ಚಿತ್ರನಟಿ ಏಕೆ ‘ಪಕ್ಕದ್ಮನೆ ಹುಡುಗಿ’ಯೇ ಆಗಬೇಕು? ನಮ್ಮ ‘ಮನೆ ಹೆಣ್ಣುಮಗಳು’ ಆಗಬಾರದೆ?

author-ssreedhra-murthy‘ವಿಷ್ಣುವರ್ಧನ್ ಪ್ರಬುದ್ಧ ನಟನಲ್ಲ’ ಎನ್ನುವ ರಾಂಗೋಪಾಲ ವರ್ಮರ ಅಪ್ರಬುದ್ಧ ಹೇಳಿಕೆ ‘ಸುದ್ದಿ’ ಹೇಗೆ ವಿವೇಚನಾರಹಿತವಾಗಿರಬಹುದು ಎನ್ನುವುದಕ್ಕೆ ಉದಾಹರಣೆಯಂತಿದೆ. ಅಭಿನಯದ ಸಾಧ್ಯತೆಗಳೇ ಗೊತ್ತಿಲ್ಲದಂತಿರುವ ವರ್ಮ ಹಿಂದೆ ರಜನೀಕಾಂತ್,ಮುಮ್ಮಟ್ಟಿಯವರ ಕುರಿತು ಇಂತಹದೇ ವಿವಾದದ ಕಿಡಿ ಹಚ್ಚಿದ್ದರು. ವಿಶ್ಲೇಷಣೆಗಿಂತ ವಿವಾದವೇ ಸುದ್ದಿಯ ಹೂರಣ ಎನ್ನುವಂತೆ ಮಾಧ್ಯಮಗಳೂ ಭಾವಿಸಿರುವುದು ಇಂತಹ ಮನೋಭಾವಕ್ಕೆ ಕಾರಣವಾಗಿರುವುದು ರಹಸ್ಯವೇನಲ್ಲ. ಟ್ಟಿಟರ್‍ಗಳಲ್ಲಿ ಉಡಾಫೆ ಹೇಳಿಕೆ ಹರಿ ಬಿಡುವುದು ವಿವಾದವಾದ ಕೂಡಲೇ ಡೀಲಿಟ್ ಮಾಡುವುದು ಪ್ರಸಿದ್ಧರ ಸ್ವಭಾವ ಕೂಡ ಆಗಿಬಿಟ್ಟಿದೆ. ರಾಧಿಕಾ ಪಂಡಿತ್ ಮತ್ತು ಯಶ್ ನಿಶ್ಚಿತಾರ್ಥದ ಸುದ್ದಿಯನ್ನು ಮಾಧ್ಯಮಗಳು ನಿರ್ವಹಿಸಿದ ಕ್ರಮವನ್ನು ಇಂತಹ ಮನೋಭಾವದ ಇನ್ನೊಂದು ನೆಲೆಯಾಗಿ ನೋಡ ಬಹುದು. ‘ನಂದಗೋಕುಲ’ ಕಿರುತೆರೆ ಧಾರಾವಾಹಿಯಿಂದಲೂ ಪರಿಚಿತರಾದ ಅವರಿಬ್ಬರೂ ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದವರು. ಇಬ್ಬರೂ ಪ್ರೀತಿಯ ವಿಷಯವನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದರೂ ಅದೇನು ಅಂತಹ ರಹಸ್ಯವಾಗಿರಲಿಲ್ಲ. ಹೀಗಾಗಿ ನಿಶ್ಚಿತಾರ್ಥ ಬ್ರೇಕಿಂಗ್ ಸುದ್ದಿಯಾಗಿರಲಿಲ್ಲ. ಮಹದಾಯಿ ವಿವಾದವಿದ್ದಾಗ ಗೋವಾಕ್ಕೆ ಏಕೆ ಹೋಗ ಬೇಕಿತ್ತು? ನಿಶ್ಚಿತಾರ್ಥಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದ್ದು ಸರಿಯೇ? ವರ ಮಹಾಲಕ್ಷ್ಮಿ ಹಬ್ಬವೇ ಏಕೆ ಬೇಕಾಯಿತು ಹೀಗೆ ಸುದ್ದಿಗೆ ಬ್ರೇಕಿಂಗ್‍ ನೆಲೆಗಳು ಬೆಳೆದವು. ಇವುಗಳಲ್ಲಿ ಹೆಚ್ಚಿನವು ಖಾಸಗಿ ಸ್ವರೂಪದ್ದಾಗಿದ್ದವು. ಕುಟುಂಬದ ಕೆಲವರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭಕ್ಕೆ ಕೋಟಿಗಟ್ಟಲೆ ಖರ್ಚಾಗುವುದು ಸಾಧ್ಯವೆ? ಎನ್ನುವ ರಾಧಿಕಾ ಪಂಡಿತ್ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ.

