ಮಹಾಗುರು ಗೋಪಿಚಂದಗೆ ನಮಿಸದಿದ್ದರೆ ಭಾರತೀಯರ ಬೆಳ್ಳಿ ಸಂಭ್ರಮ ಅಪೂರ್ಣ!

ಡಿಜಿಟಲ್ ಕನ್ನಡ ವಿಶೇಷ:

ಪುಲ್ಲೇಲಾ ಗೋಪಿಚಂದ್… ಸದ್ಯ ಭಾರತದಾದ್ಯಂತ ‘ದ್ರೋಣಚಾರ್ಯ’ ಎಂಬ ಖ್ಯಾತಿ ಪಡೆದ ಬ್ಯಾಡ್ಮಿಂಟನ್ ಕೋಚ್. 2012 ಲಂಡನ್ ಒಲಿಂಪಿಕ್ಸ್ ಹಾಗೂ ಪ್ರಸಕ್ತ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದ ಆಸೆಯನ್ನು ತನ್ನ ಶಿಷ್ಯಂದಿರ ಮೂಲಕ ಈಡೇರಿಸುತ್ತಿರುವ ಅಪ್ರತಿಮ ಗುರು ಗೋಪಿಚಂದ್.

ಗೋಪಿಚಂದ್ ಈ ಬಾರಿಯ ಒಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ನಲ್ಲಿ ಕಿಡಂಬಿ ಶ್ರೀಕಾಂತ್ ಹಾಗೂ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ ಸಿಂಧುವಿನ ಅಮೋಘ ಪ್ರದರ್ಶನದ ಹಿಂದೆ ಇರುವ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿಯೊಬ್ಬ ಜೀವನದಲ್ಲಿ ಯಶಸ್ವಿಯಾಗಬೇಕಾದ್ರೆ, ‘ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು’ ಎಂಬ ಮಾತಿದೆ. ಅದರಲ್ಲೂ ಗೋಪಿಚಂದ್ ರಂತಹ ಗುರುವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಮಾತು ದೇಶದ ಕ್ರೀಡಾ ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿದೆ. ಅಷ್ಟರ ಮಟ್ಟಿಗೆ ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್ ಗೋಪಿಚಂದ್ ಹವಾ ಸೃಷ್ಟಿಯಾಗಿದೆ.

ಹೌದು… 1991 ರಿಂದ 2001 ರವರೆಗೆ ಆಟಗಾರನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸೇವೆ ಸಲ್ಲಿಸಿದ್ದ ಗೋಪಿಚಂದ್, ಆಟಗಾರನಾಗಿ ಮಾಡಿದ ಸಾಧನೆಗಿಂತ ಕೋಚ್ ಆಗಿ ಮಾಡಿರುವ ಸಾಧನೆಯೇ ಅಮೋಘ. ಗೋಪಿಚಂದ್ ಅವರು ಕೋಚ್ ಆಗಿ ಮಾಡಿರುವ ಈ ಸಾಧನೆಯ ಹಾದಿಯನ್ನು ನೋಡೋಣ…

ಕೋಚಿಂಗ್ ಅಕಾಡೆಮಿ ಕಟ್ಟಿದ ಗೋಪಿಚಂದ್ ಸವಾಲಿನ ಹಾದಿ…

ಅದು, 2001 ನೇ ಇಸವಿ… ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ನಂತರ ಗೋಪಿಚಂದ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಗೆ ವಿದಾಯ ಹೇಳಿದ್ರು.

ತಮ್ಮ ಆಟದ ದಿನಗಳಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದ ಗೋಪಿಚಂದ್ ಮನಸಲ್ಲಿ ಅದಾಗಲೇ ಒಂದು ವಿಶ್ವದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಿ ಅದರಲ್ಲಿ ಭಾರತದ ಮುಂದಿನ ಪ್ರತಿಭೆಗಳನ್ನು ಬೆಳೆಸುವ ಆಸೆ ಮೊಳಕೆಯೊಡಿದಿತ್ತು.

ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಜಯಿಸಿದ್ದಕ್ಕಾಗಿ 2003ರಲ್ಲಿ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಗೋಪಿಚಂದ್ ಅವರಿಗೆ 5 ಎಕರೆ ಭೂಮಿಯನ್ನು ಮಂಜೂರು ಮಾಡಿತು. ಭವಿಷ್ಯದ ತಾರಾ ಆಟಗಾರರನ್ನು ಬೆಳೆಸಲು ಜಾಗ ಸಿಕ್ಕಿತಾದರೂ ಆ ಜಾಗದಲ್ಲಿ ವಿಶ್ವ ದರ್ಜೆಯ ಅಕಾಡೆಮಿ ಕಟ್ಟೋದು ಸುಲಭದ ಮಾತಾಗಿರಲಿಲ್ಲ. ಕಾರಣ, ಈ ಅಕಾಡೆಮಿ ನಿರ್ಮಾಣಕ್ಕೆ ಗೋಪಿಚಂದ್ ಅವರಿಗೆ ಬೇಕಾಗಿದ್ದು ₹13 ಕೋಟಿ ಬಂಡವಾಳ. ಈ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಲು ಗೋಪಿ ಹರಸಾಹಸ ಪಡೆಬೇಕಾಯಿತು.

ಇದಕ್ಕಾಗಿ ಉದ್ಯಮಿಗಳು ಹಾಗೂ ಇತರರನ್ನು ಸಂಪರ್ಕಿಸಿದರು.  ಕ್ರಿಕೆಟ್ ಅನ್ನು ಧರ್ಮವಾಗಿ, ಉದ್ಯಮವಾಗಿ, ಮನರಂಜನೆ ಸಾಧನವಾಗಿ ಪರಿಗಣಿಸಿರೋ ಈ ದೇಶದಲ್ಲಿ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ ಸ್ಥಾಪಿಸಲು ಅಷ್ಟು ಸುಲಭವಾಗಿ ಹಣ ಹರಿದು ಬರಲಿಲ್ಲ.

ತಮ್ಮ ಕನಸಿನ ಅಕಾಡೆಮಿ ಕಟ್ಟಲು ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ನೆರವು ಸಿಗದಿದ್ದಾಗ ಬೇರೆ ದಾರಿ ಇಲ್ಲದೆ ತಮ್ಮ ಮನೆಯನ್ನು ಒತ್ತೆಯಿಟ್ಟು ₹3 ಕೋಟಿ ಹಣ ಸಂಗ್ರಹಿಸಿದರು. ಈ ಮೊತ್ತ ಯಾವ ಮೂಲೆಗೂ ಸಾಕಾಗುವುದಿಲ್ಲ ಎಂದಾಗ ಗೋಪಿಚಂದ್ ದೇಣಿಗೆ ಸಂಗ್ರಹಿಸಲು ಮುಂದಾದ್ರು. ಆದರೂ ಅಗತ್ಯ ನೆರವು ಬರಲಿಲ್ಲ. ಈ ಸಂದರ್ಭದಲ್ಲಿ ಸಂಬಂಧಿಕರು ಹಾಗೂ ಉದ್ಯಮಿಯೂ ಆಗಿದ್ದ ನಿಮ್ಮಗಡ್ಡ ಪ್ರಸಾದ್ ಎಂಬುವರು ಗೋಪಿಚಂದ್ ಗೆ ₹5 ಕೋಟಿ ಆರ್ಥಿಕ ನೆರವು ನೀಡಿದರು. ಈ ನೆರವಿಗೆ ಪ್ರತಿಯಾಗಿ ಪ್ರಸಾದ್ ಅವರು ಹಾಕಿದ ಷರತ್ತು ಏನಂದ್ರೆ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಪದಕ ತರಬೇಕು ಎಂಬುದು. ಈ ಷರತ್ತನ್ನು ಗೋಪಿಚಂದ್ ಲಂಡನ್ ಒಲಂಪಿಕ್ಸ್ ನಲ್ಲಿಯೇ ಪೂರೈಸಿದ್ದು, ಅದರ ಮುಂದುವರಿದ ಭಾಗವಾಗಿ ಈಗ ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಪದಕ ಗೆದ್ದಿದ್ದಾರೆ.

