ಪಾಸಷ್ಟೇ ಆದವರಿಗೂ ಕೆಪಿಎಸ್ಸೀಲಿ ಅವಕಾಶ, ದಿನೇಶರ ರಮ್ಯ ಸಮರ್ಥನೆ ಮತ್ತು ಎಬಿವಿಪಿ ಖಂಡನೆ, ಟೊರಂಟಿನಲ್ಲಿ ಭಟ್ಟಿ ಇಳಿಸಿದ್ರೆ ಜೈಲು!

ವಿವಾದಿತ ಆಮ್ನೆಸ್ಟಿ ಸಂಸ್ಥೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ರಾಜಭವನ ಚಲೋ ನಡೆಸಿದರು. ನಗರದ ಆನಂದ್‍ರಾವ್ ವೃತ್ತದಿಂದ ಸಾವಿರಾರು ಎಬಿವಿಪಿ ಕಾರ್ಯಕರ್ತರು ರಾಜಭವನ ಚಲೋ ನಡೆಸಲು ಮುಂದಾದಾಗ ಪೊಲೀಸರು ಫ್ರೀಡಂಪಾರ್ಕ್ ಬಳಿ ಅವರನ್ನು ತಡೆದರು. ನಂತರ ಕಾರ್ಯಕರ್ತರು ಮೌರ್ಯ ವೃತ್ತಕ್ಕೆ ಹಿಂದಿರುಗಿ ಪ್ರತಿಭಟನೆ ಮುಂದುರೆಸಿದರು. ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದಿರೆ ನೇತೃತ್ವದಲ್ಲಿ ಕೆಲವರಷ್ಟೇ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.

ಎಬಿವಿಪಿಯ ಪ್ರತಿಭಟನೆಯಲ್ಲಿ ಬಿಜೆಪಿ ನೇತಾರರಾದ ಜಗದೀಶ್ ಶೆಟ್ಟರ್ ಮತ್ತು ಸೋಮಣ್ಣ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಭಾಗವಹಿಸಿದ್ದರು. ಇತ್ತ, ಹಲಸೂರು ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿ, ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿದ ಡಿಸಿಪಿ ಸತೀಶ್ ಕುಮಾರ್ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿತು.

ಜಸ್ಟ್ ಪಾಸಾದವರೂ ಕೆಪಿಎಸ್ಸಿಗೆ ಅರ್ಜಿ ಸಲ್ಲಿಸಲು ಅವಕಾಶ

ಪದವಿ ಪರೀಕ್ಷೆಯಲ್ಲಿ ಕೇವಲ ಪಾಸಾದ ಅಭ್ಯರ್ಥಿಗಳೂ ಕೆಪಿಎಸ್‍ಸಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಷ್ಟೇ ಅಲ್ಲ, ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಮುಖ್ಯ ಪರೀಕ್ಷೆಯಿಂದ ಸಂದರ್ಶನಕ್ಕೆ ಹಾಜರಾಗುವಾಗ ಅನುಸರಿಸುತ್ತಿದ್ದ 1:3 ಅನುಪಾತ 1:5 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಸರ್ಕಾರ ಹಾಗೂ ನಿಗಮ ಮಂಡಳಿಯ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಶೇ.60 ಅಂಕ ಗಳಿಸಿದರೆ ಮಾತ್ರ ಅರ್ಜಿ ಸಲ್ಲಿಸಲು ಇದುವರೆಗೂ ಅವಕಾಶ ಇತ್ತು. ಇದೀಗ ಶೇ.35 ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿದರೂ ಸಾಕಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ನಗರ ಪಟ್ಟಣ ಪ್ರದೇಶ ವಿದ್ಯಾರ್ಥಿಗಳಿಗೆ ಹೆಚ್ಚಿನ ಹುದ್ದೆಗಳು ದೊರೆಯುತ್ತಿಲ್ಲ ಎಂಬ ಉದ್ದೇಶದಿಂದ ಇ ಕ್ರಮ ಕೈಗೊಳ್ಳಲಾಗಿದೆ.

ತಹಸೀಲ್ದಾರ್,  ಉಪ ವಿಭಾಗಾಧಿಕಾರಿ, ಸಬ್ ರಿಜಿಸ್ಟ್ರಾರ್, ಡಿವೈಎಸ್‍ಪಿ, ಇನಿಸ್ಪೆಕ್ಟರ್ ಸೇರಿದಂತೆ ವಿವಿಧ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಸಂದರ್ಶನಕ್ಕೆ ಒಂದು ಹುದ್ದೆಗೆ ಮೂವರಿಗೆ ಅವಕಾಶವಿತ್ತು. ಅದರ ಬದಲಾಗಿ ಈಗ  ಐದು ಅಭ್ಯರ್ಥಿಗಳಿಗೆ ಸಂದರ್ಶನದ ಅವಕಾಶ ದೊರೆಯಲಿದೆ. ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ, ಡಿಪ್ಲೊಮೊ ಹಾಗೂ ಐಟಿಐ ತರಬೇತಿ ಪಡೆದ ವಿದ್ಯಾರ್ಥಿಗಳು ಇನ್ನು ಮುಂದೆ ಲೋಕಸೇವಾ ಆಯೋಗದ ಮೂಲಕ ನಡೆಯುವ ವಿವಿಧ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಕ್ರಮ ಎನ್ನಲಾಗಿದೆ.

