ಭಾರತಕ್ಕೆ ಖಚಿತವಾಯ್ತು ಪದಕದ ‘ಸಿಂಧೂ’ರ… ಹೆಣ್ಮಕ್ಳೇ ಸ್ಟ್ರಾಂಗು ಎನ್ನುತ್ತಲೇ ಗಮನಿಸಬೇಕಾದ ತಂದೆಯ ಪಾತ್ರ

Rio de Janeiro: Indian shuttler Pusarla V Sindhu plays a shot in women’s singles quarter-finals match against world No.2 Wang Yihan of China in 2016 Summer Olympics at Rio de Janeiro in Brazil on Tuesday. Sindhu win the match 22-20, 20,19. PTI Photo by Atul Yadav(PTI8_17_2016_000036B)

ಡಿಜಿಟಲ್ ಕನ್ನಡ ಟೀಮ್:

ಪದಕ ಬರಲಿಲ್ಲ ಎಂದು ಕೊರಗುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಒಂದೇ ದಿನದಲ್ಲಿ ಸಿಕ್ಕಿದೆ ಡಬಲ್ ಧಮಾಕ. ಗುರುವಾರ ಬೆಳಗಿನ ಜಾವ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದ ಸಂಭ್ರಮದಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳ ಖುಷಿಯನ್ನು ಸಂಜೆ ವೇಳೆಗೆ ದುಪ್ಪಟ್ಟು ಮಾಡಿದ್ದು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು. ಬೆಳ್ಳಿಯಂತೂ ಪಕ್ಕಾ, ಆದರೆ ಶುಕ್ರವಾರ ಸಂಜೆಯ ಸೆಣಸಿನಲ್ಲಿ ಸಿಂಧು ಚಿನ್ನವನ್ನೇ ತರುತ್ತಾಳೆ ಅಂತ ಭಾರತ ಕಾತರಿಸಿದೆ.

ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸೆಮಿಫೈನಲ್ ನಲ್ಲಿ ಜಪಾನಿನ ನೊಜೊಮಿ ಒಕುಹರ ವಿರುದ್ಧ 21-19, 21-10 ನೇರ ಗೇಮ್ ಗಳಿಂದ ಗೆದ್ದ ಸಿಂಧು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು. ಇದರೊಂದಿಗೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಇತಿಹಾಸ ಬರೆದರು. ಈ ಜಯದೊಂದಿಗೆ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತ ಪಡಿಸಿದ್ದು, ತನ್ನ ಸಹ ಆಟಗಾರ್ತಿ ಸೈನಾ ನೆಹ್ವಾಲ್ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಮಾಡಿದ್ದ ಸಾಧನೆಯನ್ನು ಉತ್ತಮಗೊಳಿಸಿದ್ದಾರೆ ಸಿಂಧು. ಅಂತಿಮ ಎಂಟರ ಘಟ್ಟದಲ್ಲಿ ಸಿಂಧು ವಿಶ್ವದ ನಂ.2 ಆಟಗಾರ್ತಿಯನ್ನು ಬಗ್ಗು ಬಡಿದಾಗಲೇ ಭಾರತೀಯ ಅಭಿಮಾನಿಗಳ ಮನದಲ್ಲಿ ಪದಕದ ಆಸೆ ಕಟ್ಟೆ ಹೊಡೆದಿತ್ತು.