ಅಗತ್ಯ ಹಣ ಸಿಗುತ್ತಿದ್ದಂತೆಯೇ ಗೋಪಿಚಂದ್ ಅಕಾಡೆಮಿ ನಿರ್ಮಿಸಿದರು. ಆ ಮೂಲಕ 2008 ರಲ್ಲಿ ವಿಶ್ವದರ್ಜೆಯ 8 ಕೋರ್ಟ್ ಗಳು, ಸ್ವಿಮ್ಮಿಂಗ್ ಪೂಲ್, ವೇಟ್ ಟ್ರೇನಿಂಗ್, ಕ್ಯಾಂಟೀನ್, ವಿಶ್ರಾಂತಿ ಕೊಠಡಿಗಳನ್ನೊಳಗೊಂಡ ‘ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ’ ಪ್ರಾರಂಭವಾಯ್ತು. ಈ ಅಕಾಡೆಮಿಯಲ್ಲಿ ಸೈನಾ ನೆಹ್ವಾಲ್ (ಲಂಡನ್ ಒಲಿಂಪಿಕ್ಸ್ ಪದಕ ವಿಜೇತೆ, ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ, ಪ್ರಸ್ತುತ 5ನೇ ಶ್ರೇಯಾಂಕಿತೆ), ಪಿ.ವಿ ಸಿಂಧು (9ನೇ ಶ್ರೇಯಾಂಕಿತೆ) , ಕಿಡಂಬಿ ಶ್ರೀಕಾಂತ್ (11ನೇ ಶ್ರೇಯಾಂಕಿತ) ರಂತಹ ತಾರಾ ಆಟಗಾರರು ಹೊರಹೊಮ್ಮಿದ್ದು ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಆರು ವರ್ಷಗಳ ಹಿಂದೆ ಸೈನಾ ನೆಹ್ವಾಲ್ ಎಂಬ ಒಂದು ತಾರೆಯನ್ನು ಹೊಂದಿದ್ದ ಈ ಅಕಾಡೆಮಿ ಇಂದು ನೂರಾರು ಯುವ ಪ್ರತಿಭೆಗಳನ್ನು ಪಳಗಿಸುತ್ತಿದೆ. ಆ ಪೈಕಿ ಕೆಲವರು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿದ್ದಾರೆ.

ಈ ಮಧ್ಯೆ ಗೋಪಿಚಂದ್ ಅವರ ವ್ಯಕ್ತಿತ್ವವನ್ನು ಎಂತಹದು ಎಂಬುದನ್ನು ತಿಳಿಯಲು ಈ ಪ್ರಸಂಗಗಳನ್ನು ನೋಡಬಹುದು. ಅವೆಂದರೆ… ಸುದೀರ್ಘ ದಶಕದ ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದ ಸಂದರ್ಭದಲ್ಲಿ ಬಂದ ಹಣವನ್ನು ಗೋಪಿಚಂದ್ ಕಾಶ್ಮೀರ ಯೋಧರಿಗೆ, ಗುಜರಾತ್ ಭೂಕಂಪ ಸಂತ್ರಸ್ತರ ಪರಿಹಾರ ನಿಧಿಗೆ ದಾನ ಮಾಡಿದ್ದರು. ಇನ್ನು ಕೋಲಾ ಕಂಪನಿಗೆ ರಾಯಭಾರಿಯಾಗುವ ಅವಕಾಶ ಬಂದರೂ, ಈ ಪಾನೀಯಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣದಿಂದ ಈ ಅವಕಾಶವನ್ನು ತಿರಸ್ಕರಿಸಿದ್ದರು.

