ರಮ್ಯ ಮೇಡಂ ಗಮನಕ್ಕೆ… ದಾವೂದ್ ಇಬ್ರಾಹಿಂ ಪಾಕಿಸ್ತಾನವೆಂಬ ಸ್ವರ್ಗದಲ್ಲಿರುವ ಸಾಧ್ಯತೆಯನ್ನು ವಿಶ್ವಸಂಸ್ಥೆಯೂ ಒಪ್ಪಿದೆ

 

ಡಿಜಿಟಲ್ ಕನ್ನಡ ಟೀಮ್:

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇರುವ ಬಗ್ಗೆ ಒಂಬತ್ತು ವಿಳಾಸಗಳನ್ನು ಭಾರತ ಒದಗಿಸಿತ್ತು. ಈ ಪೈಕಿ ವಿಶ್ವಸಂಸ್ಥೆ ಸಮಿತಿಯು ಮೂರು ವಿಳಾಸಗಳನ್ನು ತೆಗೆದಿರಿಸಿ, ಇನ್ನು ಆರು ವಿಳಾಸಗಳನ್ನು ಒಪ್ಪಿದೆ.

1993ರ ಮುಂಬೈ ದಾಳಿ ಸೂತ್ರದಾರ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂಬತ್ತು ವಿಳಾಸಗಳನ್ನು ಭಾರತವು ಸಾಕ್ಷ್ಯದ ರೂಪದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಲ್ ಕಾಯಿದಾ ಪ್ರತಿಬಂಧಕ ಸಮಿತಿಗೆ ಒದಗಿಸಿತ್ತು. ಕೇವಲವಿಳಾಸಗಳು ಮಾತ್ರವಲ್ಲದೇ ಕೆಲವು ಪುರಾವೆಗಳನ್ನೂ ಭಾರತ ಒದಗಿಸಿತ್ತು. ಇದರಲ್ಲಿ ಒಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಆಗಿರುವ ಮಲಿಹಾ ಲೋಧಿ ವಿಳಾಸಕ್ಕೆ ಹೋಲುತ್ತಿದ್ದ ಕಾರಣ ಅದನ್ನು ವಿಶ್ವಸಂಸ್ಥೆ ತೆಗೆದು ಹಾಕಿದೆ.

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದು, ಪಾಕಿಸ್ತಾನಿ ಏಜೆನ್ಸಿಗಳ ಸಹಾಯದೊಂದಿಗೆ ನಿರಂತರ ಜಾಗ ಬದಲಿಸುತ್ತಲೇ ಇರುತ್ತಾನೆ. ಆ ಪೈಕಿ ಪದೇ ಪದೆ ಸಂದರ್ಶಿಸುತ್ತ, ಉಳಿದುಕೊಳ್ಳುತ್ತಿದ್ದ ಒಂಬತ್ತು ಜಾಗಗಳಿವು ಎಂಬುದು ಭಾರತದ ಪಟ್ಟಿಯ ಸಾರ. ಇಷ್ಟೇ ಅಲ್ಲದೇ ಪಾಕಿಸ್ತಾನ ಮತ್ತು ದುಬೈಗಳಿಂದ ದಾವೂದ್ ಇಬ್ರಾಹಿಂಗೆ ನೀಡಲಾಗಿದ್ದ ಪಾಸ್ಪೋರ್ಟ್ ವಿವರಗಳನ್ನೂ ವಿಶ್ವಸಂಸ್ಥೆ ಎದುರಿರಿಸಿದೆ ಭಾರತ.

ಪಾಕಿಸ್ತಾನ ಲಾಗಾಯ್ತಿನಿಂದಲೂ ಭಾರತದ ಆರೋಪವನ್ನು ನಿರಾಕರಿಸುತ್ತಲೇ ಬಂದಿದೆ. ಆದರೆ ವಿಶ್ವಸಂಸ್ಥೆ ಇದೀಗ ಒಂಬತ್ತು ವಿಳಾಸಗಳ ಪೈಕಿ ಆರನ್ನು ದಾವೂದ್ ಇರುವಿಕೆಯ ಅನುಮಾನದಲ್ಲೇ ಹಾಗೆ ಉಳಿಸಿಕೊಂಡಿದೆಯಾದ್ದರಿಂದ, ಇಲ್ಲೆಲ್ಲೂ ದಾವೂದ್ ಇಬ್ರಾಹಿಂ ಇಲ್ಲ ಎಂದು ಈಗ ಒದಗಿಸಿರುವ ದಾಖಲೆಗಳಿಗೆಲ್ಲ ತಾರ್ಕಿಕ ಉತ್ತರ ಹೇಳಬೇಕಾದ ಒತ್ತಡ ಪಾಕಿಸ್ತಾನದ ಮೇಲಿದೆ. ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆ ಸಭೆ ಸೇರಲಿರುವುದರಿಂದ, ಇದೇ ವಿಷಯದಲ್ಲಿ ಭಾರತವು ಪಾಕಿಸ್ತಾನವನ್ನು ಉತ್ತರದಾಯಿಯಾಗುವಂತೆ ಒತ್ತಡ ಹೇರುವುದಕ್ಕೆ ಅನುಕೂಲವಾಗಿದೆ.

ಹಾಗಂತ ವಿಶ್ವಸಂಸ್ಥೆಯ ಈ ನಡೆ ಕಾನೂನಾತ್ಮಕ ಒತ್ತಡವನ್ನೇನೂ ಉಂಟುಮಾಡುವುದಿಲ್ಲ. ಅರ್ಥಾತ್, ಈ ಬಗ್ಗೆ ಉತ್ತರಿಸಲೇಬೇಕೆಂದು ಪಾಕಿಸ್ತಾನವನ್ನು ಮಣಿಸುವ ಆಯ್ಕೆಗಳಿಲ್ಲ. ಆದರೆ ನೈತಿಕ ಸ್ತರದಲ್ಲಿ ಅಂತಾರಾಷ್ಟ್ರೀಯ ಸಮುದಾಯದೆದುರು ಪಾಕಿಸ್ತಾನವನ್ನು ಉತ್ತರದಾಯಿಯಾಗಿಸುವಲ್ಲಿ ಇದು ಭಾರತಕ್ಕೆ ನೆರವಾಗುತ್ತದೆ.

Leave a Reply