ಸೋನಿಯಾ ಕಾಂಗ್ರೆಸ್ಸಿನ ದಿಗ್ಗಿ, ಚಿದುರನ್ನು ಆವರಿಸಿರುವ ವಿರೋಧದ ವೈರಸ್ಸಿಗೆ ಇಂದಿರಾ ಸ್ಮರಣೆಯೇ ಮದ್ದು!

ಪ್ರವೀಣ್ ಕುಮಾರ್

ಪ್ರಧಾನಿ ಮೋದಿ ತಮ್ಮ ಮಾತುಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಲೊಚಿಸ್ತಾನಗಳ ಪ್ರಸ್ತಾಪ ಮಾಡಿದ್ದಕ್ಕೆ ಪಾಕಿಸ್ತಾನಕ್ಕಂತೂ ಅಸೌಖ್ಯ ಸಹಜ. ಆದರೆ ಅಷ್ಟೇಮಟ್ಟಿಗೆ ರಕ್ತದೊತ್ತಡ ಏರಿಸಿಕೊಂಡಿರುವುದು ಕಾಂಗ್ರೆಸ್.

ಹೀಗೆ ಆವೇಶಕ್ಕೆ ಬಿದ್ದಿರುವುದರಿಂದ ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಬಾಯಿಂದ ಮನದ ಮಾತೇ ಉದುರಿಬಿಟ್ಟಿದೆ. ಮೋದಿ ಟೀಕೆಯ ಭರದಲ್ಲಿ ಅವರು ಭಾರತದ ಜಮ್ಮು-ಕಾಶ್ಮೀರ ‘ಭಾರತ ಆಕ್ರಮಿತ ಕಾಶ್ಮೀರ’ ಎಂದು ಹೇಳಿದ್ದಾರೆ. ತಮ್ಮ ಪ್ರಮಾದದ ಅರಿವಾಗುತ್ತಲೇ ಅದು ಹಾಗಲ್ಲ… ಭಾರತದ ಕಾಶ್ಮೀರ ಎಂಬರ್ಥದಲ್ಲಿ ಹೇಳಿದೆ ಎಂದರು. ದಿಗ್ವಿಜಯ್ ಸಿಂಗ್ ಅವರ ಪ್ರಕಾರ ಮೋದಿಯವರು ನಮ್ಮ ಕಾಶ್ಮೀರಿಗಳೊಂದಿಗೆ ಮಾತನಾಡಬೇಕು. ಅದುಬಿಟ್ಟು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡುವುದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುತ್ತದೆ.

ಕಾಂಗ್ರೆಸ್ಸಿನ ಪಿ. ಚಿದಂಬರಂ ಮತ್ತು ಸಲ್ಮಾನ್ ಖುರ್ಷಿದ್ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ. ಅರ್ಥಾತ್ ಮೋದಿ ಪ್ರಸ್ತುತಿಯಿಂದ ಆ ಭಾಗದಲ್ಲಿ ಮತ್ತಷ್ಟು ಪರಿಸ್ಥಿತಿ ಹದಗೆಟ್ಟುಬಿಡುತ್ತದೆ ಅನ್ನೋದು. ಸ್ವಾತಂತ್ರ್ಯೋತ್ಸವದ ಪ್ರಧಾನಿ ಭಾಷಣದ ಬೆನ್ನಲ್ಲೇ ಖುರ್ಷಿದ್ ಅವರು, ‘ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತಾಡೋದೇನೋ ಸರಿ, ಆದರೆ ಬಲೊಚಿಸ್ತಾನದ ಕುರಿತು ಮಾತಾಡೋದು ಪಾಕಿಸ್ತಾನದ ಆಂತರಿಕ ವ್ಯವಹಾರದಲ್ಲಿ ಕೈ ಹಾಕಿದಂತಾಗುತ್ತದೆ’ ಎಂಬ ಅಭಿಪ್ರಾಯ ನೀಡಿದ್ದರು. ಆದರೆ ತನ್ನ ಅಧಿಕೃತ ಹೇಳಿಕೆಯಲ್ಲಿ ಮೋದಿಯ ಪ್ರಸ್ತಾಪಗಳಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್, ಖುರ್ಷಿದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು.

