ಆಮ್ನೆಸ್ಟಿ ಪರ ವಕಾಲತ್ತಿನಿಂದ ‘ದಿಗ್ವಿಜಯ್ ಆಕ್ರಮಿತ ಕರ್ನಾಟಕ ಕಾಂಗ್ರೆಸ್’ಗೆ ಸಿಗುವುದಾದರೂ ಏನು?

(ಕಡತ ಚಿತ್ರ)

ಪ್ರವೀಣ್ ಕುಮಾರ್

ಆಮ್ನೆಸ್ಟಿ ವೇದಿಕೆಯಲ್ಲಿ ದೇಶದ್ರೋಹದ ಘೋಷಣೆಗಳು ಮೊಳಗಿದ್ದು, ಭಾರತದ ಸಂವಿಧಾನದ ಪ್ರಕಾರ ಅವಿಚ್ಛಿನ್ನ ಅಂಗವಾಗಿರುವ ಜಮ್ಮು-ಕಾಶ್ಮೀರವನ್ನು ದೇಶದಿಂದ ಬೇರ್ಪಡಿಸುವ ಆಜಾದಿ ಹಾಡುಗಳು ಕೇಳಿದ್ದು ಇವೆಲ್ಲದರ ಬಗ್ಗೆ ದೂರು ದಾಖಲಾದಾಗ ಪ್ರಾರಂಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಇಂಥ ಕೃತ್ಯದಲ್ಲಿ ತೊಡಗಿಕೊಂಡವರ ಮೇಲೆ ಕ್ರಮ ಜರುಗಲಿ ಎಂದೇ ಇತ್ತು. ಸುಮ್ಮನೇ ಈ ಬಗ್ಗೆ ಪ್ರತಿಭಟನೆ- ಧರಣಿಗಳೆಲ್ಲ ಆಗುವುದಕ್ಕೇಕೆ ಅವಕಾಶ ಮಾಡಿಕೊಡೋದು ಎಂಬ ವಿಚಾರವೊಂದನ್ನು ಅಲ್ಲಿ ಕಾಣಬಹುದಾಗಿತ್ತು. ಹೀಗಾಗಿಯೇ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದಾಗ, ‘ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಬಿಡಿ’ ಎಂಬ ಧಾಟಿಯಲ್ಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮಾತಾಡಿದ್ದರು. ಪ್ರತಿಭಟನೆಯಲ್ಲಿ ಎಬಿವಿಪಿ ತೊಡಗಿಸಿಕೊಂಡಿರುವುದರ ಬಗ್ಗೆ ಸಹಜವಾಗಿಯೇ ತಕರಾರು ಇತ್ತಾದರೂ, ಆ ಕಾರಣಕ್ಕೆ ತೀರ ಆಮ್ನೆಸ್ಟಿಯನ್ನು ಬೆಂಬಲಿಸಿಕೊಂಡು ಅವರ ಪರ ವಕಾಲತ್ತು ವಹಿಸಿದರೆ ತಮಗಾಗುವ ಲಾಭವೇನು ಎಂದೇ ಕಾಂಗ್ರೆಸ್ ಸರ್ಕಾರದ ಯೋಚನೆ ಇದ್ದಂತಿತ್ತು.

ಮರುದಿನದಿಂದ ರಾಷ್ಟ್ರೀಯ ಮಾಧ್ಯಮದ ಒಂದು ವರ್ಗ ಬೊಬ್ಬೆ ಎಬ್ಬಿಸಿತು. ‘ಛೇ..ಛೇ, ದೇಶದ್ರೋಹದಂಥ ಕಾನೂನನ್ನು ಬಿಜೆಪಿ ಆಡಳಿತದ ಸರ್ಕಾರಗಳು ಉಪಯೋಗಿಸಬೇಕಲ್ಲದೇ ಕಾಂಗ್ರೆಸ್ ಸರ್ಕಾರ ಉಪಯೋಗಿಸಿದರೆ ‘ಸೆಕ್ಯುಲರಿಸಂ’ಗೆ ಮಾಡುವ ಅವಮಾನ’ ಎಂಬಂತೆ ಅಭಿಪ್ರಾಯ ಹೊರಹಾಕಿದವು. ಅದರ ಬೆನ್ನಲ್ಲೇ ಕರ್ನಾಟಕ ಸರ್ಕಾರಕ್ಕೆ ಆಮ್ನೆಸ್ಟಿ ಪರ ಪ್ರಕರಣದ ಬಗ್ಗೆ ಗಡಸಾಗದಂತೆ ಎಚ್ಚರಿಸಿರುವುದಾಗಿ ದೆಹಲಿಯ ಜನಪಥಕ್ಕೆ ಆಪ್ತ ನೇತಾರ ದಿಗ್ವಿಜಯ್ ಸಿಂಗ್ ಟ್ವೀಟರಿನಲ್ಲಿ ಪರೋಕ್ಷವಾಗಿ ಹೇಳಿಕೊಂಡರು. ‘ಯಾವುದೇ ಬಂಧನವಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಅಂತ ಟ್ವೀಟಿಸಿದರು.

ಅಲ್ಲಿಂದಲೇ ಸರ್ಕಾರ ಆಮ್ನೆಸ್ಟಿ ಪರ ವಕಾಲತ್ತನ್ನು ತನ್ನದಾಗಿಸಿಕೊಂಡಿತು. ಎಬಿವಿಪಿಯನ್ನು ಹತ್ತಿಕ್ಕುವುದರಲ್ಲಿ ತನ್ನ ಬಲ ವ್ಯಯಿಸತೊಡಗಿತು. ಪ್ರಕರಣದಲ್ಲಿ ಆಜಾದಿ ಘೋಷಣೆ ಕೂಗಿದ, ಸೇನೆಯನ್ನು ನಿಂದಿಸಿದ ಕೆಲವರನ್ನಾದರೂ ಬಂಧಿಸಿ ನಂತರ ಎಬಿವಿಪಿಯವರನ್ನು ಗದರಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಸರ್ಕಾರದಲ್ಲಿರುವವರ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಮಾತನಾಡಿದವರ ಸ್ಕ್ರೀನ್ ಶಾಟ್ ಸಂಗ್ರಹಿಸುವುದರಲ್ಲಿ ನಿರತವಾಗಿರುವ, ಈ ಹಿಂದೆ ಚಿದಂಬರಂ ಮಗನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹವಾಗಿ ಮಾತನಾಡಿದ ಎಂಬುದಕ್ಕೆ ಆಗ ಚಾಲ್ತಿಯಲ್ಲಿದ್ದ ಅತಿಕ್ರೂರ ಇಂಟರ್ನೆಟ್ ಸಂಬಂಧಿ ಕಾಯ್ದೆಯೊಂದರ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದ ಇತಿಹಾಸದ ಕಾಂಗ್ರೆಸ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ಸಮಗ್ರತೆಯನ್ನು ಪ್ರಶ್ನಿಸುವ ಕಾರ್ಯವನ್ನು ಸಹಿಸಿಕೊಳ್ಳುವುದು ಕ್ರೂರ ವ್ಯಂಗ್ಯ. ಆಮ್ನೆಸ್ಟಿಯ ಬೆಂಗಳೂರು ಕಾರ್ಯಕ್ರಮದಲ್ಲಿ ಆಜಾದಿ ಘೋಷಣೆ ಮೊಳಗಿದ್ದು ಮೋದಿ ಬಿಜೆಪಿಯ ವಿರುದ್ಧವೋ, ಇನ್ಯಾವುದೇ ಪುರೋಹಿತಶಾಹಿ ಕಲ್ಪನೆ ವಿರುದ್ಧವೋ ಅಥವಾ ಆರೆಸ್ಸೆಸ್ ವಿರುದ್ಧವೋ ಅಲ್ಲವಲ್ಲ. ಸೇನೆಯ ವಿರುದ್ಧ, ದೇಶದ ಸಮಗ್ರತೆ ವಿರುದ್ಧ ಕೂಗಿಗೆ ಆಮ್ನೆಸ್ಟಿ ವೇದಿಕೆ ಒದಗಿಸಿದೆ ಎಂದಾದಾಗ ಅದು ಬಿಜೆಪಿಯ ಲಾಭದ ಇಶ್ಯೂ ಆಗಬೇಕಿಲ್ಲ. ಕಾಂಗ್ರೆಸ್ ಗೆ ಈ ದೇಶದ ಬಗ್ಗೆ ಮಾತಾಡುವ ಹಕ್ಕಿದೆ ಎಂಬುದನ್ನು ಮತ್ಯಾರೋ ಹೇಳಬೇಕಿಲ್ಲ. ಹೀಗಿರುವಾಗ, ಇಲ್ಲಿನ ಆರೋಪ ಎಷ್ಟು ಗಂಭೀರತೆಯದ್ದು, ಇದರಲ್ಲಿ ಆಮ್ನೆಸ್ಟಿ ಪಾಲೆಷ್ಟು ಎಂದೆಲ್ಲ ಚೌಕಾಶಿಗೂ ಮೊದಲು ಕಾಂಗ್ರೆಸ್ ತಳೆಯಬಹುದಾಗಿದ್ದ ಸರಳ ನಿಲುವು ಎಂದರೆ- ‘ನಿಜ.. ದೇಶದ ವಿರುದ್ಧ ಮಾತಾನಾಡಿದವರನ್ನು ಸಹಿಸಲಾಗುವುದಿಲ್ಲ, ಅದೇನು ಅಂತ ವಿಚಾರಣೆಯಾಗಲಿ. ಪೊಲೀಸರು ಮುಲಾಜಿಲ್ಲದೇ ಅಗತ್ಯ ಕ್ರಮ ಕೈಗೊಳ್ಳಲಿ’ ಎನ್ನುವಂಥದ್ದು. ವಾಸ್ತವವಾಗಿ ಪ್ರಾರಂಭದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಮಾರ್ಗವನ್ನೇ ಅನುಸರಿಸುವ ಸೂಚನೆ ಇತ್ತು. ಆದರೆ ಯಾವಾಗ ಬುದ್ಧಿಜೀವಿತನದ ಚೌಕಾಶಿಗಳಿಗೆ ಶರಣಾಯಿತೋ ಆಗ ಸ್ವರ ಬದಲಾಗಿಹೋಯಿತು.

