ಮಗಳ ಹಂತಕರು ಗಲ್ಲು ಕಾಣುವಂತೆ ಅವಡುಗಚ್ಚಿ ಹೋರಾಡಿದ ಈ ಪಾಲಕರ ಬಗ್ಗೆ ಇರಲಿ ಅಭಿಮಾನ, ಸುಲಭಕ್ಕೆ ಸಿಗದು ನ್ಯಾಯದಾನ

ಡಿಜಿಟಲ್ ಕನ್ನಡ ಟೀಮ್:

ಏಳು ವರ್ಷಗಳ ಹಿಂದೆ ನವದೆಹಲಿಯ ಐಟಿ ಉದ್ಯೋಗಿ ಜಿಗಿಶಾ ಹತ್ಯೆ ಪ್ರಕರಣದಲ್ಲಿನ ಮೂವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ. ಇದರೊಂದಿಗೆ ಏಳು ವರ್ಷಗಳ ನಂತರ ಜಿಗಿಶಾಗೆ ನ್ಯಾಯ ಸಿಕ್ಕಿದಂತಾಗಿದೆ.

ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಪ್ರತಿಯೊಬ್ಬರ ಕಾರ್ಯ ವೈಖರಿ ಪ್ರಶಂಸನೀಯ. ಈ ಎಲ್ಲದರ ಮಧ್ಯೆ ಗಮನ ಸೆಳೆಯುವುದು ಮಗಳ ಸಾವಿಗೆ ನ್ಯಾಯ ದೊರಕಿಸಲೇ ಬೇಕು ಎಂಬ ಪೋಷಕರಾದ ಜಗದೀಶ್ ಘೋಶ್ ಮತ್ತು ಸವಿತಾ ಘೋಶ್ ಅವರ ಛಲ.

‘ಮರಣದಂಡನೆ ತೀರ್ಪು ಸಿಗಲೇಬೇಕಿತ್ತು, ಸಿಕ್ಕಿದೆ. ಈ ಕೊಲೆಗಡುಕರಿಗೆ ಇಷ್ಟು ವರ್ಷಗಳಲ್ಲಿ ಒಂದಿನಿತೂ ಪಶ್ಚಾತಾಪ ಕಾಣಲಿಲ್ಲ. ಹೆಣ್ಣುಮಕ್ಕಳನ್ನು ಕೊಲ್ಲುವುದು ತುಂಬ ಸುಲಭ ಎಂದುಕೊಂಡುಬಿಟ್ಟಿದ್ದರು. ನಮ್ಮ ಮಗಳೇನೂ ಹಿಂದೆ ಬರುವುದಿಲ್ಲ. ಆದರೆ ನ್ಯಾಯ ಸಿಕ್ಕಿತಲ್ಲ..’ ಹಾಗಂತ ಜಿಗಿಶಾ ತಾಯಿ ಮಾತನಾಡುತ್ತಿದ್ದರೆ, ‘ಮರಣದಂಡನೆಯನ್ನೇ ರದ್ದುಗೊಳಿಸಬೇಕು’ ಅಂತ ಆಗಾಗ ವರಾತ ತೆಗೆದುಕೊಂಡಿರುವ ಮಾನವ ಹಕ್ಕು ಸಂತಾನದ ಬಗ್ಗೆ ಅಸಹ್ಯ ಬರುತ್ತಿತ್ತು.

ಮಂಗಳವಾರ ದೆಹಲಿ ಕೋರ್ಟ್ ಪ್ರಕರಣದ ಪ್ರಮುಖ ಆರೋಪಿಗಳಾದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾಗೆ ಮರಣದಂಡನೆ ಹಾಗೂ ಮತ್ತೊಬ್ಬ ಆರೋಪಿ ಬಲ್ಜೀತ್ ಮಲಿಕ್ ನಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ಜಿಗಿಶಾ ಪೋಷಕರ ಏಳು ವರ್ಷಗಳ ನರಕದ ಹೋರಾಟ ಫಲ ನೀಡಿದೆ.

ಇದೀಗ ಅಪರಾಧಿಗಳ ಕಡೆ ವಕೀಲರು ಮತ್ತೆ ಮೇಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವವರಿದ್ದಾರಂತೆ. ಅವೆಷ್ಟು ವರ್ಷವೋ… ಆ ಹೋರಾಟಕ್ಕೂ ಮಾನಸಿಕವಾಗಿ ಸಿದ್ಧರಾಗಿಬಿಟ್ಟಿದ್ದಾರೆ ಈ ದಂಪತಿ.

