ಗೆದ್ದವರ ಜತೆ ಸೆಣೆಸಿ ಗಾಯಗೊಂಡವರಿಗೂ ಇರಲಿ ನಮ್ಮಭಿಮಾನ, ನಿರಾಸೆಯ ನೋವಿನಂತ್ಯ ಕಂಡ ವಿನೇಶ್ ಅಭಿಯಾನ

ಸೋಮಶೇಖರ ಪಿ. ಭದ್ರಾವತಿ

ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಕಿರಿಯ ಅಥ್ಲೀಟ್… ಈಕೆ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸುತ್ತಾಳೆಂದು ತನ್ನ ಮನೆಯವರೇ ನಂಬಿರಲಿಲ್ಲ… ತನ್ನ ಕೆಚ್ಚೆದೆಯ ಹೋರಾಟದ ಮೂಲಕ ಒಲಿಂಪಿಕ್ಸ್ ಅರ್ಹತೆ ಪಡೆದು ಟೀಕಾಕಾರರ ಬಾಯಿಗೆ ಬೀಗ ಜಡಿದ ಸಾಧಕಿ… 2014ರ ಕಾಮನ್ವೆಲ್ತ್ ನಲ್ಲಿ ಚಿನ್ನ, ಏಷ್ಯನ್ ಗೇಮ್ಸ್ ನಲ್ಲಿ ಕಂಚು, ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಬಾಚಿದಾಕೆ… ಈ ಪೀಠಿಕೆ ಯಾರ ಬಗ್ಗೆ ಅಂದಿರಾ? ಅದು ಬೇರೆ ಯಾರು ಅಲ್ಲ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕದ ಭರವಸೆಯಾಗಿದ್ದ ಯುವ ಕುಸ್ತಿಪಟು ವಿನೇಶ್ ಫೊಗತ್.

ವಿನೇಶ್ ಫೋಗತ್… ಭಾರತದ ಯುವ ಮಹಿಳಾ ಕುಸ್ತಿಪಟುವಿನ ಈ ಹೆಸರು ಎಷ್ಟು ಜನಕ್ಕೆ ಗೊತ್ತೊ… ಇಲ್ಲವೊ… ಕೆಲ ತಿಂಗಳ ಹಿಂದಷ್ಟೇ ಕುಸ್ತಿ ಕ್ರೀಡೆಯನ್ನೇ ಬಿಟ್ಟು ಬಿಡುವ ತೀರ್ಮಾನಕ್ಕೆ ಬಂದಿದ್ದವಳು, ನಂತರ ಒಲಿಂಪಿಕ್ಸ್ ಗೆ ಅರ್ಹತೆಯನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದಳು. ಆದರೆ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದು ಕೊಡುವ ನಿರೀಕ್ಷೆ ಹುಟ್ಟಿಸಿದ್ದ ಈಕೆ ಗಾಯಗೊಂಡು ನಿರಾಸೆಯ ಅಂತ್ಯ ಕಂಡಿರೋದು ನಿಜಕ್ಕೂ ದುರಾದೃಷ್ಟ. ಹೌದು… ಮಹಿಳೆಯರ ಫ್ರೀಸ್ಟೈಲ್ 48 ಕೆ.ಜಿ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಚೀನಾದ ಸುನ್ ಯಾನನ್ ವಿರುದ್ಧ ಸೆಣಸುವಾಗ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿದ್ದಾಳೆ.

ಪಂದ್ಯದ ವೇಳೆ ಚೀನಾ ಆಟಗಾರ್ತಿ ಈಕೆಯ ಕಾಲನ್ನು ಲಾಕ್ ಮಾಡಿದಳು. ಈ ವೇಳೆ ಅದರಿಂದ ಕಳಚಿಕೊಂಡು ಪ್ರತಿಸ್ಪರ್ಧಿಯನ್ನು ನೆಲಕ್ಕೆ ಕೆಡವುವ ಪ್ರಯತ್ನ ನಡೆಸುವ ವೇಳೆ ಬಲಗಾಲಿನ ಮಂಡಿ ತಿರುಗಿ ತೀವ್ರ ಪೆಟ್ಟಾಯಿತು. ಅಖಾಡದಲ್ಲೇ ನೋವಿನ ಮಡುವಿನಲ್ಲಿ ಬಿದ್ದು ನರಳಿದಳು. ನಂತರ ಆಕೆ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗದ ಪರಿಣಾಮ ಚೀನಾ ಆಟಗಾರ್ತಿ ಮುಂದಿನ ಸುತ್ತಿಗೆ ಪ್ರವೇಶಿಸಿದಳು.

