‘ಸಿಂಧುವಿನಲ್ಲಿ ಇನ್ನೂ ಸಾಧಿಸುವ ಸಾಮರ್ಥ್ಯವಿದೆ, ಇದು ಟೀಮ್ವರ್ಕ್’ ಗೋಪಿಚಂದ್ ಮಾತುಗಳಲ್ಲಿ ಮತ್ತೆ ಮಿನುಗಿದ ವ್ಯಕ್ತಿತ್ವ

ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಸೋಮವಾರ ಭಾರತಕ್ಕೆ ಮರಳಿದ್ದು ಹೈದರಾಬಾದ್ ನಲ್ಲಿ ನಡೆದ ಮೆರವಣಿಗೆಯಲ್ಲಿ ತಾನು ಗೆದ್ದ ಬೆಳ್ಳಿ ಪದಕವನ್ನು ಅಭಿಮಾನಿಗಳಿಗೆ ತೋರಿದರು. ಈ ವೇಳೆ ಸಿಂಧುಗೆ ಸಾಥ್ ನೀಡಿದ ಕೋಚ್ ಪಿ.ಗೋಪಿಚಂದ್. (ಟ್ವಿಟರ್ ಫೋಟೊ)

ಡಿಜಿಟಲ್ ಕನ್ನಡ ಟೀಮ್:

‘ಪಿ.ವಿ ಸಿಂಧುವಿನ ಈವರೆಗಿನ ಪ್ರದರ್ಶನ ಕೇವಲ ಒಂದು ತುಣಕನ್ನು ಮಾತ್ರ ನೋಡಿದ್ದೇವೆ. ಆಕೆಯಿಂದ ಹೊರಹೊಮ್ಮಬೇಕಿರುವ ಸಾಮರ್ಥ್ಯ ಸಾಕಷ್ಟು ಬಾಕಿ ಇದೆ…’ ಇದು ರಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಸಿಂಧು ಕುರಿತಂತೆ ಕೋಚ್ ಪಿ.ಗೋಪಿಚಂದ್ ಆಡಿದ ಮಾತುಗಳು…

ರಿಯೋ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪಯಣ ಮುಕ್ತಾಯಗೊಳಿಸಿ ಸಿಂಧು ಸೋಮವಾರ ತವರಿಗೆ ಆಗಮಿಸಿದ್ರು. ಸಾವಿರಾರು ಅಭಿಮಾನಿಗಳು… ತೆರೆದ ವಾಹನದಲ್ಲಿ ಮೆರವಣಿಗೆ… ಗಚ್ಚಿಬೊಲಿ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದಿಂದ ಸನ್ಮಾನ ಕಾರ್ಯಕ್ರಮ ಆಯೋಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ… ಇವು ಸಿಂಧು ಹಾಗೂ ಗೋಪಿಚಂದ್ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತ.

ಒಲಿಂಪಿಕ್ಸ್ ಐತಿಹಾಸಿಕ ಸಾಧನೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಸುದ್ದಿಗಾರರೊಂದಿಗೆ ನಡೆದ ಚರ್ಚೆಯಲ್ಲಿ ಈ ಗುರು-ಶಿಷ್ಯೆ ತಮ್ಮ ಅನುಭವ, ಮುಂದಿನ ಗುರಿಗಳ ಬಗ್ಗೆ ಮಾಹಿತಿ ಹಂಚಿಕೊಂಡ ಪರಿ ಹೀಗಿದೆ…