ಏಳು ವರ್ಷಗಳ ಹಿಂದೆ ಜಿಗಿಶಾ ಅಪಹರಣವಾದ ಸುದ್ದಿ ಕೇಳಿದಾಗ ಇವರ ಪ್ರಪಂಚವೇ ಕಂಪಿಸಿಹೋಗಿತ್ತು. ಅಷ್ಟಾಗಿಯೂ ತಿರುಗಿಬರುವಳೆಂಬ ಆಸೆಯಿತ್ತು. ಹಂತಕರು ಜಿಗಿಶಾಳನ್ನು ಕೊಂದು ಆಕೆಯ ಕಾರ್ಡಿನಲ್ಲಿ ಶಾಪಿಂಗ್ ಮಾಡಿದರು..

ಇವೆಲ್ಲ ಆದಾಗ ಏಕಾದರೂ ಬದುಕಬೇಕು ಅನ್ನಿಸಿತ್ತು ಈ ದಂಪತಿಗೆ. ಮಧ್ಯಮವರ್ಗದ ಈ ದಂಪತಿ ತಮ್ಮ ಅಸಹಾಯಕತೆಯನ್ನು ಶಪಿಸುತ್ತ ಕುಸಿದು ಕುಳಿತುಬಿಡಬಹುದಿತ್ತು. ಆದರೆ ಜಿಗಿಶಾಳನ್ನು ಕೊಂದವರಿಗೆ ಶಿಕ್ಷೆ ಕೊಡಿಸುವುದಕ್ಕೆ ತಮ್ಮ ಜೀವನ ಮುಡಿಪಿಟ್ಟರು. ಈ ಹಂತದಲ್ಲಿ ಬೆದರಿಕೆಗಳು ಬಂದವು. ಹಾಗೆಂದೇ ತಮ್ಮ ವಾಸಸ್ಥಾನವನ್ನು ಸಾರ್ವಜನಿಕಗೊಳಿಸದೇ ಇರುವ ಪ್ರಯತ್ನದೊಂದಿಗೆ ಏಗಬೇಕಾಯಿತು. ಅನಾರೋಗ್ಯದ ನಡುವೆಯೂ ಏಳು ವರ್ಷಗಳ ಅವಧಿಯಲ್ಲಿ ಮನೆ, ಆಸ್ಪತ್ರೆ ಹಾಗೂ ನ್ಯಾಯಾಲಯವನ್ನೇ ತಮ್ಮ ಜೀವನವನ್ನಾಗಿ ಸ್ವೀಕರಿಸಿ ಹೋರಾಡಿದರು.

‘ಜಿಗಿಶಾ ಆಗಲಿ ಅಥವಾ ಇವರಿಂದ ಹತ್ಯೆಯಾದ ಇತರೆ ಮಹಿಳೆಯರಾಗಲಿ ಇವರಿಗೆ ಯಾವುದೇ ರೀತಿಯ ತೊಂದರೆ ನೀಡಿರಲಿಲ್ಲ. ವಿನಾಕಾರಣ ಮಹಿಳೆಯರನ್ನು ಹತ್ಯೆ ಮಾಡುವುದು ಇವರಿಗೆ ಹವ್ಯಾಸವಾಗಿಬಿಟ್ಟಿತ್ತು. ಈಗ ಇವರು ಸಾಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳೆಯರನ್ನು ಕೊಲ್ಲುತ್ತಿದ್ದರು.’ ಎಂಬ ಮಾತುಗಳಲ್ಲಿ ಅವರ ನೋವು ಗೊತ್ತಾಗುತ್ತದೆ.

ಖಂಡಿತ ಇವರದ್ದು ವೈಯಕ್ತಿಕ ಹೋರಾಟವಾಗಿ ಉಳಿಯುವುದಿಲ್ಲ. ಸಮಾಜಕ್ಕೆ ಇದೊಂದು ಕೊಡುಗೆಯೇ. ಏಕೆಂದರೆ ಈಗ ಅಪರಾಧಿಗಳಾಗಿರುವ ಮೂವರು ಬೇರೆ ಕೊಲೆ ಪ್ರಕರಣವನ್ನೂ ಎದುರಿಸುತ್ತಿದ್ದಾರೆ. 2008ರಲ್ಲಿ ಸೌಮ್ಯ ವಿಶ್ವನಾಥ್ ಎಂಬ ಪರ್ತಕರ್ತೆಯನ್ನೂ ಇದೇ ರೀತಿ ಹತ್ಯೆ ಮಾಡಲಾಗಿತ್ತು. ಅಲ್ಲಿಯೂ ಬಳಕೆಯಾಗಿರುವ ಆಯುಧ ಜಿಗಿಶಾ ಪ್ರಕರಣದ್ದೇ ಆಗಿದೆ. ಹೀಗಾಗಿ ರವಿ ಕಪೂರ್ ಮತ್ತು ಸಹಚರರು ಆ ಪ್ರಕರಣದಲ್ಲೂ ಆರೋಪಿಗಳಾಗಿದ್ದಾರೆ.

Leave a Reply