ಡಿಜಿಟಲ್ ಕನ್ನಡ ವಿಶೇಷ:
ಸಿಸ್ಕೋ ಸಿಸ್ಟೆಮ್ಸ್ ಐ ಎನ್ ಸಿ ಜಗತ್ತಿನಾದ್ಯಂತ ತನ್ನ ಹದಿನಾಲ್ಕು ಸಾವಿರ ನೌಕರರನ್ನ ತೆಗೆದು ಹಾಕಲು ನಿರ್ಧರಿಸಿದೆ ಎನ್ನುವುದು ನಿನ್ನೆಯಿಂದ ಬಹಳಷ್ಟು ಸುದ್ದಿ ಆಗಿದೆ. ಇದು ನಿಜವೇ ಆದರೆ ತನ್ನ ವರ್ಕ್ ಫೋರ್ಸ್ ನ 20 ಭಾಗ ಸಿಸ್ಕೋ ಕಳೆದುಕೊಳ್ಳಲಿದೆ. ಜೊತೆಗೆ ಈ ವರ್ಷ ಟೆಕ್ ಲೋಕದ ಎರಡನೇ ಅತಿ ದೊಡ್ಡ ಲೇ ಆಫ್ ಕೂಡ ಆಗಲಿದೆ. ಸಂಖ್ಯೆ ದೃಷ್ಟಿಯಿಂದ ನೋಡಿದರೆ ಸಿಸ್ಕೋ ಮೊದಲ ಸ್ಥಾನ ಪಡೆಯುವುದು ನಿಚ್ಚಳವಾಗಿದೆ. ಕಳೆದ ಏಪ್ರಿಲ್ ನಲ್ಲಿ ಇಂಟೆಲ್ ಕಾರ್ಪ್ ಜಗತ್ತಿನಾದ್ಯಂತ 12 ಸಾವಿರ ನೌಕರರನ್ನ ಕೆಲಸದಿಂದ ತೆಗೆದು ಹಾಕುವುದಾಗಿ ಹೇಳಿತ್ತು. ಅಂದರೆ ತನ್ನ ಒಟ್ಟು ಕೆಲಸಗಾರರ 11 ಪ್ರತಿಶತ ಕಡಿಮೆ ಮಾಡುವುದಾಗಿ ಹೇಳಿಕೊಂಡಿತ್ತು.
ಸಿಸ್ಕೋ ಸಂಸ್ಥೆ ಬುಧವಾರ (17-8-16) ತನ್ನ ನಾಲ್ಕನೇ ಕ್ವಾರ್ಟರ್ ಅಂಕಿಅಂಶ ಪ್ರಕಟಿಸುವ ಮೊದಲು ತನ್ನ ಹೂಡಿಕೆದಾರ ಸಭೆ ಕರೆದಿತ್ತು ಮತ್ತು ಆ ಸಭೆಯಲ್ಲಿ ಹೂಡಿಕೆದಾರರ ಮನಸ್ಥಿತಿ ಅವರ ನಡವಳಿಕೆಯನ್ನು ಅವಲಂಬಿಸಿ ವಿಶ್ಲೇಷಕರು ಹೀಗಾಗಬಹುದು ಎನ್ನುವ ಚಿತ್ರಣ ಕಟ್ಟಿ ಕೊಟ್ಟಿದ್ದಾರೆ.
