ರಾಜ್ಯ ಸಂಪುಟ ಸಭೆಯಲ್ಲಿ ಏನೆಲ್ಲ ತೀರ್ಮಾನ?, ಮೌನ ಮುರಿದ ಅರವಿಂದ್ ಜಾಧವ್, ನಳಿನಿ ಚಿದಂಬರಂಗೆ ಸಮನ್ಸ್, ಇಟಲಿ ಭೂಕಂಪಕ್ಕೆ 38 ಬಲಿ

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಒರಿಸ್ಸಾದ ಮರಳು ಕಲಾವಿದ ಸುದರ್ಶನ ಪಟ್ನಾಯಕ್ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಸೃಷ್ಟಿಸಿರುವ ಕಲಾಕೃತಿ.

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದಿಂದ ಬಾರದ ಅನುದಾನ ರಾಜ್ಯವೇ ಭರಿಸಲು ತೀರ್ಮಾನ

ಸಣ್ಣ ಮತ್ತು ಮಧ್ಯಮ ಹಂತದ ನಗರ ಪಟ್ಟಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ನರ್ಮ್ ಯೋಜನೆಯಿಂದ ಕೇಂದ್ರ ನೀಡಬೇಕಿದ್ದ ಅನುದಾನ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ₹ 836.98 ಕೋಟಿ ಭರಿಸಲು ನಿರ್ಧರಿಸಿದೆ.

ಈ ಕುರಿತ ನಿರ್ಧಾರವನ್ನು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಹೇಳಿದಿಷ್ಟು…

‘ನರ್ಮ್ ಹಾಗೂ ಯುಐಡಿಎಸ್ಎಸ್ಎಟಿ ಯೋಜನೆಯಡಿ ಮಹಾನಗರ ಪಾಲಿಕೆ ಮತ್ತು ನಗರ ಪುರಸಭೆಗಳಲ್ಲಿ ಮೂಲಸೌಕರ್ಯ ಒದಗಿಸಲು ಕೆಲವೊಂದು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಸಕಾಲದಲ್ಲಿ ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ. ಕೆಲವು ಕಾಮಗಾರಿ ಪ್ರಗತಿಯಲ್ಲಿವೆ, ಮತ್ತೆ ಕೆಲವು ಮುಗಿದಿವೆ. ಆದರೆ, ಕೇಂದ್ರದಿಂದ ಬರಬೇಕಿದ್ದ ಅನುದಾನ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಆ ಹಣ ಭರಿಸಲು ನಿರ್ಧರಿಸಿದೆ. 2015-16 ಮತು 2016-17 ನೇ ಬಜೆಟ್‍ನಲ್ಲಿ ಇದಕ್ಕಾಗಿ ಹಣ ಮೀಸಲಿಟ್ಟು ಭರಿಸಲಾಗುವುದು.’

ಈ ಸಚಿವ ಸಂಪುಟದಲ್ಲಿ ಕೈಗೊಂಡ ಇತರೆ ಪ್ರಮುಖ ನಿರ್ಧಾರಗಳು ಹೀಗಿವೆ…

– ಸ್ಥಳಿಯ ಪ್ರಾಧಿಕಾರಗಳು ಸಂಗ್ರಹಿಸುವ ಕೆರೆ ಅಭಿವೃದ್ಧಿ ಶುಲ್ಕದಲ್ಲಿ ಶೇ.25 ರಷ್ಟು ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲು ತೀರ್ಮಾನ.

– ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಲು ₹ 32.22 ಕೋಟಿ ವೆಚ್ಚ ಮಾಡಲು ನಿರ್ಧಾರ.

– ಅನಿವಾಸಿ ಭಾರತೀಯ ಬಿ.ಆರ್. ಶೆಟ್ಟಿ ಒಡೆತನದ ಅಬುದಾಬಿಯ ಬಿ.ಆರ್.ಎಸ್.ವೆಂಚರ್ಸ್ ಗೆ ಉಡುಪಿಯ 70 ಹಾಸಿಗೆಗಳ ಆಸ್ಪತ್ರೆ ಅಭಿವೃದ್ಧಿಪಡಿಸಲು ಗುತ್ತಿಗೆ ನೀಡಲು ಒಪ್ಪಿಗೆ.

