ಇರಾನಿನಲ್ಲಿ ರಕ್ತ ಸರೋವರ… ರಿಯೋದಲ್ಲಿ ಒಲಿಂಪಿಕ್ ಈಜುಕೊಳ ತಂದ ತಳಮಳ

author-ananthramuಅಮೆರಿಕ 2002 ರಲ್ಲೇ ಕಕ್ಷೆಗೆ ಸೇರಿಸಿದ `ಅಕ್ವ’ ಉಪಗ್ರಹ ಈಗ ಷರ್ಲಾಕ್ ಹೋಮ್ಸ್  ಕೆಲಸಮಾಡುತ್ತಿದೆ. ಯಾವ ಯಾವ ದೇಶ ಅಥವಾ ಖಂಡಗಳು ತಮ್ಮ ನೀರಿನ ಸೆಲೆಯನ್ನೇ ಬತ್ತಿಸುತ್ತಿವೆ ಎಂದು ಕಣ್ಣಿಡಲು ಅದರ ಮೈತುಂಬ ವಿವಿಧ ಸೆನ್ಸಾರ್‍ಗಳಿವೆ. ಪ್ರತಿ 99 ನಿಮಿಷಕ್ಕೆ ಭೂಮಿಯನ್ನು ಒಂದು ಬಾರಿ ಸುತ್ತುವ ಈ ಉಪಗ್ರಹ ಭೂಮಿಯ ಮೇಲ್ಮೈ ಲಕ್ಷಣಗಳನ್ನು ಚಿತ್ರಿಸುತ್ತದೆ-ಆಕಾಶದಲ್ಲಿ ಬೀಟ್ ಮಾಡುವ ಪೋಲಿಸ್ ಇದು. ಹೀಗೆ ಚಿತ್ರಿಸುವಾಗ ಮನಸ್ಸಿಗೆ ಹಿತಕೊಡುವ ದೃಶ್ಯಗಳು ನಮ್ಮ ಕಣ್ಣಿಗೆ ಬೀಳಬಹುದು. ಇನ್ನು ಕೆಲವು ಚಿತ್ರಗಳು ಭಯಾನಕ ಎನ್ನಿಸಿ ನಮ್ಮ ಎದೆಯನ್ನೇ ನಡುಗಿಸಬಹುದು.

ಇರಾನಿನ ವಾಯುವ್ಯಕ್ಕೆ ಟರ್ಕಿ ದೇಶದ ಗಡಿಗೆ ಹೊಂದಿಕೊಂಡಂತೆ ನಮ್ಮ ಬೀದರ್ ಜಿಲ್ಲೆಯಷ್ಟು ವಿಸ್ತೀರ್ಣವಿರುವ ಉರ್ಮಿಯ ಎಂಬ ಸರೋವರವಿದೆ. ಇದೇ ಏಪ್ರಿಲ್ ತಿಂಗಳಲ್ಲಿ `ಅಕ್ವ’ ತನ್ನ ಎಂದಿನ ಬೀಟ್‍ನಲ್ಲಿ ತೊಡಗಿದ್ದಾಗ ಈ ಸರೋವರ ಹಸಿರು ರಂಗು ಮೆತ್ತಿಕೊಂಡಂತೆ ಕಾಣುತ್ತಿತ್ತು. ಆದರೆ ಜುಲೈ ತಿಂಗಳಲ್ಲಿ ಗಮನಿಸಿದಾಗ ಅಲ್ಲಿ ರಕ್ತದೋಕುಳಿಯಾಗಿದೆಯೋ ಎಂಬಷ್ಟು ಕೆಂಪಾಗಿತ್ತು. ಅದೆಷ್ಟು ಭಯಾನಕವಾಗಿತ್ತೆಂದರೆ ಕೋಟಿ ಕೋಟಿ ಜನರನ್ನೋ ಜಾನುವಾರುಗಳನ್ನೋ ಕೊಂದು ಈ ಸರೋವರಕ್ಕೆ ರಕ್ತ ಹರಿಸಿದಂತೆ ಕಾಣುತ್ತಿತ್ತು. ಮೊದಲು ಈ ದೃಶ್ಯ ನೋಡಿದವರಿಗೆ ಥಟ್ಟನೆ ಕಣ್ಣಮುಂದೆ ನಿಂತದ್ದು ಇರಾನಿನ ಆಂತರಿಕ ಸಮಸ್ಯೆಯ ಫಲವಾಗಿ ಎಲ್ಲೋ ಸಾಮೂಹಿಕ ಕೊಲೆಯಾಗಿದೆ ಎಂಬ ಭಾವನೆ. ಎಂಟು ವರ್ಷ ಕಾಲ ಇರಾಕ್‍ನೊಡನೆ ಸೆಣಸಿ ಎರಡೂ ದೇಶಗಳು ಬಸವಳಿದದ್ದೂ ಉಂಟು. ಇತ್ತೀಚೆಗಷ್ಟೇ `ಇಸ್ಲಾಮಿಕ್ ಸ್ಟೇಟ್’ ಉಗ್ರಗಾಮಿಗಳನ್ನು ಇರಾನ್ ತನ್ನ ನೆಲೆಯಲ್ಲೇ ಸದೆಬಡಿದಿತ್ತು. ಜೊತೆಗೆ ಕುರ್ದ್ ಜನಾಂಗ ಪ್ರತ್ಯೇಕತೆ ಬಯಸಿ ಬಂಡಾಯ ಹೂಡಿರುವುದು ಜಗತ್ತಿಗೇ ತಿಳಿದದ್ದು. ಉರ್ಮಿಯ ಸರೋವರವಿರುವುದು ಕುರ್ದ್‍ಗೆ ಸೇರಿದ ಜಾಗದಲ್ಲೇ.

