ವಿಶ್ವದ ನಂ.2 ಆಟಗಾರ್ತಿಯನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಸಿಂಧು, ಪದಕಕ್ಕೆ ಇನ್ನೊಂದು ಜಯ ಬಾಕಿ

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಒಲಿಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ ಘಟಾನುಘಟಿ ಸ್ಪರ್ಧಿಗಳು ಬರಿಗೈಯಲ್ಲಿ ತವರಿಗೆ ಮರಳಿದಾಗ ನಿರಾಸೆಗೊಂಡಿದ್ದ ಅಭಿಮಾನಿಗಳ ಮನದಲ್ಲಿ ಮತ್ತೆ ಪದಕದ ಕನಸು ಚಿಗುರೊಡೆಯುವಂತೆ ಮಾಡಿದ್ದಾರೆ ಭರವಸೆಯ ಶಟ್ಲರ್ ಪಿ.ವಿ ಸಿಂಧು. ಕಾರಣ, ಪಿ.ವಿ ಸಿಂಧು ಈಗ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಸಿಂಧು ಇನ್ನೊಂದು ಜಯ ಸಾಧಿಸಿದರೆ ಭಾರತಕ್ಕೆ ಪದಕ ಖಚಿತವಾಗಲಿದೆ.

ಹೌದು… ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ಬೆಳಗಿನ ಜಾವ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಜಯ ಗಳಿಸಿದ್ದಾರೆ. 10ನೇ ಶ್ರೇಯಾಂಕಿತ ಸಿಂಧು, 2ನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ವಾಂಗ್ ಯಿಹಾನ್ ವಿರುದ್ಧ 22-20, 21-19 ಗೇಮ್ ಗಳ ಅಂತರದ ರೋಚಕ ಜಯ ಸಾಧಿಸಿರೋದು ಕೇವಲ ಸಿಂಧುಗಷ್ಟೇ ಅಲ್ಲ ಅಭಿಮಾನಿಗಳಲ್ಲೂ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಈ ಜಯದೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಎರಡನೇ ಮಹಿಳಾ ಶಟ್ಲರ್ ಎಂಬ ಖ್ಯಾತಿಗೂ ಸಿಂಧು ಭಾಜನರಾಗಿದ್ದಾರೆ. 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದ ಮೊದಲ ಆಟಗಾರ್ತಿಯಾಗಿದ್ದರು.

ಪಂದ್ಯದ ಆರಂಭದಿಂದಲೇ ಪಿ.ವಿ ಸಿಂಧು ಪ್ರಬಲ ಆಟಗಾರ್ತಿಯ ವಿರುದ್ಧ ಆಕ್ರಮಣ ಶೈಲಿ ಆಟಕ್ಕೆ ಮುಂದಾದರು. ಮೊದಲ ಸೆಟ್ ನ ಮೊದಲಾರ್ಧದಲ್ಲಿ ಪ್ರಾಬಲ್ಯ ಮೆರೆದಿದ್ದು ಚೀನಾ ಆಟಗಾರ್ತಿ. ಒಂದು ಹಂತದಲ್ಲಿ ಸಿಂಧು 8-11 ರ ಹಿನ್ನಡೆಯಲ್ಲಿದ್ದರು. ಈ ವೇಳೆ ಹೋರಾಟ ನಡೆಸಿದ ಸಿಂಧು 14-14 ರ ಸಮಬಲ ಸಾಧಿಸಿದ್ರು. ಇವರಿಬ್ಬರ ಜಿದ್ದಾಜಿದ್ದಿನ ಹೋರಾಟದ ಪರಿಣಾಮ ಪಂದ್ಯ 20-20ರ ವರೆಗೂ ಸಮಬಲದಲ್ಲೇ ಸಾಘಿತು. ಈ ಹಂತದಲ್ಲಿ ಸತತ ಎರಡು ಅಂಕಗಳನ್ನು ಪಡೆದ ಸಿಂಧು ಮೊದಲ ಸೆಟ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಮೊದಲ ಸೆಟ್ ನಲ್ಲಿ ಮೇಲುಗೈ ಸಾಧಿಸಿದ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಸಿಂಧು ಎರಡನೇ ಸೆಟ್ ನಲ್ಲೂ ವಾಂಗ್ ವಿರುದ್ಧ ಪ್ರಬಲ ಪೈಪೋಟಿ ನಡೆಸಿದರು. ಎರಡನೇ ಸೆಟ್ ಆರಂಭದಲ್ಲಿ 8-3 ಮುನ್ನಡೆ ಕಾಯ್ದುಕೊಂಡ ಸಿಂಧು, ನಂತರ ಚೀನಾ ಆಟಗಾರ್ತಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಪರಿಣಾಮ ಈ ಅಂತರ 11-8ಕ್ಕೆ ಕಡಿಮೆಯಾಯ್ತು. ನಂತರ 13-13 ಅಂಕಗಳ ಸಮಬಲ ಸಾಧಿಸಿದರು. ಈ ಹಂತದಲ್ಲಿ ಒತ್ತಡಕ್ಕೆ ಸಿಲುಕದೆ ಚುರುಕಿನ ಆಟ ಪ್ರದರ್ಶಿಸಿದ ಸಿಂಧು ಈ ಸೆಟ್ ನಲ್ಲೂ ಮೇಲುಗೈ ಸಾಧಿಸುವುದರೊಂದಿಗೆ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರು.

