ರಿಯೋನಲ್ಲಿ ಸತ್ತು ಬದುಕಿದ ಜೈಶಾ, ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಪ್ರಕಟ, ಬೇಟಿ ಬಚಾವೊ ಎಂದ ದೀಪ… ಇಂದು ಕ್ರೀಡೆಯೇ ಸುದ್ದಿಯಾದ ದಿನ

ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾದರೂ ಆಕರ್ಷಕ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಜಿಮ್ನಾಸ್ಟರ್ ದೀಪ ಕರ್ಮಕಾರ್ ಸೋಮವಾರ ತಮ್ಮ ತವರು ತ್ರಿಪುರಾಗೆ ಆಗಮಿಸಿದ ಕ್ಷಣ.

ಡಿಜಿಟಲ್ ಕನ್ನಡ ಟೀಮ್:

ರಿಯೋನಲ್ಲಿ ಜೈಶಾಳ ಶೋಚನೀಯ ಪರಿಸ್ಥಿತಿ

ರಿಯೋ ಒಲಿಂಪಿಕ್ಸ್ ಮುಕ್ತಾಯಗೊಂಡಿದೆ… ಪದಕ ಗೆದ್ದ ಪಿ.ವಿ ಸಿಂಧು ಹಾಗೂ ಕ್ರೀಡಾಕೂಟದಲ್ಲಿ ಗಮನ ಸೆಳೆದ ದೀಪ ಕರ್ಮಕಾರ್ ತವರಿಗೆ ಮರಳಿದ ಕ್ಷಣಗಳು ಸೋಮವಾರ ಹೆಚ್ಚು ಸುದ್ದಿ ಮಾಡಿದವು. ಈ ಎಲ್ಲದರ ನಡುವೆ ಭಾರತದ ಮಹಿಳಾ ಮ್ಯಾರಥಾನ್ ಓಟಗಾರ್ತಿ ಒ.ಪಿ ಜೈಶಾ ರಿಯೋನಲ್ಲಿ ಎದುರಿಸಿದ ಶೋಚನೀಯ ಪರಿಸ್ಥಿತಿಯ ಕಥೆ ನಮ್ಮೆಲ್ಲರ ಚಿತ್ತ ಕೆಡಿಸುವಂತಹದು. ಕಾರಣ, ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಜೈಶಾಳಿಗೆ ಓಟದ ವೇಳೆ ಅಗತ್ಯವಾಗಿ ನೀರು ಪೂರೈಸಲು ಭಾರತೀಯ ಅಧಿಕಾರಿಗಳು ವಿಫಲರಾಗಿದ್ದರು.

ಹೌದು… ಇಂತಹ ಒಂದು ನಿರಾಸೆಯ ಅಂಶ ಜೈಶಾ ಬಾಯಿಂದಲೇ ಹೊರಬಂದಿದೆ. ತನಗೆ ಎದುರಾದ ಸಮಸ್ಯೆ ಏನು ಅಂತಾ ಜೈಶಾ ಅವರೇ ವಿವರಿಸಿರೋದು ಹೀಗೆ…

