ಎಲ್ಲರಿಗೂ ಬೇಕು ಫಲಿತಾಂಶದ ಸಂಭ್ರಮ, ಯಾರಿಗೂ ಬೇಕಿಲ್ಲ ತಯಾರಿ ಪ್ರಕ್ರಿಯೆಯ ಶ್ರಮ

author-geetha‘ಅಕ್ಕಾ! ಇದೇನು ಇಷ್ಟೊತ್ತಿನಲ್ಲಿ ಟಿವಿ ನೋಡ್ತಾ ಇದೀರಿ..?’

‘ನೋಡು! ಮೆರವಣಿಗೆಯಲ್ಲಿ ಕರೆತರುತ್ತಿದ್ದಾರೆ.’

‘ಯಾರನ್ನ ಅಕ್ಕ?’

‘ಮೊನ್ನೆ ಮುಗಿದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಸಿಲ್ವರ್ ಮೆಡಲ್ ತೊಗೊಂಡಿದಾರೆ… ಪಿ.ವಿ ಸಿಂಧು ಅಂತ,, ಅವರನ್ನು ಮೆರವಣಿಗೆಯಲ್ಲಿ ಕರೆ ತರುತ್ತಿದ್ದಾರೆ..’

‘ಮತ್ತೆ.. ಮಿಕ್ಕವರೆಲ್ಲಾ ಯಾರು? ಒಂದಿಪ್ಪತ್ತು ಜನ ಇದಾರಲ್ಲ ಅಕ್ಕಾ… ಆ ಬಸ್ ಮೇಲೆ?’

‘ಪಕ್ಕ ಇರೋರು ಅವರ ಕೋಚ್. ಅಂದರೆ ಗುರುಗಳು.. ಮಿಕ್ಕವರು ನಂಗೂ ಗೊತ್ತಿಲ್ಲ…’

‘ಗೆದ್ದೋರು, ಹೇಳಿಕೊಟ್ಟೋರು ಸರಿ.. ಇವರೆಲ್ಲಾ ಯಾಕೆ ಮೆರವಣಿಗೆಯಲ್ಲಿ ಹೋಗಬೇಕು? ಅಲ್ಲವೇ ಅಕ್ಕ?’

‘ಹೂಂ… ಐದು ಕೋಟಿ ಕಾಣಿಕೆಯಂತೆ. ತೆಲಂಗಾಣ ಸರ್ಕಾರ ಕೊಟ್ಟಿದೆ ಅವರಿಗೆ..’

‘ಓ… ಇನ್ಯಾರಿಗೆ ಪದಕ ಬಂದಿದೆ? ಅವರಿಗೂ ಕೊಟ್ಟಾರಾ ಕಾಣಿಕೆ?’

‘ಹೂಂ… ಇನ್ನೊಂದು ಕಂಚಿನ ಪದಕ ಬಂದಿದೆ. ಅದೂ ಮಹಿಳೆಗೆ… ಆ ರಾಜ್ಯದ ಸರ್ಕಾರ ಕೊಟ್ಟಿರುತ್ತೆ ಕಾಣಿಕೆ…’

‘ನನ್ನ ಮಗಳು ಹೇಳ್ತಾ ಇದ್ಲು.. ಬೇರೆ ದೇಶಗಳು ಹತ್ತಾರು ಮೆಡಲ್ಲುಗಳನ್ನು ಬಾಚಿಕೊಂಡಿವೆಯಂತೆ.. ನಮ್ಮ ದೇಶಕ್ಕೆ ಮಾತ್ರ ಒಂದು ಕಂಚು, ಒಂದು ಬೆಳ್ಳಿಯ ಪದಕ ಅಷ್ಟೇ ಅಂತೆ… ಅದೂ ಗೆದ್ದಿರುವುದು ಹೆಣ್ಣು ಮಕ್ಕಳಂತೆ.’

‘ಹೂಂ…’

‘ಅಲ್ಲಾ ಅಕ್ಕ… ಗೆದ್ದ ಮೇಲೆ ಒಂದು ಕೋಟಿ, ಐದು ಕೋಟಿ ಕೊಡೋ ಬದಲು ಗೆಲ್ಲೋಕೆ ಮುಂಚೆ.. ತರಬೇತಿಗೆ ಅನುಕೂಲಗಳನ್ನು ಮಾಡಿಕೊಟ್ಟರೆ… ಚಿನ್ನದ ಪದಕವನ್ನೇ ಗೆಲ್ಲಬಹುದಲ್ಲವೇ?’