ಅತ್ತ ಮೋದಿಯವರನ್ನು ಈ ವಿಷಯದಲ್ಲಿ ಖಂಡತುಂಡ ವಿರೋಧಿಸಿ ದೇಶದ ಜನರ ಭಾವನೆಗಳ ವಿರುದ್ಧ ಹೋಗುವುದಕ್ಕೂ ಆಗದೇ, ಇತ್ತ ಕಾಶ್ಮೀರದ ಬಿಸಿಯಲ್ಲಿ ಮೈಕಾಯಿಸಿಕೊಳ್ಳುವ ಅವಕಾಶವನ್ನು ತಪ್ಪಿಸಿಕೊಳ್ಳಲೂ ಆಗದೇ ಇರುವ ಸ್ಥಿತಿ ಕಾಂಗ್ರೆಸ್ಸಿನದ್ದು. ಹಾಗೆಂದೇ.. ನಮ್ಮ ಪಾರ್ಟಿ ಲೈನು ಇದು ಅಂತ ಹೇಳಿರುವುದಕ್ಕೂ ಅದರ ಪ್ರಮುಖ ನೇತಾರರು ವೈಯಕ್ತಿಕವಾಗಿ ನೀಡುತ್ತಿರುವ ಹೇಳಿಕೆಗಳಿಗೂ ತಾಳಮೇಳವಿಲ್ಲ.

ಇದೊಂಥರ ವಿರೋಧಕ್ಕಾಗಿ ವಿರೋಧಿಸಲೇಬೇಕಿರುವ ವೈರಸ್ಸೊಂದು ತಗುಲಿದಂತಿದೆ. ಇರಲಿ, ಮೋದಿಯವರನ್ನು ಎಲ್ಲ ವಿಷಯಗಳಲ್ಲಿ ವಿರೋಧಿಸಿಯೇ ಅಸ್ತಿತ್ವ ತೋರಿಸುವ ಅನಿವಾರ್ಯತೆ ಕಾಂಗ್ರೆಸ್ಸಿಗಿದ್ದರೂ, ದೇಶ ವರ್ಸಸ್ ವಿದೇಶಿ ಶಕ್ತಿಗಳು ಎಂಬ ಪ್ರಶ್ನೆ ಬಂದಾಗಲಾದರೂ ತುಸು ಭಿನ್ನವಾಗಿ ಯೋಚಿಸಬೇಕಿದೆ. ಇದಕ್ಕಾಗಿ ಇವರೇನೂ ಬಿಜೆಪಿಯಿಂದ ದೇಶಭಕ್ತಿ ಕಲಿಯಬೇಕಿಲ್ಲ. ಬದಲಿಗೆ, ಸೋನಿಯಾ ಆಕ್ರಮಿತ ಮಿದುಳನ್ನು ಕೆಲಕಾಲದ ಮಟ್ಟಿಗೆ ಇಂದಿರಾ ಗಾಂಧಿ ಆಕ್ರಮಿತ ಮಿದುಳನ್ನಾಗಿಸಿದರೆ ಇವರಿಗೆಲ್ಲ ಈ ಅಂಶಗಳು ಹೊಳೆದೀತು.