12 ವರ್ಷಗಳಿಂದ ಗೋಪಿ ಗರಡಿಯಲ್ಲಿ ಸಿಂಧು…

ಸದ್ಯ ಪಿ.ವಿ ಸಿಂಧು ರಿಯೋ ಒಲಿಂಪಿಕ್ಸ್ ನಲ್ಲಿ …. ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸಿಂಧು ಅವರ ಈ ಸಾಧನೆಯ ಹಿಂದೆ ಕೋಚ್ ಗೋಪಿಚಂದ್ ಪಾತ್ರ ಅಪಾರವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದು ನೀವೇ ನೋಡಿ…

ಅದು 2004 ನೇ ಇಸವಿ. ಗೋಪಿಚಂದ್ ತರಬೇತುದಾರನಾದ ಆರಂಭಿಕ ಕಾಲಘಟ್ಟ. ಭಾರತದ ಮಾಜಿ ವಾಲಿಬಾಲ್ ಪಟು ದಂಪತಿಗಳಾದ ಪಿ.ವಿ ರಾಮಣ್ಣ ಮತ್ತು ಪಿ.ವಿಜಯಾ ಅವರು ತಮ್ಮ 10 ವರ್ಷದ ಮಗಳು ಸಿಂಧು ಅವಳನ್ನು ಗೋಪಿಚಂದ್ ಅವರ ಬಳಿ ಕರೆ ತಂದರು. ಅಲ್ಲಿಂದ ಇಲ್ಲಿಯವರೆಗೂ ಸಿಂಧು ಸುಮಾರು 12 ವರ್ಷಗಳ ಕಾಲ ಗೋಪಿಚಂದ್ ಮಾರ್ಗದರ್ಶನದಲ್ಲಿ ಪಳಗಿದ್ದಾಳೆ.

ಆರಂಭಿಕ ದಿನಗಳಲ್ಲಿ ಸಿಂಧು ಕುಟುಂಬ 30 ಕಿ.ಮೀ ದೂರದ ಸಿಕಂದರಾಬಾದ್ ನಲ್ಲಿ ನೆಲೆಸಿತ್ತು. ಬೆಳಗ್ಗೆ ಮತ್ತು ಸಂಜೆ ತರಬೇತಿಗಾಗಿ ಪ್ರತಿನಿತ್ಯ ಒಟ್ಟು 120 ಕಿ.ಮಿ ಪ್ರಯಾಣ ಮಾಡಬೇಕಿತ್ತು. ಯಾವುದೇ ಹಂತದಲ್ಲೂ ತರಬೇತಿಯನ್ನು ತಪ್ಪಿಸಿಕೊಳ್ಳಲು ಇಷ್ಟಪಡದ ಸಿಂಧು ಈ ಪ್ರಯಾಣವನ್ನು ಮಾಡುತ್ತಿದ್ದಳು. ಇದು ಕ್ರೀಡೆ ಬಗ್ಗೆ ಆಕೆಗಿದ್ದ ಪ್ರೀತಿಗೆ ಪ್ರಮುಖ ಸಾಕ್ಷಿ.

‘ಚಾಂಪಿಯನ್ ಗಳನ್ನು ಹುಟ್ಟಿಹಾಕುವುದು ಸುಲಭ ಕಾರ್ಯವಲ್ಲ… ಅದೊಂದು ತಪಸ್ಸು’ ಎಂದು ನಂಬಿದ್ದ ಗೋಪಿಚಂದ್ ಆಟಗಾರರ ಜತೆ ತಾನೂ ಹಗಲಿರುಳು ಶ್ರಮವಹಿಸಿದರು. ಪ್ರತಿನಿತ್ಯ ಬೆಳಗಿನ ಜಾವ 4.00 ಗಂಟೆಗೆ ತಮ್ಮ ಅಕಾಡೆಮಿಯಲ್ಲಿ ಆಟಗಾರರಿಗೆ ತರಬೇತಿ ಆರಂಭಿಸುವ ಗೋಪಿ, ಅವರ ಪ್ರತಿ ನಡೆಯ ಮೇಲೂ ತೀವ್ರ ನಿಗಾವಹಿಸುತ್ತಾರೆ.

