ಸಿಂಧು ಕೊರಳಿಗೆ ಬೆಳ್ಳಿಯ ಪದಕ, ಚರಿತ್ರೆ ನೆನಪಿಡಲಿದೆ ಈಕೆಯ ಚಿನ್ನದಂಥ ಹೋರಾಟ!

ಡಿಜಿಟಲ್ ಕನ್ನಡ ಟೀಮ್:

ವಿಶ್ವ ಚಾಂಪಿಯನ್ ಆಟಗಾರ್ತಿಗೆ ಸಡ್ಡು ಹೊಡೆದು ಹೋರಾಡಿದ ಪಿ.ವಿ ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಮೊದಲ ಭಾರತೀಯ ಅಥ್ಲೀಟ್ ಎಂಬ ಇತಿಹಾಸ ಬರೆದಿದ್ದಾರೆ.

ಉಭಯ ಆಟಗಾರ್ತಿಯರಿಗೂ ಇದು ಮೊದಲ ಒಲಿಂಪಿಕ್ಸ್ ಫೈನಲ್ ಪಂದ್ಯವಾಗಿತ್ತು. ಅಲ್ಲದೆ ಉಭಯ ಆಟಗಾರ್ತಿಯರೂ ಸಮಬಲದ ಹೋರಾಟ ನಡೆಸಿದರೂ ಪರಿಸ್ಥಿತಿಯ ಒತ್ತಡವನ್ನು ಮೀರಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಮರಿನ್ 19-21, 21-12, 21-16 ಸೆಟ್ ಗಳ ಅಂತರದ ಜಯ ಸಾಧಿಸಿದರು. ಇದರೊಂದಿಗೆ ಚಿನ್ನದ ಪದಕ ಮರಿನ್ ಕೊರಳನ್ನು ಅಲಂಕರಿಸಿತು. ಈ ಸೋಲಿನ ಹೊರತಾಗಿಯೂ ಸಿಂಧು ಅವರ ಈ ಸಾಧನೆ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಅಷ್ಟೇ ಅಲ್ಲದೆ ಈ ಒಲಿಂಪಿಕ್ಸ್ ನಲ್ಲಿ ಭಾರತ 1 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದುಕೊಂಡಂತಾಗಿದೆ.

ಈ ಪಂದ್ಯ ಉಭಯ ಆಟಗಾರ್ತಿಯರಿಗೂ ಮಹತ್ವದ್ದಾಗಿದ್ದರಿಂದ ಇಬ್ಬರೂ ಒತ್ತಡಕ್ಕೆ ಸಿಲುಕಿಸಿದ್ದು ಕಂಡು ಬಂದಿತು. ಪರಿಣಾಮ ಪಂದ್ಯದ ಮೊದಲ ಸೆಟ್ ನಲ್ಲಿ ಇಬ್ಬರೂ ಆಟಗಾರ್ತಿಯರು ಕೆಲವು ಸ್ವಯಂಕೃತ ತಪ್ಪು ಎಸಗುವಂತೆ ಮಾಡಿತ್ತು. ಪಂದ್ಯದ ಆರಂಭದಲ್ಲಿ ಪಿ.ವಿ ಸಿಂಧು ಮಾಡಿದ ಒಂದೆರಡು ತಪ್ಪುಗಳು ಸೆಟ್ ನ ಮೊದಲಾರ್ಧದ ವೇಳೆಗೆ 6-11 ರ ಹಿನ್ನಡೆ ಅನುಭವಿಸುವಂತೆ ಮಾಡಿತು. ಈ ವೇಳೆ ಜಾಗರೂಕಳಾದ ಸಿಧು ವಿಚಲಿತಳಾಗದೇ ತನ್ನ ಸಂಯಮದಿಂದಲೇ ಹೋರಾಟ ನಡೆಸಿದಳು. ಸೆಟ್ ನಲ್ಲಿ ಉತ್ತಮ ಮುನ್ನಡೆ ಪಡೆದ ವೇಳೆಯಲ್ಲೇ ಮರಿನ್ ಅವರಿಂದ ಆದ ತಪ್ಪುಗಳು ಉಭಯ ಆಟಗಾರ್ತಿಯರ ನಡುವಣ ಅಂತರವನ್ನು ತಗ್ಗಿಸಿತು. ಒಂದು ಹಂತದಲ್ಲಿ 16-19ರ ಹಿನ್ನಡೆಯಲ್ಲಿದ್ದ ಸಿಂಧು ಸತತ ನಾಲ್ಕು ಅಂಕಗಳನ್ನು ಬಾಚುವ ಮೂಲಕ ಮೊದಲ ಸೆಟ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡರು.

ಸಿಂಧುವಿನ ಈ ಮರು ಆಕ್ರಮಣದ ರೀತಿ ಭಾರತಕ್ಕೆ ಅದಾಗಲೇ ಚಿನ್ನ ಗೆದ್ದ ಖುಷಿ ಕೊಟ್ಟಿದ್ದು ಸುಳ್ಳಲ್ಲ.

ಮೊದಲ ಸೆಟ್ ನಲ್ಲಿನ ಹಿನ್ನಡೆ ಸಹಿಸದ ಮರಿನ್, ದ್ವಿತೀಯ ಸೆಟ್ ನಲ್ಲಿ ತನ್ನ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪ್ರತಿ ಹೊಡೆತದಲ್ಲೂ ಸಿಂಧುವನ್ನು ನಿಯಂತ್ರಿಸಿದ ಮರಿನ್ 9 ಅಂಕಗಳ (11-2) ಮುನ್ನಡೆ ಪಡೆದರು. ಈ ವೇಳೆ ಸಿಂಧು ಮತ್ತೆ ಚೇತರಿಕೆ ಕಂಡರೂ ಮರಿನ್ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಿಂಧು 12-21 ರ ಹಿನ್ನಡೆ ಅನುಭವಿಸಿದರು.

ದ್ವಿತೀಯ ಸೆಟ್ ಗೆದ್ದು ಮತ್ತೆ ಆತ್ಮವಿಶ್ವಾಸ ಪಡೆದುಕೊಂಡ ಮರಿನ್ ತೃತೀಯ ಸೆಟ್ ಆರಂಭದಲ್ಲೇ ಸಿಂಧು ವಿರುದ್ಧ 6-1ರ ಉತ್ತಮ ಮುನ್ನಡೆ ಪಡೆದರು. ಈ ವೇಳೆ ಕಮ್ ಬ್ಯಾಕ್ ಮಾಡಿದ ಸಿಂಧು 10-10 ರ ಸಮಬಲ ಸಾಧಿಸಿದರು. ನಂತರದ ಹಂತದಲ್ಲಿ ಸಿಕ್ಕ ಸರ್ವ್ ಅವಕಾಶವನ್ನು ಕಳೆದುಕೊಂಡ ಸಿಂಧು ಮತ್ತೆ ಸೆಟ್ ನಲ್ಲಿ ಮುನ್ನಡೆಯನ್ನು ಸ್ಪೇನ್ ಆಟಗಾರ್ತಿಗೆ ಬಿಟ್ಟುಕೊಟ್ಟರು ಅಂತಿಮವಾಗಿ ಸಿಂಧು 16-21 ಅಂಕಗಳ ಅಂತರದ ಹಿನ್ನಡೆಯೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

Leave a Reply