‘ನೀನು ಯೋಚಿಸುವಂತೆ ಯೋಚಿಸುವವರು ಅಧಿಕಾರದಲ್ಲಿ ಇರಬೇಕಲ್ಲ…’

‘ಬಿಡಿ… ಯೋಚಿಸುವುದು ಏನು? ನನ್ನ ಮಗಳು ಹತ್ತನೇ ಕ್ಲಾಸಿನಲ್ಲಿ ಎಪ್ಪತ್ತೆಂಟು ಪರ್ಸೆಂಟ್ ತೊಗೊಂಡ್ಲಾ.. ಆಗ ಅವಳ ಶಾಲೆಯವರು ಹೊಗಳಿ ಕರೆಂಟ್ ಹೋದಾಗಲೂ ಬೆಳಗುವ ದೀಪ ಕೊಟ್ರಾ? ಆಗ ನಾನು ಅಲ್ಲಿ ಅವರ ಹೆಡ್ಮಾಸ್ಟ್ರಿಗೆ ಹೇಳಿಯೇ ಬಂದಿದ್ದೆ. ಈ ದೀಪ ಮುಂಚೆಯೇ ಕೊಟ್ಟಿದ್ರೆ ನನ್ನ ಮಗಳು ತೊಂಬತ್ತು ಪರ್ಸೆಂಟ್ ತೊಗೊತ್ತಾ ಇದ್ಲು ಅಂತ… ನನ್ನ ಕೆಲಸ ಆಯಿತು… ಬರ್ತೀನಕ್ಕ…’

ಅವಳು ಹೊರಟು ಹೋದ ಮೇಲೂ ಟಿವಿಯಲ್ಲಿ ಮೆರವಣಿಗೆ ನೋಡುತ್ತಾ ಕುಳಿತೆ. ಕಷ್ಟಪಡಲು, ಕೆಲಸ ಮಾಡಲು ಯಾರಿಗೂ ಬೇಕಿಲ್ಲ. ಗೆದ್ದವರ ಜೊತೆ ಮೆರವಣಿಗೆ ಹೋಗಲು, ಸೆಲೆಬ್ರೇಟ್ ಮಾಡಲು ಎಲ್ಲರೂ ರೆಡಿ. ನನ್ನ ಸ್ನೇಹಿತರೊಬ್ಬರು ಹಾಕಿರುವ ಲೆಕ್ಕದ ಪ್ರಕಾರ ಒಟ್ಟು 16 ಕೋಟಿಯಷ್ಟು ಹಣ ಹಾಗೂ ಕಾಣಿಕೆಗೆ ಭಾಜನಳು ಸಿಂಧು. ಸಂತೋಷ…

ನಲವತ್ತೆರೆಡು ಕಿ.ಮೀ ಉದ್ದದ ಮ್ಯಾರಥಾನ್ ಓಡಿದ ಓಟಗಾರ್ತಿಗೆ ಮಧ್ಯೆ ಮಧ್ಯೆ ನೀರು, ಎನರ್ಜಿ ಡ್ರಿಂಕ್ ಕೊಡುವ ವ್ಯವಸ್ಥೆಯೇ ಇಲ್ಲ… ಕುಸ್ತಿಪಟುವಿನೊಂದಿಗೆ ಅವರ ಫಿಸಿಯೋ, ಥೆರಪಿಸ್ಟ್ ಹೋಗುವ ವ್ಯವಸ್ಥೆ ಇಲ್ಲ. ಜೊತೆಗೆ ಹೋಗಿದ್ದ ಡಾಕ್ಟರ್ sport specialist ಅಲ್ಲ… ಅವರು ರೇಡಿಯಾಲಜಿಸ್ಟ್! ಒಲಿಂಪಿಕ್ ಸಮಿತಿಯ ಅಧ್ಯಕ್ಷರ ಮಗ ಅವರು! ಕ್ರೀಡಾ ಮಂತ್ರಿಗಳು ಆ ಅಧಿಕಾರಿ, ಈ ಅಧಿಕಾರಿ… ಎಂದು ಅಧಿಕಾರಿಗಳದ್ದೇ ದೊಡ್ಡ ಗುಂಪು. ಅಲ್ಲಿ ಹೋಗಿ ಇವರುಗಳು ಮಾಡಿದ್ದೇನು ಎಂದು ಕೇಳುವ ಹಾಗಿಲ್ಲ.

