ಪರಿಕರ್ ಹೇಳಿರೋದು ಸರಿಯಾಗಬೇಕಾದರೆ ರಮ್ಯ ಹೇಳಿದ್ದು ತಪ್ಪಾಗಬೇಕಿಲ್ಲ, ಸಾಕು ಮಾಡೋಣ..ಇದ್ಯಾವ ದೇಶಭಕ್ತಿ ಚರ್ಚೆಯೂ ಅಲ್ಲ!

ಪ್ರವೀಣ್ ಕುಮಾರ್

  • ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ. – ರಕ್ಷಣಾ ಮಂತ್ರಿ ಮನೋಹರ ಪಾರಿಕರ್.
  • ಪಾಕಿಸ್ತಾನ ನರಕವಲ್ಲ. ಅಲ್ಲಿನ ಜನ ಒಳ್ಳೆಯವರು.- ರಮ್ಯ, ಕಾಂಗ್ರೆಸ್ ಸದಸ್ಯೆ, ಚಿತ್ರನಟಿ
  • ನಾವು ನಮ್ಮ ಮಿತ್ರರನ್ನು ಬದಲಿಸಬಹುದು, ಆದರೆ ನೆರೆಹೊರೆಯವರನ್ನಲ್ಲ.- ಅಟಲ್ ಬಿಹಾರಿ ವಾಜಪೇಯಿ

ಪ್ರತಿ ಮಾತುಗಳಿಗೂ ಒಂದು ಸಂದರ್ಭವಿರುತ್ತದೆ. ಅದರಿಂದ ಹೊರತೆಗೆದು ನೋಡಹೋದರೆ ಆಕ್ರೋಶದಲ್ಲೇ ಏಳುವುದಕ್ಕೆ, ಆಕ್ರೋಶದಲ್ಲೇ ಮಲಗುವುದಕ್ಕೆ ಹಾಗೂ ಆಕ್ರೋಶದಲ್ಲೇ ಜೀವನ ಕಳೆಯುವುದಕ್ಕೆ ಪ್ರತಿಕ್ಷಣವೂ ಕಾರಣಗಳು ಸಿಗುತ್ತವೆ.

ಟಿ ಆರ್ ಪಿ, ರೋಚಕ ಪತ್ರಿಕೋದ್ಯಮ ಎಂದೆಲ್ಲ ಮಾಧ್ಯಮಗಳನ್ನು ಬಯ್ಯುತ್ತೇವೆ. ಹಲವು ವಿಷಯಗಳಲ್ಲಿ ಅದು ಸರಿ ಸಹ. ಆದರೆ ಗಮನಿಸಬೇಕಾದ ವಿಷಯ ಎಂದರೆ, ಟಿ ಆರ್ ಪಿ ಪರಿಭಾಷೆ ಕೇವಲ ಮಾಧ್ಯಮಕ್ಕಲ್ಲ ಸಾಮಾನ್ಯನಿಗೂ ಅನ್ವಯವಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ನಾವು ಪ್ರತಿದಿನ ಪ್ರಸ್ತುತರನ್ನಾಗಿರಿಸಿಕೊಳ್ಳಬೇಕೆಂದಾಗ ಸಿಗುವ ಸುಲಭ ಮಾರ್ಗವೇ ಹೇಳಿಕೆಗಳನ್ನು ಇಟ್ಟುಕೊಂಡು ಪರ- ವಿರೋಧ ಚರ್ಚೆಯಲ್ಲಿ ತೊಡಗುವುದು. ಆಕ್ರೋಶ- ಹಂಗಿಸುವಿಕೆಗೆ ಆಕರ್ಷಣಾ ಶಕ್ತಿ ಹೆಚ್ಚು. ರಮ್ಯ ಹೇಳಿಕೆ ವಿಷಯದಲ್ಲೂ ಅದೇ ಆಗಿರುವುದು.