– ತುಮಕೂರಿನ ವಸಂತನರಸಾಪುರದಲ್ಲಿ ಸಮಗ್ರ ಮಿಷನ್ ಟೂಲ್ಸ್ ಪಾರ್ಕ್ ನಿರ್ಮಾಣ ಹಿನ್ನೆಲೆಯಲ್ಲಿ ಅದರ ಆಭಿವೃದ್ಧಿಗಾಗಿ ಹೊಸ ಸಂಸ್ಥೆ ಸ್ಥಾಪಿಸಲು ಒಪ್ಪಿಗೆ.

– ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಚಿತ್ರದುರ್ಗದವರೆಗೂ ವಿಸ್ತರಿಸಲು ತೀರ್ಮಾನ.

– ಕಬಿನಿ ನದಿಯಿಂದ ಚಾಮರಾಜನಗರ, ಯಳಂದೂರು, ನಂಜನಗೂಡು ಭಾಗದ 24 ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆಗೆ ಅನುಮೋದನೆ.

ಅಕ್ರಮ ಭೂಕಬಳಿಕೆ, ಮೌನ ಮುರಿದ ಜಾಧವ್

ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ತಮ್ಮ ತಾಯಿ ತಾರಾಭಾಯ್ ಹೆಸರಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂಬ ಆರೋಪಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದಿರುವ ಜಾಧವ್ ಕೊಟ್ಟಿರುವ ಸ್ಪಷ್ಟನೆ ಹೀಗಿದೆ:

‘ಭೂಮಿ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಹಂತದಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ. ತಾಯಿ ತಾರಾಭಾಯ್ ಅವರು ನಮ್ಮ ಊರಿನಲ್ಲಿದ್ದ ಜಮೀನು ಮಾರಾಟ ಮಾಡಿ ಬೆಂಗಳೂರಿನಲ್ಲಿ ಜಮೀನು ಖರೀದಿಸಿದ್ದಾರೆ. ಆ ಭೂಮಿ ಖರೀದಿಸುವಾಗ ಅದು ಸರ್ಕಾರಿ ಭೂಮಿ ಆಗಿರಲಿಲ್ಲ. ಅಷ್ಟೇ ಅಲ್ಲದೆ ತಾಯಿ ಅವರು ಭೂಮಿ ಖರೀದಿಸಿದಾಗ ನಾನು ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದೆ.’

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಬುಧವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ಜತೆಗೆ ಎಸಿಬಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಜಾಧವ್ ಅವರ ತಾಯಿ ಖರೀದಿಸಿರುವ ಜಮೀನಿನ ದಾಖಲೆಗಳ ವಿವರ ನೀಡಬೇಕೆಂದು ಸೂಚಿಸಿದರು.

ನಳಿನಿ ಚಿದಂಬರಂಗೆ ಇಡಿ ಸಮನ್ಸ್

ಬಹುಕೋಟಿಯ ಶಾರದಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ವಿರುದ್ಧ ಸಮನ್ಸ್ ಜಾರಿ ಮಾಡಿದೆ.

ಕೋಟ್ಯಾಂತರ ಅಕ್ರಮ ಹಣದ ರೂವಾರಿಯಾಗಿರು ಶಾರದಾ ಕಂಪನಿಯ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸುದೀಪ್ತೊ ಸೇನ್ ಸಿಬಿಐ ವಿಚಾರಣೆ ವೇಳೆ ನಳಿನಿ ಅವರ ಹೆಸರು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಪ್ರಕರಣದಲ್ಲಿ ಮನೋರಂಜನಾ ಸಿನ್ಹಾ ಅವರಿಂದ ಹಣ ಪಡೆದಿರುವುದಾಗಿ ನಳಿನಿ ವಿರುದ್ಧ ಆರೋಪ ಕೇಳಿಬಂದಿದ್ದು, ಕಾನೂನಿನ ಶುಲ್ಕವಾಗಿ ₹ 1 ಕೋಟಿ ಪಡೆದಿದ್ದರು ಎಂದು ಸೇನ್ ಸಿಬಿಐ ಮುಂದೆ ಹೇಳಿಕೆ ನೀಡಿದ್ದಾರೆ.

