ಯೋಗೇಶ್ವರ್ ದತ್ ಆಘಾತಕಾರಿ ಸೋಲು… ಹುಸಿಯಾದ ನಿರೀಕ್ಷೆಯೊಂದಿಗೆ ಅಂತ್ಯವಾಯ್ತು ಭಾರತದ ಒಲಿಂಪಿಕ್ಸ್ ಅಭಿಯಾನ

ಪುರುಷರ 65 ಕೆ.ಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಘಾತ ಅನುಭವಿಸಿದ ಭಾರತದ ಖ್ಯಾತ ಆಟಗಾರ ಯೋಗೇಶ್ವರ್ ದತ್…

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆ ಹೆಚ್ಚಾದ್ರೆ ನಿರಾಸೆಯೂ ಹೆಚ್ಚು… ಭಾರತೀಯ ಕ್ರೀಡಾ ಅಭಿಮಾನಿಗಳ ಸದ್ಯದ ಸ್ಥಿತಿ ಇದು. ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಪದಕದ ಭರವಸೆಯ ಸ್ಪರ್ಧಿಗಳೆಲ್ಲರೂ ತಮ್ಮ ಮೇಲಿನ ನಿರೀಕ್ಷೆ ಈಡೇರಿಸಲು ವಿಫಲರಾಗಿದ್ದಾರೆ. ಪಂದ್ಯದ ಅಂತಿಮ ದಿನ ಹೋರಾಟ ನಡೆಸಿದ್ದ ಕುಸ್ತಿಪಟು ಯೋಗೇಶ್ವರ್ ದತ್ ಸಹ ಇದಕ್ಕೆ ಹೊರತಾಗಲಿಲ್ಲ.

ಅಂತಿಮ ದಿನ ಭರವಸೆಯ ಕುಸ್ತಿಪಟು ಯೋಗೇಶ್ವರ್ ದತ್ ಸ್ಪರ್ಧಿಸುತ್ತಿರುವುದನ್ನು ಕಾದುಕುಳಿತಿದ್ದ ಭಾರತೀಯ ಅಭಿಮಾನಿಗಳು, ಕ್ರೀಡಾಕೂಟದಲ್ಲಿ ನಿರಾಸೆ ಆರಂಭ ಪಡೆದಿದ್ದ ಭಾರತ ಪದಕದೊಂದಿಗೆ ಅಂತ್ಯ ಕಾಣಲಿದೆ ಎಂಬ ಕನಸು ಕಂಡಿದ್ರು. ಆದರೆ, ಯೋಗೇಶ್ವರ್ ದತ್ ಪುರುಷರ 65 ಕೆ.ಜಿ ವಿಭಾಗದ ಅರ್ಹತಾ ಸುತ್ತಿನಲ್ಲೇ ಹೊರ ಬಿದ್ದದ್ದು, ಭಾರತೀಯ ಅಭಿಮಾನಿಗಳಿಗೆ ಮತ್ತೆ ತೀವ್ರ ಆಘಾತ ಉಂಟುಮಾಡಿತು.

ಅರ್ಹತಾ ಸುತ್ತಿನಲ್ಲಿ ಮಂಗೋಲಿಯಾದ ಗಂಜೊರಿಗಿನ್ ಮಂಧಕರನ್ ವಿರುದ್ಧ 0-3 ಅಂಕಗಳ ಅಂತರದಲ್ಲಿ ಪರಾಭವಗೊಂಡರು. ಭಾರತಕ್ಕೆ ಪದಕ ಸಿಗಲಿಲ್ಲ ಎನ್ನುವುದಕ್ಕಿಂತ ಕಡೇಯ ಬಾರಿಗೆ ಕುಸ್ತಿ ರಿಂಗ್ ನಲ್ಲಿ ಭಾಗವಹಿಸುತ್ತಿದ್ದ ಯೋಗೇಶ್ವರ್ ದತ್ ಅರ್ಹತಾ ಸುತ್ತಿನಲ್ಲೇ ತನ್ನ ಮುಖಭಂಗ ಅನುಭವಿಸಿದ್ದು ಅಭಿಮಾನಿಗಳ ನೋವು ಹೆಚ್ಚಿಸಿದೆ.

ಈ ಬಾರಿ ಭಾರತದ ಸ್ಪರ್ಧಿಗಳು ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಭಾವಿಸಿದ್ದ ಅಭಿಮಾನಿಗಳು, ಕ್ರೀಡಾತೂಟದ ಮುನ್ನ ಯಾರ್ಯಾರು ದೇಶಕ್ಕೆ ಪದಕ ತರಬಲ್ಲರು ಎಂಬ ಲೆಕ್ಕಾಚಾರ ಹಾಕಿದ್ರು. ಹೀಗೆ ಹಲವು ಅಂಶಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ಸಿದ್ಧಪಡಿಸಿದ ಪಟ್ಟಿಯಲ್ಲಿದ್ದ ಎಲ್ಲ ಆಟಗಾರರು ಈಗ ಬರಿಗೈನಲ್ಲಿ ಮರಳಿದ್ದಾರೆ. ಈ ಮಧ್ಯೆ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ  ಸಾಕ್ಷಿ ಮಲಿಕ್ ಹಾಗೂ ಪಿ.ವಿ ಸಿಂಧು ಅಮೂಲ್ಯ ಪದಕಗಳನ್ನು ಗೆದ್ದು ಅಭಿಮಾನಿಗಳ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸುವಲ್ಲಿ ಯಶಸ್ವಿಯಾದ್ರು.

ಉಳಿದಂತೆ ಅಂತಿಮ ದಿನ ಪುರುಷರ 20 ಕಿ.ಮೀ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತದ ತನಕಲ್ ಗೋಪಿ (2:15:25) 25ನೇ ಸ್ಥಾನ ಪಡೆದರೆ, ಖೇತ್ ರಾಮ್ (2:15:26) 26ನೇ ಮತ್ತು ನಿತೇಂದ್ರ ರಾವತ್ (2:22:52) 84ನೇ ಸ್ಥಾನ ಪಡೆದರು. ಇದರೊಂದಿಗೆ ಭಾರತ 2 ಪದಕಗಳ ಸಂಪಾದನೆಯೊಂದಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ.

Leave a Reply