ಒಂದೇ ಹೆಜ್ಜೆ ಬಾಕಿ ಚಿನ್ನ ಗೆಲ್ಲಲು, ಯಾವುದಿದು ಸಿಂಧು ಎದುರಿಗಿರುವ ಸವಾಲು?

ಡಿಜಿಟಲ್ ಕನ್ನಡ ಟೀಮ್:
ಭಾರತೀಯ ಕ್ರೀಡಾಭಿಮಾನಿಗಳು ಈಗ ಉತ್ಸಾಹದ ಅಲೆಯಲ್ಲಿ ತೇಲುತ್ತಿದ್ದಾರೆ. ಕೆವಲ ಎರಡು ದಿನಗಳ ಹಿಂದೆ ಅಭಿಮಾನಿಗಳ ಮನಸ್ಥಿತಿಗೂ ಈಗಿನ ಮನಸ್ಥಿತಿಗೂ ಅಜಗಜಾಂತರ ವ್ಯಾತ್ಯಾಸವಿದೆ. ಏಕೆಂದರೆ ಕ್ರೀಡಾಕೂಟ ಮೂರನೇ ಎರಡು ಭಾಗದಷ್ಟು ಮುಕ್ತಾಯಗೊಂಡರೂ ಭಾರತಕ್ಕೆ ಯಾವುದೇ ಪದಕ ಲಭಿಸಿರಲಿಲ್ಲ. ಆದರೆ ಈಗ ಭಾರತಕ್ಕೆ ಚಿನ್ನ ಲಭಿಸಲು ಒಂದೇ ಒಂದು ಹೆಜ್ಜೆ ಮಾತ್ರ ಬಾಕಿ ಇದೆ.

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತ ಬ್ಯಾಡ್ಮಿಂಟನ್ನಿನ ‘ಪೋಸ್ಟರ್ ಗರ್ಲ್’ ಎಂದೇ ಖ್ಯಾತಿಯಾಗಿದ್ದ ಸೈನಾ ನೆಹ್ವಾಲ್ ಕೊರಳಿಗೆ ಕಂಚಿನ ಮಾಲೆ ಬೀಳುತ್ತಿದ್ದಂತೆ ಮತ್ತೊಂದು ಚಾಂಪಿಯನ್ ಆಟಗಾರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದಯಿಸಲಾರಂಭಿಸಿದ್ದಳು. ಆಕೆ ಬೇರೆ ಯಾರೂ ಅಲ್ಲ, ಪ್ರಸ್ತುತ ರಿಯೋ ಒಲಿಂಪಿಕ್ಸ್ ನಲ್ಲಿ ಕೋಟ್ಯಾಂತರ ಭಾರತೀಯರ ಚಿನ್ನದ ಕನಸನ್ನು ಈಡೇರಿಸಲು ಹೋರಟಿರೋ ಪಿ.ವಿ ಸಿಂಧು. ಸದ್ಯ ಭಾರತ ಕ್ರೀಡಾ ಅಭಿಮಾನಿಗಳಲ್ಲಿ ಮೂಡಿರುವ ಸಂತೋಷ್, ಸಂಭ್ರಮ, ಉತ್ಸಾಹಕ್ಕೆಲ್ಲಾ ಕಾರಣ ಇದೇ ಪಿ.ವಿ ಸಿಂಧು.

ರಾಷ್ಟ್ರೀಯ ತಂಡದ ಕೋಚ್ ಗೋಪಿಚಂದ್ ಪರಮ ಶಿಷ್ಯೆ ಪಿ.ವಿ ಸಿಂಧು ಈಗ ಭಾರತದ ಹಾಟ್ ಫೇವರೆಟ್ ಆಟಗಾರ್ತಿ. ಈಕೆ ಚಿನ್ನ ಗೆಲ್ಲುವುದಕ್ಕೂ ಮುನ್ನ ಕೋಟ್ಯಾಂತರ ಭಾರತೀಯರ ಮನ ಗೆದ್ದು ಚಾಂಪಿಯನ್ ಆಗಿದ್ದಾಳೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ಈಕೆ ಚಿನ್ನದ ಪದಕ ಗೆಲ್ಲಬೇಕಷ್ಟೆ… ಅದಕ್ಕೆ ಬಾಕಿ ಇರೋದು ಕೇವಲ ಇನ್ನೊಂದು ಮೆಟ್ಟಿಲು ಮಾತ್ರ.

ಹೇಳಲು ಎಷ್ಟು ಸುಲಭ ನೋಡಿ… ಇನ್ನೊಂದೇ ಮೆಟ್ಟಿಲು ಅಂತಾ… ಆದರೆ, ಈ ಮೆಟ್ಟಿಲು ಹತ್ತುವುದು ಅಷ್ಟು ಸುಲಭವೇ? ತಿಳಿಯೋಣ ಬನ್ನಿ.