ಈ ರಾಷ್ಟ್ರೀಯವಾದಗಳೆಲ್ಲ ಬಿಜೆಪಿ ಆಯುಧ, ತನಗೆ ಅಹಿಂದ ಇದ್ದರೆ ಸಾಕು ಎಂದೇ ಕಾಂಗ್ರೆಸ್ ಯೋಚಿಸಿದ್ದರೂ ವಾಸ್ತವಿಕವಾಗಿ ಅದೂ ನಷ್ಟವೇ. ಈ ದೇಶ, ಸೈನಿಕರು, ಭಾವನೆ ಇವನ್ನೆಲ್ಲ ಪಕ್ಕಕ್ಕಿಟ್ಟು ಕೇವಲ ರಾಜಕೀಯ ದೃಷ್ಟಿಯಿಂದಲೇ ನೋಡಿದರೂ ಕಾಂಗ್ರೆಸ್ ಇದರಲ್ಲಿ ಗಳಿಸುವಂಥದ್ದೇನಿಲ್ಲ. ಏಕೆಂದರೆ ಆಮ್ನೆಸ್ಟಿಯ ಆಕಾರ್ ಪಟೇಲ್ ಮತ್ತು ಬೆರಳೆಣಿಕೆ ಬುದ್ಧಿಜೀವಿಗಳು ಇಲ್ಲಿನವರಿಗೆ ಮತಬ್ಯಾಂಕ್ ಏನಲ್ಲ. ಬಿಜೆಪಿಯನ್ನು ವಿರೋಧಿಸಬೇಕೆಂಬ ಕಾರಣಕ್ಕೆ ದೇಶ ತುಂಡು ಮಾಡುವ ಮಾತಾಡಿದವರನ್ನೂ ಸಮರ್ಥಿಸಿಬಿಡುವಷ್ಟರಮಟ್ಟಿಗಿನ ಭಾವಶೂನ್ಯತೆ ಈ ದೇಶದ ಯಾವ ಜಾತಿ-ಮತ- ವರ್ಗದ ವ್ಯಕ್ತಿಯಲ್ಲೂ ಇಲ್ಲ. ಎಬಿವಿಪಿ ಪ್ರತಿಭಟನೆ ಹಿಂದೆ ರಾಜಕೀಯವಿದೆ ಎಂದರೆ ಅದನ್ನೊಪ್ಪುವ ಜನವರ್ಗ ಇದ್ದಿರಬಹುದು. ಆದರೆ ಇಲ್ಲಿನ ಮಾನವ ಹಕ್ಕುಗಳಿಗೆ ಅದ್ಯಾವುದೋ ಆಮ್ನೆಸ್ಟಿ ಎಂಬ ವಿದೇಶಿ ಸಂಸ್ಥೆ ಇಲ್ಲಿ ಆಫೀಸು ತೆರೆದು ಕುಳಿತಿದೆ ಎಂದರೆ, ಅವರು ನಮ್ಮ ಉದ್ಧಾರಕ್ಕಾಗಿಯೇ ಅವತರಿಸಿದ್ದಾರೆ ಎಂದು ನಂಬುವಷ್ಟು ಮೂರ್ಖತನ ಜನರಲ್ಲಿದೆ ಅಂತ ಭಾವಿಸುವುದು ತಪ್ಪು.

