ರಿಯೊ ಒಲಿಂಪಿಕ್ಸ್: ಈ ಒಂದು ಜಯದ ರೋಮಾಂಚನಗಳನ್ನು ಪಕ್ಕಕ್ಕಿಟ್ಟು ಪದಕ ಪಟ್ಟಿ ನೋಡಲಾದೀತೇ?

ಕಿಮಿಯಾ ಅಲಿಝಾದೆ ಜೆನೂರಿನ್… ಇರಾನಿನ ಟೆಕ್ವಾಂಡೋ ಪಟು

ಡಿಜಿಟಲ್ ಕನ್ನಡ ವಿಶೇಷ:

ಇದೇನ್ರೀ ಒಂದೆರಡು ಪದಕ ಗೆದ್ದಿದ್ದಕ್ಕೆ ಇಂಥ ಸಂಭ್ರಮವಾ ಅಂತ ಭಾರತದ ಬಗ್ಗೆ ಅಗ್ರ ಶ್ರೇಯಾಂಕಿತ ರಾಷ್ಟ್ರಗಳು ಕೇಳಿಯಾವು. ನಿಜ, ಹೆಚ್ಚು ಗೆಲ್ಲಬೇಕಿತ್ತು. ಆದರೆ ವಿರಳ ಗೆಲುವಲ್ಲೂ ದೇಶ ಒಟ್ಟಾಗಿ ಸಂಭ್ರಮಿಸಿದ ರೀತಿ ಇದೆಯಲ್ಲ, ಶ್ರಮದ ಮೆಲುಕುಗಳಿವೆಯಲ್ಲ… ಅಂಥ ಕತೆಗಳಲ್ಲೇ ನಾವು ಬದುಕಿದ್ದೇವೆ, ಸಂತೋಷ ಕಾಣುತ್ತಿದ್ದೇವೆ.

ರಿಯೋ ಒಲಿಂಪಿಕ್ಸ್ ನಲ್ಲಿ ಈ ಬಾರಿ ಭಾರತ ಚೆನ್ನಾಗಿಯೇ ಪದಕಗಳ ಬೇಟೆಯಾಡುತ್ತೇ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಕ್ರೀಡಾಕೂಟ ಮುಕ್ತಾಯದ ಹಂತಕ್ಕೆ ಬಂದು ನಿಂತಿದ್ದು, ಭಾರತ ಅಭಿಮಾನಿಗಳ ನಿರೀಕ್ಷೆ ಪೂರ್ಣ ಪ್ರಮಾಣದಲ್ಲಿ ಈಡೇರಲಿಲ್ಲ. ಆದರೆ, ಸಾಕ್ಷಿ ಮಲಿಕ್ ಮತ್ತು ಪಿ.ವಿ ಸಿಂಧು ಅವರು ತಂದುಕೊಟ್ಟ ಎರಡು ಪದಕ ಇಡೀ ಭಾರತಕ್ಕೇ ಸಂಭ್ರಮ ಹಬ್ಬಿಸಿದೆ.

ಹೀಗಾಗಿ ಈ ವಿರಳ ಗೆಲುವುಗಳನ್ನು ಭಾರತೀಯರಂತೆ ಇನ್ಯಾರೂ ಅರ್ಥ ಮಾಡಿಕೊಳ್ಳಲಾರರು. ನೂರು ಪದಕಗಳ ನಡುವಲ್ಲಿ ನಿಲ್ಲುವುದೇ ಗುರಿಯಾಗಬೇಕು ಹೌದಾದರೂ ಒಂದು ಗೆಲುವಿನ ಹಿಂದಿರುವ ಸಾಧನಾಗಾಥೆಯ ಪ್ರಭೆಯೂ ಕಡಿಮೆಯದ್ದೇನಲ್ಲ. ಈ ಬಾರಿ ಅಂಥ ಕ್ಷಣಗಳಲ್ಲಿ ಯಾರೆಲ್ಲ ಮಿದರೆಂದು ನಾವು ನೋಡೋಣ. ಪದಕ ಪಟ್ಟಿಯ ಅಂಕಿಅಂಶಗಳ ಅಗ್ರಭಾಗದಲ್ಲಿ ಕಾಣದಿದ್ದರೂ ಈ ಬಿಡಿ ಬಿಡಿ ಗೆಲುವುಗಳು ಹಬ್ಬಿಸಿರುವ ಆನಂದಕ್ಕೆ ಪಾರವಿಲ್ಲ.

  • ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಇರಾನ್ ಮಹಿಳೆ ಕಿಮಿಯಾ:

ಕಿಮಿಯಾ ಅಲಿಝಾದೆ ಜೆನೂರಿನ್… ಇರಾನಿನ ಟೆಕ್ವಾಂಡೋ ಪಟು ಈಗ ಇರಾನ್ ಕ್ರೀಡಾ ಇತಿಹಾಸವನ್ನೇ ಬದಲಿಸಿದ್ದಾಳೆ. ಇಂತಹ ಸಾಧನೆಗೆ ವೇದಿಕೆಯಾಗಿದ್ದು ಇದೇ ರಿಯೋ ಒಲಿಂಪಿಕ್ಸ್. ಕಿಮಿಯಾ ಸಾಧನೆ ಇರಾನ್ ಪಾಲಿಗೆ ಏಕೆ ಅಷ್ಟು ಪ್ರಾಮುಖ್ಯತೆ ಅಂದರೆ, ಇರಾನಿನಲ್ಲಿ 1979 ರ ಕ್ರಾಂತಿಯ ನಂತರ ಅಲ್ಲಿನ ಪುರುಷರ ಕ್ರೀಡಾಕೂಟ ವೀಕ್ಷಿಸಲು ಕ್ರೀಡಾಂಗಣಕ್ಕೆ ಯಾವುದೇ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ. ಕೇಳಲು ಇದು ವಿಚಿತ್ರ ಎನಿಸಿದರು, ಇದು ಕಹಿ ಸತ್ಯ. ಇಂತಹ ಪರಿಸ್ಥಿತಿಯಲ್ಲೂ ಅಲ್ಲಿನ ಕೆಲವು ಮಹಿಳೆಯರು ಸುಮ್ಮನೆ ಕೂರಲಿಲ್ಲ. ಮಹಿಳಾ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ಪೈಕಿ ಕಿಮಿಯಾ ಸಹ ಒಬ್ಬರು. ಈ ಬಾರಿಯ ಟೆಕ್ವಾಂಡೊ ವಿಭಾಗದಲ್ಲಿ ಕಿಮಿಯಾ ಗೆದ್ದ ಕಂಚು, ಇರಾನ್ ಮಹಿಳೆಯರ ಪಾಲಿಗೆ ಚಿನ್ನಕ್ಕೂ ಮಿಗಿಲಾದ ಸಾಧನೆಯೇ ಆಗಿದೆ. ಇದರೊಂದಿಗೆ ತಮ್ಮ ದೇಶದಲ್ಲಿ ಮಹಿಳೆಯರು ಹಾಗೂ ಕ್ರೀಡೆಯ ನಡುವೆ ಇರುವ ಅಡ್ಡಗೋಡೆಯನ್ನು ಕೆಡವುವ ಪ್ರಯತ್ನ ನಡೆದಿರುವುದು ನಿಜಕ್ಕೂ ಸ್ವಾಗತಾರ್ಹ.

  • ಮೊದಲ ಚಿನ್ನ ಗೆದ್ದ ಸಂಭ್ರಮದಲ್ಲೇ ಇಡೀ ದೇಶಕ್ಕೆ ರಜೆ ಘೋಷಣೆ:

ಈ ಬಾರಿಯ ಒಲಿಂಪಿಕ್ಸ್ ಫಿಜಿ ಎಂಬ ಪುಟ್ಟ ದೇಶಕ್ಕೆ ಅವಿಸ್ಮರಣೀಯ ಕ್ಷಣ. ಕಾರಣ, ಕಳೆದ 14 ಒಲಿಂಪಿಕ್ಸ್ ನಿಂದಲೂ ಸತತವಾಗಿ ಭಾಗವಹಿಸುತ್ತಾ ಬಂದಿರುವ ಫಿಜಿ ಈ ಬಾರಿ ಮೊಟ್ಟ ಮೊದಲ ಪದಕ ಗೆದ್ದಿದೆ. ಅದೂ ಚಿನ್ನದ ಪದಕ… ಈ ಬಾರಿ ಒಲಿಂಪಿಕ್ಸ್ ಸೇರ್ಪಡೆಯಾದ ರಗ್ಬಿಯಲ್ಲಿ ಫಿಜಿ ತಂಡ ಗ್ರೇಟ್ ಬ್ರಿಟನ್ ಅನ್ನು 43-7 ಅಂತರದಲ್ಲಿ ಮಣಿಸಿ ಚಿನ್ನಕ್ಕೆ ಕೊರಳೊಡ್ಡಿತು. ಈ ಒಂದು ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಇಡೀ ದೇಶಕ್ಕೆ ಸಾಮೂಹಿಕ ರಜೆ ಘೋಷಣೆ ಮಾಡಿದೆ.

Rugby - Men's Victory Ceremony

  • ದೇಶವನ್ನು ಪ್ರತಿನಿಧಿಸದೇ ಚಿನ್ನ ಗೆದ್ದ ಮೊದಲ ವ್ಯಕ್ತಿ ಫೆಹೆದ್ ಹಲ್ದಿಹಾನಿ:

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕುವೈತ್ ಅನ್ನು ಅಮಾನತುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕುವೈತ್ ನ 7 ಸ್ಪರ್ಧಿಗಳನ್ನು ವೈಯಕ್ತಿಕವಾಗಿ ಸ್ಪರ್ಧಿಸಲು ಒಲಿಂಪಿಕ್ಸ್ ನಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು. ಆ 7 ಸ್ಪರ್ಧಿಗಳ ಪೈಕಿ ಪುರುಷರ ಡಬಲ್ ಟ್ರಾಪ್ ಶೂಟಿಂಗ್ ನಲ್ಲಿ ಫೆಹೆದ್ ಚಿನ್ನ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ದೇಶ ಪ್ರತಿನಿಧಿಸದೇ ವೈಯಕ್ತಿಕವಾಗಿ ಪ್ರತಿನಿಧಿಸಿ ಮೊದಲ ಪದಕ ಗೆದ್ದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ವಿಯೆಟ್ನಾ ಕ್ರೀಡಾ ಇತಿಹಾಸದಲ್ಲೇ ಮೊದಲ ಒಲಿಂಪಿಕ್ಸ್ ಚಿನ್ನ:

ವಿಯೆಟ್ನಾಂನ ಶೂಟರ್ ಹಾಂಗ್ ಕ್ಷುಯಾನ್ ವಿನ್ ಹೊಸ ಇತಿಹಾಸ ಬರೆದಿದ್ದಾರೆ. ಹಲವು ವರ್ಷಗಳ ಕಠಿಣ ಪರಿಶ್ರಮ, ಆರ್ಥಿಕ ಸಂಕಷ್ಟದ ನಡುವೆಯೇ ಪ್ರತಿದಿನ 100 ಬುಲೆಟ್ ಗಳಷ್ಟು ಅಭ್ಯಾಸ ನಡೆಸಿದ್ದ ಹಾಂಗ್, ಈ ಬಾರಿಯ ಚಿನ್ನದ ಪದಕ ಗೆದ್ದಿದ್ದಾರೆ. ಇದು ವಿಯೆಟ್ನಾಂ ಪಾಲಿಗೆ ಮೊದಲ ಒಲಿಂಪಿಕ್ಸ್ ಚಿನ್ನ ಎಂಬುದು ವಿಶೇಷ.

  • ಮೊದಲ ಬಾರಿಗೆ ನಿರಾಶ್ರಿತರ ತಂಡ:

refugee team

ಈ ಮೇಲೆ ಹೇಳಿದ ಎಲ್ಲ ಉದಾಹರಣೆಗಳು ಮೊದಲ ಬಾರಿಗೆ ಐತಿಹಾಸಿಕ ಪದಕ ಗೆದ್ದ ಸಾಧನೆಗಳು. ಇವುಗಳ ಮಧ್ಯೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಮೊದಲ ಬಾರಿಗೆ 6 ದೇಶಗಳ ನಿರಾಶ್ರಿತರ ತಂಡ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು. ತಮ್ಮ ದೇಶಗಳಲ್ಲಿನ ಅರಾಜಕತೆ ಪರಿಸ್ಥಿತಿಯಿಂದ ನೆಲೆ ಕಳೆದುಕೊಂಡವರು ತಮ್ಮ ಭವಿಷ್ಯದ ಬಗ್ಗೆ ಗೊತ್ತು ಗುರಿ ಇಲ್ಲದೇ ಕಂಗಾಲಾಗಿರುತ್ತಾರೆ. ಅಂತಹವರಿಗೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟು ಜಗತ್ತಿಗೆ ಸಾರಿದ ಮಾನವೀಯತೆಯ ಸಂದೇಶ, ಒಲಿಂಪಿಕ್ಸ್ ಮೂಲಕ ಕ್ರೀಡಾ ಕ್ಷೇತ್ರವೇ ಗೆಲ್ಲುವಂತೆ ಮಾಡಿದೆ.

Leave a Reply