ಆದರೆ, ಈ ಪ್ರಕರಣದಲ್ಲಿ ನಳಿನಿ ಅವರನ್ನು ಆರೋಪಿ ಎಂದಾಗಲಿ ಅಥವಾ ಸಾಕ್ಷಿ ಎಂದಾಗಲಿ ಪರಿಗಣಿಸದಿದ್ದರೂ ಈ ಹಗರಣದ ಒಪ್ಪಂದಕ್ಕೆ ಸಂಬಂಧಿಸಿದ ವಿಚಾರಣೆಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.

ತವರಿಗೆ ಮರಳಿದ ಸಾಕ್ಷಿಗೆ ₹ 2.5 ಕೋಟಿ

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಬುಧವಾರ ತಮ್ಮ ತವರಾದ ಹರ್ಯಾಣಕ್ಕೆ ಆಗಮಿಸಿದರು. ಈ ವೇಳೆ ಸರ್ಕಾರ ಹಾಗೂ ಅಭಿಮಾನಿಗಳಿಂದ ಸಾಕ್ಷಿಗೆ ಭವ್ಯ ಸ್ವಾಗತ ದೊರೆಯಿತು. ಬಹದುರ್ಗರ್ ನಲ್ಲಿ ಸಾಕ್ಷಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಗೌರವಿಸಲಾಯ್ತು. ಈ ವೇಳೆ ರಾಜ್ಯ ಸರ್ಕಾರ ಸಾಕ್ಷಿಗೆ ₹ 2.5 ಕೋಟಿ ಬಹುಮಾನ ನೀಡಿತು. ಈ ವೇಳೆ ಮಾತನಾಡಿದ ಸಾಕ್ಷಿ ಹೇಳಿದಿಷ್ಟು…

‘ಭವಿಷ್ಯದಲ್ಲೂ ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಮುಂದುವರಿಯಬೇಕು. ಆಗ ನಾನು ಮತ್ತಷ್ಟು ಪದಕ ಗೆಲ್ಲಲು ಸಾಧ್ಯ. ಈವರೆಗೂ ಇದ್ದ ‘ಬೇಟಿ ಪಡಾವ್, ಬೇಟಿ ಬಚಾವ್’ (ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ) ಕಾರ್ಯಕ್ರಮಕ್ಕೆ ಈಗ ಬೇಟಿ ಕಿಲಾವ್ (ಹೆಣ್ಣು ಮಕ್ಕಳು ಆಡಲು ಬಿಡಿ) ಎಂಬುದನ್ನು ಸೇರಿಸಲಾಗಿದೆ.’

ಇದೇ ವೇಳೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಾಕ್ಷಿಗೆ ಎರಡನೇ ದರ್ಜೆ ಕೆಲಸಕ್ಕೆ ಬಡ್ತಿ ನೀಡಲಾಗುವುದು ಎಂದು ಸರ್ಕಾರ ಆಶ್ವಾಸನೆ ನೀಡಿತು. ಇದಕ್ಕೆ ಪ್ರತಿಯಾಗಿ ಈ ಬಗ್ಗೆ ಚಿಂತಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಅಂದ್ರು ಸಾಕ್ಷಿ.