‘ಸಿಂಧು ಇನ್ನು ಚಿಕ್ಕ ವಯಸ್ಸಿನವಳು. ಆಕೆಯ ನಿಜವಾದ ಸಾಮರ್ಥ್ಯ ಇನ್ನಷ್ಟೇ ಹೊರಹೊಮ್ಮಬೇಕಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ಕಷ್ಟ. ಆದರೆ ಆಕೆಯ ಬಳಿ ಸಾಕಷ್ಟು ಕಾಲಾವಕಾಶವಿದೆ. ಮುಂದಿನ ದಿನಗಳಲ್ಲಿ ಆಕೆ ಖಂಡಿತವಾಗಿಯೂ ಮತ್ತಷ್ಟು ಯಶಸ್ಸಿನ ಶಿಖರ ಏರಳಿದ್ದಾಳೆ. ಆಕೆ ಎಂದಿಗೂ ತರಬೇತಿಗೆ ಹಾಜರಾಗಲು ಹಿಂದೇಟು ಹಾಕಲಿಲ್ಲ. ಆಕೆಯ ಪರಿಶ್ರಮ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಈಕೆ ತನ್ನ ನಿಜವಾದ ಸಾಮರ್ಥ್ಯದ ಬಗ್ಗೆ ಇನ್ನಷ್ಟೇ ಅರಿಯಬೇಕಿದ್ದು, ಅದು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ’ ಎಂಬುದು ಸಿಂಧುವಿನ ಸಾಮರ್ಥ್ಯದ ಕುರಿತ ಪ್ರಶ್ನೆಗೆ ಗೋಪಿಚಂದ್ ಅವರ ಉತ್ತರ.

ಇನ್ನು ಸರ್ಕಾರದ ಕೊಡುಗೆಯ ಬಗ್ಗೆ ಬಂದ ಪ್ರಶ್ನೆಗೆ ಗೋಪಿ ನೀಡಿದ ಸಮಚಿತ್ತ ಉತ್ತರ ಇದು… ‘ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಅಪಾರ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿದೆ. ದೇಶದ ಪ್ರಮುಖ ಕ್ರೀಡಾಪಟುಗಳು ಸರ್ಕಾರದ ಈ ಪ್ರಯೋಜನವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮತ್ತೆ ಕೆಲವು ಅಂಶಗಳ ಬಗ್ಗೆ ಗಮನ ಹರಿಸಬೇಕಿದ್ದು, ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ. ಹೀಗಾಗಿ ಅಗತ್ಯ ಕಡೆಗಳಲ್ಲಿ ಸರ್ಕಾರ ಮತ್ತಷ್ಟು ಪ್ರೋತ್ಸಾಹ ನೀಡಬೇಕಿದೆ.’

ಇನ್ನು ತಮ್ಮ ನಿವೃತ್ತಿ ಬಗ್ಗೆ ಕೇಳಿದಾಗ ಮಂದಹಾಸದಿಂದಲೇ ಗೋಪಿ ಉತ್ತರ ಹೊರಬಂದಿದ್ದು ಹೀಗೆ… ‘ನಾನು ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆದ್ದಾಗಲೇ ನಿವೃತ್ತಿಯಾಗೋದಾಗಿ ಭಾವಿಸಿದೆ. ನಂತರದ ದಿನಗಳಲ್ಲಿ ಅಕಾಡೆಮಿ ಶುರು ಮಾಡಿದೆ. ಆಗ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ನಂತರ ನಿವೃತ್ತಿ ಪಡೆದರಾಯ್ತು ಎಂದುಕೊಂಡೆ. ಈ ಬಾರಿಯೂ ಒಲಿಂಪಿಕ್ಸ್ ಗೂ ಮುನ್ನ ನೀವು ನಿವೃತ್ತಿ ಬಗ್ಗೆ ಪ್ರಶ್ನೆ ಕೇಳಿದ್ದರೆ, ಇಲ್ಲಿ ಪದಕ ಗೆದ್ದ ನಂತರ ನಿವೃತ್ತಿ ಪಡೆಯುತ್ತೇನೆ ಎಂಬ ಉತ್ತರ ನನ್ನಿಂದ ಬರಬಹುದಿತ್ತು. ಈಗ ಹಾಗೆ ಅನಿಸುತ್ತಿಲ್ಲ. ಇದು ಮುಂದುವರಿಯುತ್ತಿರುವ ಪ್ರಕ್ರಿಯೆ.’