ಕ್ರೀಡಾಪಟುಗಳ ಆಯ್ಕೆಯಿಂದ ಶುರು ರಾಜಕೀಯ. ಆಡಳಿತ ಸುಗಮವಾಗಿ ಇರಲಿ ಎಂದು ರಾಜ್ಯಗಳ ವಿಂಗಡಣೆ ಮಾಡಿದ್ದು. ಕ್ರೀಡಾಪಟುವನ್ನು ಆರಿಸಿದರೆ ಅವರು ಪ್ರತಿನಿಧಿಸುವುದು ದೇಶವನ್ನು ರಾಜ್ಯವನ್ನಲ್ಲ. ಆದರೂ ಕ್ರೀಡಾಪಟುಗಳನ್ನು ಆರಿಸುವಾಗ ಅವರು ಯಾವ ರಾಜ್ಯದವರು ಎಂಬುದು ಕೂಡ ಮುಖ್ಯವಾಗುತ್ತದೆ.

ಹೋಗಲಿ.. ಆರಿಸಿದ ಮೇಲಾದರೂ ಕ್ರೀಡಾಪಟುಗಳು ಮುಖ್ಯರಾಗುತ್ತಾರಾ? ಇಲ್ಲ… ಟ್ರೇನಿಂಗ್ ಮಾಡಿಕೊಂಡು ಅವರ ಶೂ, ಬಟ್ಟೆ ಇತ್ಯಾದಿಗಳಿಗೆ ಅವರೇ sponsors ಗಳನ್ನು ಹುಡುಕಿಕೊಂಡು (ಕ್ರಿಕೆಟ್ ಕ್ರೀಡೆಗೆ ಸಿಗುವಂತೆ ಸುಲಭವಾಗಿ sponsors ಸಿಗುವುದಿಲ್ಲ) ಸಿದ್ಧತೆ ಮಾಡಿಕೊಳ್ಳಬೇಕು.

ಸ್ವಂತ ಪರಿಶ್ರಮದಿಂದ, ತಂದೆ ತಾಯಿಯರ ಪ್ರೋತ್ಸಾಹದಿಂದ ಪ್ರೈವೇಟ್ ಕೋಚ್ ಗಳು ನೀಡುವ ಟ್ರೈನಿಂಗ್ ನಿಂದ ಗೆದ್ದರೆ, ಆಗ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಕ್ರೀಡಾ ಇಲಾಖೆ ಎಲ್ಲರೂ ಬರುತ್ತಾರೆ… ಮೆರವಣಿಗೆಯಲ್ಲಿ ಪಾಲ್ಗೊಳ್ಳಲು, ಕಾಣಿಕೆ ನೀಡಲು. ಹಿಂದೆ ಮುಂದೆ ಅರಿವಿಲ್ಲದ ಮಂತ್ರಿಗಳು ಬಾಯಿಗೆ ಬಂದಂತೆ ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಾರೆ.

ಇದುವರೆಗೂ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರೆಲ್ಲಾ ತಮ್ಮ ಪರಿಶ್ರಮದಿಂದ ಗೆದ್ದಿರುವುದು, ಆರಿಸಿ ಕಳಿಸಿರುವುದಷ್ಟೇ ಸರ್ಕಾರ ಮಾಡಿರುವ ಕೆಲಸ.