ಕಣಿವೆ ರಾಜ್ಯಕ್ಕೆ ರಾಜನಾಥ್ ಸಿಂಗ್ ಭೇಟಿ, ಮತ್ತೆ ನಡೆದ ಹಿಂಸಾಚಾರದಲ್ಲಿ ಒಬ್ಬ ಹತ

ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಪರಿಶೀಲಿಸಲು ಹಾಗೂ ವಿವಿಧ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಶ್ರೀನಗರಕ್ಕೆ ಭೇಟಿ ನೀಡಿದರು. ರಾಜನಾಥ್ ಸಿಂಗ್ ಶ್ರೀನಗರ ತಲುಪಿದ ಕೆಲವೇ ಗಂಟೆಗಳ ನಂತರ ಕಾಶ್ಮೀರದ ಪುಲ್ವಮಾ ಪ್ರದೇಶದಲ್ಲಿ ಮತ್ತೆ ಹಿಂಸಾಚಾರ ಪ್ರತಿಭಟನೆ ನಡೆದಿದೆ. ಪರಿಣಾಮ ಒಬ್ಬ ಯುವಕನ ಮೃತಪಟ್ಟಿದ್ದಾನೆ. ಪಿಂಗ್ಲೆನಾ ಹಳ್ಳಿಯ ಬಳಿ ಪ್ರತಿಭಟನಾ ಮೆರವಣಿಗೆಯನ್ನು ಭದ್ರತಾ ಪಡೆ ತಡೆದ ಪರಿಣಾಮ ಪ್ರತಿಭಟನಾಕಾರರು ಮತ್ತೆ ಕಾನೂನು ಚೌಕಟ್ಟು ಮೀರಿದರು. ಈ ವೇಳೆ ಭದ್ರತಾ ಸಿಬ್ಬಂದಿ ಪೆಲ್ಲೆಟ್ ಗನ್ ಪ್ರಯೋಗಿಸಿದರು. ಈ ವೇಳೆ ಹಲವರು ಗಾಯಗೊಂಡರು.

ಇಟಲಿಯಲ್ಲಿ ಭೂಕಂಪಕ್ಕೆ 38 ಸಾವು, ಬಿಹಾರ, ಬಂಗಾಳ ಮತ್ತು ಅಸ್ಸಾಂಗಳಲ್ಲೂ ಲಘು ಕಂಪನ

ಇಟಲಿಯ ಕೇಂದ್ರ ಭಾಗದಲ್ಲಿ ಪ್ರಬಲ ಭೂಕಂಪನದ ಪರಿಣಾಮ ಬುಧವಾರ 38 ಮಂದಿ ಸಾವನ್ನಪ್ಪಿದ್ದಾರೆ. ಈ ಸಾವಿನ ಪ್ರಮಾಣ ಮತ್ತಷ್ಟು ಏರುವ ಸಾಧ್ಯತೆಗಳಿವೆ ಎಂದು ಇಟಲಿಯ ನಾಗರೀಕ ರಕ್ಷಣಾ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕಷ್ಟು ಮಂದಿ ನಾಪತ್ತೆಯಾಗಿದ್ದು, ಕಟ್ಟಡಗಳ ಅವಶೇಷಗಳಡಿ ಕೆಲವರು ಸಿಲುಕಿರುವ ಸಾಧ್ಯತೆಗಳಿವೆ. ರಕ್ಷಣಾ ಕಾರ್ಯ ಮುಂದುವರಿದಿದ್ದು ಹಲವಾರು ಮಂದಿಗೆ ಗಂಭೀರ ಗಾಯಗಳಾಗಿವೆ. ಬೆಳಗಿನ ಜಾವ 3.36ರ ಸುಮಾರಿಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಇದರ ಪ್ರಮಾಣ 5.4 ರಷ್ಟು ದಾಖಲಾಗಿದೆ.

ಇತ್ತ ಮ್ಯಾನ್ಮಾರ್ ಕೇಂದ್ರವಾಗಿರಿಸಿಕೊಂಡು ಎದ್ದ ಭೂಕಂಪದ ಅಲೆಗಳಿಗೆ ಜೀವಹಾನಿಯ ವರದಿಗಳು ಬಂದಿಲ್ಲವಾದರೂ ಬಿಹಾರ, ಬಂಗಾಳ ಮತ್ತು ಅಸ್ಸಾಮಿನ ಹಲವು ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ.

bsy protest

ಆಮ್ನೆಸ್ಟಿ ವೇದಿಕೆಯಲ್ಲಿ ಸೈನಿಕರ ವಿರುದ್ಧ, ದೇಶದ ವಿರುದ್ಧ ಘೋಷಣೆ ಕೂಗಿರುವ ಪ್ರಕರಣವನ್ನು ಎನ್ ಐ ಎ ತನಿಖೆಗೆ ಕೊಡಬೇಕು ಎಂದು ಬುಧವಾರ ಬಿಜೆಪಿ ಟೌನ್ಹಾಲ್ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಬಿಎಸ್ವೈ

Leave a Reply