ಸಾರ್ಕ್ ನ ಸಭೆಯೊಂದರಲ್ಲಿ ಪಾಲ್ಗೊಂಡುಬಂದ ಅವರಿಗೆ ಅಲ್ಲಿನ ಆತಿಥ್ಯ ಚೆಂದವಿತ್ತು ಎನಿಸಿದೆ. ಅದನ್ನೇ ಹೇಳಿದ್ದಾರೆ. ಖಂಡಿತ, ಕಾಂಗ್ರೆಸ್ಸಿಗರಾಗಿರುವ ರಮ್ಯ ಇದರಲ್ಲಿ ರಾಜಕೀಯ ಅರಿವಿಲ್ಲದಂತೆ ಬೆರೆಸಿರುವುದು ಖರೆ. ಏಕೆಂದರೆ, ಪಾಕಿಸ್ತಾನದ ಜನ ಒಳ್ಳೆಯವರು ಅಲ್ಲಿನ ಆಯೋಜಕರು ತಮ್ಮನ್ನು ಚೆನ್ನಾಗಿ ನೋಡಿಕೊಂಡರು ಎಂದಿದ್ದರೆ ಸಾಕಿತ್ತು. ಆದರೆ ಪಾಕಿಸ್ತಾನ ನರಕವಲ್ಲ ಎಂದು ಹೇಳುವಲ್ಲಿ ಅವರು ಪರಿಕರ್ ಅವರನ್ನು ಗುರಿಯಾಗಿಸಿಕೊಂಡರು.

ಇದನ್ನು ರಾಜಕೀಯ ವಾದ-ಪ್ರತಿವಾದದ ಎಪಿಸೋಡಾಗಿ ವಾಗ್ಬಾಣ ಬಿಟ್ಟುಕೊಂಡಿದ್ದರೆ ತಪ್ಪೇನಿರಲಿಲ್ಲ. ಆದರೆ ರಮ್ಯ ಮಾತನ್ನು ‘ರಾಷ್ಟ್ರೀಯವಾದ’ದ ಚೌಕಟ್ಟಲ್ಲಿಟ್ಟು, ನೀವೂ ಪಾಕಿಸ್ತಾನಕ್ಕೇ ಹೋಗಿ ಎಂದು ಹಾರಾಡುವುದು ನಾಚಿಕೆಗೇಡಿನ ಸಂಗತಿ.

ಪರಿಕರ್ ಮಾತಿಗೂ ಅದರದ್ದೇ ಆದ ಚೌಕಟ್ಟಿದೆ. ಅರುಣ್ ಜೇಟ್ಲಿ ಅವರು ಸಾರ್ಕ್ ಸಂಬಂಧದ ಸಭೆಗೆ ಪಾಕಿಸ್ತಾನಕ್ಕೆ ಹೋಗುವುದೋ ಬಿಡುವುದೋ ಎಂಬ ಚರ್ಚೆ ಇದ್ದ ಸಂದರ್ಭದಲ್ಲಿ ಹೊರಬಿದ್ದ ಮಾತುಗಳವು. ಆಗಷ್ಟೇ ರಾಜನಾಥ ಸಿಂಗರು ಸಾರ್ಕ್ ಸಭೆಯಲ್ಲಿ ಭಾಗವಹಿಸಿ, ಇವರ ಭಾಷಮಗಳು ಬಿತ್ತರವಾಗದೇ ಮುಖ ಊದಿಸಿಕೊಂಡುಬಂದಿದ್ದರು. ಅಂಥ ಕಹಿ ನೆನಪಲ್ಲಿ ‘ಪಾಕಿಸ್ತಾನಕ್ಕೆ ಹೋಗುವುದು ನರಕಕ್ಕೆ ಹೋದಂತೆ ಬಿಡಿ’ ಅಂತ ಪರಿಕರ್ ಹೇಳಿದ್ದು. ಅದನ್ನು ಆ ಚೌಕಟ್ಟಿನಲ್ಲೇ ನೋಡಬೇಕು.

ಹಾಗಲ್ಲದೇ ಇದನ್ನು ಪರಿಕರ್ ವರ್ಸಸ್ ರಮ್ಯರ ದೇಶಭಕ್ತಿ ಚೌಕಟ್ಟಲ್ಲಿ ನೋಡುವುದು ಸಂವೇದನೆ- ವಿವೇಚನೆಗಳನ್ನು ಕಳಚಿಟ್ಟು ಕೇವಲ ಆಕ್ರೋಶದಿಂದ ಉರುಳುರುಳಿ ಬೀಳುವುದಕ್ಕೆ ಕಾತರಿಸಿಕೊಂಡಿರುವವರ ಕ್ಷುಲ್ಲಕತನ ಮಾತ್ರ.

ಪಾಕಿಸ್ತಾನವನ್ನು ವಿರೋಧಿಸುವುದಕ್ಕೆ ಅದರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಇರುವುದಕ್ಕೆ ಸಾಕಷ್ಟು ಕಾರಣಗಳಿವೆ. ಮೊದಲನೇ ಕಾರಣವೇ ಅದು ಧರ್ಮದ ಆಧಾರದಲ್ಲಿ ರೂಪುಗೊಂಡ ದೇಶ. ಎಂಜೆ ಅಕ್ಬರ್ ಮಾತುಗಳಲ್ಲಿ ಹೇಳುವುದಾದರೆ, ‘ಮೊದಲ ಇಸ್ಲಾಮಿಕ್ ಸ್ಟೇಟ್ ಸಿರಿಯಾದಲ್ಲಿ ರೂಪುಗೊಂಡಿದೆ ಎಂಬುದು ನಮ್ಮ ತಪ್ಪು ಕಲ್ಪನೆ. 1947ರಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ಕೇಳಿ ಪಾಕಿಸ್ತಾನದ ಜನ್ಮವಾದಾಗಲೇ ಮೊದಲ ಇಸ್ಲಾಮಿಕ್ ಸ್ಟೇಟ್ ಹುಟ್ಟಿಕೊಂಡಿತು.’ ಮತೀಯ ಆಧಾರದಲ್ಲೇ ಹುಟ್ಟಿಕೊಂಡ ನಂತರ ಅಲ್ಲಿನ ಉಗ್ರವಾದ, ಜಗತ್ತಿಗೆ ಅದು ಒಡ್ಡಿರುವ ಆತಂಕ ಎಲ್ಲವೂ ನಿರೀಕ್ಷಿತ ಬಳುವಳಿಗಳೇ.

ಇಷ್ಟಾಗಿ, ಯಾವುದೇ ದೇಶವನ್ನು ಅದರ ಇಡಿ ಇಡೀ ಸಮುದಾಯದೊಂದಿಗೆ ಸೈತಾನ ಎಂದು ಹೇಳಲಾಗುವುದಿಲ್ಲ. ಹಾಗೆ ಯೋಚಿಸುವುದೇ ಹಿಟ್ಲರನ ರೀತಿಯಲ್ಲಿ ‘ಫೈನಲ್ ಸೊಲ್ಯೂಷನ್’ ಕಡೆಗೆ ಪ್ರೇರೇಪಿಸುತ್ತದೆ ಹಾಗೂ ಅದು ಅತ್ಯಂತ ಅಪಾಯಕಾರಿ.

ಖಂಡಿತ ರಮ್ಯ ಅವರನ್ನು ಪ್ರಶ್ನಿಸಬೇಕು. ಆದರೆ ಪ್ರತಿಕ್ರಿಯೆಯ ಮಟ್ಟ- ನೀನೂ ಪಾಕಿಸ್ತಾನಕ್ಕೆ ಹೋಗು, ಬುರ್ಖಾ ತೊಡು, ಮಕ್ಕಳನ್ನು ಹಡೆದುಕೊಡು ಎನ್ನುವುದಕ್ಕೆ ಇಳಿದರೆ ಅಲ್ಲಿ ಯಾವ ದೇಶಕಾಳಜಿ, ದೇಶಪ್ರೇಮವೂ ಕಾಣುವುದಿಲ್ಲ. ಹೀಗೆಲ್ಲ ಆರ್ಭಟಿಸುವವರ ಕೈಯಲ್ಲಿ ದೇಶ ಸಿಕ್ಕರೆ ಭಾರತವೂ ಪಾಕಿಸ್ತಾನವಾಗುವುದರಲ್ಲಿ ಅನುಮಾನವಿಲ್ಲ. ಶಾಂತಚಿತ್ತವಾಗಿ ಕೇಳಬೇಕಿರುವ ಪ್ರಶ್ನೆಗಳು- ‘ಪಾಕಿಸ್ತಾನದ ಚೆಂದದ ಜನರಿಗೆ ಭಾರತ ದ್ವೇಷವನ್ನು ಪ್ರಾಥಮಿಕ ಶಾಲೆಯ ಪಠ್ಯಗಳಲ್ಲೇ ಕಲಿಸಲಾಗುತ್ತಿದೆಯಲ್ಲ… ಈ ಬಗ್ಗೆ ಯುವ ಸಂಸದರ ಸಭೆಯೇನಾದರೂ ಚಿಂತಿಸಿತೇ? ರಮ್ಯ ಅವರ ಬಳಿ ಇದಕ್ಕೆ ಉತ್ತರಗಳಿವೆಯೇ? ಪಾಕಿಸ್ತಾನ ಎಷ್ಟರಮಟ್ಟಿಗೆ ಸ್ವರ್ಗ? ನಾಲ್ಕು ದಿನದ ಕಾರ್ಯಕ್ರಮದಲ್ಲಿ ಚಹಾ-ತಿಂಡಿ-ಭೋಜನ ಕೊಡುವಷ್ಟರಮಟ್ಟಿಗೆ ಸ್ವರ್ಗವೋ ಅಥವಾ ಸಾಮಾನ್ಯ ಸ್ಥಿತಿಯಲ್ಲೂ ಕಾಫಿರರರಿಗೆ ಅಲ್ಲಿ ನೆಮ್ಮದಿಯ ಬದುಕಿದೆಯೋ…’ ಇವೆಲ್ಲ ಪ್ರಶ್ನೆಗಳು.