ಕಳೆದ ಒಂದು ವರ್ಷದಿಂದ ‘ಆಪರೇಷನ್ ರಿಯೋ’ ಕಾರ್ಯ ಹಮ್ಮಿಕೊಂಡಿರುವ ಗೋಪಿಚಂದ್ ತಮ್ಮ ಶಿಷ್ಯರಾದ ಪಿ.ವಿ ಸಿಂಧು ಮತ್ತು ಕೆ.ಶ್ರೀಕಾಂತ್ ಅವರ ಫಿಟ್ನೆಸ್ ಮೇಲೆ ಹೆಚ್ಚು ನಿಗಾ ವಹಿಸಿದ್ದಾರೆ. ಈ ಕ್ರೀಡಾಕೂಟದ ಸಿದ್ಧತೆಗಾಗಿ ಈ ಇಬ್ಬರು ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳುವ ದೃಷ್ಟಿಯಿಂದ ಇವರ ಜತೆಗೆ ಆಹಾರ ಪದ್ಧತಿಯಲ್ಲಿ ಕಾರ್ಬೊಹೈಡ್ರೆಡ್ ಗೆ ಪೂರ್ಣವಿರಾಮ ಇಟ್ಟಿದ್ದಾರೆ. ಇದರೊಂದಿಗೆ ಪಿ.ವಿ ಸಿಂಧು ಅವರ ನೆಚ್ಚಿನ ತಿನಿಸುಗಳಾದ ಚಾಕೊಲೆಟ್ ಮತ್ತು ಹೈದರಾಬಾದ್ ಬಿರಿಯಾನಿಗೆ ಗೋಪಿ ಸಂಪೂರ್ಣವಾಗಿ ಬ್ರೇಕ್ ಹಾಕಿದ್ದಾರೆ. ಆಟಗಾರರ ಜತೆಗೆ ಗೋಪಿಚಂದ್ ಸಹ ಕಳೆದ ಮೂರು ತಿಂಗಳಿನಿಂದ ಸ್ಟ್ರಿಕ್ಟ್ ಡಯೆಟ್ ಪಾಲಿಸುತ್ತಿರೋದು ವಿಶೇಷ.

ಗೋಪಿಚಂದ್ ಅವರಿಗೆ ತಮ್ಮ ಶಿಷ್ಯಂದಿರ ಬಗ್ಗೆ ಎಷ್ಟು ಕಾಳಜಿ ಎಂದರೆ, ಯಾರಾದರೂ ಇವರನ್ನು ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿಸಿ ಬಿಟ್ಟಾರು ಎಂಬ ಹಿನ್ನೆಲೆಯಲ್ಲಿ ಇವರಿಬ್ಬರು ಹೊರಗಡೆ ನೀರು ಅಥವಾ ಆಹಾರವನ್ನು ಸೇವನೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇನ್ನು ರಿಯೋ ಒಲಿಂಪಿಕ್ಸ್ ಆವರಣದಲ್ಲೂ ಅಷ್ಟೇ ಸಿಂಧು, ಗೋಪಿಚಂದ್ ಅವರ ಜತೆಯಲ್ಲಿ ಅವರ ಉಪಸ್ಥಿತಿಯಲ್ಲೆ ಊಟ ಮಾಡಬೇಕು.