ನಿಜ… ಸಿಂಧುವಿನ ಚಿನ್ನದ ಬೇಟೆಗೆ ಬಾಕಿ ಇರೋದು ಇನ್ನೊಂದು ಜಯ ಮಾತ್ರ. ಆದರೆ ಈ ಜಯಕ್ಕೆ ದೊಡ್ಡ ಸವಾಲಾಗಿ ನಿಂತಿರೋದು ವಿಶ್ವ ಚಾಂಪಿಯನ್… ನಂಬರ್ ಒನ್ ಆಟಗಾರ್ತಿ… ಸ್ಪೇನಿನ ಕ್ಯಾರೋಲಿನ್ ಮರಿನ್. ಮರಿನ್ ನೋಡಲು ಸೌಮ್ಯವಾಗಿ ಕಾಣುತ್ತಾಳೋ, ಮೈದಾನದಲ್ಲಿ ಅಷ್ಟೇ ಆರ್ಭಟಿಸುತ್ತಾಳೆ. ತಂತ್ರಗಾರಿಕೆಯಲ್ಲಿ ನಿಪುಣೆ, ಮಾನಸಿಕವಾಗಿ ಗಟ್ಟಿಗಿತ್ತಿ. ಪಂದ್ಯದ ಅಂತಿಮ ಕ್ಷಣದವರೆಗೂ ಹೋರಾಟುವ ಛಲಗಾತಿ. ತನ್ನ ಎಡಗೈನಿಂದ ಮಿಂಚಿನಂತೆ ಸಿಡಿಯುವ ಸ್ಮ್ಯಾಷ್ ಗಳು ಎದುರಾಳಿಗಳನ್ನು ಕಂಗೆಡುವಂತೆ ಮಾಡುತ್ತವೆ.

ಕ್ಯಾರೋಲಿನ್ ಮರಿನ್ ಸದ್ಯದ ವಿಶ್ವದ ಚಾಂಪಿಯನ್ ಆಟಗಾರ್ತಿ ಕಳೆದ ಒಂದೂವರೆ, ಎರಡು ವರ್ಷದಿಂದ ಮರಿನ್ ಮ್ಯಾಜಿಕ್ ಅಮೋಘವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ದಶಕಗಳ ಕಾಲ ಬ್ಯಾಡ್ಮಿಂಟನ್ ನಲ್ಲಿ ಪಾರುಪತ್ಯ ಮೆರೆದ ಚೀನಾ ಆಟಗಾರ್ತಿಯರೂ ಈಕೆಗೆ ಶರಣಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿಂಪಿಕ್ಸ್ ಒಂದನ್ನು ಬಿಟ್ಟು ಮಿಕ್ಕೆಲ್ಲಾ ಟೂರ್ನಿಗಳನ್ನು ಮರಿನ್ ತನ್ನ ಮಡಿಲಿಗೆ ಹಾಕಿಕೊಂಡಾಗಿದೆ. ಹೀಗಾಗಿ ಈಕೆಯ ಅಂತಿಮ ಹಾಗೂ ಮುಖ್ಯ ಗುರಿ ಒಲಿಂಪಿಕ್ಸ್ ಚಿನ್ನದ ಪದಕ.

ಹೀಗಾಗಿ ಪಿ.ವಿ ಸಿಂಧುವಿಗೆ ಈ ಒಂದು ಅಂತಿಮ ಹೆಜ್ಜೆ ಸ್ವಲ್ಪ ಸವಾಲಿನದ್ದೇ ಆಗಿದೆ. ಹಾಗಂತಾ ಸಾಧ್ಯವಿಲ್ಲವೆಂದಲ್ಲ… ಕಾರಣ, ಸಿಂಧು ಈವರೆಗೂ ಕ್ಯಾರೊಲಿನ್ ವಿರುದ್ಧ 7 ಪಂದ್ಯಗಳನ್ನಾಡಿದ್ದು, 3 ರಲ್ಲಿ ಜಯ, 4ರಲ್ಲಿ ಸೋಲನುಭವಿಸಿದ್ದಾರೆ. ಈಗಾಗಲೇ 3 ಬಾರಿ ಮರಿನ್ ರನ್ನ ಮಣಿಸಿರೋದು ಸಿಂಧುವಿನ ಆತ್ಮ ವಿಶ್ವಾಸ ಹೆಚ್ಚಿಸಿದೆ.

ಇನ್ನು ಈ ಒಲಿಂಪಿಕ್ಸ್ ನಲ್ಲಿ ಸಿಂಧು ತನಗಿಂತ ಅತ್ಯುತ್ತಮ ಶ್ರೇಯಾಂಕಿತರನ್ನು ಬಗ್ಗು ಬಡಿದಿರೊದ್ರಿಂದ ಈಕೆಯೂ ಮಾನಸಿಕವಾಗಿ ಸಮತೋಲಿತವಾಗಿದ್ದಾಳೆ. ಇನ್ನು ತನ್ನ ಗುರು ಪಿ.ಗೋಪಿಚಂದ್ ಅವರ ತಂತ್ರಗಾರಿಕೆ ಪಿ.ವಿ ಸಿಂಧುವಿನ ಮತ್ತೊಂದು ಪ್ರಮುಖ ಅಸ್ತ್ರ.

ಒಟ್ಟಿನಲ್ಲಿ ಈ ಇಬ್ಬರು ಆಟಗಾರ್ತಿಯರು ಅತ್ಯದ್ಭುತ ಲಯದಲ್ಲಿದ್ದು, ಸಮಬಲರ ಕಾದಾಟವಾಗಿ ಬಿಂಬಿತವಾಗಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ಹೇಳುವುದು ಕಷ್ಟವಾದರೂ, ರೋಚಕ ಪಂದ್ಯಕ್ಕೆ ನಾವೆಲ್ಲರೂ ಸಾಕ್ಷಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ. ರಾತ್ರಿ. 7.30ಕ್ಕೆ ಆರಂಭವಾಗಲಿರುವ ಈ ಐತಿಹಾಸಿಕ ಪಂದ್ಯದಲ್ಲಿ ನಾವೆಲ್ಲರೂ ಸಿಂಧು ಬೆಂಬಲಕ್ಕೆ ನಿಲ್ಲೋಣ.

Leave a Reply