ಬಲೊಚಿಸ್ತಾನದ ಕುರಿತ ಭಾರತದ ನಿಲುವಿಗೆ ಬಾಂಗ್ಲಾದೇಶದ ಬೆಂಬಲ

ಮಾಹಿತಿ ವಲಯದ ಸಹಕಾರ ಕುರಿತಾಗಿ ವೆಂಕಯ್ಯ ನಾಯ್ಡು ಅವರೊಂದಿಗೆ ಬಾಂಗ್ಲಾದೇಶ ಸಚಿವ ಇನು ಸಮಾಲೋಚನೆ. ವೆಂಕಯ್ಯ ನಾಯ್ಡು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಚಿತ್ರ.

ಡಿಜಿಟಲ್ ಕನ್ನಡ ಟೀಮ್:

ಬಲೊಚಿಸ್ತಾನದಲ್ಲಿ ಪಾಕಿಸ್ತಾನವು ಎಸಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಪ್ರಶ್ನಿಸುವ, ಅಲ್ಲಿನ ಬಲೊಚಿ ರಾಷ್ಟ್ರವಾದಿಗಳಿಗೆ ಬೆಂಬಲದ ಧ್ವನಿಯಾಗುವ ಭಾರತದ ಧೋರಣೆಯನ್ನು ಬಾಂಗ್ಲಾದೇಶವೂ ಬೆಂಬಲಿಸಿದೆ.

ಬಾಂಗ್ಲಾದೇಶದ ಶೇಖ್ ಹಸೀನಾ ಸರ್ಕಾರದ ವಾರ್ತಾ ಮಂತ್ರಿ ಹಸಾನುಲ್ ಹಕ್ ಇನು, ಮೂರು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ದಿ ಹಿಂದು ಪತ್ರಿಕೆ ಜತೆ ಮಾತನಾಡಿರುವ ಇನು, ಶೀಘ್ರದಲ್ಲೇ ಪಾಕಿಸ್ತಾನದ ಬಲೊಚಿನಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿರುವುದರ ವಿರುದ್ಧ ಬಾಂಗ್ಲಾದೇಶವು ನೀತಿಯನ್ನು ರೂಪಿಸಿ ಘೋಷಿಸುವುದಾಗಿ ಹೇಳಿದ್ದಾರಲ್ಲದೇ, ಇದು 1971ಕ್ಕೆ ಮುಂಚೆ ಬಾಂಗ್ಲಾದೇಶದಲ್ಲಿ ಇದ್ದಂತಹ ಪರಿಸ್ಥಿತಿಯೇ ಆಗಿದೆ ಎಂದು ಚುರುಕು ಮುಟ್ಟಿಸಿದ್ದಾರೆ.

1971ಕ್ಕೂ ಮುಂಚೆ ಪೂರ್ವ ಪಾಕಿಸ್ತಾನವೆನಿಸಿಕೊಂಡು ಪಾಕಿಸ್ತಾನದ ಭಾಗವೇ ಆಗಿದ್ದ ಬಾಂಗ್ಲಾದ ಮೇಲೆ, ಅಲ್ಲಿನ ಬಂಗಾಳಿಗಳು ಹಾಗೂ ಬಂಗಾಳಿ ಮುಸ್ಲಿಮರ ಮೇಲೆ ಪಾಕಿಸ್ತಾನವು ನಿರಂತರ ದೌರ್ಜನ್ಯ ಹತ್ಯಾಕಾಂಡಗಳಲ್ಲಿ ತೊಡಗಿಸಿಕೊಂಡಿದ್ದಾಗಲೇ ಸ್ವಾತಂತ್ರ್ಯದ ಧ್ವನಿ ಎದ್ದಿತ್ತು.

ಮುಕ್ತಿ ವಾಹಿನಿಯ ಗೆರಿಲ್ಲಾ ಪಡೆ ಸ್ವಾತಂತ್ರ್ಯ ಕದನದಲ್ಲಿ ತೊಡಗಿಸಿಕೊಂಡಾಗ ಭಾರತ ಅದಕ್ಕೆ ಬೆಂಬಲ ನೀಡಿತ್ತು. ಭಾರತೀಯ ಸೇನೆಯ ನೆರವಿನಿಂದಲೇ ಬಾಂಗ್ಲಾ ವಿಮೋಚನೆ ಆಗಿದ್ದು ಈಗ ಇತಿಹಾಸ. ಆ ಹೋರಾಟದಲ್ಲಿ ಮುಕ್ತಿ ವಾಹಿನಿ ಪಡೆಯಲ್ಲಿದ್ದುಕೊಂಡು ಸೆಣೆಸಿದವರಲ್ಲಿ ಇದೀಗ ಭಾರತ ಭೇಟಿ ನೀಡುತ್ತಿರುವ ಇನು ಸಹ ಒಬ್ಬರು. ಮೂರು ದಿನಗಳ ಭೇಟಿ ಸಂದರ್ಭದಲ್ಲಿ ಅವರು ಭಾರತದ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೊವಲ್ ಅವರೊಂದಿಗೂ ಸಮಾಲೋಚಿಸಲಿದ್ದಾರೆ ಎಂಬುದು ವಿಶೇಷ.

Leave a Reply