ಕೇವಲ ಸಿಂಧುಗೆ ಮಾತ್ರವಷ್ಟೇ ಅಲ್ಲ, ಈ ಹಿಂದೆ ಸೈನಾ ನೆಹ್ವಾಲ್ ಗೋಪಿಚಂದ್ ಮಾರ್ಗದರ್ಶನದಲ್ಲಿದ್ದಾಗ ಸೈನಾ ಮೇಲೆ ಇದೇ ರೀತಿಯ ನಿಗಾ ವಹಿಸಿದ್ದರು. ಆಗಾಗ್ಗೆ ರೆಫ್ರಿಜರೇಟರ್ ಗಳ ಮೇಲೆ ರೈಡ್ ಮಾಡಿ ಸೈನಾ ಫಿಟ್ನೆಸ್ ಡಯಟ್ ತಪ್ಪುತ್ತಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದರು. ಈ ಹಿಂದೆ ಇದ್ದ ಸೈನಾ ನೆಹ್ವಾಲ್ ರಿಂದ ಹಿಡಿದು ಸಿಂಧು, ಶ್ರೀಕಾಂತ್ ಅವರ ದಿನ ನಿತ್ಯದ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಗೋಪಿಚಂದ್ ಮಾಹಿತಿ ಪಡೆಯುತ್ತಾರೆ. ಅವರು ಯಾವರೀತಿ ತಮ್ಮ ಅಭ್ಯಾಸದ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆದಿರುತ್ತಾರೆ.

ಮೂಲತಃ ಸೌಮ್ಯ ಸ್ವಭಾವದ ಪಿ.ವಿ ಸಿಂಧುವಿನಲ್ಲಿ ಆಕ್ರಮಣಕಾರಿ ಮನೋಭಾವವನ್ನು ತುಂಬಲು ಗೋಪಿಚಂದ್ ವಿಭಿನ್ನ ಪ್ರಯೋಗವೊಂದನ್ನು ಮಾಡಿದ್ದರು. ಆ ಬಗ್ಗೆ ಸಿಂಧು ತಂದೆ ಈ ಹಿಂದೆ ವಿವರಿಸಿದ್ದನ್ನು ಉಲ್ಲೇಖಿಸಿ ಫಸ್ಟ್ ಪೋಸ್ಟ್ ನಲ್ಲಿ ಟಿ. ಎಸ್. ಸುಧೀರ್ ಬರೆದಿರುವ ಲೇಖನ, ಗುರುವಾಗಿ ಗೋಪಿಚಂದ್ ತಮ್ಮ ಶಿಷ್ಯರ ಮನೋಸ್ಥೈರ್ಯವನ್ನು ಹೇಗೆಲ್ಲ ಕಟ್ಟುತ್ತಾರೆ ಎಂಬ ಸುಳಿವು ಕೊಡುತ್ತದೆ.

‘ಹತ್ತು ತಿಂಗಳ ಹಿಂದೆ ಗೋಪಿಚಂದ್ ಅವರು ತಮ್ಮ ಅಕಾಡೆಮಿಯಲ್ಲಿ 50 ಇತರೆ ಯುವ ಆಟಗಾರರು ಹಾಗೂ ಕೋಚ್ ಗಳ ಮುಂದೆ ಸಿಂಧು ವಿರುದ್ಧ ವಾಗ್ವಾದ ನಡೆಸಿದರು. ಈ ಹಂತದಲ್ಲಿ ಕೋರ್ಟ್ ಮಧ್ಯದಲ್ಲಿ ನಿಂತು ಗಟ್ಟಿಯಾಗಿ ಕೂಗಾಡುವಂತೆ ಹೇಳಿದರು. ಮುಜುಗರ ಸ್ವಭಾವ ಹೊಂದಿದ್ದ ಸಿಂಧು ಆರಂಭದಲ್ಲಿ ಹಿಂಜರಿದಳು. ಆಗ ಈ ರೀತಿ ಮಾಡದ ಹೊರತಾಗಿ ಬ್ಯಾಡ್ಮಿಂಟನ್ ರಾಕೆಟ್ ಮುಟ್ಟುವಂತಿಲ್ಲ ಎಂದು ಗೋಪಿಚಂದ್ ಆಗ್ರಹಿಸಿದರು. ಭಾರತೀಯ ಸ್ಪರ್ಧಿಗಳು ಮೂಲತಃ ಸೌಮ್ಯ ಸ್ವಭಾವದವರಾಗಿದ್ದು, ಅವರಲ್ಲಿ ಆಕ್ರಮಣಕಾರಿ ಮನೋಭಾವ ತುಂಬಲು ಗೋಪಿಚಂದ್ ಈ ರೀತಿ ಮಾಡಿದ್ದರು’ ಎಂದು ಮೂಲತಃ ಕ್ರೀಡಾಪಟುವಾದ ಪಿ.ವಿ ರಾಮಣ್ಣ ವಿವರಣೆ.