ಈಗ ಸೆಮಿಫೈನಲ್ ಪ್ರವೇಶಿಸಿರೋ ಪಿ.ವಿ ಸಿಂಧು ಮುಂದಿನ ಪಂದ್ಯದಲ್ಲಿ ಗೆದ್ದರೆ ಸಾಕು, ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಪ್ರಾಪ್ತಿಯಾಗುತ್ತದೆ. ಅಂದಹಾಗೆ ಪಿ.ವಿ ಸಿಂಧು ಗುರುವಾರ ನಡೆಯಲಿರುವ ಉಪಾಂತ್ಯದ ಪಂದ್ಯದಲ್ಲಿ ಜಪಾನಿನ ನೊಜೊಮಿ ಒಕುಹರಾ ವಿರುದ್ಧ ಸೆಣಸಲಿದ್ದಾರೆ.

ಇನ್ನು ಮಂಗಳವಾರ ಸಂಜೆ ನಡೆದ ಪುರುಷರ ಗ್ರೆಕೊ ರೋಮನ್ 98 ಕೆ.ಜಿ ಕುಸ್ತಿ ವಿಭಾಗದ ಪ್ರಿಕ್ವಾರ್ಟರ್ ಪಂದ್ಯದಲ್ಲಿ ಭಾರತದ ಹರ್ದೀಪ್ ಸಿಂಗ್, ಟರ್ಕಿಯ ಸೆಂಕ್ ಲಿಡೆಮ್ ವಿರುದ್ಧ 2-1 ಅಂಕಗಳ ಅಂತರದಿಂದ ಪರಾಭವಗೊಂಡರು.

ಬುಧವಾರ ಭಾರತದ ಸ್ಪರ್ಧಿಗಳು ಭಾಗವಹಿಸಲಿರುವ ಕ್ರೀಡೆಗಳು ಹೀಗಿವೆ…

ಗಾಲ್ಫ್: ಬುಧವಾರದಿಂದ ಮಹಿಳಾ ಗಾಲ್ಫ್ ಸ್ಪರ್ಧೆ ಆರಂಭವಾಗಲಿದ್ದು, ಭಾರತದ ಅದಿತಿ ಅಶೋಕ್  ಸ್ಪರ್ಧಿಸಲಿದ್ದಾರೆ. ಗಾಲ್ಫ್ ನ ಮೊದಲ ಸುತ್ತು ಬುಧವಾರ ಸಂಜೆ 4.00 ಕ್ಕೆ ಆರಂಭ.

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಕೆ.ಶ್ರೀಕಾಂತ್ ಗೆ ಕಠಿಣ ಸಾಲು ಎದುರಾಗಳಿದೆ. ಕಳೆದ ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡನ್ ವಿರುದ್ಧ ಸಂಜೆ 6.00ಕ್ಕೆ ಸ್ಪರ್ಧಿಸಲಿದ್ದಾರೆ.

ಕುಸ್ತಿ: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗತ್ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿದ್ದು, ಮಹಿಳೆಯರ ಫ್ರೀಸ್ಟೈಲ್ 48 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾದ ಎಮಿಲಿಯಾ ಅಲಿನಾ ವಿರುದ್ಧ ಸಂಜೆ 6.30ಕ್ಕೆ ಸೆಣಸಲಿದ್ದಾರೆ. ಮಹಿಳೆಯರ ಫ್ರೀಸ್ಟೈಲ್ 58 ಕೆ.ಜಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಸಾಕ್ಷಿ ಮಲಿಕ್ ಅವರು ಸ್ವೀಡನ್ನಿನ ಜೊಹಾನ್ನಾ ಮ್ಯಾಟ್ಸನ್ ವಿರುದ್ಧ ಸಂಜೆ 6.30ಕ್ಕೆ ಸೆಣಸಲಿದ್ದಾರೆ.

ಅಥ್ಲೆಟಿಕ್ಸ್: ಮಹಿಳೆಯರ 800 ಮೀ. ಓಟದಲ್ಲಿ ಭಾರತದ ಟಿಂಟು ಲುಕಾ 3ನೇ ಹೀಟ್ಸ್ ನಲ್ಲಿ ಸ್ಪರ್ಧಿಸಲಿದ್ದು, ಈ ಸ್ಪರ್ಧೆ ರಾತ್ರಿ 7.30ಕ್ಕೆ ಆರಂಭವಾಗಲಿದೆ.

Leave a Reply