ಪಿ.ವಿ ಸಿಂಧು ನಮಗೆ ನಿರಾಸೆ ಮಾಡುವುದಿಲ್ಲವೆಂಬ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡರು. ಈ ಪಂದ್ಯದಲ್ಲಿ ಜಪಾನ್ ಆಟಗಾರ್ತಿಗೆ ಎಲ್ಲ ವಿಧದಲ್ಲೂ ಸವಾಲೆಸೆದ ಸಿಂಧು ಪಂದ್ಯವನ್ನು ಏಕಪಕ್ಷೀಯವಾಗಿ ತನ್ನ ಮಡಿಲಿಗೆ ಹಾಕಿಕೊಂಡರು. ಸಿಂಧು ಶಟಲ್ ಅನ್ನು ಕೋರ್ಟ್ ನ ಬೌಂಡರಿ ಬಳಿಗೆ ಹೆಚ್ಚು ಹೊಡೆದರು. ಆ ಮೂಲಕ ಜಪಾನ್ ಆಟಗಾರ್ತಿಗೆ ಅದನ್ನು ಆಡಬೇಕೋ ಅಥವಾ ಬಿಡಬೇಕೊ ಎಂದು ಗೊತ್ತಾಗದೆ ಗೊಂದಲಕ್ಕೆ ಸಿಲುವಂತೆ ಮಾಡಿದರು ಸಿಂಧು. ಇನ್ನು ನೆಟ್ ಶಾಟ್ ಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಹೊಡೆದ ಸಿಂಧು ತನ್ನಲ್ಲಿರುವ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದರು. ತನ್ನ ಎತ್ತರವನ್ನೇ ಸಕಾರಾತ್ಮಕವಾಗಿ ಬಳಸಿಕೊಂಡ ಸಿಂಧು ಕೇವಲ ಎರಡು ಹೆಜ್ಜೆಗಳಲ್ಲೇ ಕೋರ್ಟ್  ತುಂಬಾ ತನ್ನ ನಿಯಂತ್ರಣ ಸಾಧಿಸಿದ್ದರು. ಅಷ್ಟೇ ಅಲ್ಲದೆ ತನ್ನ ಪರಿಣಾಮಕಾರಿ ಸ್ಮ್ಯಾಷ್ ಗಳನ್ನು ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳುವ ಮೂಲಕ ಜಪಾನ್ ಆಟಗಾರ್ತಿ ಕಂಗೆಡುವಂತೆ ಮಾಡಿದರು.

ಮೊದಲ ಸೆಟ್ ನಲ್ಲಿ ಪ್ರತಿರೋಧ ಎದುರಿಸಿದರೂ, ಎರಡನೇ ಸೆಟ್ ನಲ್ಲಿ ಸತತ 11 ಅಂಕಗಳನ್ನು ಕಲೆಹಾಕಿದ ಸಿಂಧು ಪ್ರಶಸ್ತಿ ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡರು. ಸಿಂಧು ಶುಕ್ರವಾರ ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ಪ್ರಬಲ ಎದುರಾಳಿ ಸ್ಪೇನ್ ನ ಕ್ಯಾರೊಲಿನ್ ಮರಿನ್ ವಿರುದ್ಧ ಸೆಣಸಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಮಗಳ ಸಾಧನೆ ಹಿಂದೆ ಇರೋದು ತಂದೆ ಎಂಬ ಶಕ್ತಿ…

ಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿರುವ ಪಿ.ವಿ ಸಿಂಧು, ಕೋಟ್ಯಾಂತರ ಭಾರತೀಯರ ಆಸೆಯನ್ನಷ್ಟೇ ಈಡೇರಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತಂದೆ ಪಿ.ವಿ ರಾಮಣ್ಣ ಅವರ ಪರಿಶ್ರಮಕ್ಕೆ ಬೆಲೆ ತಂದುಕೊಟ್ಟಿದ್ದು, ಅವರ ಕನಸನ್ನು ನನಸಾಗಿಸಿದ್ದಾಳೆ. ಒಂದು ಅರ್ಥದಲ್ಲಿ ಪಿ.ವಿ ಸಿಂಧುವಿನ ಶಕ್ತಿ ಅವರ ತಂದೆ ರಾಮಣ್ಣ ಅಂತಲೇ ಹೇಳಬಹುದು.

ಹೌದು… ಪಿ.ವಿ ರಾಮಣ್ಣ ಮೂಲತಃ ವಾಲಿಬಾಲ್ ಆಟಗಾರರು. ಹೀಗಾಗಿ ಕ್ರೀಡೆಯಲ್ಲಿ ಕನಸು ಕಂಡ ಸಿಂಧುಗೆ ಬೆನ್ನೆಲುಬಾಗಿ ನಿಂತರು. ರೈಲ್ವೇ ನೌಕರರಾಗಿರುವ ರಾಮಣ್ಣ, ತಮ್ಮ ಮಗಳು ದೊಡ್ಡ ಬ್ಯಾಡ್ಮಿಂಟನ್ ಆಟಗಾರ್ತಿಯಾಗಬೇಕೆಂಬುದಷ್ಟೇ ಗುರಿಯಾಗಿರಲಿಲ್ಲ. ಈಕೆಯ ಕೊರಳಲ್ಲಿ ಒಲಿಂಪಿಕ್ಸ್ ಪದಕ ನೋಡುವ ಕನಸು ಕಂಡಿದ್ದರು. ಈಗ ಆ ಕನಸು ನನಸಾಗಿದೆ.

