ಭದ್ರತೆ ಗಟ್ಟಿಮಾಡುವ ಬಲಪ್ರದರ್ಶನಕ್ಕೆ ನಮಗೇನೂ ಮುಜುಗರವಿಲ್ಲ- ಅರುಣಾಚಲ ಮತ್ತು ಅಫಘಾನಿಸ್ತಾನದಲ್ಲಿ ಭಾರತದ ಸಂದೇಶ

ಡಿಜಿಟಲ್ ಕನ್ನಡ ಟೀಮ್:

‘ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ನಿಯೋಜಿಸಿದ್ದೇ ಆದರೆ ಅದಕ್ಕೆ ಮರು ಕಾರ್ಯತಂತ್ರವನ್ನು ಚೀನಾ ಮಾಡಬೇಕಾಗುತ್ತದೆ.’ ಹೀಗಂತ ಚೀನಾ ಸೇನೆಯ ಅಧಿಕೃತ ಪ್ರಕಾಶನವಾದ ‘ಪೀಪಲ್ಸ್ ಲಿಬರೇಷನ್ ಆರ್ಮಿ ಡೈಲಿ’ ಎಚ್ಚರಿಸಿತ್ತು.

ಭಾರತವು ಅರುಣಾಚಲ ಪ್ರದೇಶದಲ್ಲಿ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸುವುದು ಅದರ ಸ್ವರಕ್ಷಣೆಯ ವ್ಯಾಪ್ತಿಗಿಂತ ಹಿರಿದಾದದ್ದು. ಇದರಿಂದ ಚೀನಾದ ಟಿಬೆಟ್ ಮತ್ತು ಯುನಾನ್ ಪ್ರಾಂತ್ಯಗಳಿಗೆ ಆತಂಕ ಎದುರಾಗುತ್ತದೆ. ಭಾರತ ಈ ಕ್ರಮಕ್ಕೆ ಮುಂದಾಗುವುದು ಉಭಯ ದೇಶಗಳ ಬಾಂಧವ್ಯ ಹಾಗೂ ಗಡಿಯಲ್ಲಿನ ಸ್ಥಿರತೆಗೆ ಕುಂದುಂಟುಮಾಡುತ್ತದೆ ಅಂತ ಎಚ್ಚರಿಸಿತ್ತು ಚೀನಾ ಸೇನೆಯ ಪತ್ರಿಕೆ.

ಆದರೆ, ಇದಕ್ಕೆ ತಾನೇನೂ ಸೊಪ್ಪು ಹಾಕುವುದಿಲ್ಲ ಎಂಬ ನಿಲುವಿಗೆ ಭಾರತ ಬದ್ಧವಾಗಿದೆ ಎನ್ನುತ್ತಿದೆ ಎನ್ಡಿಟಿವಿಯ ವರದಿ. ‘ನಮ್ಮ ಭದ್ರತೆ ನಮ್ಮ ಕಾಳಜಿ. ನಮ್ಮದೇ ನೆಲದಲ್ಲಿ ಭದ್ರತಾ ನಿಯೋಜನೆಗಳನ್ನು ಹೇಗೆಲ್ಲ ಮಾಡಿಕೊಳ್ಳಬೇಕು ಎಂಬುದು ನಮಗೆ ಬಿಟ್ಟಿದ್ದು’ ಎಂದು ಸೇನೆಯ ಉನ್ನತ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

ಇತ್ತೀಚೆಗೆ ಅರುಣಾಚಲಪ್ರದೇಶದಲ್ಲಿ ಭಾರತವು ತನ್ನ ಮಿಲಿಟರಿ ಬಲವನ್ನು ಹೇಗೆಲ್ಲ ಹೆಚ್ಚಿಸಿಕೊಳ್ಳುತ್ತಿದೆ ಎಂಬ ಬಗ್ಗೆ ಈ ಹಿಂದೆ ಪ್ರಕಟಿಸಿದ್ದ ಬರಹವನ್ನು ನೀವಿಲ್ಲಿ ಓದಬಹುದು.