‘ಓಟದ ವೇಳೆ ತಾಪಮಾನ ಹೆಚ್ಚಾಗಿತ್ತು. ಇದು ಸುದೀರ್ಘ ಓಟವಾಗಿದ್ದರಿಂದ ಪ್ರತಿ ಕಿ.ಮೀ.ಗೂ ನೀರಿನ ವ್ಯವಸ್ಥೆ ಕಲ್ಪಿಸುವುದು ಸಾಮಾನ್ಯ. ಆದರೆ ಇಲ್ಲಿ ಕ್ರೀಡಾಕೂಟ ಆಯೋಜಕರು 8 ಕಿ.ಮೀಗೆ ನೀರಿನ ವ್ಯವಸ್ಥೆ ಮಾಡಿದ್ದರು. ಸಾಮಾನ್ಯವಾಗಿ ಪ್ರತಿ ಅಥ್ಲೀಟ್ ಗಳಿಗೆ ಅವರ ದೇಶದ ತಾಂತ್ರಿಕ ತಂಡ ನಿಗದಿತ ದೂರದಲ್ಲಿ ಸ್ಟಾಲ್ ಗಳನ್ನು ನಿರ್ಮಿಸಿಕೊಂಡು ಓಟಗಾರ್ತಿಯರಿಗೆ ಅಗತ್ಯ ಸಂದರ್ಭದಲ್ಲಿ ನೀರು ಹಾಗೂ ಅಗತ್ಯ ಆಹಾರ ಪೂರೈಸುತ್ತವೆ. ಓಟದ ವೇಳೆ ಭಾರತದ ಸ್ಟಾಲ್ ಗಳು ಸಿಕ್ಕಿತಾದರೂ ಅಲ್ಲಿ ನೀರಾಗಲಿ ಆಹಾರವಾಗಲಿ ಇರಲಿಲ್ಲ. ಅಷ್ಟೇ ಅಲ್ಲದೆ, ಬೇರೆ ದೇಶಗಳ ಸ್ಪರ್ಧಿಗಳಿಗೆ ಅಭಿಮಾನಿಗಳು ರಾಷ್ಟ್ರಧ್ವಜ ಬೀಸುತ್ತಾ ಪ್ರೋತ್ಸಾಹಿಸುತ್ತಿದ್ದರು. ಆದರೆ ಭಾರತದ ಒಂದೇ ಒಂದು ಧ್ವಜವೂ ಕಾಣಿಸಲಿಲ್ಲ. ಓಟ ಮುಕ್ತಾಯವಾದ ನಂತರ ನನ್ನ ಪರಿಸ್ಥಿತಿ ಸತ್ತು ಹೋಗುವಂತಿತ್ತು. ಅಗತ್ಯವಾಗಿ ನೀರು ನೀಡಿದ್ದರೆ ಇನ್ನು ಉತ್ತಮ ಪ್ರದರ್ಶನ ನೀಡುತ್ತಿದ್ದೆ. ಓಟ ಮುಕ್ತಾಯಗೊಂಡ ನಂತರ ಪ್ರಜ್ಞೆ ಕಳೆದುಕೊಂಡ ಪರಿಸ್ಥಿತಿ ಎದುರಾಗಿತ್ತು. ಇದಾದ ಮೂರು ಗಂಟೆಗಳ ನಂತರ ಅಧಿಕಾರಿಗಳು ನನ್ನ ನೋಡಲು ಆರೋಗ್ಯ ಕೇಂದ್ರಕ್ಕೆ ಬಂದರು. ಈಗ ನನಗೆ ಎರಡನೇ ಜನ್ಮ ಸಿಕ್ಕಿದಂತಾಗಿದೆ.’

ಕ್ರೀಡಾಕೂಟದ ನಿಯಮದ ಪ್ರಕಾರ ಬೇರೆ ಸ್ಪರ್ಧಿಗಳ ತಾಂತ್ರಿಕ ತಂಡದಿಂದ ಇತರೆ ಸ್ಪರ್ಧಿಗಳು ಏನನ್ನೂ ಪಡೆಯುವಂತಿಲ್ಲ. ಹೀಗಾಗಿ ಜೈಶಾ 8 ಕಿ.ಮೀ. ದೂರದಲ್ಲಿದ್ದ ಕ್ರೀಡಾಕೂಟ ಆಯೋಜಕರಿಂದಲೇ ನೀರನ್ನು ಪಡೆಯಬೇಕಾಯಿತು. ಇದರೊಂದಿಗೆ ಭಾರತೀಯ ಅಧಿಕಾರಿಗಳ ವೈಫಲ್ಯ ಮತ್ತೊಮ್ಮೆ ತಲೆತಗ್ಗಿಸುವಂತಹದ್ದಾಗಿದೆ.

ಸಿಂಧು, ಸಾಕ್ಷಿ, ಜಿತು, ದೀಪಾಗೆ ಖೇಲ್ ರತ್ನ

ಭಾರತದ ವಾರ್ಷಿಕ ಕ್ರೀಡಾ ಪುರಸ್ಕಾರಗಳ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟರ್ ದೀಪ ಕರ್ಮಕಾರ್ ಮತ್ತು ಶೂಟರ್ ಜಿತು ರೈಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ.