ವಾಸ್ತವ ಏನೆಂದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಾಕಿಸ್ತಾನದೊಂದಿಗೆ ಇರಲೇಬೇಕು ಸಂವಾದ. ಆಗಿನ ಕಾಲಕ್ಕೆ ಕಟ್ಟರ್ ವಾದಿಗಳೆನಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಈ ಪ್ರಶ್ನೆ ಎದ್ದಿತ್ತು. ಅದಕ್ಕೆ ಅವತ್ತಿನ ಎನ್ಡಿಎ ಸರ್ಕಾರದಿಂದ – ಮಿತ್ರರನ್ನು ಬದಲಿಸಬಹುದು, ನೆರೆಹೊರೆಯನ್ನಲ್ಲ ಎಂಬ ಉತ್ತರ ಬಂದಿತ್ತು. ಹೀಗಾಗಿ ಪಾಕಿಸ್ತಾನವನ್ನು ಸಾರಾಸಗಟಾಗಿ ವಿರೋಧಿಸುವುದೇ ದೇಶಪ್ರೇಮವಲ್ಲ. ಹಾಗೆಂದು ಪಾಕಿಸ್ತಾನದ ಎಲ್ಲ ವಾಸ್ತವಗಳಿಗೆ ಕುರುಡಾಗಿ ತಾವು ವಿಶ್ವಮಾನವರೆಂದು ಪೋಸು ಕೊಡುವುದೂ ದ್ವೇಷ ಮಾಡಿ ಲೈಕು ಗಿಟ್ಟಿಸಿದಂತೆ ಇನ್ನೊಂದು ಟೊಳ್ಳುತನದಲ್ಲಿ ಲೈಕು ಗಿಟ್ಟಿಸುವ ವಿಧಾನವಷ್ಟೆ.

ಪಾಕಿಸ್ತಾನದ ಜತೆ ವ್ಯವಹರಿಸುವುದೆಂದರೆ ಅವರೊಂದಿಗೆ ಶರಬತ್ತೂ ಕುಡಿಯಬೇಕಾಗುತ್ತದೆ, ಬಲೊಚಿಸ್ತಾನದಲ್ಲಿ ಬಿಸಿಯನ್ನೂ ಮುಟ್ಟಿಸಬೇಕಾಗುತ್ತದೆ, ಬಿರಿಯಾನಿ ತಿಂತೀರಾ ಅಂತಲೂ ಅಪರೂಪಕ್ಕೆ ಕೇಳಬೇಕಾಗುತ್ತದೆ, ಬಂದೂಕನ್ನೂ ಸಿದ್ಧವಾಗಿರಿಸಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಸರ್ಕಾರ ಅದನ್ನೇ ಮಾಡುತ್ತಿದೆ.

ಈ ದೇಶದಲ್ಲಿ ಸೆಕ್ಯುಲರಿಸಂ ಅಂತಂದ್ರೆ ಧರ್ಮ ನಿರಪೇಕ್ಷತೆ ಎಂಬುದರ ಬದಲಾಗಿ ಇಫ್ತಾರ್ ಕೂಟದಲ್ಲಿ ಬಿಳಿ ಟೊಪ್ಪಿ ಹಾಕಿಕೊಂಡು ಬಿರ್ಯಾನಿ ತಿನ್ನೋದು ಎಂಬುದಾಗಿದೆ. ಈಗ ರಾಷ್ಟ್ರೀಯವಾದ ಎನ್ನುವುದನ್ನು ಸಹ ಎದುರಾಳಿಯ ದೇಶಭಕ್ತಿ ಪ್ರಶ್ನಿಸಿ ಬಣ್ಣ ಬಣ್ಣವಾಗಿ ನಿಂದಿಸಿ ಖುಷಿಪಡುವುದು ಎಂಬಮಟ್ಟಕ್ಕೆ ತೆಗೆದುಕೊಂಡುಹೋಗುವುದಾದರೆ ಟೊಳ್ಳು ಕಾಮಿಡಿ ಪೀಸುಗಳೆಲ್ಲ ಜನನಾಯಕರಾಗಿಬಿಡುತ್ತಾರೆ, ಎಚ್ಚರ!

Leave a Reply