿಗಿನ ವಿಷಯವಾಗಿರದೇ ಭಾರತದ ಮಿತ್ರರಾಗಿರುವ ಇರಾನ್ ಮತ್ತು ಅಫಘಾನಿಸ್ತಾನದಲ್ಲೂ ಭೂಮಿತಿ ಕೇಳುತ್ತಿರುವುದರಿಂದ ಭಾರತ ಇಲ್ಲೂ ಎಚ್ಚರಿಕೆ ಆಟವಾಡಬೇಕಿರುವುದಂತೂ ಹೌದು.

ಇವೆಲ್ಲದರ ನಡುವೆ ಪಾಕಿಸ್ತಾನವನ್ನು ರಮಿಸಿಕೊಂಡು ಗಿಲ್ಗಿಟ್- ಬಾಲ್ಟಿಸ್ತಾನಗಳಲ್ಲಿ ಚೀನಾ ಜಂಡಾ ಊರಿದರೆ ಅದರ ದೂರಗಾಮಿ ಪರಿಣಾಮಗಳೇನಾದೀತು ಎಂಬ ಹೆದರಿಕೆ ಸಹಜವಾಗಿಯೇ ಜಗತ್ತಿನ ಬಲಾಢ್ಯ ರಾಷ್ಟ್ರಗಳಿಗಿದೆ. ಖುದ್ದು ಆ ಪ್ರದೇಶದ ಜನರಿಗೆ ಈ ಭೀತಿ ಇದೆ.

ಹೀಗೆಲ್ಲ ಅವಕಾಶಗಳು ಗರಿಗೆದರಿರುವಾಗ, ತಾನು ಜಗತ್ತಿನ ಆರ್ಥಿಕ ಶಕ್ತಿಯಾಗುವ, ವಿಶ್ವಗುರುವಾಗುವ ಪರಿಕಲ್ಪನೆಗಳನ್ನು ಇರಿಸಿಕೊಂಡಿರುವ ಭಾರತವು, ಜಗತ್ತಿನ ಕಾರ್ಯತಂತ್ರ ಸೂಕ್ಷ್ಮ ಪ್ರದೇಶವಾಗಿರುವ ಗಿಲ್ಗಿಟ್- ಬಾಲ್ಟಿಸ್ತಾನ ಹಾಗೂ ಒಟ್ಟಾರೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಹೆಚ್ಚು ಹೆಚ್ಚು ಮಾತಾಡುತ್ತ, ಹಕ್ಕಿನ ದಾವೆ ಹೂಡದಿದ್ದರೆ ಆದೀತೇ? ‘ಅಯ್ಯೋ ಬಿಡಿ, ನಮ್ಮದೇ ನಮಗೆ ನಿಭಾಯಿಸೋಕಾಗಲ್ಲ..’ ಎಂಬ ಸಿನಿಕತೆ- ಕುಹಕಗಳಿಂದ ದೂರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಧ್ವನಿ ಅನುಸರಿಸಬೇಕಾದ ಅಗತ್ಯ ಇರುವುದು ಈ ದೃಷ್ಟಿಯಿಂದಲೇ.

ಸರಣಿಯ ಆರಂಭದ ವಿಷಯ ಪ್ರವೇಶ ಇಲ್ಲಿ ಓದಿ

2 COMMENTS

Leave a Reply