ಹೀಗಿರುವಾಗ ದಿಗ್ವಿಜಯ್ ಮಾತು ಅತಿಯಾಗಿ ಕೇಳಿಕೊಂಡು ಕುಳಿತರೆ ನಿಮ್ಮ ರಾಜಕೀಯ ಬಂಡವಾಳ ಹಾಳುಗೆಡವಿಕೊಳ್ಳುತ್ತೀರಿ ಎಂಬ ಸೂಕ್ಷ್ಮ ತಿಳಿಸುವ ಸಲಹೆಗಾರರ್ಯಾರೂ ಸರ್ಕಾರದ ಸನಿಹ ಇದ್ದಂತಿಲ್ಲ. ಆರೆಸ್ಸೆಸ್ ಗುಮ್ಮವನ್ನು ಎದುರುನಿಲ್ಲಿಸಿಬಿಟ್ಟರೆ ಇವರಿಗೆ ಎಂಥ ವೈರಿಯೂ ಮಿತ್ರನಾಗಿ ಕಂಡುಬಿಡುತ್ತಾನೆ, ಅದೇ ಸಮಸ್ಯೆ. ದಿಗ್ವಿಜಯ್ ಸಿಂಗ್ ಯಾವ ಚುನಾವಣೆಗಳನ್ನೂ ಗೆಲ್ಲಬೇಕಿಲ್ಲ. ಸಿಕ್ಕಿರುವ 44 ಸ್ಥಾನಗಳ ಪೈಕಿ ಭವಿಷ್ಯದಲ್ಲಿ ಇನ್ನು ನಾಲ್ಕು ಕಳಚಿಬಿದ್ದರೂ ದಿಗ್ವಿಜಯ್ ಸಿಂಗ್ ಅವರನ್ನು ಯಾರೂ ಉತ್ತರದಾಯಿ ಆಗಿಸುವುದಿಲ್ಲ. ಸೋನಿಯಾ ಮನೆ ಬಾಗಿಲು ಅವರಿಗೆ ಮುಚ್ಚುವುದಿಲ್ಲ. ಯಾವಾಗ ಕಳೆದುಕೊಳ್ಳುವುದಕ್ಕೇನೂ ಇಲ್ಲ ಎಂಬ ಹಂತಕ್ಕೆ ವ್ಯಕ್ತಿ ಮುಟ್ಟುತ್ತಾನೋ ಆಗ ಸಕಲ ಕೋತಿ ಆಟಗಳನ್ನೂ ಆಡಬಲ್ಲ. ಮುಂಬೈ ದಾಳಿಗೆ ಪಾಕ್ ಉಗ್ರರು ಕಾರಣವಾಗಿದ್ದನ್ನು ಜಗತ್ತೇ ನೋಡುತ್ತಿದ್ದರೂ ‘26/11 ಆರೆಸ್ಸೆಸ್ಸಿನ ಸಂಚು’ ಅಂತ ದಿಗ್ವಿಜಯ್ ಸಿಂಗ್ ಮುಸ್ಲಿಮರನ್ನು ರಮಿಸಬಲ್ಲರು ಅಥವಾ ರಮಿಸಿದ್ದೇನೆಂಬ ಭ್ರಮೆಯಲ್ಲಿ ವಿಕೃತಾನಂದ ಹೊಂದಬಲ್ಲರು…

ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಯೋಚಿಸಬೇಕು. ದಿಗ್ವಿಜಯ್ ಒತ್ತಡ ಹೇರಿದರೆಂದು ಇವರೂ ಅಂಥದೇ ಮಟ್ಟಕ್ಕಿಳಿಯುವುದಾದರೆ ಕರ್ನಾಟಕದಲ್ಲಿ ಇವರದನ್ನು ದಕ್ಕಿಸಿಕೊಳ್ಳಬಲ್ಲರೇ? ಹಿಂದಿನ ಚುನಾವಣೆಯಲ್ಲೇ ಆರಿಸಿಬರಲಾಗದೇ ದಲಿತ ಕಾರ್ಡಿನಲ್ಲಿ ಅಲವತ್ತುಕೊಂಡು ಅಧಿಕಾರ ಪಡೆದಿರುವ ಪರಮೇಶ್ವರರು ‘ಆಮ್ನೆಸ್ಟಿ ತಪ್ಪು ಮಾಡಿದೆ ಅಂತ ನನಗನಿಸುವುದಿಲ್ಲ’ ಅಂತ ವಿಚಾರಣೆಗೆ ಮೊದಲು ತೀರ್ಪು ಕೊಟ್ಟರೆ, ಇವರು ನಾಳೆ ಚುನಾವಣೆಯಲ್ಲಿ ಮತ ಕೇಳಬೇಕಿರುವುದು ಕಾಶ್ಮೀರದ ಕಲ್ಲುತೂರಾಟಗಾರರಿಂದ ಅಲ್ಲವಲ್ಲ?

ಹತ್ತು ವರ್ಷಗಳ ಅವಧಿಯಲ್ಲಿ, ವಿಶೇಷವಾಗಿ ಯುಪಿಎ-2ರಲ್ಲಿ, ಸ್ವಯಂಸೇವಾ ಸಂಸ್ಥೆಗಳ ಪ್ರಮುಖರೇ ಸರ್ಕಾರವನ್ನು ನಡೆಸಿದ್ದರು. ರಾಷ್ಟ್ರೀಯ ಸಲಹಾ ಸಮಿತಿ ಅವರ ಆಡುಂಬೊಲವೇ ಆಗಿತ್ತು. ಕೊನೆಗೊಮ್ಮೆ ಹೀಗೆ ಕೈತುತ್ತು ತಿಂದ ಎನ್ಜಿಒಗಳು ತಮಗೇ ಒದೆಯುತ್ತಿವೆ ಅಂತ ಪ್ರಧಾನಿ ಮನಮೋಹನ ಸಿಂಗರು ಅಲವತ್ತುಕೊಳ್ಳುವ ವೇಳೆಗೆ ಅವರನ್ನೇ ನಗೆಪಾಟಲಾಗಿಸುವಮಟ್ಟಿಗೆ ಅವು ಕೊಬ್ಬಿದ್ದವು. ಕೊನೆಗೂ ಕಾಂಗ್ರೆಸ್ ಒದೆತ ತಿಂದಿದ್ದೇ ಬಂತು. ಎನ್ಜಿಒಗಳಿಗೇನು, ಕಾಂಗ್ರೆಸ್ ಅಲ್ಲದಿದ್ದರೆ ಈಗವತರಿಸಿ ಫಂಡಿಗಾಗಿ ಹಪಹಪಿಸುವ ಇನ್ನೊಂದು ಕ್ರಾಂತಿಕಾರಿ ಪಕ್ಷವನ್ನು ಆರಿಸಿಕೊಳ್ಳುತ್ತವೆ…

ಆಮ್ನೆಸ್ಟಿಯೋ ಮತ್ತೊಂದೋ ಇವು ಲೆಫ್ಟೂ ಅಲ್ಲ ರೈಟೂ ಅಲ್ಲ ಸೆಕ್ಯುಲರ್ರೂ ಅಲ್ಲ, ಮತ್ಯಾವ ಸಿದ್ಧಾಂತವಾದಿಯೂ ಅಲ್ಲ… ತೀರ ಗಮನಿಸಿ ನೋಡಿದರೆ ಎಲ್ಲರಿಗೂ ಅನಿಸುವಂತೆ ಅಮೆರಿಕ ಪರವೋ ಮತ್ಯಾವ ದೇಶದ ಪರವೋ ಎಂಬ ಸರಳ ವ್ಯಾಖ್ಯೆಗೂ ಸಿಗುವಂಥವಲ್ಲ. ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲೆಡೆ ಪರ್ಯಾಯ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ಗುಂಪುಗಳಿವು. ಈ ಕಾರ್ಯಸಾಧನೆಗೆ ಇವು ಸೆಕ್ಯುಲರ್ ರಾಗವನ್ನೂ ಹಾಡಬಲ್ಲವೂ, ಅತ್ತ ಜಿಹಾದಿ ಉಗ್ರರೊಂದಿಗೂ ಕೈ ಜೋಡಿಸಬಲ್ಲವು, ದಲಿತ ವಿಷಯವನ್ನೂ ಎತ್ತಬಲ್ಲವು, ಮಾನವ ಹಕ್ಕುಗಳ ಮಾತನ್ನೂ ಆಡಬಲ್ಲವು..

ಇಷ್ಟೇ!

ಹೀಗಿರುವಾಗ ಎಬಿವಿಪಿ ಹಣಿಯುವುದಕ್ಕೆ ಹೋಗಿ ಆಮ್ನೆಸ್ಟಿ ಪರ ಪುಕ್ಕಟೆ ವಕಾಲತ್ತು ವಹಿಸುತ್ತಿದ್ದೀರಲ್ಲಾ ಪರಮೇಶ್ವರರೇ… ದೇಶ ತುಂಡು ಮಾಡುವ ಪರ ನಿಂತವನನ್ನೂ ಧೀರನೆಂದು ತಮ್ಮ ಹಾಗೂ ಮುಖ್ಯಮಂತ್ರಿಗಳ ಆಸ್ಥಾನ ಪಂಡಿತರೆಲ್ಲ ಕೊಂಡಾಡಬಹುದಾದರೂ ತಮ್ಮ ಮತಕ್ಷೇತ್ರದಲ್ಲಿ ಹೀಗೆ ಯೋಚಿಸುವ ಜನ ಎಷ್ಟಿದ್ದಾರು? ಇದೊಂದೇ ವಿಷಯ ನಿಮ್ಮನ್ನು ಅಲ್ಲಾಡಿಸದಿದ್ದರೂ ಇಂಥ ಎಲ್ಲ ತಲೆಯಿಲ್ಲದ ತುಷ್ಟೀಕರಣಗಳ ಮೊತ್ತ ನಿಮ್ಮನ್ನು ಮುಳುಗಿಸದೇ ಇದ್ದೀತೇ?

ದಿಗ್ವಿಜಯ್ ಸಿಂಗರಿಗೆ ಕಾಲಕ್ಷೇಪಕ್ಕೆ ಇಳಿಗಾಲದ ಹೊಸ ದಾಂಪತ್ಯವಿದೆ, ಸೆಕ್ಯುಲರ್ ಸೆಮಿನಾರುಗಳಿವೆ. ಇವರ ಮಾತನ್ನೇ ತಲೆಮೇಲಿಟ್ಟುಕೊಂಡು ನಡೆಸಲು ಹೊರಟಿರುವ ಕಾಂಗ್ರೆಸ್ ನೇತಾರರಿಗೂ ಇಂಥದೇ ಮಾದರಿಯ ಜೀವನ ಸಹ್ಯವೇ? ಇಲ್ಲವಾದರೆ ಜನಕ್ಕೇನು ಉತ್ತರ ಕೊಡುವಿರಿ? ನಿಮ್ಮಂತೆ ಉತ್ತರದಾಯಿಯಾಗಬೇಕಾದ ಜರೂರತ್ತು ದಿಗ್ವಿಜಯ್ ಸಿಂಗರಿಗೇನೂ ಇಲ್ಲ. ಅಂದಹಾಗೆ ಆಕಾರ್ ಪಟೇಲ್ ಎಂಬ ಅಸಾಮಿ ಗೊಳ್ಳೆಂದು ನಕ್ಕಿದ್ದು ಕೇಳಿಸಿತಾ… ಉಹುಂ, ಬಿಜೆಪಿ ಮೇಲೆ ಆತ ನಗಾಡಿಕೊಂಡೇ ಬಂದಿದ್ದಾನೆ… ಈಗ ಜೋಕ್ ಇರೋದು ಕರ್ನಾಟಕ ಕಾಂಗ್ರೆಸ್ ಮೇಲೆ.

1 COMMENT

Leave a Reply