ಇನ್ನು 2014ರಲ್ಲಿ ಮನಸ್ತಾಪ ಹಾಗೂ ಕೆಲವು ಕಾರಣಗಳಿಂದ ಸೈನಾ ನೆಹ್ವಾಲ್ ಗೋಪಿಚಂದ್ ಅವರ ಗರಡಿಯನ್ನು ಬಿಟ್ಟು ಬೆಂಗಳೂರಿನಲ್ಲಿ ಮಾಜಿ ಆಟಗಾರ ವಿಮಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದರು. ಆಗ ಏನೆಲ್ಲ ಆರೋಪಗಳು ಬಂದರೂ ಗೋಪಿಚ್ಂದ ಪ್ರತಿಕ್ರಿಯೆಗೆ ಹೋಗದೇ ವಿವಾದಗಳಿಂದ ದೂರ ಉಳಿದರು. ಈಗ ರಿಯೋ ಒಲಿಂಪಿಕ್ಸ್ ನಲ್ಲಿ ಶ್ರೀಕಾಂತ್ ಹಾಗೂ ಸಿಂಧು ಅವರ ಪ್ರದರ್ಶನದ ಮೂಲಕ ಎಲ್ಲರಿಗೂ ಉತ್ತರ ನೀಡುತ್ತಿರೋದಂತು ನಿಜ.

ಗೋಪಿಚಂದ್ ಅವರ ಈ ಎಲ್ಲ ವೃತ್ತಿಪರ ತರಬೇತಿಯಿಂದಲೇ ಅಪ್ರತಿಮ ಚಾಂಪಿಯನ್ನರನ್ನು ನಿರಂತರವಾಗಿ ದೇಶಕ್ಕೆ ಅರ್ಪಿಸಲು ಸಾಧ್ಯವಾಗುತ್ತಿರೋದು. ಅವರ ಈ ವೃತ್ತಿಪರತೆ ಹಾಗೂ ಅಕಾಡೆಮಿಯಲ್ಲಿರುವ ಸೌಲಭ್ಯದ ಗುಣಮಟ್ಟವನ್ನು, ಭಾರತದ ಇತರೆ ಕ್ರೀಡೆಗಳ ಕ್ರೀಡಾಪಟುಗಳಿಗೆ ನೀಡಿದಾಗ ಮಾತ್ರ ನಮ್ಮ ದೇಶದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಯುವುದು. ಆ ಮೂಲಕ ಒಲಿಂಪಿಕ್ಸ್ ನಂತಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳ ಬೇಟೆಯಾಡಲು ಸಾಧ್ಯವಾಗುವುದು.

ಈ ಎಲ್ಲ ಅಂಶಗಳಿಂದ ಗೋಪಿಚಂದ್ ಭಾರತ ಬ್ಯಾಡ್ಮಿಂಟನ್ನಿನ ‘ದ್ರೋಣಾಚಾರ್ಯ’ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply