ಪೆಲ್ಲೆಟ್ ಗನ್ ನಿಷೇಧಿಸಿ ಎಂಬ ಒಮರ್ ಅಬ್ದುಲ್ಲಾ ಒತ್ತಾಯಕ್ಕೆ ಅರುಣ್ ಜೇಟ್ಲಿ ಮಾತುಗಳಲ್ಲಿದೆ ಉತ್ತರ

ಡಿಜಿಟಲ್ ಕನ್ನಡ ಟೀಮ್:

‘ಕಳೆದ ಒಂದೂವರೆ ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸಂಪೂರ್ಣ ವಿಫಲವಾಗಿದೆ. ಇದು ಹೀಗೆ ಮುಂದುವರಿದರೆ ಕಾಶ್ಮೀರಿಗರ ಭಾವನೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಪೆಲ್ಲೆಟ್ ಗನ್ ನಿಷೇಧಿಸಿ…’ ಇದು ಒಮರ್ ಅಬ್ದುಲ್ಲಾ ನೇತೃತ್ವದ ರಾಜ್ಯ ವಿಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮಾಡಿಕೊಂಡಿರೋ ಮನವಿ.

ಕಣಿವೆ ರಾಜ್ಯದಲ್ಲಿನ ಈ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ ಅಲ್ಲಿನ ಜನರಲ್ಲಿ ಮನವಿ ಮಾಡಿಕೊಂಡಿತ್ತು. ‘ಜಮ್ಮು ಕಾಶ್ಮೀರದಲ್ಲಿ ಉದ್ಯೋಗ, ಶಿಕ್ಷಣದಂತಹ ಪ್ರಮುಖ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಬದ್ಧ. ಆದರೆ, ಕಾಶ್ಮೀರಿಗರು ಈ ಹಿಂಸಾಚಾರವನ್ನು ಕೈಬಿಡಬೇಕು’ ಎಂಬುದು ಪ್ರಧಾನಿ ಕರೆಯಾಗಿತ್ತು. ಆದರೆ, ಒಮರ್ ಅಬ್ದುಲ್ಲಾ ಅವರ ನೇತೃತ್ವದ ನಿಯೋಗದ ವಾದವೇ ಬೇರೆ.

ಕೇಂದ್ರ ಸರ್ಕಾರ ಈ ಎಲ್ಲ ಬಗೆಯ ಸೌಕರ್ಯಗಳನ್ನು ಘೋಷಿಸಿದರೂ ಇಲ್ಲಿ ಪರಿಸ್ಥಿತಿ ಸುಧಾರಣೆ ಮಾಡಲು ರಾಜಕೀಯ ಮಾತುಕತೆ ನಡೆಯಲೇ ಬೇಕು. ಇದರಿಂದ ರಾಜಕೀಯ ಸಮಸ್ಯೆಗಳು ಬಗೆಹರಿಯಲಿವೆ. ಹೀಗಾಗಿ ಕಣಿವೆ ರಾಜ್ಯದ ಹಿತಾಸಕ್ತಿ ಗುಂಪುಗಳೊಂದಿಗೆ ಸಂಧಾನ ಮಾತುಕತೆ ನಡೆಯಬೇಕು. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಇನ್ನು ತಡ ಮಾಡದೇ ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಬೇಕು. ಇಲ್ಲವಾದರೆ ರಾಜ್ಯದ ಯುವಕರು ದೇಶದ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಗಳಿವೆ… ಎಂಬುದು ಕಣಿವೆ ರಾಜ್ಯದ ನಿಯೋಗದ ವಾದ.