ವಿನೇಶ್ ಫೋಗತ್ ಈ ರೀತಿ ಹೊರ ನಡೆದದ್ದು ಭಾರತದ ಪಾಲಿಗೆ ದುಬಾರಿಯಾಗಿರೋದಂತೂ ನಿಜ. 22ನೇ ವಸಂತದ ಸನಿಹದಲ್ಲಿರುವ ವಿನೇಶ್ ಫೋಗತ್ ಒಲಿಂಪಿಕ್ಸ್ ಗೆ ಸಾಗಿ ಬಂದ ಹಾದಿಯೇ ಒಂದು ರೋಚಕ.

ವಿನೇಶ್ ಹುಟ್ಟಿದ್ದು ಖ್ಯಾತ ಕುಸ್ತಿ ಕುಟುಂಬದಲ್ಲಿ. ಈಕೆಯ ತಂದೆ ರಾಜ್ಪಾಲ್ ಭಾರತದ ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ಅವರ ಸಹೋದರ. ಇನ್ನು ಭಾರತದ ಮಹಿಳಾ ಬಾಕ್ಸರ್ ಗಳಾದ ಗೀತಾ ಫೋಗತ್ ಮತ್ತು ಬಬಿತಾ ಕುಮಾರಿ ಅವರ ಸೋದರ ಸಂಬಂಧಿ. ಹೀಗೆ ಕೌಟುಂಬಿಕವಾಗಿ ಕುಸ್ತಿ ಹಿನ್ನೆಲೆ ಹೊಂದಿರುವ ವಿನೇಶ್ ಸಹಜವಾಗಿಯೇ ಕುಸ್ತಿಯತ್ತ ಆಸಕ್ತಿ ಬೆಳೆಸಿಕೊಂಡಳು.

ಕಳೆದ ವರ್ಷ ಮೇ ನಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದ ವಿನೇಶ್ ಫೋಗತ್, ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲಬೇಕು. ಆ ಮೂಲಕ ಭಾರತದ ಪರ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ಸೃಷ್ಠಿಸುವ ಕನಸು ಕಂಡಳು. ಆದರೆ ಈ ಕನಸು ಬೇಗನೆ ಕಮರಿ ಹೋಗುವ ಸ್ಥಿತಿಯೂ ಎದುರಾಯಿತು. ಕಾರಣ, ವಿನೇಶ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತಾಳೆ ಎಂಬ ನಂಬಿಕೆ ಆಕೆಯ ಕುಟುಂಬದವರಿಗೆ ಇರಲಿಲ್ಲ. ತನ್ನ ಕುಟುಂಬದವರೇ ನನ್ನ ಮೇಲೆ ನಂಬಿಕೆ ಇಡದಿದ್ದರೆ, ಇನ್ನು ದೇಶದ ಕೋಟ್ಯಾಂತರ ಜನ ನನ್ನನ್ನು ನಂಬುವುದಾದರೂ ಹೇಗೆ? ಎಂದು ತೀವ್ರ ಬೇಸರಗೊಂಡ ಬಗ್ಗೆ ಸ್ವತಃ ವಿನೇಶ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ತಿಳಿಸಿದ್ದಳು.

ಈ ಎಲ್ಲವನ್ನು ಸವಾಲಾಗಿ ಸ್ವೀಕರಿಸಿದ ವಿನೇಶ್, ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಲ್ಲಿ ಭಾಗವಹಿಸಲು ನಿರ್ಧರಿಸಿದಳು. ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧವಾಗಿದ್ದ ವಿನೇಶ್ ಗೆ ಒಲಿಂಪಿಕ್ಸ್ ಅರ್ಹತೆ ಅಂದುಕೊಂಡಷ್ಟು ಸುಲಭವಾಗಿ ಸಿಗಲಿಲ್ಲ. ಹೀಗಾಗಿ ಒಲಿಂಪಿಕ್ಸ್ ಅರ್ಹತಾ ಸುತ್ತುಗಳಲ್ಲಿನ ಪಯಣ ವಿನೇಶ್ ಪಾಲಿಗೆ ಸವಾಲಿನ ಹಾದಿಯಾಗಿತ್ತು. ಈ ಹಾದಿಯಲ್ಲಿ ಎದುರಾದ ಹಿನ್ನಡೆ ಈಕೆಯನ್ನು ಕುಗ್ಗಿಸಲಿಲ್ಲ. ಬದಲಾಗಿ ಈ ಸೋಲುಗಳಿಂದ ವಿನೇಶ್ ಮತ್ತಷ್ಟು ಬಲಿಷ್ಠಗೊಳ್ಳುತ್ತಾ ಸಾಗಿದಳು.

ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸುವ ಸಲುವಾಗಿ ಈಕೆ ಮೊದಲ ಪ್ರಯತ್ನ ನಡೆಸಿದ್ದು, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ. ಈ ಟೂರ್ನಿಯಲ್ಲಿ ಗೆದ್ದು ಅರ್ಹತೆ ಪಡೆದರೆ, ಉತ್ತಮ ಆತ್ಮವಿಶ್ವಾಸ ಸಿಗುತ್ತದೆ ಎಂದು ನಂಬಿದ್ದಳು ವಿನೇಶ್. ಆದರೆ, ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಆಗ ನನ್ನಂತೆ ಇತರೆ ಹಲವು ಕುಸ್ತಿಪಟುಗಳೂ ನಿರಾಸೆ ಹೊಂದಿದ್ದು, ಮುಂದಿನ ಅವಕಾಶದಲ್ಲಿ ಪಡೆಯಬಹುದು ಎಂದು ತನಗೆ ತಾನೇ ಸಮಾದಾನ ಮಾಡಿಕೊಂಡಳು. ನಂತರ ಇದೇ ವರ್ಷ ಮಾರ್ಚ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದು ಅರ್ಹತೆ ಪಡೆಯುವ ವಿನೇಶ್ ಆಸೆ ಈಡೇರಲಿಲ್ಲ.

ಇದರಿಂದ ‘ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲಬೇಕೆಂದು ಕನಸು ಕಟ್ಟಿರುವ ನಾನು ಅರ್ಹತೆ ಪಡೆಯಲು ಇಷ್ಟೆಲ್ಲಾ ಕಸರತ್ತು ಮಾಡಬೇಕಾಗಿದೆಯಲ್ಲ’ ಎಂದು ತನ್ನಷ್ಟಕ್ಕೆ ತಾನೇ ಪ್ರಶ್ನಿಸಿಕೊಂಡಳು. ನಂತರ ಮಂಗೋಲಿಯಾದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅತಿಯಾದ ತೂಕದ ಪರಿಣಾಮ ವಿನೇಶ್ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡಳು. ಈ ಹೊತ್ತಿಗಾಗಲೇ ವಿನೇಶ್ ಸಾಮರ್ಥ್ಯ ಕುರಿತಂತೆ ಪ್ರಶ್ನೆಗಳು ಒಂದೊಂದಾಗಿಯೇ ಹುಟ್ಟಕೊಳ್ಳಲಾರಂಭಿಸಿದವು. ನಂತರ ಏಪ್ರಿಲ್ ನಲ್ಲಿ ನಡೆದ ವಿಶ್ವ ಅರ್ಹತಾ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದಳು. ಆದರೆ ಇಲ್ಲೂ ವಿನೇಶ್ ವಿಫಲವಾದಾಗ, ಇದಾದ ನಂತರ ವಿನೇಶ್ ಬದಲಿಗೆ ಬೇರೊಬ್ಬರನ್ನು ಕಣಕ್ಕಿಳಿಸಬಾರದೇಕೆ ಎಂದು ಟೀಕಾಕಾರರು ಭಿನ್ನರಾಗ ಹಾಡಲು ಶುರು ಮಾಡಿದ್ದರು.

