ಆಡುವ ಮುನ್ನವೇ ಒಲಿಂಪಿಕ್ಸ್ ನಿಂದ ಹೊರಬಿದ್ದ ನರಸಿಂಗ್, ನಾಲ್ಕು ವರ್ಷ ನಿಷೇಧ!

(ನರಸಿಂಗ್ ಯಾದವ್, ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಭಾರತದ ಪದಕದ ನಿರೀಕ್ಷೆಯಾಗಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಸಕ್ತ ರಿಯೋ ಒಲಿಂಪಿಕ್ಸ್ ಯಾನ ಅತ್ಯಂತ ಆಘಾತಕಾರಿ ಅಂತ್ಯ ಕಂಡಿದೆ. ಅದೂ 4 ವರ್ಷದ ನಿಷೇಧದೊಂದಿಗೆ…

ಹೌದು, ಕಳೆದ ವರ್ಷ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿ, ಕಳೆದ ಕೆಲವು ತಿಂಗಳಿನಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿದ್ದ ಯುವ ಕುಸ್ತಿಪಟು ನರಸಿಂಗ್ ಯಾದವ್ ಗೆ ಕ್ರೀಡಾ ನ್ಯಾಯಾಧಿಕರಣ 4 ವರ್ಷ ನಿಷೇಧ ಹೇರಿದೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲಬೇಕೆಂಬ ನರಸಿಂಗ್ ಕನಸು ಹಾಗೇ ಉಳಿದಿದೆ.

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವೇ ದಿನಗಳು ಬಾಕಿ ಇದ್ದ ಸಂದರ್ಭದಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ ನರಸಿಂಗ್ ಯಾದವ್, ಈ ಹಿಂದೆಯೇ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ನಾಡಾ)ಯಿಂದ ಟೂರ್ನಿಗೆ ತೆರಳದಂತೆ ಸೂಚನೆ ಪಡೆದಿದ್ದರು. ನಂತರ ನಡೆದ ವಿಚಾರಣೆ ವೇಳೆ ಈ ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ, ತನ್ನ ವಿರುದ್ಧ ಕುತಂತ್ರ ನಡೆಸಲಾಗಿದೆ ಎಂದು ವಿಚಾರಣಾ ತಂಡದ ಮುಂದೆ ಯಶಸ್ವಿಯಾಗಿ ವಾದಿಸಿದ್ದ ನರಸಿಂಗ್, ಕ್ಲೀನ್ ಚಿಟ್ ಪಡೆದು ರಿಯೋ ವಿಮಾನ ಹತ್ತಿದ್ದರು. ಇದರಿಂದ ಇನ್ನೇನು ನರಸಿಂಗ್ ಅವರಿಗೆ ಎದುರಾದ ಎಲ್ಲ ಅಡ್ಡಿ ಆತಂಕಗಳು ಬಗೆಹರಿದವು, ನರಸಿಂಗ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಾರೆ ಅಂತಲೇ ಎಲ್ಲರು ಭಾವಿಸಿದ್ದರು.

ಆದರೆ, ಮೊನ್ನೆಯಷ್ಟೇ ನರಸಿಂಗ್ ಯಾದವ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ವಿಶ್ವ ಉದ್ದೀಪನ ಮದ್ದು ಸಂಸ್ಥೆ (ವಾಡಾ) ಕ್ರೀಡಾ ನ್ಯಾಯಾಧಿಕರಣದಲ್ಲಿ ಪ್ರಶ್ನಿಸಿತು. ಇದರೊಂದಿಗೆ ನರಸಿಂಗ್ ಯಾದವ್ ಆಸೆಗೆ ಮತ್ತೆ ಕಾರ್ಮೋಡ ಆವರಿಸಿತು. ಗುರುವಾರ ರಾತ್ರಿ ವಾಡಾ ಅರ್ಜಿ ವಿಚಾರಣೆ ನಡೆಸಿದ ಕ್ರೀಡಾ ನ್ಯಾಯಾಧಿಕರಣ, ನರಸಿಂಗ್ ಪರ ವಾದವನ್ನು ಪುರಸ್ಕರಿಸದೇ ವಾಡಾ ಮನವಿಯನ್ನು ಎತ್ತಿ ಹಿಡಿಯಿತು. ಇದರಿಂದ ನರಸಿಂಗ್ ಯಾದವ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ತಪ್ಪಿತಲ್ಲದೇ… ಅಂತಾರಾಷ್ಟ್ರೀಯ ಉದ್ದೀಪನ ಮದ್ದು ಕಾಯ್ದೆ ಉಲ್ಲಂಘನೆಗಾಗಿ ನಾಲ್ಕು ವರ್ಷ ನಿಷೇಧವನ್ನು ಹೇರಿತು.