ಇದೆ ವರ್ಷ ಏಪ್ರಿಲ್ ವೇಳೆಗೆ 70 ಸಾವಿರ ವರ್ಕ್ ಫೋರ್ಸ್ ಹೊಂದಿದ್ದ ಸಿಸ್ಕೋ ‘ನಾವು ಕಷ್ಟದ ಸಮಯದಲ್ಲಿ ಇದ್ದೇವೆ ಅದು ನಿಜ ಆದರೆ ಲೇ ಆಫ್ ಬಗ್ಗೆ ಹಬ್ಬಿರುವ ಗಾಳಿಸುದ್ದಿಗೆ ಉತ್ತರಿಸುವ ಅವಶ್ಯಕತೆ ಕಂಪನಿಗೆ ಇಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ವರ್ಷದ ಪ್ರಾರಂಭದಿಂದ ನಿನ್ನೆಯವರೆಗೆ ನಾಸ್ಡ್ಯಾಕ್ ನಲ್ಲಿ 15 ಪ್ರತಿಶತ ಏರಿಕೆ ಕಂಡಿದ್ದ ಸಿಸ್ಕೋ ಷೇರು ನಿನ್ನೆ ಅಚಾನಕ್ಕಾಗಿ 1.4 ಪ್ರತಿಶತ ಕುಸಿತ ಕಂಡಿದೆ. ಕಳೆದ ಹಲವು ತಿಂಗಳಿಂದ ಸಿಸ್ಕೋ ನ ಟಾಪ್ ಮ್ಯಾನೇಜ್ಮೆಂಟ್ ನ ನಾಯಕರು ಒಬ್ಬೊಬ್ಬರೇ ಪದತ್ಯಾಗ ಮಾಡಿ ಹೋಗಿರುವುದನ್ನ ನೋಡಿರುವರಿಗೆ ಇಂದಿನ ಲೇ ಆಫ್ ವಿಷಯ ಆಶ್ಚರ್ಯ ತಂದಿಲ್ಲ. ಜೊತೆಗೆ ತನ್ನ ನೌಕರರಿಗೆ ಸ್ವಂತ ಇಚ್ಚೆಯಿಂದ ಕೆಲಸ ಬಿಡಲು ‘ರಿಟೈರ್ಮೆಂಟ್ ಪ್ಯಾಕೇಜ್ ‘ ಘೋಷಣೆ ಸಿಸ್ಕೋ ಹಲವು ತಿಂಗಳ ಹಿಂದೆಯೇ ಮಾಡಿತ್ತು. ಇವೆಲ್ಲಾ ನೋಡಿದಾಗ ತಕ್ಷಣ ಅಲ್ಲದಿದ್ದರೂ ವರ್ಷಾಂತ್ಯದ ವೇಳೆಗೆ ತನ್ನ ವರ್ಕ್ ಫೋರ್ಸ್ ಸಿಸ್ಕೋ ಕಡಿಮೆ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಸಿಸ್ಕೋ ತನ್ನ ಮುಖ್ಯ ಬಿಸಿನೆಸ್ ಹಾರ್ಡ್ವೇರ್ ಬಿಟ್ಟು ಸಾಫ್ಟ್ವೇರ್ ಕೇಂದ್ರೀಕೃತ ಕಂಪೆನಿಯಾಗಲು ಈ ಒಂದು ನಿರ್ಧಾರ ತೆಗೆದು ಕೊಂಡಿದೆ ಎಂದು ಹಲವು ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ನೀಧಮ್ ಅಂಡ್ ಕೋ ಅನಾಲಿಸ್ಟ್ ಅಲೆಕ್ಸ್ ಹೆಂಡೆರ್ಸನ್ (Alex Henderson) ಹೇಳುತ್ತಾರೆ ‘ಸಿಸ್ಕೋ ಹಾರ್ಡ್ವೇರ್ ನಿಂದ ಮೋವ್ ಆಗಿ ಸಾಫ್ಟ್ವೇರ್ ಕಂಪನಿ ಆಗಲು ಬಯಸಿರುವುದು ನಿಜವೇ ಆಗಿದ್ದರೆ ಈ ಕೆಲಸ ಕಡಿತದ ಕತೆ ಇಲ್ಲಿಗೆ ನಿಲ್ಲುವುದಿಲ್ಲ’ ಎಂದು.