ಆದರೆ ಸರಿ ಸುಮಾರು ಒಂದು ದಶಕದಿಂದ ಕನ್ನಡದ ಸಂವೇದನಾಶೀಲ ಕಲಾವಿದೆಯಾಗಿ ಬೆಳೆದು ಈಗ ಎರಡು ವರ್ಷಗಳಿಂದಲಂತೂ ‘ನಂಬರ್ ಒನ್ ನಟಿ’ ಎನ್ನಿಸಿಕೊಂಡಿರುವ ರಾಧಿಕಾ ಪಂಡಿತ್ ಅಭಿನಯವನ್ನು ಮುಂದುವರೆಸುವರೇ ಎನ್ನುವುದು ನಿಜವಾಗಿಯೂ ಚರ್ಚೆಯಾಗ ಬೇಕಿತ್ತು. ಏಕೆಂದರೆ ನಾಯಕಿಯರ ಮಹತ್ವ ಕುಗ್ಗುತ್ತಿರುವ  ಕಾಲದಲ್ಲಿ ಸಂವೇದನಾಶೀಲ ಕಲಾವಿದೆಯರ ಅಗತ್ಯ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ವಿವಾಹದ ನಂತರವೂ ಅಭಿನಯವನ್ನು ಮುಂದುವರೆಸುತ್ತಾರೆಯೇ ಎನ್ನುವುದು  ಸಹೃದಯ ಕಾಳಜಿ. ಈಗೇನೋ ‘ಅಭಿನಯ ಮುಂದುವರೆಸುತ್ತೇನೆ’ ಎಂದು ಖಚಿತ ಪದಗಳಲ್ಲಿ ರಾಧಿಕಾ ಹೇಳಿದ್ದಾರೆ. ಆ ಹಂಬಲವೂ ಅವರಿಗಿರ ಬಹುದು. ಆದರೆ ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ನೋಡಿದರೆ ಅದು ಅಷ್ಟೂ ಸರಳ ಸಂಗತಿಯಲ್ಲವೆನ್ನುವುದು ಅರಿವಿಗೆ ಬರುತ್ತದೆ. ಮದುವೆಯಾದ ನಾಯಕಿಯರಿಗೆ ಬೇಡಿಕೆ ಕುಗ್ಗುವುದು ಎಂದಿನಿಂದಲೂ ನಡೆದುಕೊಂಡು ಬಂದಿರುವ ವಿದ್ಯಮಾನ. ಕಲಾವಿದೆಯನ್ನು ‘ಕನಸಿನ ರಾಣಿ’ಎಂದು ನೋಡುವ ಮನಸ್ಸುಗಳು ಅವಳೀಗ ಬೇರೆಯವರ ಮಡದಿ ಎನ್ನುವ ವಾಸ್ತವದೆದುರು ವಿಚಲಿತವಾಗುತ್ತವೆ ಎನ್ನುವುದನ್ನು ವಿಶ್ಲೇಷಕರು ಗುರುತಿಸಿದ್ದಾರೆ. ಇದಕ್ಕಾಗಿ ಚಿತ್ರನಟಿ ಎಷ್ಟೇ ಸಹಜವಾಗಿ ಅಭಿನಯಿಸಿದರೂ ‘ಪಕ್ಕದ ಮನೆ ಹುಡುಗಿ’ ಎಂದು ಕರೆಸಿಕೊಳ್ಳುತ್ತಾಳೆಯೇ ಹೊರತು ‘ನಮ್ಮ ಮನೆ ಹೆಣ್ಣುಮಗಳು’ ಎನ್ನಿಸಿಕೊಳ್ಳುವುದಿಲ್ಲ. ಈ ಪ್ರತ್ಯೇಕತೆ ಕಲಾವಿದರ ಖಾಸಗಿ ಜೀವನದಲ್ಲಿ ಇಣಕುವ ಎಲ್ಲಾ ಹಕ್ಕುಗಳೂ ನಮಗಿದೆ ಎನ್ನುವ ಮನೋಭಾವಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಅವರ ಜೀವನ ಕ್ರಮ ಕೂಡ ಹೀಗೆ ಇರಬೇಕು ಎನ್ನುವ ಆಗ್ರಹವೂ ಬೆಳೆಯುತ್ತದೆ. ಅಭಿನಯದ ಒಂದು ಮಾದರಿಯೇ ಶ್ರೇಷ್ಠ ಎಂದು ಭಾವಿಸಿ ಎಲ್ಲರ ಅಭಿನಯವೂ ಅದರಂತೆಯೇ ಇರಬೇಕು ಎಂದು ಅರಚಾಡುವ ರಾಂಗೋಪಾಲ ವರ್ಮರ ಧೋರಣೆಗೂ ಇದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

 ಕನ್ನಡದ ಮೊದಲ ನಾಯಕ ನಟ ಸುಬ್ಬಯ್ಯ ನಾಯಡು ಅವರ ತಾರಾ ಪತ್ನಿ ಲಕ್ಷ್ಮಿಬಾಯಿಯವರು ಮೂಕಿ ಚಿತ್ರಗಳ ಕಾಲದಲ್ಲೇ ಸ್ಟಾರ್ ಆಗಿದ್ದರು. ಈಜು, ಕುದರೆ ಸವಾರಿ, ಕತ್ತಿವರಸೆ ಎಲ್ಲವನ್ನೂ ಕಲಿತಿದ್ದರು. ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದಲ್ಲಿ ಅವರು ಹಾಡಿದ ‘ಭಲೇ ಭಲೇ ಪಾರ್ವತಿ’ ಕನ್ನಡದ ಮೊದಲ ಸೂಪರ್ ಹಿಟ್ ಹಾಡು. ‘ವಸಂತ ಸೇನೆ’ಯಾಗಿ ಲಕ್ಷ್ಮಿಬಾಯಿ ಸಿನಿಮಾದಲ್ಲಿ ನಾಯಕಿಯರ ಅಭಿನಯಕ್ಕೆ ಒಂದು ಮಾದರಿಯನ್ನೇ ನಿರ್ಮಿಸಿದ್ದರು. ಆದರೆ ಸುಬ್ಬಯ್ಯ ನಾಯಡು ಅವರು ಚಿತ್ರರಂಗದಿಂದ ದೂರವಾಗಿ ರಂಗಭೂಮಿಯಲ್ಲೇ ಭವಿಷ್ಯ ಕಂಡು ಕೊಳ್ಳಲು ನಿರ್ಧರಿಸಿದರು. ಲಕ್ಷ್ಮಿಬಾಯಿಯವರ ಚಿತ್ರಜೀವನವೂ ಅಲ್ಲಿಗೆ ಮುಕ್ತಾಯವಾಯಿತು. ಇದರಿಂದ ನಿಜವಾಗಿಯೂ ನಷ್ಟವಾಗಿದ್ದು ಕನ್ನಡ ಚಿತ್ರರಂಗಕ್ಕೆ. ಆದರೆ ಅವರ ಮಗ ಲೋಕೇಶ್‍ ಇದಕಿಂತ ಸರಳತೆ ಸಾಧ್ಯವಿಲ್ಲ ಎನ್ನುವಂತೆ ‘ಕಾಕನ ಕೋಟೆ’ ನಾಟಕ ನಡೆಯುತ್ತಿರುವಾಗಲೇ ಹಾರ ಬದಲಾಯಿಸಿಕೊಂಡು ಗಿರಿಜಾ ಲೋಕೇಶ್ ಅವರನ್ನು ವಿವಾಹವಾದರು. ಗಿರಿಜಾ ಇಂದಿಗೂ ಅಭಿನಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದು ನಿಜಕ್ಕೂ ಅಪರೂಪದ ಮಾದರಿ. ರೇವತಿ ಕಲ್ಯಾಣ್‍ ಕುಮಾರ್‍ ವಿವಾಹಕ್ಕೆ ಮೊದಲು ಬಹುಬೇಡಿಕೆಯ ಕಲಾವಿದೆಯಾಗಿದ್ದರು. ‘ರಾಜಲಕ್ಷ್ಮಿ’ ಚಿತ್ರದಲ್ಲಿ ದ್ವಿಪಾತ್ರದಲ್ಲೂ ಅಭಿನಯಿಸಿದ್ದರು. ಆದರೆ ವಿವಾಹದ ನಂತರ ಅಭಿನಯದಿಂದ ದೂರವಾಗಿ ತೆರೆಯ ಹಿಂದಿನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಲ್ಯಾಣ್ ಕುಮಾರ್ ವೃತ್ತಿ ಜೀವನ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಭಾರತಿ ವಿವಾಹಕ್ಕೆ ಮೊದಲೇ ಶತಚಿತ್ರ ನಟಿ ಎನ್ನಿಸಿಕೊಂಡಿದ್ದರು. ಆಗ ವಿಷ್ಣುವರ್ಧನ್ ಅವರೇ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟದ್ದ ನವನಟ. ವಿವಾಹದ ನಂತರ ಭಾರತಿ ಬೆರಳಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದರು. ಅಂಬರೀಷ್ ಅವರನ್ನು ವಿವಾಹವಾದ ಸುಮಲತಾ ಅವರದ್ದೂ ಇದೇ ದಾರಿ. ಮುಂದಿನ ಪೀಳಿಗೆಯಲ್ಲೂ ರಕ್ಷಿತಾ ವಿವಾಹದ ನಂತರ ಅಭಿನಯದಿಂದ ಸಂಪೂರ್ಣ ದೂರವಾದರೆ. ಪ್ರಿಯಾಂಕ ಉಪೇಂದ್ರ ಆಯ್ದ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದರು. ಆದರೆ ಇವೆಲ್ಲಕ್ಕೂ ಸಂಪೂರ್ಣ ತದ್ವರುದ್ದದ ಉದಾಹರಣೆ ಬಿ.ಸರೋಜ ದೇವಿಯವರದ್ದು. ಅವರು ವಿವಾಹದ ನಂತರವೇ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಗಮನಿಸ ಬೇಕಾದ ಸಂಗತಿ ಎಂದರೆ ಅವರ ಪತಿ ಶ್ರೀಹರ್ಷ ಚಿತ್ರರಂಗದ ಹಿನ್ನಲೆಯವರಾಗಿರಲಿಲ್ಲ.

ಈಗ ರಾಧಿಕಾ ಪಂಡಿತ್ ಯಾವ ಮಾದರಿಗೆ ಸೇರುತ್ತಾರೆ ಎನ್ನುವುದು ಅವರ ಆಯ್ಕೆಗೇ ಬಿಟ್ಟ ಸಂಗತಿ. ಬಹು ಎಚ್ಚರಿಕೆಯಿಂದ ವೃತ್ತಿ ಜೀವನವನ್ನು ಕಟ್ಟಿಕೊಂಡ ಅವರು ದಾಂಪತ್ಯದ ಹೊಣೆಗಾರಿಕೆಯನ್ನೂ ಅಷ್ಟೇ ಎಚ್ಚರಿಕೆಯಿಂದ ನಿರ್ವಹಿಸಿ ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ ಎನ್ನುವುದು ನಿರೀಕ್ಷೆ,  ಆದರೆ ಆಗ್ರಹವಲ್ಲ.ಎರಡಕ್ಕೂ ಇರುವ ವ್ಯತ್ಯಾಸ ಸ್ವಯಂವೇದ್ಯ!

Leave a Reply