ವಿಚಾರಣೆ ನಂತರ ಕ್ರೀಡಾ ನ್ಯಾಯಾಧಿಕರಣದ ತೀರ್ಪು ಹಿಗಿತ್ತು:

‘ಈ ಪ್ರಕರಣದಲ್ಲಿ ತನ್ನ ವಿರುದ್ಧ ಕುತಂತ್ರ ನಡೆದಿದೆ ಹಾಗೂ ತಾನು ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿಲ್ಲ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಹೀಗಾಗಿ ಅಥ್ಲಿಟ್ ಪರ ವಾದ ಒಪ್ಪಲು ಕ್ರೀಡಾ ನ್ಯಾಯಾಧಿಕರಣಕ್ಕೆ ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಕಾಯ್ದೆ ಉಲ್ಲಂಘನೆಗಾಗಿ ನರಸಿಂಗ್ ವಿರುದ್ಧ 4 ವರ್ಷ ನಿಷೇಧ ಹೇರಲಾಗಿದೆ.’

ಈ ನಿಷೇಧದಿಂದ ನರಸಿಂಗ್ ಯಾದವ್ ಕ್ರೀಡಾ ವೃತ್ತಿ ಬದುಕಿನ ಅಮೂಲ್ಯ ನಾಲ್ಕು ವರ್ಷ ಹಾಳಾಗಲಿದ್ದು, ಅವರ ಭವಿಷ್ಯದ ಮೇಲೆ ತೀವ್ರವಾದ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಉಳಿದಂತೆ ಗುರುವಾರ ಸ್ಪರ್ಧೆಗಳ ರೌಂಡಪ್…

ನರಸಿಂಗ್ ಯಾದವ್ ಪ್ರಕರಣ ಭಾರತದ ಕ್ರೀಡಾ ಕ್ಷೇತ್ರಕ್ಕೆ ಒಂದು ರೀತಿಯಲ್ಲಿ ಕಪ್ಪು ಚುಕ್ಕೆಯಾಗಿದೆ. ಈ ಆಘಾತಕಾರಿ ಬೆಳವಣಿಗೆಹೊರತಾಗಿಯೂ ಭಾರತದ ಕ್ರೀಡಾ ಕ್ಷೇತ್ರಕ್ಕೆ ಗುರುವಾರ ಒಂದು ರೀತಿಯಲ್ಲಿ ಅವಿಸ್ಮರಣೀಯ ದಿನವಾಗಿತ್ತು. ಕಾರಣ, ಬೆಳಗಿನ ಜಾವ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದರೆ, ರಾತ್ರಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಫೈನಲ್ ಪ್ರವೇಶಿಸುವ ಮೂಲಕ ಮತ್ತೊಂದು ಪದಕ ಖಚಿತ ಪಡಿಸಿದ್ರು. ಉಳಿದಂತೆ ಗಾಲ್ಫ್ ನಲ್ಲಿ ಅದಿತಿ ಅಶೋಕ್ ಉತ್ತಮ ಪ್ರದರ್ಶನ ಮುಂದುವರೆಸಿದರೆ, ಯುವ ಕುಸ್ತಿಪಟು ಬಬಿತಾ ಕುಮಾರಿ ನಿರಾಸೆ ಅನುಭವಿಸಿದರು.

ಮಹಿಳೆಯರ ಸಿಂಗಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಗಳಿಸಿದ ಜಯದಿಂದ ಮಿಕ್ಕ ಸ್ಪರ್ಧೆಗಳ ಫಲಿಂತಾಂಶಗಳನ್ನು ಮರೆ ಮಾಚಿಸಿತು. (ಪಿ.ವಿ ಸಿಂಧು ಸೆಮಿಫೈನಲ್ ಪಂದ್ಯದ ವರದಿ ಇಲ್ಲಿ ನೋಡಿ.) ಮಹಿಳೆಯರ ಗಾಲ್ಫ್ ವಿಭಾಗದಲ್ಲಿ ಭಾರತದ ಅದಿತಿ ಅಶೋಕ್ ಗುರುವಾರ ನಡೆದ ಎರಡನೇ ಸುತ್ತಿನಲ್ಲೂ ತಮ್ಮ ಉತ್ತಮ ಪ್ರದರ್ಶನ ಮುಂದುವರೆಸಿದರು. 68 ಅಂಕಗಳನ್ನು ಗಳಿಸಿದ ಅದಿತಿ 17ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ್ರು. ಶುಕ್ರವಾರ ಮೂರನೇ ಸುತ್ತು ನಡೆಯಲಿದ್ದು, ಭಾನುವಾರ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.