ಸಿಂಧು ಪೋಷಕರು ಕೇವಲ ಕನಸು ಕಂಡಿದ್ದಷ್ಟೇ ಅಲ್ಲ. ಅದಕ್ಕೆ ತಕ್ಕಂತೆ ಪರಿಶ್ರಮ ಪಟ್ಟರು. ಮಗಳ ಬೆನ್ನಿಗೆ ನಿಂತರು… ಆಕೆಯ ಹಾದಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹ ನೀಡುತ್ತಾ ಬಂದರು. ಸಿಂಧು ಪಾಲಿಗೆ ಇದು ಮೊದಲನೇ ಒಲಿಂಪಿಕ್ಸ್ ಕ್ರೀಡಾಕೂಟ. ಮೂಲತಃ ಕ್ರೀಡಾಪಟುವಾಗಿದ್ದ ರಾಮಣ್ಣನವರಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಹಾಗೂ ಅದರ ಸವಾಲಿನ ಬಗ್ಗೆ ಚೆನ್ನಾಗಿಯೇ ಅರಿವಿತ್ತು. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ ಎಂಬುದನ್ನು ಮನಗಂಡಿದ್ದ ಅವರು ಸಿಂಧು ಅವರ ತಯಾರಿ ಬಗ್ಗೆ ಸಂಪೂರ್ಣ ಗಮನ ಹರಿಸಿದರು. ಈ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಸಿದ್ಧತೆಗಾಗಿಯೇ ರಾಮಣ್ಣ ಸುದೀರ್ಘ 8 ತಿಂಗಳು ತಮ್ಮ ನೌಕರಿಗೆ ರಜೆ ಹಾಕಿ ಸಿಂಧು ಅವರ ಅಭ್ಯಾಸಕ್ಕೆ ಯಾವುದೇ ಕುಂದು ಕೊರತೆ ಬಾರದಂತೆ ನೋಡಿಕೊಂಡರು.

ಬೆಳಗಿನ ಜಾವ 4.00 ಗಂಟೆಗೆ ಕೋಚ್ ಪಿ. ಗೋಪಿಚಂದ್ ಅವರ ಗರಡಿಗೆ ಸ್ವತಃ ರಾಮಣ್ಣನವರೇ ಕರೆದೊಯ್ದು ಆಕೆಯ ಅಭ್ಯಾಸಕ್ಕೆ ನೆರವಾಗುತ್ತಿದ್ದರು. ಅಲ್ಲದೆ ಕ್ರೀಡಾಕೂಟದ ಸಿದ್ಧತೆ ಬಗ್ಗೆ ಸ್ವತಃ ಸಿಂಧುವಿನ ಜತೆ ಚರ್ಚಿಸುತ್ತಿದ್ದರು.

ನಮ್ಮ ದೇಶದಲ್ಲಿ ತಮ್ಮ ಮಕ್ಕಳು ಕ್ರೀಡೆಯತ್ತ ಆಸಕ್ತಿ ವಹಿಸಿದರೆ ಅವರಿಗೆ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು ಎಂಬುದಕ್ಕೆ ರಾಮಣ್ಣ ಒಂದು ಅತ್ಯದ್ಭುತ ಉದಾಹರಣೆಯಾಗಿ ನಿಲ್ತಾರೆ. ಅಂತೆಯೇ ಗುರು ಗೋಪಿಚಂದರ ಕುರಿತಂತೂ ಪ್ರತ್ಯೇಕವಾಗಿಯೇ ಹೇಳಬೇಕು…

Leave a Reply