ಟೌನ್ಹಾಲಿನೆದುರು ಸೈನಿಕರಿಗಾಗಿ ಬೆಳಗಿದ ಮೊಂಬತ್ತಿ, ಎಬಿವಿಪಿ ವಿರುದ್ಧ ಕಿಡ್ನಾಪ್ ಕೇಸ್, ಉರ್ಜಿತ್ ನೂತನ ಆರ್ ಬಿ ಐ ಗವರ್ನರ್

Chief Minister, Siddaramaiah, with others during Birth Centenary Celebrations of Devaraj Urs at Kanteerava Stadium in Bengaluru on Saturday.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೇವರಾಜ ಅರಸು ಅವರ 101ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಾಮಾಜಿಕ ನ್ಯಾಯ ಕಲ್ಪಿಸಲು ಶ್ರಮಿಸುತ್ತಿರುವ ನನಗೆ ಸಮಾಜದಲ್ಲಿ ತೀವ್ರ ವಿರೋಧ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು…

ಎಬಿವಿಪಿ ಕಾರ್ಯಕರ್ತರ ವಿರುದ್ಧ ಅಪಹರಣ ಆರೋಪ

ಅಮ್ನೆಸ್ಟಿ ಇಂಟರ್ ನ್ಯಾಷನಲ್ ವಿರುದ್ಧ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಅಮ್ನೆಸ್ಟಿ ಸಂಸ್ಥೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ಸಂಸ್ಥೆಯ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಪೊಲೀಸರ ಲಾಠಿ ಏಟಿನ ರುಚಿ ಕಂಡಿದ್ದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಈಗ ಅಪ್ರಾಪ್ತ ಮಕ್ಕಳ ಅಪಹರಣ ದೂರು ದಾಖಲಾಗಿದೆ.

ರಾಜಾಜಿನಗರ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳನ್ನು ಬಲವಂತವಾಗಿ ಪ್ರತಿಭಟನೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ‘ಪಿಯು ಕಾಲೇಜು ವಿದ್ಯಾರ್ಥಿಗಳು ಇನ್ನು ಅಪ್ರಾಪ್ತರು. ಹೀಗಾಗಿ ಅವರನ್ನು ಪ್ರತಿಭಟನೆಗೆ ಕರೆದೊಯ್ಯುವುದು ಬೇಡ ಎಂದು ಮನವಿ ಮಾಡಿದರೂ ಎಬಿವಿಪಿ ಕಾರ್ಯಕರ್ತರು ಬಲವಂತವಾಗಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿದೆ’ ಎಂಬುದು ಕಾಲೇಜಿನ ಪ್ರಾಂಶುಪಾಲರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಜೆ.ಸಿ ನಗರ ಪೊಲೀಸರು 22 ಎಬಿವಿಪಿ ಕಾರ್ಯಕರ್ತರ ವಿರುದ್ಧ ಗಲಭೆ ಪ್ರಕರಣ ದಾಖಲಿಸಿದ್ದು, ಶನಿವಾರವೂ ಎಬಿವಿಪಿಯಿಂದ ಪ್ರತಿಭಟನೆ ಮುಂದುವರಿದಿದೆ.

Members of ABVP stage protest for eight day against miscreant's who raised slogans at event organized by Amnesty International , at Maurya Circle in Bengaluru on Saturday.

ದೇಶವಿರೋಧಿ ಕೂಗು ಹಾಕಿದ ಆರೋಪ ಹೊತ್ತಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ವಿರುದ್ಧ ಶನಿವಾರ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

 

ಆಮ್ನೆಸ್ಟಿ ಡೌನ್, ಆರ್ಮಿ ಜಿಂದಾಬಾದ್- ಟೌನ್ಹಾಲ್ ನಲ್ಲಿ ಮೊಳಗಿದ ಧ್ವನಿ

‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆ ವತಿಯಿಂದ ಸಹ ಟೌನ್ಹಾಲ್ ಎದುರಲ್ಲಿ ಆಮ್ನೆಸ್ಟಿಯ ದೇಶ ವಿರೋಧಿ ಘೋಷಣೆಕಾರರನ್ನು ಬಂಧಿಸಬೇಕೆಂಬ ಒತ್ತಾಯದೊಂದಿಗೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರಲ್ಲದೇ, ಭಾರತೀಯ ಸೇನೆಯ ಪರ ಮೊಂಬತ್ತಿ ಬೆಳಗಿದರು.