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಗೋಪಿಚಂದ್ ಅವರನ್ನೇ ಹೆಚ್ಚು ಪ್ರಶ್ನೆ ಕೇಳಿ ಅವರ ಸಾಧನೆಗೆ ಪ್ರಾಶಸ್ತ್ಯ ನೀಡಿದರೂ, ಗೋಪಿಚಂದ್ ತಮಗೆ ಪ್ರೋತ್ಸಾಹ, ಬೆಂಬಲ ನೀಡಿದವರಿಗೆ ಧನ್ಯವಾದ ಹೋಳೋದನ್ನ ಮರೆಯಲಿಲ್ಲ. ಈ ಸಾಧನೆಯ ಹಿಂದೆ ಪೋಷಕರ ಪಾತ್ರವನ್ನೂ ಸ್ಮರಿಸಿದರು. ‘ನಾನು ಬೆಳಗಿನ ಜಾವ 4 ಗಂಟೆಗೆ ತರಬೇತಿ ಆರಂಭಿಸಿದರೂ ಬರಲು ಸಿದ್ಧವಾಗಿದ್ದರು. ಅಲ್ಲದೆ 7 ಗಂಟೆಗೆ ಆರಂಭಿಸಿದರೂ ಅಷ್ಟೇ ಉತ್ಸಾಹದಿಂದ ಬರುತ್ತಿದ್ದರು. ಎಂದಿಗೂ ಯಾವುದೇ ರೀತಿಯ ಭಿನ್ನರಾಗ ಹಾಡುತ್ತಿರಲಿಲ್ಲ…’ ಹೀಗೆನ್ನುತ್ತಲೇ ತಮ್ಮ ಮಾತು ಮುಂದುವರಿಸಿದ ಗೋಪಿಚಂದ್, ‘ಸುತ್ತಮುತ್ತಲಿನವರು ನಮಗೆ ನೀಡುವ ಪ್ರೋತ್ಸಾಹ, ನಮ್ಮ ಮೇಲಿನ ಜವಾಬ್ದಾರಿ, ಜನರ ನಿರೀಕ್ಷೆಗಳು ಜೀವನದಲ್ಲಿ ನಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತವೆ. ಇಲ್ಲಿಯವರೆಗಿನ ಸಾಧನೆಗೆ ನಮ್ಮ ಪೋಷಕರು, ಪತ್ನಿ ಮಕ್ಕಳ ಸಹಕಾರ ಹಾಗೂ ನಮ್ಮ ಅಕಾಡೆಮಿಯಲ್ಲಿನ ತರಬೇತಿ ಸಿಬ್ಬಂದಿ, ಫಿಸಿಯೋಗಳ ಪರಿಶ್ರಮ ಸಾಕಷ್ಟಿದೆ. ಎಲ್ಲರು ಒಟ್ಟಾಗಿ ಬೆಂಬಲ ನೀಡುತ್ತಿರುವುದೇ ನಮ್ಮ ಶಕ್ತಿ’ ಎಂದರು.

ಕನಸು ನನಸಾಗಿದೆ….

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಂಧು… ತಮ್ಮ ಕನಸು ನನಸಾಗಿರೋದಾಗಿ ಖುಷಿ ಪಟ್ಟು, ಮಾತನಾಡಿದ್ದು ಹೀಗೆ…

‘ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲೋದು ನನ್ನ ಜೀವನದ ಕನಸಾಗಿತ್ತು. ಈಗ ಅದು ಈಡೇರಿದೆ. ನನ್ನ ಈ ಸಾಧನೆಗೆ ತಂದೆ ತಾಯಿಯ ಪ್ರೋತ್ಸಾಹವೇ ಕಾರಣ. ನನ್ನ ಗುರಿ ತಲುಪಲು ಅವರು ಸಾಕಷ್ಟು ಶ್ರಮವಹಿಸಿದ್ದಾರೆ ಮತ್ತು ತ್ಯಾಗ ಮಾಡಿದ್ದಾರೆ. ನಾನು ಪದಕ ಗೆಲ್ಲುತ್ತೇನೆ ಎಂದು ಹೆಚ್ಚಿನ ಜನ ನಿರೀಕ್ಷಿಸಿರಲಿಲ್ಲ. ನಾನು ಟೂರ್ನಿಯಲ್ಲಿ ಒಂದೊಂದೆ ಪಂದ್ಯವನ್ನು ಸ್ವೀಕರಿಸಿ ಮುನ್ನಡೆದೆ. ಪರಿಣಾಮ ಈ ಯಶಸ್ಸು ಸಿಕ್ಕಿದೆ.’

Leave a Reply