ಇನ್ನು ಮಹಿಳೆಯರ ಕುಸ್ತಿಯಲ್ಲಿ ಯುವ ಆಟಗಾರ್ತಿ ಬಬಿತಾ ಕುಮಾರಿ ನಿರಾಸೆ ಅನುಭವಿಸಿದ್ರು. ಫ್ರೀ ಸ್ಟೈಲ್ 53 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಬಿತಾ ತಮ್ಮ ಪ್ರತಿಸ್ಪರ್ಧಿ ಗ್ರೀಸ್ ನ ಮರಿಯಾ ಪ್ರೆವೊಲರಕಿ ವಿರುದ್ಧ 1-3 ಅಂಕಗಳ ಅಂತರದಲ್ಲಿ ಪರಾಭವಗೊಂಡರು.

ಇಂದು ಭಾರತೀಯ ಅಥ್ಲೀಟ್ ಗಳು ಸ್ಪರ್ಧಿಸಲಿರುವ ಕ್ರೀಡೆಗಳು ಹೀಗಿವೆ…

ಫೈನಲ್ ನಲ್ಲಿ ಸಿಂಧು: ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನ ಫೈನಲ್ ಸುತ್ತು ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಭಾರತದ ಭರವಸೆಯ ಆಟಗಾರ್ತಿ ಪಿ.ವಿ ಸಿಂಧು, ವಿಶ್ವದ ನಂ.1 ಆಟಗಾರ್ತಿ ಸ್ಪೇನ್ ನ ಕ್ಯಾರೊಲಿನ್ ಮರಿನ್ ವಿರುದ್ಧ ಆಡಲಿದ್ದಾರೆ.

ಕುಸ್ತಿ: ಶುಕ್ರವಾರ ಪುರುಷರ ಕುಸ್ತಿ ಪಂದ್ಯಗಳು ಆರಂಭವಾಗಲಿದ್ದು, ಪುರುಷರ ಫ್ರೀಸ್ಟೈಲ್ 57 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸಂದೀಪ್ ತೋಮರ್ ತಮ್ಮ ಪ್ರತಿಸ್ಪರ್ಧಿ ರಷ್ಯಾದ ವಿಕ್ಟೊರ್ ಲೆಬೆದೆವ್ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯ ಸಂಜೆ 6.45ಕ್ಕೆ ಆರಂಭವಾಗಲಿದೆ.

ಅಥ್ಲೆಟಿಕ್ಸ್: ಶುಕ್ರವಾರ ಅಥ್ಲೆಟಿಕ್ಸ್ ನ ನಾಲ್ಕು ಸ್ಪರ್ಧೆಗಳಲ್ಲಿ ಭಾರತದ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಆ ಪೈಕಿ ಮಹಿಳೆಯರ 4/400 ಮೀ. ರಿಲೇ ಓಟದ ಮೊದಲ ಸುತ್ತಿನಲ್ಲಿ ಭಾರತ ತಂಡದ ಅಶ್ವಿನಿ ಅಕ್ಕುಂಜಿ, ಎಂ.ಆರ್ ಪೂವಮ್ಮ, ಜಿಸ್ನಾ ಮ್ಯಾಥ್ಯೂ, ದೆಬಶ್ರೀ ಮಜುಂದಾರ್, ನಿರ್ಮಲ ಶೆರನ್, ಅನಿಲ್ಡಾ ಥಾಮಸ್ ಭಾಗವಹಿಸಲಿದ್ದಾರೆ. ಪುರುಷರ 4/400 ಮೀ. ರಿಲೇ ಓಟದಲ್ಲಿ ಭಾರತ ತಂಡದಿಂದ ಅರೋಕಿಯಾ ರಾಜೀವ್, ಮುಹಮದ್ ಅನಾಸ್, ಮೋಹನ್ ಕುಮಾರ್ ರಾಜಾ, ಅಯ್ಯಾಸಾಮಿ ಧರುನ್, ಲಲಿತ್ ಮಾತೂರ್, ಮುಹಮೊದ್ ಕುನ್ಹು ಕಣಕ್ಕಿಳಿಯಲಿದ್ದಾರೆ. ಪುರುಷರ 50 ಕಿ.ಮೀ ನಡಿಗೆ ಶುಕ್ರವಾರ ಸಂಜೆ 4.30ಕ್ಕೆ ಆರಂಭವಾಗಲಿದ್ದು ಭಾರತದ ಸಂದೀಪ್ ಕುಮಾರ್ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆ ಸಂಜೆ 4.30ಕ್ಕೆ ಆರಂಭವಾಗಲಿದೆ. ಇನ್ನು ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆ ರಾತ್ರಿ 11 ಕ್ಕೆ ಆರಂಭವಾಗಲಿದ್ದು, ಭಾರತದ ಖುಶ್ಬೀರ್ ಕೌರ್ ಮತ್ತು ಸಪನಾ ಸ್ಪರ್ಧಿಸಲಿದ್ದಾರೆ.

Leave a Reply