ಶೂಟಿಂಗ್ ನಲ್ಲಿ ಪದಕ ಬಂದಾಗಲೂ (ಕಳೆದ ಬಾರಿ) ಆ ಶೂಟರ್ ತಂದೆ ವಿದೇಶದಲ್ಲಿ ತಮ್ಮ ಮಗನಿಗೆ ಟ್ರೈನಿಂಗ್ ಕೊಡಿಸಿದ್ದರು. ಈ ಬಾರಿ ಕಂಚಿನ ಪದಕ ಪಡೆದಿರುವ ಸಾಕ್ಷಿ ಹಾಗೂ ಬೆಳ್ಳಿಯ ಪದಕ ಪಡೆದಿರುವ ಸಿಂಧು ಅವರ ಕಥೆಯೂ ಅಷ್ಟೇ. ಸ್ವತಃ ವಾಲಿಬಾಲ್ ಆಟಗಾರರಾದ ಸಿಂಧುವಿನ ತಂದೆ ತಾಯಿ ಮಗಳ ಹಿಂದೆ ಗಟ್ಟಿಯಾಗಿ ನಿಂತವರು. ಇಬ್ಬರ ಕೋಚ್ ಗಳು ತಮ್ಮ ಕ್ರೀಡಾಪಟುವಿನ ಒಳಿತು, ಕೆಡುಕು ಅಷ್ಟೇ ಅಲ್ಲ, ಊಟ, ತಿಂಡಿ, ಆಟ, ಟೆಕ್ನಿಕ್ ಎಲ್ಲಾ ಕಲಿಸಿದರು. ಆರಿಸಿ ಕಳಿಸಿದ್ದಷ್ಟೇ ಸರ್ಕಾರ ಮಾಡಿದ್ದು.

ಪ್ರತೀ ಬಾರಿ ಆಗಿರುವುದು ಹೀಗೆಯೇ ಕ್ರೀಡಾಕೂಟ ಮುಗಿದ ಮೇಲೆ ಎಲ್ಲರೂ  ಮಾತನಾಡುತ್ತೇವೆ. ಲೇಖನ ಬರೆಯುತ್ತೇವೆ. ಮುಂದಿನ ಬಾರಿ ಎಲ್ಲಾ ಸರಿ ಮಾಡುತ್ತೇವೆ ಎಂದು ಭರವಸೆ ಕೊಡುತ್ತಾರೆ, ತಣ್ಣಗಾಗುತ್ತೇವೆ. ಮುಂದಿನ ಬಾರಿ ಕ್ರೀಡಾಕೂಟ ಮುಗಿದ ಮೇಲೆಯೇ ನಾವು ಎಚ್ಚೆತ್ತುಕೊಳ್ಳುವುದು.

ನಮ್ಮ ಮತ್ತೊಂದು ದೊಡ್ಡ ಪ್ರಾಬ್ಲಂ ಏನೆಂದರೆ ಎಲ್ಲದರಲ್ಲೂ ಜಾತಿ, ಫೆಮಿನಿಸಂ ತರುವುದು. ಜೊತೆಗೆ ಹಾಸ್ಯ ಮಾಡಿ ವಿಷಯವನ್ನು ಹಗುರ ಮಾಡಿ ತೇಲಿಬಿಡುವುದು. ನನ್ನ whatsappಗೇ ಒಂದಿಪ್ಪತ್ತು jokes ಬಂದಿದೆ ಎಂದಾದರೆ ಇನ್ನೆಷ್ಟು jokeಗಳು ಸೃಷ್ಟಿಯಾಗಿರಬಹುದು?

ಹೆಣ್ಣು ಎಂದು ತುಳಿದ್ರಿ, ಭ್ರೂಣಹತ್ಯೆ ಮಾಡಿದ್ರಿ, ಹೆಣ್ಣು ಎಂದು ವಿದ್ಯೆ ಕೊಡಿಸಲಿಲ್ಲ. ಸರಿಯಾಗಿ ಸಾಕಲಿಲ್ಲ, ಆಡಿಕೊಂಡ್ರಿ, ಕಟ್ಟಾಕಿದ್ರಿ.. ಆದರೂ ಒಲಿಂಪಿಕ್ಸ್ ನಲ್ಲಿ ಮೆಡಲ್ ಗೆದ್ದದ್ದು ಹೆಣ್ಣುಮಕ್ಕಳು! ಬೇಟಿ ಬಚಾವೋ ಅಂದ್ರಿ… ದೇಶವನ್ನು ಅವಮಾನದಿಂದ ಬಚಾವ್ ಮಾಡಿದ್ದು ಬೇಟಿ! ಎಂದು ಹೊಗಳಿ ಬರೆದದ್ದು ಆಯಿತು.

