ಪೆಲ್ಲೆಟ್ ಇಲ್ಲದಿದ್ದರೆ ಬಂದೂಕನ್ನೇ ಚಲಾಯಿಸಬೇಕಾದೀತು ಎಂದ ಸಿ ಆರ್ ಪಿ ಎಫ್, ರಾಜ್ಯದ 300 ಯುವಕರು ಸೇನೆಗೆ: ಜಮ್ಮು- ಕಾಶ್ಮೀರದಲ್ಲಿ ಸದ್ಯಕ್ಕೆ ಗಮನಿಸಬೇಕಿರುವ ಎರಡು ವಾಸ್ತವಗಳು

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದೂವರೆ ತಿಂಗಳಿನಿಂದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಎರಡು ಪ್ರಮುಖ ವಿದ್ಯಮಾನಗಳು ನಡೆದಿವೆ. ಅವುಗಳೆಂದರೆ, ಪೆಲ್ಲೆಟ್ ಗನ್ ನಿಷೇಧದ ಬಗ್ಗೆ ಸಿ ಆರ್ ಪಿ ಎಫ್ ಹೈಕೋರ್ಟ್ ಗೆ ನೀಡಿರುವ ಉತ್ತರ ಒಂದೆಡೆಯಾದರೆ, ಮತ್ತೊಂದು ಅದೇ ರಾಜ್ಯದಿಂದ ಸುಮಾರು 300 ಯುವಕರನ್ನು ಭಾರತೀಯ ಸೇನೆ ಆಯ್ಕೆ ಮಾಡಿಕೊಂಡಿರುವುದು.

– ಕಣಿವೆ ರಾಜ್ಯದಲ್ಲಿ ಹಿಂಸಾಚಾರವನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಪೆಲ್ಲೆಟ್ ಗನ್ ಬಳಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ವಿಚಾರಣೆಗೆ ಸಂಬಂಧಿಸಿದಂತೆ ಸಿ ಆರ್ ಪಿ ಎಫ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

‘ಜುಲೈ 9 ರಿಂದ ಆಗಸ್ಟ್ 11 ರವರೆಗೆ ಕಣಿವೆ ರಾಜ್ಯದಲ್ಲಿ ಪ್ರತಿಭಟನಾಕಾರು ನಿಯಂತ್ರಿಸಲು 3,500 ಪೆಲ್ಲೆಟ್ ಕಾಟ್ರಿಡ್ಜಸ್ ಗಳನ್ನು ಬಳಸಲಾಗಿದೆ. ದೊಂಬಿ, ಗಲಾಟೆಯನ್ನು ನಿಯಂತ್ರಿಸಲು ಪೆಲ್ಲೆಟ್ ಗನ್ ಪ್ರಯೋಗವೇ ಸಿ ಆರ್ ಪಿ ಎಫ್ ಬಳಿ ಇರುವ ಸೂಕ್ತ ಅಸ್ತ್ರ. ಒಂದುವೇಳೆ ಈ ಪೆಲ್ಲೆಟ್ ಗನ್ ಬಳಸದಂತೆ ನಿಷೇಧ ಹೇರಿದರೆ, ಮುಂದಿನ ದಿನಗಳಲ್ಲಿ ಹಿಂಸಾಚಾರ ಹಾಗೂ ಗದ್ದಲದ ಸಂದರ್ಭದಲ್ಲಿ ಬಂದೂಕುಗಳ ಗುಂಡನ್ನು ಹಾರಿಸಬೇಕಾಗುತ್ತದೆ. ಇದರಿಂದ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ…’

ಇದು ಸಿ ಆರ್ ಪಿ ಎಫ್ ಮತ್ತು ಬಿಎಸ್ಎಫ್ ಪಡೆಗಳ ಪ್ರತಿಕ್ರಿಯೆಯಾಗಿದ್ದು, ನ್ಯಾಯಾಲಯಕ್ಕೆ ರಾಜ್ಯ ಸರ್ಕಾರದಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ.

– ಇನ್ನು ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ವಿರುದ್ಧ ಕಲ್ಲು ತೂರಾಟ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಮತ್ತೊಂದೆಡೆ ಇದೇ ರಾಜ್ಯದ ಕೆಲವು ಯುವಕರು ಭಾರತೀಯ ಸೇನೆಗೆ ಸೇರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿನ ಸುಮಾರು 300 ಯುವಕರನ್ನು ಭಾರತೀಯ ಸೇನೆ ಆಯ್ಕೆ ಮಾಡಿಕೊಂಡಿದೆ. ಕಳೆದ ಒಂದು ವರ್ಷದಿಂದ ಇವರಿಗೆ ತರಬೇತಿ ನೀಡಲಾಗಿದ್ದು, ಇವರು ಭಾರತೀಯ ಸೇನೆಯಲ್ಲಿ ಸೇವೆ ಆರಂಭಿಸಿದ್ದಾರೆ. ಸೇವೆಗೆ ಸೇರುವಾಗ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಶ್ಮೀರಿ ಯುವಕರು ಮತ್ತು ಅವರ ಕುಟುಂಬ ಸದಸ್ಯರು ಮೇಣದ ಬತ್ತಿ ಹಚ್ಚುವ ಮೂಲಕ ಕಣಿವೆ ರಾಜ್ಯದಲ್ಲಿ ಮತ್ತೆ ಶಾಂತಿ ನೆಲೆಸಬೇಕೆಂದು ಪ್ರಾರ್ಥಿಸಿದ್ದಾಗಿ ಸೇನೆಯ ವಕ್ತಾರರಿಂದ ಮಾಹಿತಿ ಬಂದಿವೆ. ಇಡೀ ಜಮ್ಮು-ಕಾಶ್ಮೀರವೇ ಭಾರತದ ವಿರುದ್ಧ ನಿಂತು ಆಜಾದಿ ಕೇಳುತ್ತಿದೆ ಎಂಬಂತೆ ಬಿಂಬಿಸುತ್ತಿರುವ ಬುದ್ಧಿಜೀವೀಗಣದ ಗದ್ದಲಕ್ಕೆ ವ್ಯತಿರಿಕ್ತ ಚಿತ್ರ ಒದಗಿಸುತ್ತಿದೆ ಈ ವಿದ್ಯಮಾನ.

Leave a Reply