ಇದೆ ವರ್ಷ ಮೈಕ್ರೋಸಾಫ್ಟ್ ಮತ್ತು ಹೆಚ್ ಪಿ ಕಂಪನಿಗಳು ಕೂಡ ಸಾವಿರಾರು ಸಂಖ್ಯೆಯಲ್ಲಿ ತಮ್ಮ ನೌಕರರ ಕಡಿತ ಮಾಡುವುದಾಗಿ ಹೇಳಿಕೊಂಡಿದ್ದವು.
ಭಾರತದಂತಹ ಜನಭರಿತ ದೇಶಕ್ಕೆ ಈ ವಾರ್ತೆ ನಿಜಕ್ಕೂ ಸಿಹಿಯಲ್ಲ. ಓಲಾ – ಟ್ಯಾಕ್ಸಿ ಫಾರ್ ಶೂರ್ ವಿಲೀನದಿಂದ ಏಳ್ನೂರರ ಸಂಖ್ಯೆಯಲ್ಲಿ ಕೆಲಸ ಕಡಿತವಾಗಿದೆ. ಸಾಲದಕ್ಕೆ ಈ ಕಾಮರ್ಸ್ ವಹಿವಾಟು ವರ್ಷದ ಹಿಂದೆ ಇದ್ದ ರಭಸ ಕಳೆದು ಕೊಂಡಿದೆ. ಉತ್ಪಾದನಾ ವಲಯದಲ್ಲಿ ಲಯ ತಪ್ಪಿದೆ. ಹೀಗೆ ಒಂದಲ್ಲ ಹಲವು ಕ್ಷೇತ್ರಗಳಲ್ಲಿ ಬಜೆಟ್ ಟಾರ್ಗೇಟ್ ನ 20 ಭಾಗವೊ, ಮೂವತ್ತು ಭಾಗವೋ ಸಾಧಿಸಲಾಗದೆ ಭಾರತದ ಸಿಇಓ, ಮ್ಯಾನೇಜರ್ ಗಳು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ದೂರದ ಯೂರೋಪಿನಲ್ಲೋ , ಅಮೆರಿಕದಲ್ಲೂ ಕುಳಿತು ಭಾರತದ ಸೇಲ್ಸ್ ಟಾರ್ಗೆಟ್ ಫಿಕ್ಸ್ ಮಾಡುವ ಸಿ ಎಫ್ ಓ ಗಳಿಗೆ ಭಾರತದ ಆಂತರಿಕ ಜಂಜಾಟಗಳ ಅರಿವಿರುವುದಿಲ್ಲ.
ಇವೆಲ್ಲವುಗಳ ಮಧ್ಯೆ ಭಾರತದ ಜಿ ಡಿ ಪಿ 7.6 ಎಂದೋ 8 ಎಂದೋ ಪತ್ರಿಕೆಗಳಲ್ಲಿ ಹೆಡ್ಲೈನ್ ನೋಡಿದಾಗ ಅನ್ನಿಸುವುದು ‘ಜಿಡಿಪಿ ಎಷ್ಟಾದರೇನು? ಕೆಲಸ ಬೇಡುವ ಕೈಗಳಿಗೆ ಕೆಲಸ ವಿಲ್ಲದಿದ್ದರೆ? ಹಸಿದ ಹೊಟ್ಟೆಗೆ ಊಟ ಸಿಗದಿದ್ದರೆ ?’ ಟೆಕ್ನಾಲಜಿ ವೇಗವಾಗಿ ಜನರ ಕೆಲಸ ನುಂಗುತ್ತಿರುವ ಈ ಸಮಯದಲ್ಲಿ ಪರ್ಯಾಯ ಕುರಿತು ಯಾರೂ ಮಾತನಾಡದೆ ಇರುವುದು ಮಾತ್ರ ಕೆಲಸದ ಕಡಿತಕ್ಕಿಂತ ಹೆಚ್ಚಿನ ನೋವು ತರಿಸುವ ಸಂಗತಿ.