ಸುದ್ದಿಸಂತೆ: ಸರ್ಕಾರದ್ದು ಇದ್ಯಾವ ದಲಿತ ಕಾಳಜಿ ಅಂತ ಕುಮಾರಸ್ವಾಮಿ ಪ್ರಶ್ನೆ, ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವರಿಗೆ ನೊಟೀಸ್, ತರಬೇತು ಶಾಲೆಯಾಗಿ ಮಂಡಕಳ್ಳಿ ಬಳಕೆಯ ಚಿಂತನೆ

ಸಿಐಡಿ ತನಿಖೆ ಎಷ್ಟು ಪ್ರಗತಿ?

ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ . ಪ್ರಸಾದ್ ಅವರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿಐಡಿ ನೋಟಿಸ್ ನೀಡಿದೆ.

ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಮೊದಲನೆ ಆರೋಪಿ, ಪ್ರಸಾದ್ ಆರೋಪಿಯಾಗಿದ್ದಾರೆ. ಮೂರನೇ ಆರೋಪಿಯಾಗಿರುವ ಪ್ರಣವ್ ಮೊಹಾಂತಿ ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ.

ತನಿಖಾ ತಂಡದ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಗಣಪತಿ ಕುಟುಂಬದ ಪತ್ನಿ, ಪುತ್ರರು, ತಂದೆ, ಸಹೋದರ ಸೇರಿದಂತೆ ಮತ್ತಿತರರಿಂದ ಮಾಹಿತಿ ಕಲೆ ಹಾಕಲಾಗಿದೆ.

ಸರ್ಕಾರದ ದಲಿತ ಕಾಳಜಿ ನಿಜವಾದದ್ದೇ?- ಕುಮಾರಸ್ವಾಮಿ ಪ್ರಶ್ನೆ

ರಾಜಾಕಾಲುವೆ ಒತ್ತುವರಿ ಹೆಸರಿನಲ್ಲಿ ಬಡವರ ಮನೆ ಒಡೆಯುವ ಮೊದಲು ಅವರಿಗೆ ಭೂಮಿ ಕೊಟ್ಟು ಓಡಿ ಹೋದ ಬಿಲ್ಡರುಗಳನ್ನು ಬಂಧಿಸಿ ಜೈಲಿಗಟ್ಟಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಒತ್ತುವರಿ ಹೆಸರಿನಲ್ಲಿ ಬಡವರ ಮನೆ ಒಡೆಯುವ ಮೊದಲು ಹತ್ತು,ಇಪ್ಪತ್ತು ಕೋಟಿ ಸುರಿದು ಬಂಗಲೆ ನಿರ್ಮಿಸಿದ ಮಂತ್ರಿಗಳು,ಮಾಜಿಮಂತ್ರಿಗಳು,ಅಧಿಕಾರಿಗಳು,ಪ್ರಭಾವಿಗಳ ಮನೆಯನ್ನು ಮೊದಲು ಒಡೆದು ಹಾಕಿ.ರಾಜಾಕಾಲುವೆ ಒತ್ತುವರಿಯನ್ನು ತೆರವುಗೊಳಿಸುತ್ತಿದ್ದೀರಿ.ಅದರಿಂದ ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಅನೇಕ ಮಂದಿ ಬೀದಿಗೆ ಬಂದು ನಿಂತಿದ್ದಾರೆ.ಆದರೆ ಲಿಂಗಣ್ಣ ನಾಯಕನ ಕೆರೆ, ಡಾಲರ್ ಕಾಲೋನಿಯಲ್ಲಿಕೋಟ್ಯಂತರ ರೂ ಸುರಿದು ಮನೆ ಕಟ್ಟಿಕೊಂಡವರು ನೆಮ್ಮದಿಯಾಗಿದ್ದಾರೆ.ಒತ್ತುವರಿ ತೆರವು ಮಾಡುವುದೇ ಆದರೆ ಮೊದಲು ಅಲ್ಲಿಂದ ಪ್ರಾರಂಭಿಸಿ ಎಂದು ಹರಿಹಾಯ್ದರು.

ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು,ವಿಶ್ವವಿದ್ಯಾನಿಲಯಗಳಲ್ಲಿರುವ ಉಪಕುಲಪತಿಗಳು ಡಕಾಯಿತರಿದ್ದಂತೆ ಎಂದು ಹೇಳುತ್ತಾರೆ.ಇವರು ಮಂತ್ರಿಯಾಗಿ ಮೂರು ತಿಂಗಳಾಯಿತು.ಇಂತಹ ಡಕಾಯಿತರ ಮೇಲೆಇವರೇನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರದ ದಲಿತ ಕಾಳಜಿಯನ್ನೂ ಕುಮಾರಸ್ವಾಮಿ ಪ್ರಶ್ನೆಗೊಳಪಡಿಸಿದ್ದಾರೆ. ‘ಗೃಹ ಸಚಿವ ಪರಮೇಶ್ವರ್ ಅವರು,ನಾನು ದಲಿತನಾಗಿ ಹುಟ್ಟಿದ್ದೇ ತಪ್ಪು ಎಂದು ಪಶ್ಚಾತ್ತಾಪ ಪಡುತ್ತಾರೆ.ಆದರೆ ಇತ್ತೀಚೆಗೆ ಕೆಎಎಸ್‍ನಿಂದ ಐಪಿಎಸ್ ಹುದ್ದೆಗಳಿಗೆ ಮೂರು ಮಂದಿ ದಲಿತ ಹೆಣ್ಣು ಮಕ್ಕಳಿಗೆ ಬಡ್ತಿನೀಡುವ ಕುರಿತು ಸಂದರ್ಶನ ಕರೆಯಲಾಗಿತ್ತು.ಆದರೆ ಈ ಸಂದರ್ಶನಕ್ಕೆ ಇದ್ದಕ್ಕಿದ್ದಂತೆ ಕೆಎಟಿಯಿಂದ ತಡೆಯಾಜ್ಞೆ ತರಲಾಯಿತು.ಯಾರು ಈ ಸಂದರ್ಶನಕ್ಕೆ ತಡೆಯಾಜ್ಞೆ ತಂದರು, ಯಾಕೆ ತಂದರು ಎಂದು ಪ್ರಶ್ನಿಸಿದ ಅವರು,ಮೊದಲು ದಲಿತ ಹೆಣ್ಣು ಮಕ್ಕಳು ಐಪಿಎಸ್ ಹುದ್ದೆಗೆ ಬರದಂತೆ ತಡೆಗಟ್ಟಿದ ಶಕ್ತಿಗಳು ಯಾವುವು ಎಂದು ಪ್ರಶ್ನಿಸಿದರು.

ರಾಜ್ಯದ ಮೂವತ್ತೆಂಟು ಐಪಿಎಸ್ ಅಧಿಕಾರಿಗಳು ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.ಆದರೆ ರಾಜ್ಯದಲ್ಲಿ ನಲವತ್ತು ಐಪಿಎಸ್ ಹುದ್ದೆಗಳು ಖಾಲಿಯಿವೆ.ಇದನ್ನು ಯಾವ ಕಾರಣಕ್ಕಾಗಿ ತುಂಬಿಸಲಾಗುತ್ತಿಲ್ಲ ಉತ್ತರ ಭಾರತೀಯ ಅಧಿಕಾರಿಗಳನ್ನು ಕರೆತಂದರೆ ಇಲ್ಲಿ ಪ್ರತಿಭಟನೆ ಮಾಡುವವರನ್ನು ಚೆನ್ನಾಗಿ ಹೊಡೆಸಬಹುದು ಎಂಬುದು ಸರ್ಕಾರದ ಆಲೋಚನೆಯೇ  ಅಂತ ಪ್ರಶ್ನಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣವನ್ನು ತರಬೇತಿಗೆ ಬಳಸುವ ಚಿಂತನೆ

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ನಿಟ್ಟಿನಲ್ಲಿ ಕೇಂದ್ರ ವಿಮಾನಯಾನ ಸಚಿವ ಗಜಪತಿ ರಾಜು ಅವರಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದಾರೆ.ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ತರಬೇತಿ ಶಾಲೆ ಪ್ರಾರಂಭಿಸಲು ಸೂಕ್ತವಾದ ಸ್ಥಳವಾಗಿದ್ದು, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಅಲ್ಲಿ ತರಬೇತಿ ಶಾಲೆ ಪ್ರಾರಂಭಿಸಬೇಕು.ಬೆಂಗಳೂರಿನ ಜಕ್ಕೂರಿನಲ್ಲಿ ಈಗಾಗಲೇ ತರಬೇತಿ ಶಾಲೆ ಇದೆಯಾದರೂ ಕೇವಲ 20 ವಿದ್ಯಾರ್ಥಿಗಳಷ್ಟೇ ಅಲ್ಲಿ ತರಬೇತಿ ಪಡೆಯಲು ಸಾಧ್ಯ.ಹೀಗಾಗಿ, ವಿಮಾನ ತರಬೇತಿ ಶಾಲೆಯನ್ನು ಬೆಂಗಳೂರಿನ ಎಚ್‍ಎಎಲ್ ಅಥವಾ ಮೈಸೂರಿನ ಮಂಡಕಳ್ಳಿಯಲ್ಲಿ ಪ್ರಾರಂಭಿಸಬೇಕು ಎಂಬ ಪ್ರಸ್ತಾವ ಸಲ್ಲಿಸಲಾಗಿದೆ.

ಸದ್ಯ ಮಂಡಕಳ್ಳಿ ವಿಮಾನ ನಿಲ್ದಾಣ ಅತಿ ಗಣ್ಯರು ಮತ್ತು ರಾಜಕಾರಣಿಗಳ ಖಾಸಗಿ ವಿಮಾನ ಹಾರಾಟಕ್ಕೆ ಸೀಮಿತವಾಗಿದೆ.

Leave a Reply