ಪ್ರಧಾನಿಯೊಂದಿಗೆ ಸಭೆ ಮುಗಿಸಿ ಹೊರಬಂದ ಎನ್ ಸಿ ಮತ್ತು ಕಾಂಗ್ರೆಸ್ ನಾಯಕರು, ‘ಅಭಿವೃದ್ಧಿ ಮಾತ್ರವೇ ಕಾಶ್ಮೀರದ ಸಮಸ್ಯೆ ಬಗೆಹರಿಸುವುದಿಲ್ಲ, ರಾಜಕೀಯ ಮಾತುಕತೆಯೂ ಬೇಕು ಎಂಬುದನ್ನು ಪ್ರಧಾನಿ ಒಪ್ಪಿದ್ದಾರೆ’ ಎಂದಿದ್ದರಾದರೂ ಅದರ ಸ್ವರೂಪ ಏನು ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಏಕೆಂದರೆ ರಾಜಕೀಯ ಮಾತುಕತೆ ಎಂದರೆ ಯಾರ ಜೊತೆ? ಪಿಡಿಪಿ ಮತ್ತು ಎನ್ ಸಿಗಳ ಜತೆ ರಾಜಕೀಯ ಮಾತುಕತೆ ಇದ್ದದ್ದೇ. ಆದರೆ, ಪ್ರತ್ಯೇಕತಾವಾದಿಗಳ ಜತೆ- ಹುರಿಯತ್ ಧುರೀಣರ ಜತೆ ಮೋದಿ ಸರ್ಕಾರ ಮಾತನಾಡುವ ಸಾಧ್ಯತೆ ಕ್ಷೀಣವೇ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಆಡಿದ ಮಾತುಗಳು ಸರ್ಕಾರದ ನಿಲುವನ್ನು ಸ್ಪಷ್ಟವಾಗಿಸಿವೆ. ಅವರ ಮಾತುಗಳು ಹೀಗಿದ್ದವು…

‘ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿ ಗಂಭೀರವಾದುದು ಎಂಬುದನ್ನು ಒಪ್ಪುತ್ತೇವೆ. ಆದರೆ, ಕಾಶ್ಮೀರದಲ್ಲಿ ಸಾವಿರಾರು ಮಂದಿ ಕಲ್ಲು ತೂರಾಟ ಮಾಡುತ್ತಾ ಪೋಲೀಸ್ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದರೆ, ಸಮ್ಮನೆ ಕೂರಲು ಸಾಧ್ಯವಿಲ್ಲ. ಕಲ್ಲು ತೂರಾಟ ಮಾಡುತ್ತಿರುವವರು ಸತ್ಯಾಗ್ರಹಿಗಳಲ್ಲ, ಅವರು ತೀವ್ರವಾದಿಗಳು. ರಾಜ್ಯದಲ್ಲಿ ವಿನಾ ಕಾರಣ ಹಿಂಸಾಚಾರ ನಡೆಸುತ್ತಿರುವವರ ಜತೆ ಸರ್ಕಾರ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಾಕಷ್ಟು ಯುದ್ಧ ಹಾಗೂ ಹಿಂಸಾಚಾರಗಳನ್ನು ಎದುರಿಸಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಅಭಿವೃದ್ಧಿಯ ಅಗತ್ಯವಿದೆ. ಆದರೆ ಕಳೆದ 60 ವರ್ಷಗಳಲ್ಲಿ ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಕಾಂಗ್ರೆಸ್ ಸರ್ಕಾರಗಳು ಅಭಿವೃದ್ಧಿ ಎಂಬುದನ್ನು ಈ ರಾಜ್ಯಕ್ಕೆ ನೀಡಿಯೇ ಇಲ್ಲ. ಹೀಗಾಗಿ ಕೇಂದ್ರ ಈ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ರೀತಿಯಲ್ಲೂ ಬದ್ಧವಾಗಿದೆ.’

ಒಟ್ಟಿನಲ್ಲಿ ಒಮರ್ ಅಬ್ದುಲ್ಲಾ ಅವರ ಮನವಿಗೆ ಅರುಣ್ ಜೇಟ್ಲಿ ಅವರ ಮಾತುಗಳಲ್ಲಿ ಉತ್ತರವಿರುವುದರಲ್ಲಿ ಸಂದೇಹವೇ ಇಲ್ಲ.

Leave a Reply