ಆಜಾದಿ ಅಂತ ಕೂಗೋರೆಲ್ಲ ಮುಸ್ಲಿಂ ರಾಷ್ಟ್ರಗಳ ಕತೆ ಏನಾಗಿದೆ ನೋಡಿ ಅಂದ್ರು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ವಿಷಯದಲ್ಲಿ ಅಭಿವೃದ್ಧಿ ಮಾತ್ರವಲ್ಲದೇ ರಾಜಕೀಯ ಪರಿಹಾರ ಕೊಡಿಸಬೇಕು ಎಂದೆಲ್ಲ ಒಮರ್ ಅಬ್ದುಲ್ಲ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಒತ್ತಾಯಿಸಿಕೊಂಡಿವೆ.

ಎನ್ ಸಿ ಪ್ರಕಾರ ರಾಜಕೀಯ ಪರಿಹಾರ ಅಂತಂದ್ರೆ ಜಮ್ಮು-ಕಾಶ್ಮೀರ ಸಂವಿಧಾನದ ಚೌಕಟ್ಟಿನಾಚೆ ಚೌಕಾಶಿಗೆ ಸಿದ್ಧ ಅಂತ ಒಪ್ಪಿಕೊಂಡು ಪಾಕಿಸ್ತಾನ, ಉಗ್ರರು ಎಲ್ಲರ ಜತೆ ಮಾತುಕತೆಗೆ ಇಳಿಯುವುದು. ಇದನ್ನು ಸ್ಪಷ್ಟವಾಗಿ ಹೇಳದಿದ್ದರೂ ‘ಎಲ್ಲ ಹಿತಾಸಕ್ತಿ’ಗಳನ್ನೂ ಒಳಗೊಳ್ಳಬೇಕು ಅಂತ ಹೇಳುವುದರಲ್ಲಿ ಅಡಗಿರುವುದು ಇದೇ.

ಇನ್ನು, ಸೋಮವಾರದ ಪತ್ರಿಕಾಗೋಷ್ಟಿಯಲ್ಲಿ ಕೇಂದ್ರದ ವೈಫಲ್ಯದ ಬಗ್ಗೆ ಹರಿಹಾಯ್ದ ಕಾಂಗ್ರೆಸ್ಸಿನ ಮನಿಷ್ ತಿವಾರಿ ಅವರಿಗೆ, ‘ಹಾಗಾದರೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ಅನುಸರಿಸಬೇಕಾದ ನೀತಿ ಯಾವುದಿರಬೇಕು’ ಎಂಬ ಪ್ರಶ್ನೆ ಎದುರಾದಾಗ ಬಂದ ಉತ್ತರ- ‘ಇದನ್ನು ನಿರ್ಧರಿಸಬೇಕಾಗಿರುವುದು ಕೇಂದ್ರ ಸರ್ಕಾರ. ಈ ನಿಟ್ಟಿನಲ್ಲಿ ಏನಾದರೂ ಸಹಾಯ- ಸಲಹೆಗಳು ಬೇಕಿದ್ದರೆ ಹಲವು ವರ್ಷಗಳ ಅಧಿಕಾರ ಅನುಭವವಿರುವ ನಮ್ಮಿಂದ ಪಡೆಯಬಹುದು.’

ಅರ್ಥಾತ್, ಇವರ್ಯಾರಿಂದಲೂ ಪರಿಹಾರ ನೀಲನಕ್ಷೆಗಳಿಲ್ಲ. ಪ್ರಧಾನಿಯನ್ನು ಬಯ್ದುಕೊಂಡಿರುವುದಕ್ಕೆ ಇದೂ ಒಂದು ಸಂದರ್ಭ ಅಷ್ಟೆ.

ಇವೆಲ್ಲದರ ನಡುವೆ, ಜುಲೈ 8ರಿಂದ ಹಿಂಸೆ ಶುರುವಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿರುವ ಮಾತುಗಳು ಗಮನಾರ್ಹವಾಗಿವೆ. ಅವರು ಹೇಳಿದ್ದು-

-ಪಾಕಿಸ್ತಾನ, ಟರ್ಕಿ, ಸಿರಿಯಾ, ಅಫಘಾನಿಸ್ತಾನ ಈ ಎಲ್ಲ ದೇಶಗಳಲ್ಲೂ ‘ಸ್ವತಂತ್ರ’ವೇ. ಆದರೆ ಅಲ್ಲಿನ ಮುಸ್ಲಿಮರ ಸ್ಥಿತಿ ಏನಾಗಿದೆ? ಯಾವಾಗ ಸಮಾಜದೊಳಗೆ ಬಂದೂಕುಗಳು ನುಸುಳುತ್ತವೋ ಆಗ ಸ್ವಾಂತಂತ್ರ್ಯದ ಅರ್ಥ ಸಾಯುತ್ತದೆ. ಇಲ್ಲೆಲ್ಲ ಬಂದೂಕು ಯಾವ ಪರಿಹಾರವನ್ನು ತಂದಿದೆ? ಬಂದೂಕು ಕೇವಲ ವಿಧ್ವಂಸವನ್ನಷ್ಟೇ ತಂದಿದೆ.

– ಇದೊಂದು ಪೂರ್ವ ನಿಯೋಜಿತ ಹಿಂಸಾ ಸಂಘಟನೆಯ ಕಾರ್ಯ. ಪಿಡಿಪಿ-ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಣಿವೆಗೆ ಶಾಂತಿ ಮರುಕಳಿಸುವುದನ್ನು ಒಪ್ಪದ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಶುರುಮಾಡಿವೆ.

– ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸುತ್ತಿರುವವರು ಕೇವಲ ಐದು ಶೇಕಡದಷ್ಟು ಮಂದಿ. ಇವರ್ಯಾರೂ ಬೀದಿಗೆ ಬಂದು ಪರಿಣಾಮ ಎದುರಿಸುವವರಲ್ಲ. ಮಕ್ಕಳನ್ನು ಮತ್ತು ಮುಗ್ಧರನ್ನು ತಮ್ಮ ಕವಚಗಳನ್ನಾಗಿ ಬಳಸಿಕೊಂಡು ಭದ್ರತಾ ಪಡೆಗಳ ಚೌಕಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಉಳಿದ ಶೇ. 95 ಮಂದಿ ಸಾಮಾನ್ಯರಿಗೆ ಕಣಿವೆಯಲ್ಲಿ ವ್ಯಾಪಾರ ಶುರುವಾಗುವುದು, ಶಾಲೆಗಳು ಪುನಾರಂಭವಾಗುವುದು ಬೇಕಿದೆ. ಸರ್ಕಾರ ಅಭಿವೃದ್ಧಿ ಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾಗಲೇ ಗಲಭೆಗಳು ಶುರುವಾದವು. ಶೇ. 5 ಜನರ ತಪ್ಪಿಗೆ 95 ಪ್ರತಿಶತ ಜನರಿಗೆ ಶಿಕ್ಷೆ ಆಗಬಾರದು ಎಂಬುದೇ ಕೇಂದ್ರಕ್ಕೆ ನಮ್ಮ ಮನವಿ.

Leave a Reply