ಈ ಹಂತದಲ್ಲಿ ವಿನೇಶ್ ಪಾಲಿಗೆ ಇದ್ದ ಕೊನೆಯ ಅವಕಾಶ ಎಂದರೆ ಕಳೆದ ಮೇ ತಿಂಗಳಲ್ಲಿ ನಡೆದ ವಿಶ್ವ ಅರ್ಹತಾ ಎರಡನೇ ಸುತ್ತಿನ ಟೂರ್ನಿ. ಇದು ವಿನೇಶ್ ಪಾಲಿಗೆ ಮಾಡು ಇಲ್ಲವೆ ಮಡಿ ಎಂಬಂತೆ ಆಗಿತ್ತು. ಒಲಿಂಪಿಕ್ಸ್ ಗೆ ಎರಡು ತಿಂಗಳು ಮಾತ್ರ ಬಾಕಿ ಇತ್ತು. ಈ ಹಂತದಲ್ಲಿ ಮನಸ್ಸನ್ನು ಕಲ್ಲಾಗಿಸಿಕೊಂಡ ವಿನೇಶ್ ಕಠಿಣ ಪರಿಶ್ರಮ ಹಾಕಿದಳು. ಅಷ್ಟೇ ಅಲ್ಲ, ಈ ಪ್ರಯತ್ನದಲ್ಲಿ ಒಂದು ವೇಳೆ ಸೋತರೆ ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯಲೇ ಬಾರದೆಂಬ ನಿರ್ಧಾರಕ್ಕೂ ಬಂದಾಗಿತ್ತು.

ತನಗೆ ಸಿಕ್ಕ ಅಂತಿಮ ಅವಕಾಶದಲ್ಲಿ ಯಶಸ್ವಿ ಕಂಡ ವಿನೇಶ್, ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸಿದಳು. ಆ ಮೂಲಕ ವಿನೇಶ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಳು. ಜತೆಗೆ ತಾನು ಭಾರತಕ್ಕೆ ಪದಕ ತಂದುಕೊಡಬಲ್ಲೆ ಎಂಬುದನ್ನು ಸಾಬೀತುಪಡಿಸಿದಳು.

ಈ ಬಾರಿಯ ಒಲಿಂಪಿಕ್ಸ್ ನ ಮೂರನೇ ಎರಡು ಭಾಗದಷ್ಟು ಮುಕ್ತಾಯವಾಗಿದೆ. ಪದಕದ ಆ ಸಾಧನೆ ಮಾಡುವ ಸಾಮರ್ಥ್ಯ ವಿನೇಶ್ ಫೊಗತ್ ಅವಳಲ್ಲಿತ್ತು. ಅದರಂತೆಯೇ ಫೊಗತ್ ತನ್ನ ಮೇಲಿದ್ದ ನಿರೀಕ್ಷೆಗಳನ್ನು ಒಂದೊಂದಾಗಿ ಈಡೇರಿಸುತ್ತಾ ಪದಕದತ್ತ ಸಾಗುತ್ತಿದ್ದಳು. ಪ್ರಿಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ರೊಮೇನಿಯಾದ ಎಮಿಲಿಯಾ ಅಲಿನಾ ವಿರುದ್ಧ 4-0 ಅಂತರದ ಜಯ ಸಾಧಿಸಿದ್ದ ವಿನೇಶ್, ಕ್ವಾರ್ಟರ್ ಫೈನಲ್ ಪ್ರವೇಶಿಸಿದಳು.

ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ವಿನೇಶ್ ಹೋರಾಟ ಗಾಯಗೊಂಡು ಅಂತ್ಯಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಕೆ ಕುಸ್ತಿ ರಿಂಗ್ ನಲ್ಲಿ ನರಳಾಡಿದ್ದು ನೋಡಿದರೆ ಗಾಯದ ಪ್ರಮಾಣ ತೀವ್ರಮಟ್ಟದ್ದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಕೆ ಯಾವ ರೀತಿ ಚೇತರಿಸಿಕೊಳ್ಳುತ್ತಾಳೆ ಎಂಬುದರ ಮೇಲೆ ಆಕೆಯ ಕುಸ್ತಿ ಭವಿಷ್ಯ ನಿರ್ಧಾರವಾಗಲಿದೆ.

ವಿನೇಶ್ ಇನ್ನು 22 ವರ್ಷದ ಯುವ ಕುಸ್ತಿಪಟು. ಆಕೆಗೆ ಭವಿಷ್ಯದಲ್ಲಿ ಸಾಕಷ್ಟು ಅಕವಾಶಗಳು ಸಿಗಲಿವೆ. ಹೀಗಾಗಿ ಈ ಗಾಯದ ಸಮಸ್ಯೆಯಿಂದ ವಿನೇಶ್ ಬೇಗ ಹೊರಬಂದು ಮತ್ತೆ ಅಖಾಡಕ್ಕೆ ಇಳಿಯುವಂತಾಗಲಿ ಎಂದು ನಾವೆಲ್ಲರು ಹಾರೈಸೋಣ.

Leave a Reply