ಇದೇ ವೇಳೆ ಆಟಗಾರರಿಗೆ ಅರ್ಜುನ ಪ್ರಶಸ್ತಿ, ಕೋಚ್ ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯೂ ಪ್ರಕಟವಾಗಿದ್ದು, ಈ ಪುರಸ್ಕಾರಕ್ಕೆ ಭಾಜನರಾದವರ ಹೆಸರುಗಳು ಇಲ್ಲಿವೆ…

ಅರ್ಜುನ ಪ್ರಶಸ್ತಿ: ರಜತ್ ಚೌಹಾಣ್ (ಆರ್ಚರಿ), ಲಲಿತಾ ಬಬರ್ (ಅಥ್ಲೆಟಿಕ್ಸ್), ಸೌರವ್ ಕೊಠಾರಿ (ಸ್ನೂಕರ್), ಶಿವಥಾಪ (ಬಾಕ್ಸಿಂಗ್), ಸುಬ್ರತಾ ಪೌಲ್ (ಫುಟ್ಬಾಲ್), ಸೌಮ್ಯಜಿತ್ ಘೋಷ್ (ಟೇಬಲ್ ಟೆನಿಸ್), ವಿನೇಶ್ ಫೊಗತ್ (ಕುಸ್ತಿ), ಅಮಿತ್ ಕುಮಾರ್ (ಕುಸ್ತಿ), ಸಂದೀಪ್ ಸಿಂಗ್ ಮಾನ್ (ಪ್ಯಾರಾ ಅಥ್ಲೀಟ್), ವಿರೇಂದರ್ ಸಿಂಗ್ (ದಿವ್ಯಾಂಗ ಕುಸ್ತಿಪಟು), ಅಜಿಂಕ್ಯ ರಹಾನೆ (ಕ್ರಿಕೆಟ್), ರಾಣಿ ರಾಂಪಾಲ್ (ಹಾಕಿ), ವಿ.ಆರ್.ರಘುನಾಥ್ (ಹಾಕಿ), ಗುರುಪ್ರೀತ್ ಸಿಂಗ್ (ಶೂಟಿಂಗ್), ಅಪೂರ್ವಿ ಚಾಂಡೆಲಾ (ಶೂಟಿಂಗ್).

ದ್ರೋಣಾಚಾರ್ಯ ಪ್ರಶಸ್ತಿ: ರಾಜ್ ಕುಮಾರ್ ಶರ್ಮಾ (ಕ್ರಿಕೆಟ್ ), ಎಸ್.ಪ್ರದೀಪ್ ಕುಮಾರ್ (ಈಜು), ನಾಗಪುರಿ ರಮೇಶ್ (ಅಥ್ಲೆಟಿಕ್ಸ್), ಸಾಗರ್ ಮಾಲ್ ದಯಾಳ್ (ಬಾಕ್ಸಿಂಗ್), ಬಿಶ್ವೇಶ್ವರ್ ನಂದಿ (ಜಿಮ್ನಾಸ್ಟಿಕ್), ಮಹಾಬೀರ್ ಸಿಂಗ್ (ಕುಸ್ತಿ).

ಧ್ಯಾನ್ ಚಂದ್ ಪ್ರಶಸ್ತಿ: ಸತ್ತಿ ಗೀತಾ (ಅಥ್ಲೆಟಿಕ್ಸ್), ರಾಜೇಶ್ ಪ್ರಹಲ್ಲಾದ್ ಶಿಳ್ಕೆ (ರೋಯಿಂಗ್), ಶಿಲ್ವಾನುಸ್ ದುಂಗ್ (ಹಾಕಿ).