ಇಲ್ಲಿ ಏನಾಗಿದೆ? ಯಾರು ಯಾರ ಮೇಲೆ ಯುದ್ಧ ಸಾರಿದ್ದಾರೆ? ಥಟ್ಟನೆ ಇದಕ್ಕೆ ಉತ್ತರ ಸಿಕ್ಕಲಿಲ್ಲ. ಇಲ್ಲಿ ಆದದ್ದೇ ಬೇರೆ. ಇರಾನ್ ಈ ಜಲರಾಶಿಯನ್ನು ಬೇಕಾಬಿಟ್ಟಿ ಬಳಸಿದೆ. ವಸಂತಮಾಸದಲ್ಲಿ ಬೆಟ್ಟಗುಡ್ಡಗಳಲ್ಲಿ ಶೇಖರಿಸಿರುವ ಹಿಮ ಕರಗಿ ಸಿಹಿನೀರು ಈ ಸರೋವರಕ್ಕೆ ಹರಿಯುತ್ತದೆ. ಇದರ ಉಪ್ಪಿನ ಅಂಶವನ್ನು ಕಡಿಮೆಮಾಡುತ್ತದೆ. ಆದರೆ ಬೇಸಗೆಯಲ್ಲಿ ನೀರು ಬಾಷ್ಪವಾಗುವುದು ಹೆಚ್ಚು. ಆಗ ಉಪ್ಪಿನ ಅಂಶ ಹಿಂದೆ ನಿಲ್ಲುತ್ತದೆ. ಎಲ್ಲ ಸರೋವರಗಳಲ್ಲಿ ಇರುವಂತೆ ಇದಕ್ಕೂ ಅದರದೇ ಆದ ಇಕಾಲಜಿ ಇದೆ. ಹೆಚ್ಚಿನ ಪಾಲು ಸೂಕ್ಷ್ಮ ಸಸ್ಯಗಳು ಇಲ್ಲಿವೆ. ಹಾಗೆಯೇ ಬ್ಯಾಕ್ಟೀರಿಯಗಳು ಸಹಬಾಳ್ವೆ ನಡೆಸುತ್ತಿವೆ. ಆದರೆ ಈ ಸರೋವರದ ಭೌತ, ರಾಸಾಯನಿಕ ಸ್ಥಿತಿ ಬದಲಾದರೆ ಎರಡಕ್ಕೂ ಗೋಳು. ನೀರು ಅತಿ ಲವಣವಾಗಿದ್ದಾಗ ಹಾಗೆಯೇ ಬೆಳಕು ಪ್ರಖರವಾಗಿದ್ದಾಗ ಈ ಸೂಕ್ಷ್ಮ ಸಸ್ಯಗಳು ನಿರೋಧಕ ತಂತ್ರವಾಗಿ ತಮ್ಮ ಕೋಶದಲ್ಲಿ `ಕೆರೋಟಿನಾಯ್ಡ್’ ಎಂಬ ರಾಸಾಯನಿಕವನ್ನು ಉತ್ಪಾದಿಸುತ್ತವೆ (ಕ್ಯಾರೆಟ್‍ಗೆ ರಂಗು ಕೊಟ್ಟಿರುವುದೂ ಇದೇ ರಾಸಾಯನಿಕ). ಅಂಥ ಸಂದರ್ಭದಲ್ಲಿ ಇಡೀ ನೀರೇ ಕೆಂಪಾದಂತೆ ಕಾಣುತ್ತದೆ. ಇದು ಒಂದು ವಿಶ್ಲೇಷಣೆ. ಆದರೆ ನಾಸಾ ಸಂಸ್ಥೆ ಇನ್ನಷ್ಟು ಮುಂದೆ ಹೋಗಿ ಈ ಕೆಂಪು ರಂಗಿಗೆ ಕಾರಣ ಹುಡುಕಿದೆ. ಉಪ್ಪನ್ನು ಪ್ರೀತಿಸುವ ಬ್ಯಾಕ್ಟೀರಿಯಗಳು ಇಂಥ ವಾತಾವರಣದಲ್ಲಿ ರೂಬಿ ವರ್ಣದ ವರ್ಣಕವನ್ನು ಉತ್ಪಾದಿಸುತ್ತವೆ. ಇದು ಒಂದು ಬಗೆಯ ಮೈತ್ರಿ, ಬದುಕುವ ತಂತ್ರಗಾರಿಕೆ. ಸರೋವರಕ್ಕೆ ಕೆಂಪು ರಂಗು ತಂದಿರುವುದು ಈ ಬ್ಯಾಕ್ಟೀರಿಯಗಳು ಎನ್ನುತ್ತಿದೆ ನಾಸಾ ಸಂಸ್ಥೆ. ಒಂದೆಡೆ ಬರ, ಇನ್ನೊಂದೆಡೆ ನೀರಾವರಿಗಾಗಿ ಅತಿಯಾದ ನೀರಿನ ಬಳಕೆ. ಈ ಸರೋವರವನ್ನು ಹಿಚುಕುತ್ತಿವೆ. ಕಳೆದ ಹದಿನಾಲ್ಕು ವರ್ಷಗಳಲ್ಲೇ ಇದರ ವ್ಯಾಪ್ತಿ ಶೇ.70 ಭಾಗ ಕಡಿಮೆಯಾಗಿದೆ. ಜಗತ್ತಿನ ಆರನೇ ದೊಡ್ಡ ಉಪ್ಪಿನ ಸರೋವರ ಎಂದು ಖ್ಯಾತಿಯಾಗಿತ್ತು. ಹಾಗೆಯೇ ಉಪ್ಪು ನೀರಿಗೆ ಹೊಂದಿಕೊಂಡ ಸೀಗಡಿಗಳಿಗೂ ಇದು ಖ್ಯಾತಿಯಾಗಿತ್ತು. ಈಗ ಉರ್ಮಿಯ ಸರೋವರ ಸಾವು ಬದುಕಿನ ಹೋರಾಟ ನಡೆಸುತ್ತಿದೆ. ಇದೂ ಸಾಲದೆಂಬಂತೆ ಸರೋವರದ ಮಧ್ಯೆ ಸೇತುವೆ ಕಟ್ಟಿದ್ದಾರೆ. ಇಡೀ ಸರೋವರಕ್ಕೆ ಉಡಿದಾರದಂತೆ ಇದು ಕಾಣುತ್ತದೆ. ಇದರ ಫಲವಾಗಿ ಇಡೀ ಸರೋವರವೇ ಇಬ್ಭಾಗವಾಗಿದೆ. ಜಲಚರಗಳ ಮುಕ್ತ ಚಲನೆಗೆ ಇದು ಅಡ್ಡಬಂದಿದೆ.

2

ಗೂಗಲ್ ಅರ್ಥ್, ಇರಾನಿನ ಈ ಸರೋವರವನ್ನು `ರಕ್ತಸರೋವರ’ ಎಂದಿದೆ. ಜಗತ್ತಿನ ವಿವಿಧ ಬಗೆಯ ಅನೂಹ್ಯ ಚಿತ್ರಗಳನ್ನು ಗೂಗಲ್ ಅರ್ಥ್ ಆಗಾಗ ವರದಿ ಮಾಡುತ್ತದೆ. ಉಪಗ್ರಹಗಳು ತೆಗೆದ ಛಾಯಾಚಿತ್ರಗಳನ್ನು ಆಧರಿಸಿ ಗೂಗಲ್ ಅರ್ಥ್ ಮೂರು ಆಯಾಮದ ಚಿತ್ರಗಳನ್ನು ರೂಪಿಸುತ್ತದೆ.

ರಿಯೋ ಈಜು ಕೊಳದ್ದು ಈ ಕಥೆ…

ರಿಯೋದಲ್ಲಿ 2016ರ ಒಲಿಂಪಿಕ್ ನಡೆಸಬೇಕೆ ಬೇಡವೇ ಎಂಬ ಬಗ್ಗೆ ಸುದೀರ್ಘ ಚರ್ಚೆಯಾಗಿತ್ತು. ಏಕೆಂದರೆ ಬ್ರೆಜಿಲ್‍ನಲ್ಲಿ ಜಿಕಾ ವೈರಸ್‍ನ ಕಾಟವಿತ್ತು. ಹತ್ತು ಹಲವು ಬಾರಿ ವಿಶ್ಲೇಷಿಸಿ ಕೊನೆಗೂ ಇದು ಸೇಫ್ ಎಂದು ಗೊತ್ತಾದ ಮೆಲೆ ಬ್ರೆಜಿಲ್‍ಗೂ ನಿರಾಳ, ಕ್ರೀಡಾಪಟುಗಳಿಗೂ ನಿರಾಳ.

ಆದರೆ ರಿಯೋದ ಒಲಿಂಪಿಕ್ ಈಜುಕೊಳ ಮಾತ್ರ ಈ ಬಾರಿ ದೊಡ್ಡ ಸುದ್ದಿಮಾಡಿದೆ. ಸಾಮಾನ್ಯವಾಗಿ ಒಲಿಂಪಿಕ್ ಈಜುಕೊಳವೆಂದರೆ 50 ಮೀಟರ್ ಉದ್ದ, 25 ಮೀಟರ್ ಅಗಲವಿದ್ದು 2,500 ಘನಮೀಟರ್ ನೀರನ್ನು ಹಿಡಿಸುವಷ್ಟು ದೊಡ್ಡದಾಗಿರುತ್ತದೆ. ಕೊಳವನ್ನು ಶುದ್ಧೀಕರಣಗೊಳಿಸುವಾಗ ಹೊರಕ್ಕೆ ಬಿಟ್ಟ ನೀರು ಎರಡು ಎಕರೆ ಜಾಗದಲ್ಲಿ ಒಂದು ಅಡಿಯಷ್ಟು ನಿಂತಿರುತ್ತದೆ. ಧಾರಾಳವಾಗಿ ಒಂದು ಭರ್ಜರಿ ಬೆಳೆ ತೆಗೆಯಬಹುದು. ಜಗತ್ತಿನ ಬೇರೆ ಈಜುಕೊಳಗಳಿಗೆ ಹೋಲಿಸುವಾಗ ಒಲಿಂಪಿಕ್ ಈಜುಕೊಳಕ್ಕೆ ಹೋಲಿಸುವುದುಂಟು.

ರಿಯೋದ ಒಲಿಂಪಿಕ್ ಈಜುಕೊಳ ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿತ್ತು. ಆ ನೀರಿನಲ್ಲೇ ಈಜುಪಟುಗಳು ಈಜಿ ಫದಕಗಳನ್ನು ಗೆದ್ದದ್ದೂ ಆಯಿತು. ಆದರೆ ಈಜುಕೊಳದಿಂದ ಆಚೆಗೆ ಬಂದಾಗ ವಿಚಿತ್ರ ಗಾಬರಿಯಲ್ಲಿದ್ದರು. ನೀರು ದುರ್ವಾಸನೆಯೆಂದು ದೂರಿದ್ದರು. ಸಾಮಾನ್ಯವಾಗಿ ನೀರನಲ್ಲಿ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಕ್ಲೋರಿನ್ ಸುರಿಯುದುಂಟು. ಹಾಗೆ ಮಾಡದಿದ್ದರೆ ಪಾಚಿ ಸ್ಪರ್ಧೆಗಿಳಿದು ನೀರನ್ನೇ ಹಿಂದೆ ಹಾಕಬಲ್ಲದು. ರಿಯೋ ಒಲಿಂಪಿಕ್ ಈಜುಕೊಳದಲ್ಲಿ ಆರಂಭದ ದಿನವೇ ಕೊಳಕ್ಕೆ 80 ಲೀಟರು ಹೈಡ್ರೋಜನ್ ಪರಾಕ್ಸೈಡ್ ಎಂಬ ರಾಸಾಯನಿಕ ಸುರಿದಿದ್ದರು. ಕೆಲವು ಈಜುಪಟುಗಳಿಗೆ ಕ್ಲೋರಿನ್ ಅಲರ್ಜಿ ತರುತ್ತದೆ. ಈ ಕಾರಣದಿಂದಾಗಿ ಕ್ಲೋರಿನ್‍ನ ಸಾರತೆಯನ್ನು ತಗ್ಗಿಸಲು ಹೈಡ್ರೋಜನ್ ಪರಾಕ್ಸೈಡ್ ಬಳಸಿದ್ದರು. ಜೊತೆಗೆ ಈಜುಕೊಳದ ಉಷ್ಣತೆಯನ್ನು ಒಂದು ಮಟ್ಟದಲ್ಲಿಡಲು ಈ ರಾಸಾಯನಿಕ ನೆರವಾಗುತ್ತದೆ. ಆದರೆ ಈ ಬಾರಿ ಕ್ಲೋರಿನ್ ಸಾರ ಕುಂದಿದ್ದರಿಂದ ಅದು ಪಾಚಿಯ ಸಮೃದ್ಧಿಗೆ ಎಡೆಗೊಟ್ಟಿತ್ತು. ಈ ಗುಟ್ಟನ್ನು ತಿಳಿಯಲು ಸಾಕಷ್ಟು ಸಮಯ ಬೇಕಾಯಿತು. ಪಾಚಿ ಒಮ್ಮೆ ಹೆಚ್ಚಾಯಿತೆಂದರೆ ಸಹಜವಾಗಿಯೇ ನೀರು ಹಸುರಾಗಿ ಕಾಣುತ್ತದೆ. ಹೈಡ್ರೋಜನ್ ಪರಾಕ್ಸೈಡ್ ಜೊತೆಗೆ ಅತಿನೀಲ ಕಿರಣಗಳನ್ನು(ಅಲ್ಟ್ರಾ ವಯಲೆಟ್ ರೇಸ್) ಬಿಟ್ಟಿದ್ದರೆ ಪಾಚಿಯನ್ನು ನಾಶಮಾಡಬಹುದಾಗಿತ್ತು ಎಂಬುದು ಅನಂತರ ಬಂದ ಸಲಹೆ. ಆದರೆ ಆ ಹೊತ್ತಿಗೆ ಈಜು ಸ್ಪರ್ಧೆ ಮುಗಿದೇಹೋಗಿತ್ತು. ಸದ್ಯಕ್ಕೆ ಈ ಕೊಳವನ್ನು ಬಳಸುತ್ತಿಲ್ಲ. ಆದರೆ ಬ್ರೆಜಿಲ್ ಇದರಿಂದಾಗಿ ಸಾಕಷ್ಟು ಮುಜುಗರವನ್ನು ಅನುಭವಿಸಬೇಕಾಯಿತು.

Leave a Reply