ಬೆಂಗಳೂರಿನಲ್ಲಿರುವ ಕಾಶ್ಮೀರಿ ಪಂಡಿತ ಸಮುದಾಯದ ಪ್ರಮುಖರು, ಯುವ ಲೇಖಕರು, ಇತರ ವೃತ್ತಿಗಳಲ್ಲಿ ತೊಡಗಿರುವ ಯುವ ಸಮುದಾಯ ವಿಶೇಷವಾಗಿ ಭಾಗಿಯಾಗಿತ್ತು.

ದೇಶ ವಿಭಜಕ ಶಕ್ತಿಯ ಕೃತ್ಯ ಇದಾಗಿರುವುದರಿಂದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಸಂಘಟನೆ ಒತ್ತಾಯಿಸಿತು.

MOH_August-20-2016-BJP Protest (2)-min

ಆಮ್ನೆಸ್ಟಿ ಕಾರ್ಯಕ್ರಮದಲ್ಲಿ ಚರ್ಚಾ ವೇದಿಕೆಯಲ್ಲಿದ್ದ ಆರ್. ಕೆ. ಮಟ್ಟೂ ಅವರು ಅಂದು ಸಂಘಟನೆಯ ಉದ್ದೇಶವೇ ದೇಶ ವಿರೋಧದ ಮಾತುಗಳಿಗೆ ವೇದಿಕೆ ಕೊಡುವುದಾಗಿತ್ತು ಎಂದು ಅಭಿಪ್ರಾಯಪಟ್ಟರು. ಅವರು ಹೇಳಿದ್ದು-

‘ಬ್ರೋಕನ್ ಫ್ಯಾಮಿಲಿ’ ಎಂಬ ಹೆಸರಲ್ಲಿ ಆಮ್ನೆಸ್ಟಿ ಸಂಸ್ಥೆ ಬೆಂಗಳೂರಲ್ಲಿ ಕಾರ್ಯಕ್ರಮ ಮಾಡುವುದು ಗೊತ್ತಾದಾಗ ನಾನು ಆಸಕ್ತನಾದೆ. ಏಕೆಂದರೆ ಕಾಶ್ಮೀರದಿಂದ ಒಕ್ಕಲೆಬ್ಬಿಸಿಕೊಂಡು ಐದು ಲಕ್ಷ ಜನರಲ್ಲೊಬ್ಬನಾದ ನನಗೆ ಮುರಿದ ಕುಟುಂಬದ ಮಾತು-ನೋವು ಗೊತ್ತು. ಆದರೆ ಇದರಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಪ್ರಸ್ತಾಪವೇ ಇಲ್ಲದಿದ್ದಾಗ ಸಂಘಟಕರನ್ನು ನಾನು ಸಂಪರ್ಕಿಸಿ ಪ್ರಶ್ನಿಸಿದೆ. ಅಷ್ಟರಲ್ಲಿ ನನ್ನ ಫೇಸ್ಬುಕ್ ಪ್ರತಿರೋಧವನ್ನು ಗಮನಿಸಿದ್ದ ಅವರು ಅನಿವಾರ್ಯವಾಗಿ ವೇದಿಕೆಯಲ್ಲಿ ನನಗೂ ಜಾಗ ಮಾಡಿಕೊಟ್ಟರು. ಅಲ್ಲಿ ತಮ್ಮ ಮಕ್ಕಳು ಭವಿಷ್ಯ ಕಳೆದುಕೊಂಡಿದ್ದರ ಕುರಿತಾದ ನೋವು ತೋಡಿಕೊಂಡ ಮುಸ್ಲಿಂ ಪಾಲಕರ ಯಾತನೆ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಹೀಗೆ ನೋವುಂಡ ಭದ್ರತಾ ಪಡೆಗಳ ಕುರಿತಾಗಲೀ, ಕಾಶ್ಮೀರಿ ಪಂಡಿತರ ಕುರಿತಾಗಲೀ ಅಭಿಪ್ರಾಯವನ್ನೇ ನೀಡದೇ ಕೇವಲ ಸೇನೆಯ ವಿರುದ್ಧ ಮಾತನಾಡುವುದಕ್ಕೇ ವೇದಿಕೆ ಬಳಕೆ ಆಯಿತು. ‘ಭಾರತೀಯ ಸೇನೆ ದೇಶದಲ್ಲೇ ಅತಿ ಶಿಸ್ತಿನದ್ದು’ ಎಂದು ನಾನು ಹೇಳಿದಾಗ ಕೆಲವು ಯುವಕರು ಪ್ರತಿಭಟಿಸಿದರು. ಸೇನೆ-ದೇಶದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಾವು ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆ ಯಾರೋ ರಾಪ್ ಗಾಯಕ ಆಜಾದಿ ಸ್ಲೋಗನ್ನುಗಳನ್ನು ಹಾಡತೊಡಗಿದ. ಮುರಿದ ಕುಟುಂಬಗಳ ಮಾತಿನ ಮಧ್ಯೆ ಇಂಥವರಿಗೆಲ್ಲ ಅಲ್ಲೇನು ಕೆಲಸವಿತ್ತು? ದೇಶದಿಂದ ಪ್ರತ್ಯೇಕತೆ ಬೇಕೆಂಬುವವರನ್ನು ಆಮ್ನೆಸ್ಟಿ ತಡೆಯಲಿಲ್ಲ ಏಕೆ? ಈ ಆಯೋಜನೆಯ ಉದ್ದೇಶವೇ ಬೇರೆ ಇತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ.

ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದಿರೆ ಸಹ ಮಾತನಾಡಿ, ದೇಶ ವಿರೋಧಿಗಳ ವಿರುದ್ಧ ಕ್ರಮ ಜರುಗಿಸುವವರೆಗೂ ಸಂಘಟನೆಯು ಶಾಂತಿಯುತ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು.

ಆರ್ ಬಿ ಐ ಗವರ್ನರ್ ಆಗಿ ಉರ್ಜಿತ್

ಭಾರತದ ಪ್ರಮುಖ ಆರ್ಥಿಕ ತಜ್ಞ ಎಂದೇ ಹೆಸರು ಪಡೆದಿರುವ ಉರ್ಜಿತ್ ಪಟೇಲ್ ಅವರನ್ನು ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಗವರ್ನರ್ ಆಗಿ ಆಯ್ಕೆ ಮಾಡಿದೆ. ಪ್ರಸ್ತುತ ಆರ್ ಬಿ ಐ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅಧಿಕಾರ ಅವಧಿ ಮುಂದಿನ ತಿಂಗಳು 4ನೇ ತಾರೀಕು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಫೈನಾನ್ಷಿಯಲ್ ರೆಗ್ಯುಲೇಟರಿ ಅಪಾಯಿಂಟ್ಮೆಟ್ ಸರ್ಚ್ ಕಮಿಟಿ (ಎಫಎಸ್ಆರ್ಎಎಸ್ಸಿ) ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಡೆಪ್ಯೂಟಿ ಗವರ್ನರ್ ಆಗಿದ್ದ ಉರ್ಜಿತ್ ಅವರನ್ನು ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಸಚಿವ ಸ್ಥಾನ ವಂಚಿತರಿಗೆ ಅಧಿಕಾರ

ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ವಂಚಿತಗೊಂಡ ಪಕ್ಷದ ಹಿರಿಯ ಹಾಗೂ ಪ್ರಭಾವಿ ಶಾಸಕರಿಗೆ ಪ್ರಮುಖ ನಿಗಮ ಮಂಡಳಿ ಅಧಿಕಾರ ನೀಡಲು ನಿರ್ಧರಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. 30ಕ್ಕೂ ಹೆಚ್ಚು ಶಾಸಕರಿಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಲು ಸಿಎಂ ನಿರ್ಧರಿಸಿದ್ದು, ಇದಕ್ಕೆ ಪಕ್ಷದ ವರಿಷ್ಠರಿಂದ ಅನುಮತಿಯೊಂದೇ ಬಾಕಿ ಇದೆ. ವಿಧಾನ ಪರಿಷತ್ತಿನಲ್ಲಿ ತೆರವಾಗಿರುವ ಮೂರು ನಾಮಾಂಕಿತ ಸದಸ್ಯರ ನೇಮಕಾತಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ, 92 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಗೆ ಆಗಮಿಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮುಂಬರುವ ಸೋಮವಾರ ಅಥವಾ ಬುಧವಾರ ದೆಹಲಿಗೆ ತೆರಳುವ ಸಾಧ್ಯತೆಗಳಿವೆ.

ಭಿನ್ನಮತ ನಿವಾರಿಸಿಕೊಳ್ಳಲು ಅಮಿತ್ ಶಾರಿಂದ ಸದ್ಯದಲ್ಲೇ ಸೂಚನೆ

ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತವನ್ನು ನಿವಾರಿಸಿಕೊಂಡು ಮುಂದೆ ಸಾಗಿ… ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬನ್ನಿ ಎಂದು ರಾಜ್ಯ ನಾಯಕರಿಗೆ ಕಿವಿಮಾತು ಹೇಳಲು ನಿರ್ಧರಿಸಿದ್ದಾರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಈ ಸಂಬಂಧ ಅಮಿತ್ ಶಾ ಅವರು ಆಗಸ್ಟ್ 23 ರಂದು ದೆಹಲಿಯಲ್ಲಿ ರಾಜ್ಯಗಳ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದ್ದು, ಈ ಸಂದರ್ಭದಲ್ಲಿ ರಾಜ್ಯ ನಾಯಕರಿಗೆ ಕಿವಿಮಾತು ಹೇಳುವ ಸಾಧ್ಯತೆಗಳಿವೆ.

ಮಗನ ಚಿತ್ರಕ್ಕೆ ಪವನ್ ಬೆಂಬಲ ಕೋರಿದ ಹೆಚ್ಡಿಕೆ

ಸದ್ಯ ರಾಜ್ಯ ರಾಜಕಾರಣದ ಜತೆ ತಮ್ಮ ಮಗನ ಸಿನಿಮಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ, ತಮ್ಮ ಮಗನ ಮೊದಲ ಚಿತ್ರ ಜಾಗ್ವಾರ್ ಗೆ ಬೆಂಬಲ ಸೂಚಿಸಲು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಹಕಾರ ಕೋರಿದ್ದಾರೆ.

ಹೈದ್ರಾಬಾದ್ ನಲ್ಲಿಂದು ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಮಗ ನಿಖಿಲ್ ನಟಿಸುತ್ತಿರುವ ಚಿತ್ರಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಇದೇ ವೇಳೆ ಭೇಟಿಯ ಹಿಂದೆ ರಾಜಕೀಯ ಉದ್ದೇಶವೂ ಇದೆ ಎಂಬ ಮಾತುಗಳು ಕೇಳಿಬಂದಿದ್ದು, ಗಡಿ ಭಾಗದಲ್ಲಿರುವ ತೆಲುಗು ಭಾಷಿಕರ ಬೆಂಬಲ ಪಡೆಯಲು ಕುಮಾರಸ್ವಾಮಿ ಪವನ್ ಕಲ್ಯಾಣ್ ನೆರವು ಕೋರಿದರು ಎನ್ನಲಾಗುತ್ತಿದೆ.

Sudhee

ಶನಿವಾರ ವಿದ್ಯಾಪೀಠದ ರಾಘವೇಂದ್ರ ಮಠದಲ್ಲಿ ಗುರು ರಾಘವೇಂದ್ರರಾಯರ ಆರಾಧನೆ ನಡೆದ ರೀತಿ…

Leave a Reply