ಇನ್ನುಳಿದಂತೆ ನೀವು ತಿಳಿಯಬೇಕಿರೋಪ್ರಮುಖ ಸುದ್ದಿಸಾಲುಗಳು…

  • ರಿಯೋ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಿಮ್ನಾಸ್ಟರ್ ದೀಪ ಕರ್ಮಕಾರ್ ತಮ್ಮ ತವರು ತ್ರಿಪುರಾಗೆ ಸೋಮವಾರ ಆಗಮಿಸಿದರು. ತವರಿನಲ್ಲಿ ಇವರಿಗೆ ಅದ್ಧೂರಿ ಸ್ವಾಗತ ನೀಡಲಾಯ್ತು. ಈ ವೇಳೆ ಮಾತನಾಡಿದ ಸಾಕ್ಷಿ, ‘ದೇಶದಲ್ಲಿ ಎಲ್ಲರೂ ಹೆಣ್ಣು ಮಕ್ಕಳನ್ನು ರಕ್ಷಿಸಿ ಬೆಳೆಸಿ ಮತ್ತು ಪ್ರೋತ್ಸಾಹಿಸಿ…’ ಎಂದು ಕರೆ ನೀಡಿದರು. ಈ ಮಾತಿನ ಜತೆಗೆ ಅವರು ಹೇಳಿದಿಷ್ಟು: ‘ರಿಯೋಗೆ ತೆರಳುವ ಮುನ್ನ ವಿದೇಶಿ ಕೋಚ್ ಬೇಕೆ? ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಕೇಳಿತು. ನನಗೆ ಕೋಚ್ ಬಿಶ್ವೇಶ್ವರ್ ನಂದಿ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಭಾರತೀಯ ಕೋಚ್ ಗಳು ಅತ್ಯುತ್ತಮರಾಗಿದ್ದಾರೆ. ಪದಕ ಗೆದ್ದ ಸಿಂಧು ಮತ್ತು ಸಾಕ್ಷಿ ಸಹ ಭಾರತೀಯ ಕೋಚ್ ಗಳನ್ನೇ ಹೊಂದಿದ್ದಾರೆ.’
  • ತೆಲಂಗಾಣ ಉಪಮುಖ್ಯಮಂತ್ರಿ ಮೊಹಮದ್ ಅಲಿ ಭಾರತದ ಬ್ಯಾಡ್ಮಿಂಟನ್ ಕೋಚ್ ಪಿ.ಗೋಪಿಚಂದ್ ಅವರಿಗೆ ಅಪಮಾನ ಮಾಡಿದ ವಿವಾದಕ್ಕೆ ಸಿಲುಕಿದ್ದಾರೆ. ಆಗಿದಿಷ್ಟು… ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ ಸಿಂಧು ಹಾಗೂ ಕೋಚ್ ಗೋಪಿ ಸೋಮವಾರ ತವರಿಗೆ ಮರಳಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಅಲಿ, ‘ಸಿಂಧು 2020ರ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲಬೇಕು ಅದಕ್ಕಾಗಿ ಅವರಿಗೆ ಉತ್ತಮ ಕೋಚ್ ನೀಡಲಾಗುವುದು’ ಎಂದರು. ಈ ಮಾತಿನೊಂದಿಗೆ ಅಲಿ ಅವರು ಸಿಂಧು ಕೋಚ್ ಪಿ.ಗೋಪಿಚಂದ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದವು.
  • ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ, ಮಹಿಳಾ ಡಬಲ್ಸ್ ಟೆನಿಸ್ ಶ್ರೇಯಾಂಕದಲ್ಲಿ ಮತ್ತೆ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಸಾನಿಯಾ ಮಿರ್ಜಾ ತಮ್ಮ ಮಾಜಿ ಜತೆಗಾರ್ತಿ ಮಾರ್ಟೀನಾ ಹಿಂಗಿಸ್ ಅವರಿಂದ ಬೇರ್ಪಟ್ಟ ನಂತರ ಬರ್ಬೊವಾ ಸ್ಟ್ರಿಕೊವಾ ಜತೆಗೂಡಿ ಇದೇ ಮೊದಲ ಬಾರಿಗೆ ಆಡಿದ್ದರು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನಲ್ಲಿ ಮಿರ್ಜಾ ಜೋಡಿ 7-5, 6-4 ಸೆಟ್ ಗಳಿಂದ ಹಿಂಗಿಸ್ ಮತ್ತು ವಂಡೆವೆಘೆ ಜೋಡಿ ವಿರುದ್ಧ ಜಯಿಸಿತ್ತು. ಅದರೊಂದಿಗೆ ಸಾನಿಯಾ ಹೊಸ ಜತೆಗಾರ್ತಿಯೊಂದಿಗೆ ಆಡಿದ ಮೊದಲ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
  • ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯ ಕಂಡಿದೆ. ಇದರೊಂದಿಗೆ ಭಾರತ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಸರಣಿ ಗೆಲವಿನ ಅಂತರ ಕಡಿಮೆಯಾದ ಪರಿಣಾಮ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿ ಗೆದ್ದಿದ್ದ ಪಾಕಿಸ್ತಾನ 112 ಅಂಕಗಳೊಂದಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ 110 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

Leave a Reply