  • ಪಂಜಾಬಿನಲ್ಲಿ ಖಾಲಿಸ್ತಾನ ಪ್ರತ್ಯೇಕತಾ ಚಳವಳಿ ಹಿಂಸಾತ್ಮಕವಾಗಿ ನಡೆದಿತ್ತು ಅಂತ ಚರಿತ್ರೆ ನಮಗೆ ಅರುಹುತ್ತದೆ. ಅದೂ ಸಹ ಪಾಕ್ ಪ್ರೇರಿತವೇ. ಇವತ್ತಿಗೆ ಅದು ಹೇಳ ಹೆಸರಿಲ್ಲದೇ ನಾಶವಾಗಿರುವುದಕ್ಕೆ ಕೃತಜ್ಞತೆ ಸಲ್ಲಬೇಕಿರುವುದು ಇಂದಿರಾ ಗಾಂಧಿಯವರಿಗೇ. ಪಾಕಿಸ್ತಾನದ ಜತೆ ಕೈಜೋಡಿಸಿದ್ದಾರೆಂದಮೇಲೆ ಮುಗೀತು, ‘ನಮ್ಮದೇ ಜನರು… ಮಾತಾಡಿಸೋಣ. ಹೃದಯಗಳನ್ನು ಬೆಸೆಯೋಣ. ಈ ವಿಷಯದಲ್ಲಿ ಬೇಕಾದರೆ ಪಾಕಿಸ್ತಾನದೊಂದಿಗೂ ಮಾತುಕತೆ ನಡೆಸೋಣ’ ಅಂತೆಲ್ಲ ಅವತ್ತಿನ ಪ್ರಧಾನಿ ಇಂದಿರಾ ಗಾಂಧಿ ತುಸುವಾದರೂ ಯೋಚಿಸಲಿಲ್ಲ. ಇನ್ನಿಲ್ಲದಂತೆ ಪ್ರತ್ಯೇಕತಾವಾದಿಗಳನ್ನು ಸದೆಬಡಿದರು. ಆಗ ಮಾನವ ಹಕ್ಕು ಉಲ್ಲಂಘನೆಗಳಾಗಲಿಲ್ಲವೇ? ಕೆಲವು ಮುಗ್ಧರೂ ಹಿಂಸೆಗೆ ಸಿಗಲಿಲ್ಲವೇ? ಇಲ್ಲ ಎನ್ನಲಾಗುವುದಿಲ್ಲ. ಆದರೆ ಪಂಜಾಬ್ ಮತ್ತೊಂದು ಕಾಶ್ಮೀರವಾಗುವುದನ್ನು ನಿರ್ದಯವಾಗಿ ಚಿವುಟಿದರು ಇಂದಿರಾ.
  • ಅವತ್ತಿನ ಪೂರ್ವ ಪಾಕಿಸ್ತಾನದಲ್ಲಿ 3 ಲಕ್ಷ ಮಂದಿಯನ್ನು ಕೊಂದು ಬಿಸಾಕಿದ ಪಾಕಿಸ್ತಾನದ ಸೇನೆ, ಅತ್ಯಾಚಾರದ ವಿಕೃತಿಯಲ್ಲಿ ತೊಡಗಿತ್ತು. ನಿರಾಶ್ರಿತರ ಭಾರ ಭಾರತದ ಮೇಲೆ ಬಿತ್ತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕೆಂದು ಇಂದಿರಾ ನಿರ್ಧರಿಸಿ ಅಂತಾರಾಷ್ಟ್ರೀಯ ಸಹಾಯ ನಿರೀಕ್ಷಿಸಿದಾಗ ಅಂದಿನ ಅಮೆರಿಕ ಅಧ್ಯಕ್ಷ ನಿಕ್ಸನ್ ತೀರ ಕೇವಲವಾಗಿ ನಡೆದುಕೊಂಡರು. ಪಾಕಿಸ್ತಾನಿಯರು ಅಮೆರಿಕದ ಜತೆ ಸೇನಾ ಮೈತ್ರಿಯನ್ನೂ ಹೊಂದಿದ್ದರು. ಇನ್ನೇನು ಭಾರತ ಯುದ್ಧಕ್ಕೆ ಹೋಗಲಿದೆ ಎಂದು ನಿಚ್ಚಳವಾದಾಗ ವೈರಿಗಳಾದ ಅಮೆರಿಕ ಮತ್ತು ಚೀನಾ ಕೈಕುಲುಕಿಕೊಂಡವು! ಬಂಗಾಳಕೊಲ್ಲಿಯಲ್ಲಿ ತಾನು ಯುದ್ಧನೌಕೆ ತಂದು ಭಾರತವನ್ನು ಗಲಿಬಿಲಿಗೊಳಿಸುವೆ, ನೀನು ಗಡಿಭಾಗದಲ್ಲಿ ಪಡೆ ನುಗ್ಗಿಸು ಅಂತ ಚೀನಾಕ್ಕೆ ಹೇಳಿದ ಅಮೆರಿಕ ಎಲ್ಲ ಕಡೆಯಿಂದ ಭಾರತವನ್ನು ಅಧೀರಗೊಳಿಸಲು ನೋಡಿತು. ಅವತ್ತಿನ ಪರಿಸ್ಥಿತಿಯಲ್ಲಿ ರಷ್ಯದ ಜತೆ ಒಪ್ಪಂದ ಮಾಡಿಕೊಂಡ ಪ್ರಧಾನಿ ಇಂದಿರಾ, ಈ ಜಾಗತಿಕ ಶಕ್ತಿಗಳ ವಿರೋಧದ ನಡುವೆಯೇ ಬಾಂಗ್ಲಾ ವಿಮೋಚನೆ ಮಾಡಿ ಸೈ ಅನಿಸಿಕೊಂಡರು. ‘ಅಯ್ಯಯ್ಯೋ ಬೇಡ.. ಇದರಿಂದ ಭಾರತದ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ನಾವು ನೈತಿಕ ಮೇಲ್ಮಟ್ಟ ಕಳೆದುಕೊಂಡಂತಾಗುತ್ತದೆ. ಸಮಸ್ಯೆ ನಮ್ಮ ದೇಶದ್ದಲ್ಲ. ಬೇಕಾದರೆ ಪಾಕಿಸ್ತಾನದ ಜತೆ ಮಾತಾಡೋಣ’ ಎಂಬ ಮನಸ್ಥಿತಿಯ ದಿಗ್ವಿಜಯ್, ಖುರ್ಷಿದ್, ಚಿದಂಬರಂ ಅಂಥ ಜನರ ಪಟಾಲಂ ಇಟ್ಟುಕೊಂಡು ಗೋಣು ಆಡಿಸುವುದಕ್ಕೆ ಅವರೇನು ಸೋನಿಯಾರೇ?

ಜಮ್ಮು-ಕಾಶ್ಮೀರವೆಂಬ ರಾಜ್ಯದಲ್ಲಿ ಕಣಿವೆಯ ಒಂದು ಗುಂಪು ಪಾಕಿಸ್ತಾನದ ಪ್ರತ್ಯೇಕತಾವಾದಿಗಳ ಜತೆ ಕೈಜೋಡಿಸಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಿರುವಾಗ ಹೃದಯ ಬೆಸೆಯುವ ಕಾವ್ಯಪಾಠ ಮಾಡುವುದು, ಪಾಕಿಸ್ತಾನವು ಇದ್ದಬದ್ದ ವೇದಿಕೆಯಲ್ಲೆಲ್ಲ ಕಾಶ್ಮೀರದ ವಿಚಾರ ಮಾಡುವಾಗ ನಾವು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಲೊಚಿಸ್ತಾನಗಳ ಸುದ್ದಿ ತೆಗೆಯದೇ ಸುಮ್ಮನೇ ಕೂರುವುದು ಇದು ತೀರ ಕಾಂಗ್ರೆಸ್ ಜಾಯಮಾನ ಸಹ ಅಲ್ಲ. ಆದರೆ ಕಾಂಗ್ರೆಸ್ ಎಂದರೆ ಕೇವಲ ಸೋನಿಯಾ ಗಾಂಧಿ ಎಂದುಕೊಂಡುಬಿಟ್ಟರೆ ಇಂಥ ಎಲ್ಲ ಸಮಸ್ಯೆಗಳು ಬರುತ್ತವೆ.

ಇಷ್ಟಾಗಿ, ಇಂದಿರಾ ಗಾಂಧಿಯಿರಬಹುದು, ವಾಜಪೇಯಿ, ಮೋದಿ ಇರಬಹುದು ಟೀಕಾತೀತರು ಯಾರೂ ಅಲ್ಲ. ಹಾಗಂತ ಇವರೆಲ್ಲರನ್ನು ಯಾವ ವಿಷಯಗಳನ್ನಿಟ್ಟುಕೊಂಡು ಟೀಕಿಸಬಾರದು ಎಂಬ ವಿವೇಚನೆ ಇರದಿದ್ದರೆ ದೇಶದ ಕತೆ ಏನು?

Leave a Reply