ರಮ್ಯ ಅವರನ್ನು ಸಮರ್ಥಿಸಿ ಎಬಿವಿಪಿ ವಿರುದ್ಧ ಹರಿಹಾಯ್ದ ದಿನೇಶ್ ಗುಂಡೂರಾವ್

‘ಪಾಕಿಸ್ತಾನ ನರಕವಲ್ಲ.ಅಲ್ಲಿನ ಜನ ಒಳ್ಳೆಯವರು’ ಎಂದಿರುವ ರಮ್ಯಾ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಾಂಸ್ಕೃತಿಕ ವಿನಿಮಯ ಇದೆ. ಅದರನುಸಾರ ಅಲ್ಲಿಗೆ ಹೋಗಿ ಬಂದ ರಮ್ಯಾ ಅದಕ್ಕೆ ಸೀಮಿತವಾಗಿ ಮಾತನಾಡಿದ್ದಾರೆ ಎಂದ ಅವರು, ಕಾಂಗ್ರೆಸ್ ದೇಶಭಕ್ತಿಯನ್ನು ಬಿಜೆಪಿಯಿಂದ ಕಲಿಯಬೇಕಿಲ್ಲ ಎಂದು ಹರಿಹಾಯ್ದರು.

ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಕರಣವನ್ನೂ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ದಿನೇಶ್ ಗುಂಡೂರಾವ್,  ಪ್ರತಿಭಟನಾ ನಿರತ ಎಬಿವಿಪಿ ಕಾರ್ಯಕರ್ತರ ಕೈಲಿ ಪೆಟ್ರೋಲ್ ಬಾಟಲುಗಳಿದ್ದವಾದ್ದರಿಂದ  ಪೋಲೀಸರು ಲಾಠಿ ಚಾರ್ಜ್ ಮೂಲಕ ಅದನ್ನು ತಡೆಯಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಸಹ ಮಾಧ್ಯಮಗಳಿಗೆ ನೀಡಿರುವ ಸ್ಪಷ್ಟನೆ ಎಂದರೆ- ‘ಆಮ್ನೆಸ್ಟಿ ತಪ್ಪೇ ಮಾಡಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟಿಲ್ಲ, ತನಿಖೆ ನಡೆಯುತ್ತಿದೆ.’

ಟೊರೆಂಟ್ ಡೌನ್ಲೋಡಿಗೆ 3 ವರ್ಷ ಜೈಲಾಗುತ್ತೆ!

ಟೊರೆಂಟ್ ವೆಬ್ ಸೈಟ್ ಗಳನ್ನು ನಿಷೇಧಿಸುವಂತೆ ಅಂತರ್ಜಾಲ ಸೇವಾ ವಿತರಕರಿಗೆ ಸೂಚನೆ ನೀಡಿರುವ ಟೆಲಿಕಮ್ಯುನಿಕೇಷನ್ ಇಲಾಖೆ, ಇನ್ಮುಂದೆ ಈ ವೆಬ್ ಸೈಟ್ ನೋಡಿದವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 3 ಲಕ್ಷ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಹಾಗಂತ ಇದು ಇಲಾಖೆಯಿಂದಲೇ ಹೊರಟಿರುವ ಅಧಿಕೃತ ಸುತ್ತೋಲೆ ಅಲ್ಲ. ಟೊರೆಂಟ್ ಒಳಹೊಕ್ಕಲು ಪ್ರಯತ್ನಿಸಿದವರಿಗೆ ಕಾಣಿಸಿಕೊಂಡ ಸೂಚನೆ ತಾನೇ ನೀಡಿದ್ದು ಎಂದೇನೂ ಇಲಾಖೆ ಸ್ಪಷ್ಟಪಡಿಸಿಲ್ಲ. ನೂತನ ಚಿತ್ರಗಳ ಪೈರಸಿ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಯುವಕರಿಗೆ ವೇದಿಕೆಯಾಗಿ ಖ್ಯಾತಿ ಗಳಿಸಿದ್ದ ಟೊರೆಂಟ್ ಗೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ವೆಬ್ ಸೈಟ್ ಗೆ ಹೋಗುವವರಿಗೆ ಟೆಲಿಕಮ್ಯುನಿಕೇಷನ್ ಇಲಾಖೆಯ ಕಟ್ಟೆಚ್ಚರದ ನೋಟಿಸ್ ಎದುರಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪೈರಸಿ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಯೋಚಿಸುವ ಮುನ್ನಈ ಎಚ್ಚರಿಕೆ ನೆನಪಿಸಿಕೊಳ್ಳುವುದು ಒಳ್ಳೆಯದು. ಕೇವಲ ಟೊರೆಂಟ್ ಅಲ್ಲದೇ ನಿಷೇಧಿತ ಯು ಆರ್ ಎಲ್ ಗಳನ್ನು ಬೇರೆ ಬಗೆಯಲ್ಲಿ ತಂತ್ರ ಉಪಯೋಗಿಸಿ ಒಳಹೋಗುವುದೂ ಅಪರಾಧವಾಗಲಿದೆ.

Leave a Reply