ಇನ್ನೊಂದೆಡೆ, ಅಫಘಾನಿಸ್ತಾನವು ತಾಲಿಬಾನ್ ಹಾಗೂ ಇತರ ಉಗ್ರರನ್ನು ಹಿಮ್ಮೆಟ್ಟಿಸುವುದಕ್ಕೆ ಭಾರತವು ತನಗೆ ಹೆಚ್ಚಿನ ಮಿಲಿಟರಿ ಸಲಕರಣೆಗಳನ್ನು ಕೊಡಬೇಕು ಎಂದು ಕೇಳುತ್ತಲೇ ಬಂದಿತ್ತು. ಭಾರತ ಈಗಾಗಲೇ ನಾಲ್ಕು ಹೆಲಿಕಾಪ್ಟರ್ ಸೇರಿದಂತೆ ಹಲವು ಬಗೆಯ ಸಹಾಯಗಳನ್ನು ಮಾಡಿದೆ. ಕೇವಲ ಮಿಲಿಟರಿ ಮಾತ್ರವಲ್ಲದೇ ಒಟ್ಟಾರೆ ಆರ್ಥಿಕ ಉದ್ದೇಶಗಳಿಗೆ 15 ವರ್ಷಗಳಲ್ಲಿ 2 ಬಿಲಿಯನ್ ಡಾಲರುಗಳಷ್ಟು ಹಣ ವ್ಯಯಿಸಿದೆ. ಆದರೆ ಶಸ್ತ್ರ ಪೂರೈಕೆ ವಿಷಯದಲ್ಲಿ ಅಷ್ಟು ಸಡಿಲ ಧೋರಣೆ ತೋರಿಸಿರಲಿಲ್ಲ. ಅದಕ್ಕೆ ಆತಂಕಗಳೂ ಇದ್ದವು. ಆದರೀಗ ಅಫಘಾನಿಸ್ತಾನದ ಮರು ನಿರ್ಮಾಣದಲ್ಲಿ ಮುಖ್ ಭಾಗಿದಾರಿಕೆ ಪಡೆದು ಅಲ್ಲಿನ ವ್ಯವಹಾರಗಳಲ್ಲಿ ಗಣನೀಯ ಪ್ರಭಾವ ಹೊಂದಿರುವ ಭಾರತ, ಅಫಘಾನಿಸ್ತಾನಕ್ಕೆ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ಕೊಡುವ ನಿರೀಕ್ಷೆ ಇದೆ.

ಸಹಜವಾಗಿಯೇ ಇದು ಪಾಕಿಸ್ತಾನಕ್ಕೆ ಕಣ್ಣುರಿ ತರುವಂಥ ವಿದ್ಯಮಾನ. ಏಕೆಂದರೆ ಅಫಘಾನಿಸ್ತಾನ ರಾಜಕೀಯದಲ್ಲಿ ಬೆಸೆದುಕೊಂಡಿರುವ ಹಲವು ಉಗ್ರ ಗುಂಪುಗಳಿಗೆ ಪಾಕಿಸ್ತಾನದ ಒತ್ತಾಸೆ ಇರುವುದು ರಹಸ್ಯದ ಸಂಗತಿ ಏನಲ್ಲ. ಗಡಿ ವಿಚಾರದಲ್ಲೂ ಅಫಘಾನಿಸ್ತಾನದ ಜತೆ ತಕರಾರುಗಳನ್ನು ಹೊಂದಿದೆ ಪಾಕಿಸ್ತಾನ. ಅಫಘಾನಿಸ್ತಾನವು ಮಿಲಿಟರಿ ಸ್ವರೂಪದಲ್ಲಿ ಬಲಗೊಳ್ಳುವುದು ಪಾಕಿಸ್ತಾನಕ್ಕೆ ಸಹಿಸಲಾಗದ ವಿಷಯ.

ಆಗಸ್ಟ್ 29ಕ್ಕೆ ಅಫ್ಘನ್ ಸೇನಾ ಮುಖ್ಯಸ್ಥ ಜನರಲ್ ಕ್ವಾದಂ ಶಾ ಶಹಿಂ ಭಾರತಕ್ಕೆ ಆಗಮಿಸಲಿದ್ದು, ಅಫಘಾನಿಸ್ತಾನದ ಬೇಡಿಕೆ ಪಟ್ಟಿಯನ್ನು ಭಾರತಕ್ಕೆ ಸಲ್ಲಿಸಲಿದ್ದಾರೆ. ಅಮೆರಿಕದ ಜತೆಗಿನ ಸಮಾಲೋಚನೆ ನಂತರ ರೂಪುಗೊಂಡ ಪಟ್ಟಿಯಿದು. ಇದರಲ್ಲಿ ಭಾರತ ಏನೆಲ್ಲ ಮಿಲಿಟರಿ ಸಲಕರಣೆಗಳನ್ನು ನೀಡುವುದಕ್ಕೆ ಒಪ್ಪಲಿದೆ, ಅವುಗಳಲ್ಲಿ ಉಚಿತವೆಷ್ಟು, ವ್ಯಾವಹಾರಿಕವೆಷ್ಟು ಎಂಬ ಚಿತ್ರಣಗಳೆಲ್ಲ ಇನ್ನಷ್ಟೇ ಲಭಿಸಬೇಕಿವೆ.

Leave a Reply