ಮೇಲ್ ಕೋಚ್ ಇದ್ದದ್ದರಿಂದ ಮಹಿಳಾ ಕ್ರೀಡಾಪಟುಗಳು ಗೆದ್ದರು… ಫೀಮೇಲ್ ಕೋಚ್ ಗಳು ಇದ್ದಿದ್ದರೆ ಪುರುಷ ಕ್ರೀಡಾಪಟುಗಳು ಗೆಲ್ಲುತ್ತಿದ್ದರು.. ಎಂದು ವ್ಯಂಗ್ಯವಾಡಿದ್ದೂ ಆಯಿತು. ಒಂದು ಸಿಲ್ವರ್ ಮೆಡಲ್ಲಿಗೆ ಇಷ್ಟೊಂದು ಸಂಭ್ರಮವೇ ಎಂದು ಕೆಲವರು ಆಡಿಕೊಂಡಿದ್ದೂ ಆಯಿತು. ಈಗ ಮುಂದೆ ನೋಡುವ ಸಮಯ.

ಇನ್ನು ನಾಲ್ಕು ವರ್ಷಕ್ಕೆ ಜಪಾನಿನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವಾಗುತ್ತದೆ. ಈಗಿನಿಂದಲೇ ತಯಾರಿ ಶುರು ಮಾಡಬೇಕು. ಮೂಲಭೂತ ಸೌಕರ್ಯ ಒದಗಿಸುವುದತ್ತ ಮೊದಲ ಗಮನ ಹರಿಸಬೇಕು. ಒಬ್ಬರೋ, ಇಬ್ಬರೋ ಗೆದ್ದ ಕ್ರೀಡಾಪಟುಗಳಿಗೆ ಕಾಣಿಕೆ, ಹಣ ಕೊಡುವುದರ ಬದಲು ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿದರೆ ಹಲವಾರು ಕ್ರೀಡಾಪಟುಗಳು ಸಾಧನೆಗೈಯ್ಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

ತನ್ನ ಸ್ವಂತ ಪರಿಶ್ರಮದಿಂದ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಬಹುದಾದರೆ ಒಮ್ಮನಸ್ಸಿನಿಂದ ಸರ್ಕಾರ ನಿರ್ಧರಿಸಿದರೆ ಪ್ರತಿಯೊಂದು ಕ್ರೀಡೆಗೂ ಅಕಾಡೆಮಿ ಸ್ಥಾಪಿಸಿ, ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ವಾತಾವರಣ ಕಲ್ಪಿಸಿ, ಸೌಲಭ್ಯಗಳನ್ನು ಕೊಟ್ಟು ಹೆಚ್ಚಿನ ಮೆಡಲ್ಲುಗಳನ್ನು ಪಡೆಯುವಂತೆ ಮಾಡಬಹುದು. ಅನುಕೂಲ ಕಲ್ಪಿಸಿಕೊಟ್ಟರೆ ಗೆಲ್ಲಬಹುದಾದ ಛಾತಿಯಿರುವ ಕ್ರೀಡಾಪಟುಗಳು ಇದ್ದಾರೆ. ಸೂಕ್ತ ಟ್ರೈನಿಂಗ್ ಇಲ್ಲದೆ ಕಳಿಸಿ ಅವಮಾನಕ್ಕೆ ಒಳಗಾಗುವ ಬದಲು ಕಳಿಸದಿರುವುದೇ ವಾಸಿ.

Participation is important than winning in any competition ಅನ್ನುವುದು ಸೋತವರ ಕಣ್ಣೊರೆಸುವ ಮಾತು. ಆಡುವುದು ಗೆಲ್ಲುವುದಕ್ಕಾಗಿಯೇ, ಗೆಲ್ಲಬೇಕು ಎಂದು ಆಡುವ ಮನೋಭಾವ ಬೆಳೆಸಿಕೊಳ್ಳುವುದೂ ಕೂಡ ಕ್ರೀಡಾಪಟುಗಳ ಟ್ರೈನಿಂಗ್ ನ ಮುಖ್ಯ, ಮೂಲ ಉದ್ದೇಶ.

All the best in 2020

Leave a Reply